ಅಂಗನವಾಡಿಯಲ್ಲೊಂದು ಆರ್ತನಾದ

"ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು"

“ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು”

“ಅಮ್ಮಾ ಅಮ್ಮಾ; ನಂಗೆ ಅಮ್ಮ ಬೇಕೂ; ನಾ ಹೋಗ್ತೀನೀ”

“ಏಯ್ ಸುಮ್ನಿರು; ಜಾಸ್ತಿ ಅತ್ರೆ ಕರಡಿ ಕೋಣೆಗೆ ಹಾಕ್ಬಿಡ್ತೀನಿ ನೋಡು. ಬಾಯ್ಮುಚ್ಕೊಂಡು ಸುಮ್ಮನಿದ್ರೆ ಮಾತ್ರ ಅಮ್ಮ ಬರೋದು. ಇಲ್ಲ ಅಂದ್ರೆ ಕರಡಿ ಬಂದು ಕಚ್ಚಿ ಬಿಡುತ್ತೆ” ಸಂಭಾಳಿಸಿ ಸುಸ್ತಾದ ಶಿಕ್ಷಕಿಯ ಗದರು ದನಿ. (ಇದನ್ನು ಕೇಳಿದ ಮಗುವಿನ ಅಳು ಇನ್ನೂ ತಾರಕಕ್ಕೇರುತ್ತದೆ)

“ಅಮ್ಮಾ ಕರಡಿ ಬರುತ್ತೆ ಕರ್ಕೊಂಡು ಹೋಗಮ್ಮಾ: ನಂಗೆ ನೀನು ಬೇಕಮ್ಮಾ”

ಇದು ಮಾತು ಬರುವ ಮಗುವಿನ ವೇದನೆಯಾದರೆ ಇನ್ನೂ ಮಾತು ಬಾರದ ಪುಟ್ಟು ಕಂದನದು ಬರೀ ಅಳು ಅಳು. ನಡು ನಡುವೆ ಹೊರಡಿಸುವ “ಮಾ” ಶಬ್ದದಲ್ಲಿ ‘ಅಮ್ಮಾ’ ಎಂಬ ಕರೆ.

********

ಅದೊಂದು ಪ್ರತಿಷ್ಠಿತ ಶಾಲೆಯ ಡೇಕೇರ್ ಸೆಂಟರಿನ ದೃಶ್ಯ. ಪ್ರತಿದಿನ ಈ ಎರಡು ಮಕ್ಕಳ ಅಳು ಕೇಳಿ ಯಾಕೋ ಮನಸು ಆರ್ದ್ರವಾಗಿತ್ತು. ಬಹುಶಃ ಹೊಸದಾಗಿ ಸೇರಿಕೊಂಡ ಮಕ್ಕಳಿರಬೇಕು; ಹೊಂದಾಣಿಕೆ ಆಗೋವರೆಗೂ ಅಳುತ್ತಾರೆಂದು ಮೊದಲೊಂದು ವಾರ ಅಂದುಕೊಂಡೆ. ಹದಿನೈದು ದಿನಗಳಾದರೂ ಅಳು ನಿಲ್ಲದ್ದು ಕೇಳಿ ಕೊನೆಗೊಮ್ಮೆ ಮನಸು ತಡೆಯದೇ ಕೇಳಿದರೆ ಅವೆರಡೂ ಮಕ್ಕಳು ಸೇರಿಕೊಂಡು ಎರಡು ತಿಂಗಳಾಯ್ತು ಎಂದರು ಶಿಕ್ಷಕಿ. ದೊಡ್ಡ ಮಗು ದಿಶಾಗೆ ಒಂದೂವರೆ ವರ್ಷ ಮತ್ತು ಚಿಕ್ಕ ಕೂಸು ವಿಷ್ಣುಗೆ ಐದು ತಿಂಗಳು. “ಏನ್ಮಾಡೋದು ಹೇಳಿ; ಮುದ್ದು ಮಾಡಿದ್ರೂ, ಬೈದರೂ ಯಾವ ರೀತೀಲಿ ಹೇಳಿದ್ರೂ ಇವಳು ಅಳು ನಿಲ್ಲಿಸಲ್ಲರೀ. ನಮಗಂತೂ ಸಾಕಾಗಿ ಹೋಗಿದೆ” ಎಂದಿದ್ದೂ ಅದೇ ಶಿಕ್ಷಕಿ.

ಎರಡೂ ಮಕ್ಕಳ ಅಮ್ಮಂದಿರು ಬೆಳಗ್ಗೆ ಎಂಟು ಘಂಟೆಗೆ ಮಕ್ಕಳನ್ನು ಬಿಟ್ಟು ಹೋದರೆ ಸಂಜೆ ಆರಕ್ಕೆ ಮರಳಿ ಮನೆಗೆ ಬರುವಾಗ ಮಕ್ಕಳನ್ನು ಕರಕೊಂಡು ಹೋಗುವವರು. ಆಫೀಸಿಂದ ಮನೆಗೆ ಸುಮಾರು ಒಂದೂವರೆ ಘಂಟೆ ಪ್ರಯಾಣ ಮಾಡಿ ಬಂದ ತಾಯಂದಿರಿಗೆ ಮಕ್ಕಳ ಮುಖ ಕಂಡಾಕ್ಷಣ ಮುಖ ಅರಳುವ ಬದಲು ಸುಸ್ತೇ ಹೆಚ್ಚು ಕಾಣುತ್ತಿತ್ತು. ಮನೆಗೆ ಹೋದ ನಂತರ ಮನೆಕೆಲಸಗಳ ಧಾವಂತ. ಈ ಸರ್ಕಸ್ಸಿನಲ್ಲಿ ಅವರು ಮಕ್ಕಳ ಜತೆ ಖುಷಿಯಾಗಿ ಕಳೆಯಬಹುದಾದ ಸಮಯದ ಬಗ್ಗೆ ಯೋಚಿಸಿದರೆ ಆ ಸಾಧ್ಯತೆ ತೀರ ಕಡಿಮೆ ಎನಿಸಿತು. “ಈ ಸಾಫ್ಟ್^ವೇರ್ ಇಂಡಸ್ಟ್ರಿನೇ ಹಾಗೆ; ನಾನು ಮಗು ನೆಪ ಹೇಳಿ ಒಂದು ವರ್ಷ ಮನೇಲಿದ್ರೆ ನನ್ನ ಪಕ್ಕದ ಟೇಬಲ್^ನವರು ನನ್ನ ಅಷ್ಟೂ ಅವಕಾಶಗಳನ್ನ ಕಸಿದುಕೊಂಡು ಬಿಡುತ್ತಾರೆ. ಮುಂದಿನ ವರ್ಷ ನಾನವರ ಕೈ ಕೆಳಗೆ ಕೆಲಸ ಮಾಡುವಂತಾದರೂ ಆಶ್ಚರ್ಯವಿಲ್ಲ. ಅಂಥ ಅವಮಾನದ ಬದಲು ಇಲ್ಲಿ ಬಿಟ್ಟು ಹೋದರೆ ಹೆಂಗೋ ಆಗತ್ತೆ. ಹೆಂಗಿದ್ರೂ ರಾತ್ರಿ ನಂಜತೆನೇ ಇರುತ್ತಲ್ಲ ಮಗು” ಎಂದಿದ್ದು ತಿಂಗಳಿಗೆ ಐವತ್ತೈದು ಸಾವಿರ ಸಂಬಳ ತರುವ ತಾಯಿ.

ವಿಷ್ಣುವಿನ ತಾಯಿಯದು ಇನ್ನೊಂದು ಕಥೆ. “ಅಯ್ಯೋ ನಮ್ದು ಜಾಯಿಂಟ್ ಫ್ಯಾಮಿಲಿ ಕಣ್ರೀ; ಮನೇಲಿದ್ರೆ ನಾನು ಎಷ್ಟು ಕೆಲ್ಸ ಮಾಡಿದ್ರೂ ನಮ್ಮತ್ತೆಗೆ ಸಾಕಾಗಲ್ಲ. ಹೋಗ್ಲಿ ಮಗು ನೋಡ್ಕೋತಾರಾ ಅದೂ ಇಲ್ಲ. ಅದರ ಬದಲು ತಿಂಗಳಿಗಿಷ್ಟು ಅಂತ ಕೊಟ್ರೆ ಮುಗೀತು ಡೇ ಕೇರ್^ನವರೇ ಮಗೂನ ನೋಡ್ಕೋತಾರೆ. ಇದ್ಯಾವ ತಲೆನೋವೂ ಇಲ್ಲದೇ ಆರಾಮಾಗಿ ಕೆಲಸಕ್ಕೆ ಹೋಗಿ ಬರ್ತೀನಿ. ನಮ್ಮನ್ನ ಬಿಟ್ಟಿರೋದು ಮಗೂಗೂ ಈಗಿಂದ ಅಭ್ಯಾಸ ಆದ್ರೆ ಒಳ್ಳೇದಲ್ವಾ?” ಎಂದವಳಿಗೆ “ಅಷ್ಟಕ್ಕೂ ಮಗು ನಿಮ್ಮನ್ನ ಬಿಟ್ಟಿರಬೇಕಾದ್ದು ಯಾಕೆ” ಕೇಳಬೇಕೆಂದುಕೊಂಡರೂ ಕೇಳದೆ ಸುಮ್ಮನುಳಿದೆ.

ಅಂದರೆ ಮಕ್ಕಳನ್ನು ಸದಾ ಅವುಚಿಕೊಂಡೇ ಇರಬೇಕಾಗಿಲ್ಲ; ಅದು ಸಾಧ್ಯವೂ ಇಲ್ಲ. ಹಾಗಂತ ಎಳೆಗೂಸುಗಳನ್ನ ಯಾರದೋ ಕೈಯಲ್ಲಿಟ್ಟು ನಡೆದುಬಿಟ್ಟರೆ ಆಕೆ “ತಾಯಿ”ಯಾಗಿದ್ದಕ್ಕೇನರ್ಥ ? ಎಳೆಯ ಮಗುವನ್ನು ಬಿಟ್ಟು ಕೆಲಸದ ಟೇಬಲ್^ಗೆ ನಡೆದು ಹೋಗುವುದು ತಾಯಿಗೆ ಸುಲಭವಿರಬಹುದು. ಆದರೆ ಗರ್ಭ ಕಟ್ಟಿದ ಕ್ಷಣದಿಂದಲೇ ತಾಯಿಯೊಡನೆ ಅನೂಹ್ಯವಾದ ಸಂಬಂಧದ ಎಳೆಯಲ್ಲಿ ಬೆಸೆದುಕೊಂಡ ಮಗುವಿಗೆ ತಾಯಿಯಿಂದ ಬೇರಾಗುವುದು ಅಷ್ಟು ಸುಲಭವಲ್ಲ. ಮಗುವಿಗೆ ಅಮ್ಮನೇ ಜಗತ್ತು, ಅವಳೇ ಎಲ್ಲಾ. ಇವತ್ತು ತಾಯಿ ಮಡಿಲಿತ್ತರಲ್ಲವೇ ನಾಳೆ ಅವಳ ಸಂಕಟಕ್ಕೆ, ವೃದ್ಧಾಪ್ಯಕ್ಕೆ ಮಗು ತಾಯಾಗಿ ಪೊರೆಯುವುದು ?

ಇಂದಿನ ತಾಯಂದಿರಿಗೆ ಇದು ಅರ್ಥವಾಗುತ್ತಿದೆಯೋ ಇಲ್ಲವೋ ಗೊತ್ತಾಗುತ್ತಿಲ್ಲ. ಆದರೆ ಬೀದಿಗೆರಡರಂತೆ ಬೆಳೆಯುತ್ತಿರುವ ಪ್ರಿಸ್ಕೂಲ್^ಗಳು ಮಕ್ಕಳನ್ನು ತುಂಬಿಕೊಳ್ಳುವ ಚೀಲಗಳಾಗುತ್ತಿರುವುದಂತೂ ಸತ್ಯ. ಹುಟ್ಟಿನ ಮೊದಲ ವರ್ಷವಂತೂ ತಾಯಿಯ ಮಡಿಲಿಗಿಂತ ಮಿಗಿಲಿಲ್ಲ ಮಗುವಿಗೆ. ಮನೆಯಾಚೆಯಿರುವ ಮಗುವನ್ನು ಶಾಲೆಯವರು “ನೋಡಿಕೊಳ್ಳಬಹುದು” ಹೊರತು ತಾಯಿ ಹಾಲು ಕೊಡಲಾರರು; ಹಾಗೇ ಒಲವನ್ನೂ. ತಾಯಿಯ ಬೆಚ್ಚನೆ ಅಪ್ಪುಗೆಯಲ್ಲಿ ಬೆಳೆದ ಮಕ್ಕಳ ಸರ್ವತೋಮುಖ ಬೆಳವಣಿಗೆ ಬಹಳ ಚೆನ್ನಾಗಿ ಆಗುತ್ತದೆ ಮತ್ತು ಯಾವುದೇ ಕ್ಷೇತ್ರದಲ್ಲಾದರೂ ಸಾಧನೆ ಮಾಡಬಲ್ಲ ತಾಕತ್ತು ತಾಯಿ ಜತೆಯಲ್ಲಿ ಬೆಳೆಯದ ಮಕ್ಕಳಿಗಿಂತ ಹೆಚ್ಚಿರುತ್ತದೆ ಎಂಬುದು ಇತ್ತೀಚಿನ ಸಂಶೋಧನೆಗಳು ತೆರೆದಿಟ್ಟ ಸತ್ಯ.  “All I am, or can be, I owe to my angel mother.” ಅಂತಾನೆ ಜಗತ್ತು ಕಂಡ ಮಹಾ ನಾಯಕ ತಾಯ ಮಡಿಲಿನಲ್ಲಿ ಬದುಕು ಕಲಿತ ಅಬ್ರಹಾಂ ಲಿಂಕನ್. ಭಾವನೆಗಳನ್ನು ನಿಭಾಯಿಸುವುದರಲ್ಲಿ, ಯಾವುದೇ ಸಮಸ್ಯೆಗಳನ್ನು ಬಿಡಿಸುವುದರಲ್ಲಿ, ಬುದ್ಧಿವಂತಿಕೆಯಲ್ಲಿ ಕೂಡ ತಾಯಿ ಪೊರೆದ ಮಕ್ಕಳೇ ಮುಂದಿರುತ್ತಾರೆ ಅಂತಾರೆ ಈ ಕ್ಷೇತ್ರದ ಸಂಶೋಧಕರು.  “ನಾನು ನನ್ನ ಮಗಳಿಗೆ `ಕ್ವಾಲಿಟಿ ಟೈಮ್` ಕೊಡುತ್ತೇನೆ. ಈಜು, ನಾಟಕ, ಕರಕುಶಲ ಕಲೆಯ ತರಗತಿ ಎಲ್ಲಕ್ಕೂ ನಾನೇ ಕರೆದುಕೊಂಡು ಹೋಗುತ್ತೇನೆ. ಪುಸ್ತಕಗಳನ್ನು ತರಲು ನಾವಿಬ್ಬರೂ ಒಟ್ಟಿಗೆ ಹೋಗುತ್ತೇವೆ. ಅವಳಿಗೆ ಒಳ್ಳೊಳ್ಳೆಯ ಕತೆಗಳನ್ನು ಹೇಳುತ್ತೇನೆ. ಅದಕ್ಕಿಂತ ಮಿಗಿಲಾಗಿ ನನ್ನ ಕಷ್ಟವನ್ನೂ ಹೇಳಿಕೊಳ್ಳುತ್ತೇನೆ. ಅವಳು ತುಂಬಾ ಮೆಚ್ಯೂರ್ ಆಗಿ ಬೆಳೆಯಲು ಇದರಿಂದ ಸಾಧ್ಯವಾಗಿದೆ. ರಂಗಶಂಕರದಲ್ಲಿ ನಾನು ಹೆಚ್ಚು ಮಕ್ಕಳ ನಾಟಕ ನೋಡಿದ್ದೇ ಅವಳಿಗಾಗಿ”  ಎನ್ನುತ್ತಾರೆ ಚಿತ್ರ ನಿರ್ದೇಶಕಿ ಕವಿತಾ ಲಂಕೇಶ್.

ಆಕರ್ಷಕ ತಲೆಬರಹ ಮತ್ತು A Home away from Home ಎಂಬ ಅಡಿ ಬರಹದೊಡನೆ ಮಕ್ಕಳನ್ನು ತುಂಬಿಕೊಳ್ಳುವ ಶಾಲೆಗಳಲ್ಲಿ ಬಹುತೇಕ ಶಿಕ್ಷಕರಾಗಲೀ, ಆಯಾಗಳಾಗಲಿ ಆ ಕೆಲಸಕ್ಕೆ ತರಬೇತಿ ಪಡೆದವರಾಗಿರುವುದಿಲ್ಲ. ಅಲ್ಲದೇ ಚಿಕ್ಕ ಮಕ್ಕಳನ್ನು ನೋಡಿಕೊಳ್ಳುವುದಕ್ಕೆ ತರಬೇತಿ ಯಾಕೆ ಎಂಬ ನಮ್ಮ ಮನೋಭಾವವೂ ಇದಕ್ಕೆ ಕಾರಣ. ಅತ್ತರೆ ಏನೋ ಮಾಡಿ ಸಮಾಧಾನಪಡಿಸಿದರಾಯ್ತು ಎಂಬ ನಿರ್ಲಕ್ಷ್ಯ ಭಾವ. ಇದರಿಂದಾಗಿ ಮಗುವಿಗೆ ವಯಸ್ಸಿಗೆ ತಕ್ಕ ಪಾಲನೆ ಪೋಷಣೆ ಯಾವುದೂ ಸಿಗದು. ಕರಡಿಯ ಹೆದರಿಕೆಗೆ ಸುಮ್ಮನಾಗುವ ಮಗುವಿನ ಮನಸ್ಸು ಅರಳುವ ಮೊದಲೇ ಮುದುಡುವುದರಲ್ಲಿ ಸಂಶಯವೇ ಇಲ್ಲ.

ಕುಟುಂಬವೆಂದ ಮೇಲೆ ಪ್ರೀತಿ, ಸಿಟ್ಟು, ಜಗಳ, ಕೆಲಸ, ಅಸಮಾಧಾನ ಎಲ್ಲವೂ ಇದ್ದಿದ್ದೇ. ಮಗುವೊಂದು ಬಂದ ನಂತರ ಇವೆಲ್ಲದರ  ಜತೆ ಅದೊಂದು ಮಹತ್ತರ ಜವಾಬ್ದಾರಿ ಕೂಡ ಹೌದು. ನಮ್ಮ ಕನಸುಗಳ ಮುಂದುವರಿಕೆಯೂ ಹೌದು. ಅದನ್ನು ನಿಭಾಯಿಸಲೊಂದಷ್ಟು ಎಕ್ಸ್^ಟ್ರಾ ಜಾಣ್ಮೆ ಮತ್ತು ತಾಳ್ಮೆ ತಂದುಕೊಳ್ಳಬೇಕು. ದುಡ್ಡಿನ ಗಳಿಕೆಗೆ ಯಾವಾಗಾದರೂ ಹೊರಡಬಹುದು; ಆದರೆ ಮಗುವಿನ ಮುದ್ದಿನ ಗಳಿಕೆಗೇ ಸಮಯವಿರದಿದ್ದಲ್ಲಿ ದುಡ್ಡು ತುಂಬಿದ ಪರ್ಸು ಮನ ತುಂಬಲಾರದು. ಇದು ಅರ್ಥ ಆದಾಗಷ್ಟೆ ಬದುಕಿನಂಗಳದ ಹೂವು ಅರಳಿ ಮನೆ ಮನ ತುಂಬ ಸುಗಂಧ ಹರಡಲು ಸಾಧ್ಯ.

 %%%%%%%%%%%

18 ಜೂನ್ 2014 ರ ಕನ್ನಡಪ್ರಭದ ಬೈಟುಕಾಫಿಯ 3ನೇ ಪುಟದಲ್ಲಿ ಪ್ರಕಟಿತ

(ಚಿತ್ರ ಕೃಪೆ : ಇಂಟರ್^ನೆಟ್)


%d bloggers like this: