ಮನದಂಗಳದ ಮಲ್ಲಿಗೆ ಬಳ್ಳಿ

Hoo Preethi
ಬದುಕೆಂಬ ಭಾವ ಲೋಕದ ಮಹಾನ್ ಅಚ್ಚರಿಯಿವನು. ಇಂಥವ ಇನ್ನೊಬ್ಬನಿರಲು ಸಾಧ್ಯವೇ ಇಲ್ಲ ಎಂಬ ನಂಬಿಕೆ ಹುಟ್ಟಿಸಿದವನು. ವರ್ಷಗಳಿಂದ ಕಾಡುತ್ತಿದ್ದ ಒಗಟುಗಳಿಗೆ ಉತ್ತರವೆನಿಸುತ್ತಲೇ ಎಂಥ ಒರಟು ಒಗಟಿವನೆಂಬ ಪ್ರಶ್ನೆ ಹುಟ್ಟಿಸಬಲ್ಲ ತಾಕತ್ತಿನವನು. ಉತ್ತರ ಸಿಗದೇ ತಡಕಾಡುತ್ತಿದ್ದರೆ ಮೀಸೆಯಂಚಿನಲಿ ನಗುತ್ತ ಮಡಿಲಿಗೇ ಬಂದು ಪ್ರಶ್ನೆ ಮರೆಸುವ. ಘಟ್ಟದ ಮೇಲಿಂದ ಇಳಿದು ಬಂದು ಅದಾವ ಮಾಯೆಯಲ್ಲೋ ಬಯಲಿನ ಹುಡುಗಿಯನ್ನು ಹೊತ್ತೊಯ್ದ ಹುಡುಗ. ಉತ್ತರದಲ್ಲೇ ಪ್ರಶ್ನೆ ಹುಟ್ಟಿಸಿ ಕಣ್ಣು ಮಿಟುಕಿಸಬಲ್ಲ ಹುಡುಗಿಯನ್ನು ಮರುಳಾಗಿಸಿ ಸುಮ್ಮನೇ ಮೌನದ ಜೋಕಾಲಿಯಲ್ಲಿಟ್ಟು ತೂಗಿದ ಮಾಧವ.

ಲೋಕ ವಿನಾಶವಾದೀತೆಂಬುದು ಸ್ಪಷ್ಟವಿದ್ದರೂ ಗಂಗೆಯ ಬಿಟ್ಟ ಮಹದೇವನೋ, ವಿನಾಶ ತಡೆಯಲು ಆಪೋಶನಗೈದ ಭಗೀರಥನೋ ಎಂಬ ಭ್ರಮೆ ಹುಟ್ಟಿಸಬಲ್ಲ ಧೀರ. ತನ್ನ ಹರಿವಿನುದ್ದಕ್ಕೂ ಹಸಿರ ಸೆರಗು ಮೂಡಿಸಿದ ಗಂಗೆಯೂ ಇವನೇನಾ ? ಇವನ ಮೌನ ಸಹಿಸಿಕೊಳ್ಳುವ ಶಕ್ತಿಯಿಲ್ಲ; ಮೌನದ ಕೋಟೆ ಕೆಡಹುವ ಯುಕ್ತಿಯಿಲ್ಲ. ಪ್ರಿಯನಾ, ಗಂಡನಾ, ಒಲಿದು ಬಂದ ದೇವನಾ, ಎಲ್ಲವೂ ಮೇಳೈಸಿದ ಗೆಳೆಯನಾ… ಉಹುಂ.. ಅರ್ಥಗಳ ಸೂತ್ರಕ್ಕೆ ನಿಲುಕದವನಿವನು. ಹಿಂದೆ ಮುಂದಿನವುಗಳಲಿ ನಂಬಿಕೆಯಿಲ್ಲದಾಗಲೂ ಜನ್ಮಾಂತರದ ಸಾಥಿ ಎನಿಸುತ್ತ ಒಮ್ಮೊಮ್ಮೆ ಮಗುವಿನಂತೆ, ಇನ್ನೊಮ್ಮೆ ನಗುವಿನಂತೆ ಆವರಿಸುವ.. ಸಿಟ್ಟು, ಸೆಡವು, ಮುನಿಸು, ಕೊರಗು, ಬೆರಗು ಎಲ್ಲ ಮುಖದ ಮೇಲಿನ ಮೊಡವೆಯಷ್ಟು ಸಹಜ. ಅಷ್ಟೇ ಹತ್ತಿರಿರುವ ಎಂದು ಕೈ ಚಾಚಿದರೆ ಎಲ್ಲೋ ಬಾನೆತ್ತರದ ನಕ್ಷತ್ರ.

ಬೇಕಾದ್ದನ್ನು ಪಡೆದೇ ತೀರುವ ಛಲದ ಬಳ್ಳಿ ಹುಟ್ಟಿದ್ದು ಇವನೆದೆಯಲ್ಲೇ; ಬೇಡಾದ್ದನ್ನು ನಿರಾಕರಿಸುವ ಜಾಣ್ಮೆ ಕೂಡ. ಜೀವವಿತ್ತ ತನ್ನ ಹಳ್ಳಿಯ ಅಷ್ಟೂ ವಿಸ್ಮಯಗಳು, ನಿರಾಡಂಬರತೆಯನ್ನು ತನ್ನಲ್ಲಿಟ್ಟುಕೊಂಡೇ ಜೀವನವಿತ್ತ ನಗರದ ನಾವೀನ್ಯತೆಯನ್ನು, ಸಾವಿರ ಝಲಕ್ ಗಳನ್ನು ದಿವ್ಯ ನಿರಾಳತೆಯ ಜತೆಗೇ ಮುಟಿಗೆಯಲ್ಲಿಟ್ಟುಕೊಂಡವ.

ಸದ್ದಿಲ್ಲದೇ ಸುಗ್ಗಿಯಲ್ಲರಳುವ ಮೊಗ್ಗಿನಂತೆ ನನ್ನಂಗಳಕೆ ಬಂದು ಪೂರ ಕಲರವದ ಚಪ್ಪರ ಬೆಳೆದವನು. ನಕ್ಷತ್ರಗಳ ತೋರಣ ಕಟ್ಟಿ ಚಂದಿರನ ದೀಪವಾಗಿಸಿದವನು. ಮಿಂಚಂತೆ ಬಂದು ನಕ್ಷತ್ರದ ಐಸಿರಿಯ ಮಡಿಲಲಿಟ್ಟವನು. ನಾ ಕಾಣದೇ ಇದ್ದ ಬದುಕಿನೆಳೆಗಳ ನಿರ್ಭಿಡೆಯಿಂದ ನನ್ನೆದುರು ಹರಡಿ ಜುಮ್ಮೆನಿಸಿದವನು. ನನಗೆ ನೀನೇ ದಿಕ್ಕು, ನೀನೇ ಗಮ್ಯವೆಂದಿದ್ದು ಕೇಳಿಸಲೇ ಇಲ್ಲವೇನೋ ಎಂಬಂತೆ ತನ್ನ ಪಾಡಿಗೆ ತಾನು ನಡೆವ ಮುಸಾಫಿರ್ ಇವನು. ಕಾದು ಕಾದು ಸಾಕಾಗಿ ಇನ್ನು ಈತ ಬರಲೊಲ್ಲವೆಂದು ನಿದ್ರಿಸಿದರೆ ಮಧ್ಯರಾತ್ರಿ ಕನಸಿನಂತೆ ಬಂದು ಎದೆಯ ಕದ ತಟ್ಟುವವನು. ವಿರಹದೆಲ್ಲ ಮುನಿಸನ್ನು ಕ್ಷಣ ಮಾತ್ರದಲ್ಲಿ ತುಟಿಕಚ್ಚಿ ಕರಗಿಸಿ ಬಿಡುವವನು. ನಿನ್ನೆ ರಾತ್ರಿ ನೋಯಿಸಿದ್ದು ನೆನಪೇ ಇಲ್ಲವೆಂಬ ತೆರದಲಿ ಮತ್ತೆ ಆವರಿಸಿ ಒಡಲಲ್ಲಿ ಒಲುಮೆಯ ಅಮೃತಬಳ್ಳಿ ಹಬ್ಬಿಸುವವನು. ಭಾರ ಬದುಕಿನ ದೂರ ದಾರಿಯ ಹಗುರಾಗಿಸಿ ನಮ್ಮ ಪ್ರೀತಿ ಪೊರೆಯುವವನು…

ಕರಿಯಾ ಐ ಲವ್ ಯೂ…

.......