……..ಗೆ

ಸವಿಯಬೇಕಿದೆ ನಾವು ಜತೆಯಾಗಿ
ಒಂದು ಸುಂದರ ರಾತ್ರಿ
ನನ್ನ ನಿನ್ನ ಹೃದಯ ಸೇರುವ
ಮಾರ್ದವತೆಯ ರಾತ್ರಿ
ಬಾನಂಚಿನ ಬೆಳ್ಳಿ ಮಿಂಚನು
ಭುವಿಗೆ ತರುವ ರಾತ್ರಿ
ನಿನ್ನ ತೆಕ್ಕೆಯಲಿ ನಾನು ಮಗುವಾಗಿ
ಸ್ವರ್ಗ ಕಾಣುವ ರಾತ್ರಿ
ಕನಸಿನೆಳೆಗಳ ಹಿಡಿದು ತಂದು
ನನಸು ನೇಯುವ ರಾತ್ರಿ
ಮುನಿಸು ತಂದ ಕಹಿಗಳೆಲ್ಲವ
ಅಳಿಸಿ ಹಾಕುವ ರಾತ್ರಿ
ಭಾರ ಬದುಕಿನ ದೂರ ದಾರಿಗೆ
ಬೆಳಕು ತೋರುವ ರಾತ್ರಿ
ತಪ್ಪುಗಳ ಲೆಕ್ಕ ಮರೆತು
ಒಪ್ಪ ಮಾಡುವ ರಾತ್ರಿ
ಮೈ ಮನಸಿನ ಹಂಗು ತೊರೆದು
ಆತ್ಮ ಬೆಸೆಯುವ ರಾತ್ರಿ
*****

(ಎಲ್ಲೋ ಓದಿದ್ದ ಕವನದ ಗುಂಗಿನಲ್ಲಿ ಬರೆದಿದ್ದು)

ಲೆಕ್ಕಾಚಾರ

ಅವತ್ತು
ಬಳಪ ಕಳೆದು ಹೋಗಿದ್ದಕ್ಕೆ
ಅತ್ತ ನೆನಪು ಇನ್ನೂ
ಸ್ಪಷ್ಟವಾಗಿದೆ…
ಇವತ್ತು
ಕಳಕೊಂಡಿದ್ದು ಬಹಳಷ್ಟಿದೆ..
ಅಳು ಬರುತ್ತಿಲ್ಲ..
(ಗಳಿಸಿದ ಅಹಂ ಇದೆಯಲ್ಲ)

ತೊರೆದು ಹೋಗುವ ಮುನ್ನ

ಖಾಲಿ ಕಲ್ಲಿನ ಮಂಟಪ

ಅಳಲಾರದ ಅಸಹಾಯಕತೆಗೆ
ನಾನು ನಗಬೇಕಿದೆ ಗೆಳೆಯಾ

ನೋಯಲಾರದ ವಿಧಿಗಾಗಿ
ನಾನು ನಲಿಯಬೇಕಿದೆ ಕೆಳೆಯಾ

ಎಲ್ಲ ತುಂಬಿದೆ ಇಲ್ಲಿ
ಕೊರತೆಯಿಲ್ಲ ಸ್ಥಾನ ಮಾನಾಭರಣಕೆ
ಸಾಟಿಯಾದೀತೆ ಕೋಟಿಯು
ಹೃದಯ ತುಂಬಿದ ನಿನ್ನ ಸ್ನೇಹಕೆ

ನಿನ್ನ ಅರೆಘಳಿಗೆಯೂ ಬಿಟ್ಟಿರಲಾರೆ
ನಿನ್ನ ಪ್ರೇಮಕೆ ಬೆಲೆಯ ಕಟ್ಟಲಾರೆ
ಹೇಗಿರಲಿ ನೀನಿಲ್ಲದ ಮನೆಯಲಿ
ಉರಿದಿದೆ ಜ್ವಾಲಾಗ್ನಿ ಮನದಲಿ

ಕತ್ತಲಲಿ ಕರಗುತ್ತಿದೆ ಕನಸುಗಳು
ಅರಳದೇ ಬಾಡುತ್ತಿದೆ ಹೂವು
ಕೊರಳಲೇ ಸೊರಗುತ್ತಿದೆ ಹಾಡು
ಕಣ್ಣಲೇ ಇಂಗುತ್ತಿದೆ ಬೆಳಕು

ಆದರೂ…..
   
ನೋವೆಲ್ಲ ನನ್ನಲಿಟ್ಟುಕೊಂಡು

   
ನಿನ್ನ ಕಳುಹುತಿರುವೆ

ನಿಂಗೊತ್ತಾ…..
   
ಇಷ್ಟು ದಿನವೂ ಬೆಳಕು ನೀಡಿ

   
ಈಗ ಗುಡಿಯ ಬರಿದು ಮಾಡಿ
   
ನೀನು ಹೋಗುತ್ತಿರುವೆ….
   
ನಾನು ನಗುತ್ತಿರುವೆ.

 

 

ಕಳ್ಳ ಬೆಕ್ಕುಗಳಿಗೆ ಗಂಟೆ ಕಟ್ಟುವ ಕೆಲಸ

 ಚುನಾವಣೆ ಸಮೀಪಿಸುತ್ತಿದೆ. ಎಲ್ಲ ಕಡೆ ಅದೊಂದೇ ಸುದ್ದಿ. ಬೇರೆ ಸುದ್ದಿಯೇ ಇಲ್ಲವೇನೋ ಎಂಬಂತೆ ಮೀಡಿಯಾಗಳಲ್ಲಿ ಅದೊಂದೇ ಸಮಾಚಾರ. ನೀತಿ ಸಂಹಿತೆಯಂತೆ, ದುಡ್ಡು ಹಂಚುವುದಂತೆ, ಪಕ್ಷಾಂತರವಂತೆ ಹಾಗಂತೆ.. ಹೀಗಂತೆ.. ಎಲ್ಲ ಅಂತೆ ಕಂತೆಗಳ ನಡುವೆ ಎಂದಿನಂತೆ ರಾಜಕೀಯವನ್ನು, ರಾಜಕಾರಣಿಗಳನ್ನು ಅವರ ಚಿಲ್ಲರೆ ವ್ಯವಹಾರಗಳನ್ನು ಬೈಯುತ್ತ ನಮ್ಮ ಪಾಡಿಗೆ ನಾವಿದ್ದೇವೆ. ಲಕ್ಷಾಂತರ ದುಡ್ಡು ಸಿಕ್ಕಿದ ಕೂಡಲೇ ಪಕ್ಷಾಂತರ.. ನಿನ್ನೆ ಎಣ್ಣೆ ಸೀಗೆ ಆಗಿದ್ದವರು ಇಂದು ಬೆಳಗ್ಗೆ ಹೊತ್ತಿಗಾಗಲೇ ಭಾಯಿ ಭಾಯಿ.. ಎಂಥ ಹೀನಾಯ ನಡವಳಿಕೆ. ಬಾಗಿಲ ಬಳಿಗೆ ಮತ ಯಾಚನೆಗೆ ಬಂದವರನ್ನು ಕೇಳಿ ನೋಡಿ ಚುನಾವಣಾ ನೀತಿ ಸಂಹಿತೆ ಅಂತಾರಲ್ಲ ಹಾಗಂದರೇನು ಅಂತ. ಯಾವೊಬ್ಬ ರಾಜಕಾರಣಿಗಾದರೂ ಸ್ಫಷ್ಟ ತಿಳುವಳಿಕೆ ಇದೆಯಾ ? ಆ ಕ್ಷೇತ್ರದ ಬಗ್ಗೆ ಒಂದಷ್ಟು ಮಾಹಿತಿ ಅಂತ ಅವರ ಕ್ಷೇತ್ರದಲ್ಲಿ ಎಷ್ಟು ಶಾಲೆಗಳಿವೆ, ಎಷ್ಟು ಆಸ್ಪತ್ರೆಗಳು ಅಂತಾದರೂ ಗೊತ್ತಾ ಕೇಳಿದರೆ ಬೆಬೆಬ್ಬೆ… ಅಲ್ಲ ಇಂಥವರಿಗೆ ನಾವು ಓಟು ಕೊಟ್ಟು ಗೆಲ್ಲಿಸುತ್ತೇವಲ್ಲಾ ನಿಜಕ್ಕೂ ನಮ್ಮ ಮತದ ಪಾವಿತ್ರ್ಯ ಉಳಿಯುತ್ತಾ ?
 ಇನ್ನು ಇಂಥಾ ಕ್ಷೇತ್ರದಲ್ಲಿ ಇಷ್ಟು ಅಭ್ಯಥರ್ಿಗಳು ನೀತಿ ಸಂಹಿತೆ ಮುರಿದರು ಅಂತ ವರದಿ ಮಾಡ್ತಾರಲ್ಲ ಅನಂತರ ಅವರಿಗೇನಾಯಿತು ? ಯಾವುದಾದರೂ ಶಿಕ್ಷೆಯಿದೆಯಾ ವರದಿ ಮಾಡಿದ್ದಾರಾ ? ಹಂಚಿದ ದುಡ್ಡು, ಹಂಚಲು ಸಾಗಿಸುತ್ತಿರುವ ದುಡ್ಡು ಹಿಡಿದರೆಂಬ ಸುದ್ದಿಗೆ ಮುಗೀತು.. ಆ ದುಡ್ಡನ್ನು ಆಮೇಲೇನು ಮಾಡಿದರು ? ಅದನ್ನು ಯಾರೂ ಹೇಳಲಿಲ್ಲ. ನಾವೂ ಕೇಳಲಿಲ್ಲ. ಅಷ್ಟಕ್ಕೂ ಅವರು ಹಂಚುವುದೆಲ್ಲಾ ನಮ್ಮ ದುಡ್ಡನ್ನೇ ಅಲ್ವಾ ? ತಾವು ಸ್ವತಃ ದುಡಿದು ಗಳಿಸಿದ್ದೇ ಆಗಿದ್ರೆ ಈ ಥರ ಖಚರ್ು ಮಾಡ್ತಾ ಇದ್ರಾ ?
 ಒಂದು ವೇಳೆ ಒಬ್ಬನನ್ನು ಈ ಬಾರಿ ಗೆಲ್ಲಿಸಿದರೆ ಅವನು ಇನ್ನೆರಡು ತಿಂಗಳಿಗೆ ಪಕ್ಷಾಂತರ. ಮತ್ತೆ ಚುನಾವಣೆ. ಅದಕ್ಕೂ ಖಚರ್ಾಗುವುದು ನಮ್ಮದೇ ಹಣ. ಇದನ್ನೆಲ್ಲ ತಡೆಗಟ್ಟುವುದು ಹೇಗೆ ? ಯಾರು ? ನನ್ ಪ್ರಕಾರ ನಮ್ಮಲ್ಲಿ ನಾಯಿಕೊಡೆಗಳಂತೆ ಉದಯಿಸುವ ಪಕ್ಷಗಳ ಹುಟ್ಟಿಗೆ ಅವಕಾಶವೇ ಇರದಂತೆ ಮೊದಲು ತಡೆಗಟ್ಟಬೇಕು. ಇಡೀ ದೇಶದಲ್ಲಿ 2-3 ಪಕ್ಷಗಳು ಮಾತ್ರ ಇರಬೇಕು. ಒಂದು ಪಕ್ಷದಿಂದ ಗೆದ್ದು ಬಂದ ಮೇಲೆ ಆತನ ಅವಧಿ ಪೂರ್ಣಗೊಳ್ಳುವ ವರೆಗೆ ಆತ ಪಕ್ಷ ಬದಲಾಯಿಸುವಂತಿಲ್ಲ; ಪಕ್ಷಾಂತರ ಮಾಡುವುದೇ ಆದಲ್ಲಿ ಮುಂದಿನ 5 ವರ್ಷ ಅವನು ಯಾವ ಪಕ್ಷದಿಂದಲೂ ಚುನಾವಣೆಗೆ ಸ್ಪಧರ್ಿಸಲು ಅವಕಾಶ ಇರದಂತೆ ಕಾನೂನು ಮಾಪರ್ಾಟಾಗಬೇಕು. ಆದರೆ ಇದೆಲ್ಲ ಮಾಡುವವರ್ಯಾರು ಎಂಬುದಲ್ಲವೇ ಪ್ರಶ್ನೆ ?
 ಇವೆಲ್ಲಕ್ಕಿಂತ ಬಹುಮುಖ್ಯವಾಗಿ ನಂಗೆ ಅನಿಸಿದ್ದೆಂದರೆ ಜನರು ಫುಡಾರಿಗಳು ನೀಡುವ ಕಾಸಿಗೆ ಕೈಯೊಡ್ಡುವುದನ್ನು ನಿಲ್ಲಿಸಬೇಕು.(ಹೀಗಾಗಬೇಕಾದಲ್ಲಿ ಪ್ರತಿಯೊಬ್ಬನಿಗೂ ದಿನದ ಅನ್ನಕ್ಕೆ ಕೊರತೆಯಾಗದಂಥ ವ್ಯವಸ್ಥೆ ಬೇಕಾಗಬಹುದೇನೋ). ಚುನಾವಣೆಗಾಗಿ ಕಂತೆ ಕಂತೆ ದುಡ್ಡು ನೀಡುವ ಉದ್ಯಮಿಗಳಾಗಲೀ, ಭೂಗತ ದೊರೆಗಳಾಗಲೀ ಇತರರಾಗಲೀ ದುಡ್ಡು ಸುರಿಯೋದನ್ನು
ನಿಲ್ಲಿಸಬೇಕು. (ರಾಜಕಾರಣಿಗಳಿಂದ ತಮಗೆ ಬೇಕಾದಂಥ ಎಲ್ಲ ಉಪಕಾರಗಳನ್ನು ಮಾಡಿಸಿಕೊಂಡ ನಂತರ ದುಡ್ಡು ಕೊಡದೇ ಇರುವುದಾದರೂ ಹೇಗೆ). ಈ ಫುಡಾರಿಗಳು ಖಚರ್ು ಮಾಡೋದೇ ಆದರೆ ಸ್ವಂತ ದುಡ್ಡಿನಿಂದ ಮಾತ್ರ ಎಂಬಂತಾಗಬೇಕು (ಹಾಗಿದ್ದಲ್ಲಿ ಮತದಾರನಿಗೆ ಯಾವ ಅಭ್ಯಥರ್ಿಯೂ ಏನೂ ಕೊಡಲಿಕ್ಕಿಲ್ಲವೇನೋ).

 ಮತ ಅಮೂಲ್ಯ, ಪವಿತ್ರ; ಪ್ರತಿಯೊಬ್ಬನೂ ಮತ ಚಲಾಯಿಸಲೇ ಬೇಕು. ಅದು ನಮ್ಮ ಹಕ್ಕುಮತ್ತು ಕರ್ತವ್ಯ ಅಂತಾರಲ್ಲ, ನಿಮಗ್ಗೊತ್ತಾ ಎಲ್ಲ ಅಭ್ಯಥರ್ಿಗಳೂ ಅಸಮರ್ಥರೆನಿಸಿದರೆ 49-ಓರಂತೆ ತಟಸ್ಥ ಮತ ಚಲಾವಣೆ ಸಾಧ್ಯ. ನಮಗೆ ಆ ಹಕ್ಕೂ ಇದೆ.

“49-ಓ” ಅಂದರೇನು ?
 ನನಗೆ ಗೊತ್ತಿರುವ ಮಾಹಿತಿಯಂತೆ ನಮ್ಮ ಸಂವಿಧಾನ ನಮಗಿತ್ತ ಅಧಿಕಾರ ಇದು. 1969ರ ಚುನಾವಣೆಯ ಕಾಯ್ದೆ ನಿಯಮಾವಳಿಯ ಸೆಕ್ಷನ್ 49-ಓ ಹೀಗೆ ಹೇಳುತ್ತೆ. ಮತದಾರ ಮತಗಟ್ಟೆಗೆ ಹೋಗಿ ತನ್ನ ಗುರುತು ಹೇಳಿ ತನ್ನ ಬೆರಳಿಗೆ ಗುರುತು ಹಾಕಿಸಿಕೊಂಡು ಮತಗಟ್ಟೆಯ ಅಧಿಕಾರಿಯಲ್ಲಿ ತಾನು ಯಾರಿಗೂ ಮತ ಹಾಕಲು ಬಯಸುತ್ತಿಲ್ಲವೆಂಬುದನ್ನು ತಿಳಿಸಿ ಫಾಮರ್್ 17ರಲ್ಲಿ ತನ್ನ ಸಹಿ ಹಾಕಿ ಬರಬೇಕು. ಅಲ್ಲಿಗೆ, ನಮ್ಮನ್ನಾಳಲು ನಿಮಗೆ ಯೋಗ್ಯತೆಯಿಲ್ಲ ಎಂಬುದನ್ನು ನಾವು ಸಮರ್ಥವಾಗಿ ಹೇಳಿದಂತಾಗುತ್ತದೆ.(ಆದರೆ ದುರಂತ ನೋಡಿ ನಮ್ಮಲ್ಲಿ ಬಹುಪಾಲು ಜನಕ್ಕೆ ಈ ವಿಚಾರ ಗೊತ್ತೇ ಇರುವುದಿಲ್ಲ) ಇಡೀ ದೇಶದಲ್ಲೊಂದು ಬಾರಿ ಹೀಗಾದಲ್ಲಿ ಒಂದಷ್ಟು ಅನಾಚಾರಗಳು ಕಡಿಮೆಯಾದೀತೇನೋ ಎಂಬ ಆಸೆ. ಮರೀಚಿಕೆ ಅಂತೀರಾ ?

(ಸೆಕ್ಷನ್ 49-ಓ ಬಗ್ಗೆ ನಾನು ಎಲ್ಲೋ ಓದಿದ ಮಾಹಿತಿಯನ್ನಷ್ಟೆ ಇಲ್ಲಿ ಹೇಳಿದ್ದೇನೆ. ತಪ್ಪಿದ್ದರೆ ಗೊತ್ತಿರೋರು ತಿಳಿಹೇಳಿ)

Expectations of a Donkey

ಪ್ರಸನ್ನ ಕಳಿಸಿದ ಮೇಲ್ .. ಓದಿಕೊಳ್ಳಿ. ನಿರೀಕ್ಷೆಗಳು ಬತ್ತದಿರಲಿ..
donkeys-expectations

ಈ ಗುಲಾಬಿಯು ನಿನಗಾಗಿ

love

ಡಿಯರ್,

                                ನೀನು ಮೊನ್ನೆ ಸುಮ್ಸುಮ್ನೇ ಕೋಪ ಮಾಡಿಕೊಂಡು ಹೋದ ಘಳಿಗೆಯಿಂದಲೇ ಯಾಕೋ ಮನಸು ನೀರಿನಿಂದಾಚೆ ಬಿದ್ದ ಮೀನು. ಮೀನು ಕಂಗಳ ನೀನಾ, ನೀನು ನಂಗೆ ಮಾಡಿದ ಮೋಡಿಯೇ ಅಂಥದ್ದು. ಅವತ್ತು ಬುಧವಾರ ನಿನ್ನ ಗೆಳತಿಯರ ಹಿಂಡಿನ ಜತೆ ಬಸ್ ಸ್ಟ್ಯಾಂಡ್ನಲ್ಲಿ ವಿಪರೀತ ಬೋಲ್ಡಾಗಿ ನಿಂತಿದ್ದೆ ನೀನು. ಆವಾಗ ನಾನೊಬ್ಬ ಮಾತ್ರ ಗಂಡುಪ್ರಾಣಿ ಅಲ್ಲಿ ಇದ್ದಿದ್ದು. ಅದಕ್ಕೇನಾ ನೀನಾ ಅವತ್ತು ನನ್ನ ಪರಿಯಲ್ಲಿ ರೇಗಿಸಿದ್ದು? ಅಲ್ಲಿ ಅಪ್ಪಟ ಪೆಕರನಂತೆ ಪೋಸು ಕೊಟ್ಟೆ ನೋಡು ಆವಾಗಲೇ ಅಂದುಕೊಂಡಿದ್ದೆ ಲವ್ ಮಾಡಿದ್ರೆ ಹುಡುಗೀನೇ ಅಂತ. ನಿಜ ಹೇಳ್ತೀನಿ ಆದರೂ ಸ್ವಲ್ಪ ಭಯ ಇದ್ದೇ ಇತ್ತು ಸುಂದರಿ ನನ್ನಂಥ ಸಾಧಾರಣ ರೂಪಿನ  ಹುಡುಗನ್ನ ಒಪ್ಕೋತಳಾ ? ಹೈ ಫೈ ಮನೆಯ ಹುಡುಗಿ ನಮ್ಮ ಮಾಮೂಲಿ ಮಿಡ್ಲ್ ಕ್ಲಾಸ್ ಮನೆಗೆ ಬರ್ತಾಳಾ ? ಬಂದರೆ ಆಮೇಲೂ ನನ್ನ ಇಷ್ಟೇ ಪ್ರೀತಿಸ್ತಾಳಾ ? ಇವೆಲ್ಲ ಸಂದೇಹಗಳ ಮಧ್ಯೆಯೇ  ಆದದ್ದಾಗಲಿ ಅಂತ ನಿಂಗೆ ಪ್ರಪೋಸ್ ಮಾಡ್ದೆ. ನೀನು ಏನೆಂದರೆ ಏನೂ ನೆಪ ಹೇಳದೆ ಒಪ್ಪಿಕೊಂಡೆಯಲ್ಲನಿನ್ನ ಅಲ್ಲೇ ತಬ್ಬಿ ಮುದ್ದಾಡಬೇಕು ಅನ್ನಿಸಿತ್ತು.

ಮಾತೊಂದ ಹೇಳುವೆನು

ಹತ್ತಿರ ಹತ್ತಿರ ಬಾ….

ಮುತ್ತೊಂದ ತಂದಿರುವೆ

ಮೆತ್ತಗೆ ಮೆತ್ತಗೆ ಬಾ….

ಭಯ ಪಟ್ಟಿದ್ದು ಅವತ್ತೇ ಕೊನೆ ಚಿನ್ನು ಆಮೇಲೆ ಬರೀ ಪ್ರೀತಿ, ಪ್ರೀತಿ, ಪ್ರೀತಿ…. ಅವತ್ತಿಂದ ಇವತ್ತಿಗೆ ಲೆಕ್ಕ ಹಾಕಿದ್ರೆ ಎಷ್ಟು ಮುತ್ತು, ಎಷ್ಟು ಕೋಪ, ಎಷ್ಟು ಸಾಂತ್ವನ, ಎಷ್ಟು ಜಗಳ…. ಆದರೂ ಅವುಗಳ ನಡುವೆಯೇ ಎಷ್ಟು ಚೆಂದನೆ ಪ್ರೀತಿಯಿಂದ ಬದುಕುತ್ತಿದ್ದೇವೆ ಅಲ್ವಾ ? ಅದಕ್ಕೇ ಕಣೇ ನಮ್ಮದೇ ಆದರ್ಶ ಜೋಡಿ ಅಂತ ನಾನು ಹೇಳಿದ್ದು. ಅದೆಲ್ಲ ಸರಿ ಮೊನ್ನೆ ಯಾಕ್ಹಂಗೆ ಕೋಪ ಮಾಡ್ಕೊಂಡು ಹೋದೆ ಬಂಗಾರೀ.. ಕೋಪದಲ್ಲೂ ನೀ ಮುದ್ದಾಗಿರ್ತೀಯ ಅಂದಿದ್ದೇ ತಪ್ಪಯ್ತಾ ? ನಿನ್ನಾಣೆ ನಿಜ ಶಮ್ಮೀ ಅವತ್ತು ಬಾಸ್ ಸಿಕ್ಕಾಪಟ್ಟೆ ರೇಗಿದ್ದ ಅದೇ ಟೆನ್ಶನ್ನಲ್ಲಿ ನಿಂಗೆ ಬೈದೆ ಸಾರಿ ಕಣೇಬಾವನೆಗಳನ್ನು ಅನ್ನಿಸಿದಂಗೆ ಹರಿಬಿಡೋಕೆ ನನಗಾದ್ರೂ ನೀನಲ್ದೆ ಯಾರಿ  ದಾರೆ ಹೇಳು. ಮನೇಲಿ ಅಪ್ಪನ ಎದುರು ನಿಲ್ಲೋಕೇ ಭಯಅಮ್ಮ ದಿನ ಪೂತರ್ಿ ಕೆಲಸ ಮಾಡಿ ಸುಸ್ತಾಗಿತರ್ಾಳೆತಂಗಿ ಮುಖ ನೋಡಿದ್ರೆ ಇನ್ನೂ ಪುಟ್ಟ ಹುಡುಗಿ ಅನ್ಸುತ್ತೆಹೆಂಗೆ ರೇಗಲಿ ? ನಂಗೆ ಎಲ್ಲರಿಗೂ ಹೆಚ್ಚು ಪ್ರೀತಿ ನಿನ್ ಮೇಲೆ ಅಲ್ವೇನೆ ? ನೀನೇ ತಾನೇ ಬದುಕು ಪೂತರ್ಿ ನನ್ನ ಜತೆ ಹೆಜ್ಜೆ  ಹಾಕೋಳು….. ಪ್ಲೀಸ್ ನನ್ನ ಸ್ವಲ್ಪ ಅರ್ಥ ಮಾಡ್ಕೋನಂಗೆ ಕೋಪ ಬಂದಾಗ ನೀನೂ ರೇಗಿದ್ರೆ ಹೆಂಗೆ ? ಆವಾಗೆಲ್ಲ ನೀನು ಚೂರೇ ಚೂರು ಸಮಾಧಾನ ಮಾಡು ಸಾಕುಆಮೇಲೆ ನೋಡು ಚಿನ್ನಾನಿನ್ನಂಥ ನೀನೇ ಬೆರಗಾಗುವಂತೆ

ಒಲಿದ ಜೀವಾ ಜತೆಯಲಿರಲು

ಬಾಳು ಸುಂದರಾ

ವಿಶ್ವವೆಲ್ಲಾ ಭವ್ಯವಾದ

ಪ್ರೇಮ ಮಂದಿರಾ….

                ಅನ್ನುತ್ತಲೇ ನಿನ್ನ ಇನ್ನೊಂದು ಹನಿಮೂನ್ಗೆ ಕರ್ಕೊಂಡು ಹೋಗ್ಲಿಲ್ಲ ಅಂದ್ರೆ ಕೇಳುಶಮ್ಮೀ, ಮೂರು ದಿನದಿಂದ ನಿನ್ನ ಮುನಿಸು ಬಿಡಿಸಲು ಐಡಿಯಾ ಹುಡುಕುತ್ತಲೇ ಇದೀನಿ. ಆದರೆ ನನ್ನಂಥ ಪೆದ್ದನಿಗೆ ನಿನ್ ಥರಾ ಬುದ್ಧಿವಂತೆಯನ್ನು ನಗಿಸೋದು ಕಷ್ಟವೇ ಅಲ್ವಾ ? ಅದಕ್ಕೇ ನೀನೇ ರಾಜಿ ಮಾಡ್ಕೊಳೇ ಪ್ಲೀಸ್. ಬೇರೇನೂ ಬೇಡ; ಒಂದು ಮಿಸ್ಡ್ ಕಾಲ್ ಕೊಡು ಸಾಕು ನೀ ಕೋಪ ಬಿಟ್ಟೆ ಅಂದ್ಕೊಂಡು ಕರೆಕ್ಟಾಗಿ ಅರ್ಧ ಗಂಟೆಯೊಳಗೆ ಮಿಟ್ಟಲ್ ಟವರ್ ಹತ್ರ ಕಾಯ್ತಾ ಇರ್ತೀನಿ.. ನೀನು ಐದು ನಿಮಿಷ ಲೇಟಾಗೇ ಬಾ ಪರ್ವಾಗಿಲ್ಲ ಬಾರಿ ನಾನು ಬೈಯಲ್ಲಅದರೆ ಈಗೊಂದು ಬಾರಿ ಮುನಿಸು ಬಿಟ್ಬಿಟ್ಟು ಮಾತಾಡೇ

ನನಗಾಗಿ ಬಂದಾ ಆನಂದ ತಂದಾ

ಹೆಣ್ಣೇ ಮಾತಾಡೆಯಾ….

ನಿನ್ನ ಮಾತು, ಮೇಲಿನ ಮುತ್ತು ಮತ್ತು ಅದರ ಮತ್ತಿಗಾಗೇ ಕಾಯುತ್ತಿರುವ ಫುಲ್ ಫುಲ್ ನಿನ್ನ,

ಪಾಪದ ಹುಡುಗ

(ವರ್ಷಗಳ ಹಿಂದೆ ವಿಜಯ ಕನರ್ಾಟಕದ ಗುಲಾಬಿಗಾಗಿ ಬರೆದದ್ದು & ಚಿತ್ರ ಎಂದಿನಂತೆ Net ನಿಂದ ಕದ್ದಿದ್ದು )

ಪ್ರಾರ್ಥನೆ

ಕಣ್ಣ ಕಂಬನಿ ಮುತ್ತು

ಎಂದಿಗೂ ಬೆಳಕಿಗೆ ಬಾರದ
ಸಂಬಂಧದ ಸಂಕೋಲೆ

ನನ್ನ ಕೊರಳು ಹಿಚುಕುವ
ಮೊದಲೇ ಕೊಂದುಬಿಡು

ತಂಪು ಇರುಳಿನಲಿ
ಅರಳಿದ ಸ್ವಪ್ನದ ಹೂ
ಬದುಕಿನ ಕುಲುಮೆಯಲಿ
ಬಿದ್ದು ಬಿರಿಯಲಾಗದೆ
ಬೇಯಲಾಗದೆ ನರಳಿ
ಕರಕಾಗುತಿದೆ ನೋಡು

ನಿನ್ನೆದೆ ಸವರಿ ಮತ್ತೆ ಬಳಸಿ 
ಚುಂಬಿಸಲೆಳಸುವಾಗಲೂ

 
ನಿನ್ನೆದೆಯಲ್ಲಿ ನಾನಿಲ್ಲದೆ

ಇನ್ನಾವುದೋ ಕನವರಿಕೆಯಲಿ

ನೀ ಕಳೆದು ಹೋಗಿ
ನಾ ನರಳುವ ಮುನ್ನ

ಕಳಚಿಬಿಡು

ನೀ ನನ್ನ ಜತೆಗಿರುವ ಭ್ರಮೆ
ಒಂಟಿತನದ ವಾಸ್ತವದ
ಕಮರಿಯಲಿ ಬಿದ್ದು
ಆಕ್ರಂದನಗೈಯುತಿದೆ
ವಿರಸವಾಗುವ ಮೊದಲೇ
ಅಳಿಸಿಬಿಡು….

ನೋವಿನ ಹಸಿಗಾಯಕೆ
ನಗೆಯ ಬಟ್ಟೆಯ ಸುತ್ತಿ

ಕಂಬನಿಯ ರಕ್ತ ಒಸರಿದ್ದನ್ನು
ಮುಚ್ಚಿಡುವ ಮುಖವಾಡ
ನನಗೆ ಸಾಧ್ಯವಾಗುತಿಲ್ಲ
ಸಾಯಿಸಿಬಿಡು…..

************

ಚೇತನಾ ಬರೆಸಿದ ಪತ್ರ

ಒಂದಾನೊಂದು ಕಾಲದಲ್ಲಿ ಕಳೆದು ಹೋದ ಗುಬ್ಬಚ್ಚಿಯನ್ನು ನೆನೆಪಿಸಿಕೊಂಡು ಅದಕ್ಕೊಂದು ಪತ್ರ ಬರೆದಿದ್ದೆ.. ಅದನ್ನು ಜ್ಞಾಪಿಸಿಕೊಂಡು ಚೇತನಾ ತೀರ್ಥಹಳ್ಳಿ ನಂಗೆ ಮೇಲ್ ಮಾಡಿ “GUBBACHCHI’ Shamaa neewe anta tiLidu khushi hAgU bEsara.. Khushiya kAraNa nimage gottAguvanthadE biDi. bEsara yAkendare, aShTella chenda bareyaballa neewu EnU bareyade summane uLidubiTTirOdakke… gubbachchi Odida nenapu innU hachcha hasurAgide gottA? Aga nAnu GARVA dalli sakriyaLAgidde. Sigi, mAtADuva” ಇಷ್ಟು ಬರೆದು ತಿವಿದರು. ಅದಕ್ಕಾಗಿ ಅವರಿಗೊಂದು ಉತ್ತರ…

ಗೆಳತೀ,

ನಾನು ಗುಬ್ಬಚ್ಚಿಗೆ ಬರೆದ ಹಳೆಯ ಪತ್ರ ನೆನಪಿಸಿಕೊಂಡು ನೀ ಬರೆದ ಸಾಲುಗಳು ಯಾಕೋ ಮನದಿಂದ ಮರೆಯಾಗುತ್ತಿಲ್ಲ. ಇರೋದು ಎರಡೇ ಸಾಲುಗಳಾದರೂ ಪುಟಗಟ್ಟಲೇ ಬೇಸರವನ್ನು ಅದರಲ್ಲೇ ತುಂಬಿದ್ದೀಯೆ. ನಾನೀಗ ಬರೆಯುತ್ತಿಲ್ಲ ಅನ್ನೋದಕ್ಕಿಂತಲೂ ನಂಗೀಗ ಬರೆಯಲಾಗುತ್ತಿಲ್ಲ ಎಂಬುದು ಸತ್ಯ. ಹಳೆಯ “ಶಮ” ಕಳೆದು ಹೋಗಿದ್ದಾಳಾ ? ಬಹುಶಃ ಹೌದು..

ಡಿಗ್ರಿ ಪರೀಕ್ಷೆ ಮುಗಿದು ಎರಡೇ ದಿನಕ್ಕೆ ಕೆಲಸ ಹುಡುಕಿ ಬೆಂಗಳೂರಿಗೆ ಬಂದಿದ್ದೆ. ಬಂದು ಒಂದು ವಾರಕ್ಕೆ ಕೆಲಸ ಕೈ ಹಿಡಿಯಿತು. ಜಗತ್ತನ್ನೇ ಗೆದ್ದ ಸಂಭ್ರಮ. ಬಡತನ ತಂದುಕೊಟ್ಟ ಅವಮಾನದ ಗುರುತುಗಳನ್ನೆಲ್ಲ ಸಾಧನೆಯ ಬ್ರಶ್ನಿಂದ ಅಳಿಸುವ ಕಾತರ; ದುಡ್ಡಿಲ್ಲ ಎಂಬ ಒಂದೇ ಕಾರಣಕ್ಕೆ ನಮ್ಮನ್ನು ತುಳಿದವರೆದುರು ತಲೆಯೆತ್ತಿ ನಿಲ್ಲುವ ಹಂಬಲ; ಅವರನ್ನು ತುಳಿಯುವ ಬದಲು ಅವರನ್ನು ಮೀರಿ ಬೆಳೆದು ಸಡ್ಡು ಹೊಡೆಯುವುದೇ ನಿಜವಾದ ರಿವೆಂಜ್ ಅಂತ ಅಮ್ಮ ಹೇಳಿದ್ದು ಕಿವಿಯಲ್ಲಿ ಗುಂಯ್ ಗುಡುತ್ತಿತ್ತಲ್ಲ, ಹಗಲೂ ರಾತ್ರಿ ದುಡಿದೆ. ನನ್ನ ಓರಗೆಯವರೆಲ್ಲ ಪಿ.ಜಿ ಸೀಟ್ ಸಿಗುತ್ತಾ ಇಲ್ಲವಾ ? ಸಿಕ್ಕಿದರೆ ಎಷ್ಟು ದೂರ ಎಂಬೆಲ್ಲಾ ಲೆಕ್ಕಾಚಾರದಲ್ಲಿದ್ದರೆ ನಾನು ಮೊದಲ ತಿಂಗಳ ಸಂಬಳ ಎಣಿಸುತತಿದ್ದೆ. ಶ್ರಮದ ದುಡಿತಕ್ಕೆ ಒಳ್ಳೆಯ ಪ್ರತಿಫಲ ದೊರಕಿತ್ತು. ಬಯಸಿದ್ದ ಸ್ಥಾನ ಮಾನವೆಲ್ಲ ನನ್ನ ಬಳಿ ಬಂತು. ಡಾಕ್ಟರೇಟ್ ಪಡೆದವರೆಲ್ಲ ನನ್ನ ಕೈ ಕೆಳಗೆ ಕೆಲಸ ಮಾಡುವಾಗ ನಾ ಪಿ.ಜಿ ಮಾಡಿಲ್ಲವೆಂಬ ನೋವು ಪೂತರ್ಿ ಮರೆಯಾಗಿತ್ತು. ಬರೀ ಬಿ.ಎ ಎಂಬ ಹೀಯಾಳಿಕೆಗೆ ಪಡೆದು ಬಂದಿದ್ದ ನಾನು, ಕೇವಲ ನಾಲ್ಕು ರೂಪಾಯಿ ಕೊಟ್ಟು ಪಾನಿ ಪೂರಿ ತಿನ್ನಲಾಗದ ಸ್ಥಿತಿಯಲ್ಲಿ ಪದವಿ ಮುಗಿಸಿದ್ದ ನಾನು ನಾನ್ನೂರು ರೂಪಾಯಿ ಕೊಟ್ಟು ಲೀಲಾ ಪ್ಯಾಲೇಸ್ನಲ್ಲಿ ಕಾಫಿ ಕುಡಿಯಬಲ್ಲವಳಾಗಿದ್ದೆೆ. ಅದೂ ಸಾಫ್ಟವೇರ್ ಸ್ವರ್ಗ ಬೆಂಗಳೂರಿನಲ್ಲಿ !! ನಿಂಗೊತ್ತಾ ದಶಕಗಳ ಅಪಮಾನಗಳ ಕಿಚ್ಚು ಆರಲು ಇವೆಲ್ಲ ಸಾಧಿಸಲೇ ಬೇಕಿತ್ತು. ನನ್ನ ಕಾಲೆಳೆದು ಕೈ ತಟ್ಟಿದವರ ಕೈಗೆ ಇನ್ನೆಂದೂ ನನ್ನ ಕಾಲು ಸಿಗಬಾರದು ಅಷ್ಟೆತ್ತರಕ್ಕೆ ನಾನು ಏರಿ ನಿಲ್ಲಬೇಕೆಂಬ ಛಲ. ಕೈಗೊಂದು ಕಾಲಿಗೊಂದು ಎಂಬಂತೆ ಜನ. ಛೇಂಬರಲ್ಲಿ ಕೂತು ಬೆಲ್ ಮಾಡಿದ್ರೆ ಇಬ್ಬಿಬ್ಬರು ಬಂದು ನಿಲ್ಲೋರು.. ಎಷ್ಟು ಎಂಜಾಯ್ ಮಾಡ್ತಿದ್ದೆ ಗೊತ್ತಾ ಅದನ್ನೆಲ್ಲ. ಬಹುಶಃ ನನ್ನ ಹಾಗಿರುವ ಎಲ್ಲರಿಗೂ ಹೀಗೇ ಆಗುತ್ತೇನೋ.. ಹೆಸರಿನ ಹಂಬಲದ ಈ ದಿನಗಳಲ್ಲಿ ಉಸಿರಂತಿದ್ದ ಎಲ್ಲ ಹಳೆಯ ಅಭ್ಯಾಸಗಳು ನನ್ನ ಬಿಟ್ಟು ಹೋದವು. ಪ್ರತಿ ದಿನ ಒಂದಷ್ಟು ಓದಿಯೇ ಮಲಗುತ್ತಿದ್ದ ನಾನು ದುಡಿಯುವ ಹಠಕ್ಕೆ ಬಿದ್ದು ರಾತ್ರಿ ಮನೆಗೆ ಬಂದಾಕ್ಷಣ ಲಾಪ್ಟಾಪಿನೆದುರು ಸ್ಥಾಪಿತಳಾಗುತ್ತಿದ್ದೆ. ಇನ್ನೇನು ಅದಕ್ಕೆ ಹಿಂದಿರುಗಬೇಕು ಎಂಬಷ್ಟರಲ್ಲಿ ಆಲ್ಟೋ ಬಂತು.. ಮತ್ತೆ ಚವರ್ಿತ ಚರ್ವಣ.. ಮೊದಲಿಗಿಂತ ಹೆಚ್ಚು ಕೆಲಸ ಮಾಡಲಾರಂಭ.. ನನ್ನ ಜತೆ ಕಾರನ್ನೂ ಸಾಕಬೇಕಿತ್ತಲ್ಲ.. ಎಲ್ಲಕ್ಕೂ ಹೆಚ್ಚಾಗಿ ನಂಗಿಲ್ಲಿ ಕಂಪನಿಯೇ ಇರಲಿಲ್ಲ. ಹಳೆಯ ಸ್ನೇಹವೆಲ್ಲ ಊರಿನಲ್ಲಿತ್ತು. ‘ಬೆಂಗಳೂರು ಮನೋಭಾವ’ದವರು ನನಗೆ ಒಗ್ಗುತ್ತಿರಲಿಲ್ಲ (ಬೆಂಗಳೂರು ಮನೋಭಾವಕ್ಕೆ ವಿವರಣೆ ಕೇಳಬೇಡ; ವಿವರಿಸಲಾರೆ) ಏಕಾಂಗಿಯಾಗಿ ಎಲ್ಲೂ ಹೋಗಲಾರದ ಕಾರಣಕ್ಕೆ ಆಫೀಸಿಗೇ ಕಚ್ಚಿಕೊಂಡಿದ್ದೆನಾ ? ಇದ್ದರೂ ಇರಬಹುದು.

ಸಂತೋಷ, ದುಖಃಗಳ ಹಾಗೆ ಈ ಹುದ್ದೆ, ಅಧಿಕಾರ ಕೊಡೋ ಹಮ್ಮು ಕೂಡ ಒಂದು ದಿನ ಸಾಕಾಗಲೇ ಬೇಕಿತ್ತು; ಸಾಕಾಯ್ತು.. ಆದರೆ ಅಷ್ಟರಲ್ಲಿ ಇನ್ನೇನೋ ಅವಘಡ ಸಂಭವಿಸಿತ್ತು. ನನ್ನ ನೆಚ್ಚಿನ ಕಾಮ್ರೇಡ್ ಆಲ್ಟೋ ಅಪಘಾತದಲ್ಲಿ ಪ್ರಾಣ ತೆತ್ತಿತ್ತು.. ಅದರಿಂದ ಹೊರ ಬರುವಷ್ಟರಲ್ಲಿ ಇನ್ನೊಂದು ಅಪಘಾತವಾಗಿ ಹೋಯ್ತು… ಅದರ ಹೆಸರು ಮದುವೆ… !!! ಬದುಕಿನ ಹೊಸ ಅದ್ಯಾಯ ಓದುವ ಸಂಭ್ರಮ.. ರಾಜಕುಮಾರಿಯಂತೆ ನನ್ನ ನೋಡಿಕೊಳ್ಳುವ ಹುಡುಗ.. ಎಲ್ಲ ಖುಷಿ ಖುಷಿ.. ಆದರೂ ಆಗೀಗ ಕಾಡುವ ಯಾವುದೋ ಅವ್ಯಕ್ತ ಸಂಕಟ.. ಏನೋ ಖಾಲಿತನ. ಅದೇನೆಂದು ಹುಡುಕಿ ಹಿಡಿಯೋದಿಕ್ಕೇ ಸಾಕಷ್ಟು ಸಮಯ ಹಿಡಿಸಿತು. ಆದರೀಗ ನಂಗೆ ಅರ್ಥ ಆಗಿದೆ.. ನಾನೇನೂ ಓದುತ್ತಿಲ್ಲ; ಜಾಸ್ತಿ ಬರೆಯುವುದಿರಲಿ; ಕನಿಷ್ಟ ಡೈರಿ ಕೂಡ ಬರೆಯುತ್ತಿಲ್ಲ. ಅದಕ್ಕೇ ಈ ತಳಮಳ.. ಓದದೇ, ತೋಚಿದ್ದೇನಾದರೂ ಗೀಚದೇ ಇರಲಾರೆ ಅನ್ನೋದು ಸತ್ಯ. ಮತ್ತೆ ಓದಿಗೆ ಪ್ರಾಂಭಿಸಿದ್ದೇನೆ.. ತುಂಬಾ ಸಮಯ ಸಿಗದಿದ್ದರೂ ಸಿಕ್ಕಿದ ಎಲ್ಲಾ ಸಮಯವನ್ನು ಇದಕ್ಕೇ ಮೀಸಲಿಡುತ್ತೇನೆ. ಬರೆಯಲೂ ಪ್ರಾರಂಭ ಮಾಡಿದ್ದೇನೆ.. ಆದರೆ ಎಷ್ಟು ಬರೀತೀನಿ ಅನ್ನೋದು ಮಾತ್ರ ಈ ಪತ್ರದಾಣೆಗೂ ಗೊತ್ತಿಲ್ಲ… ಅಷ್ಟೆ.. ಹೇಳುವುದು ಇನ್ನೇನಿಲ್ಲ. ಇದ್ದರೆ ಇನ್ನೊಂದು ಪತ್ರ ಬರೆಯುವೆ… ಬರ್ಲಾ.
ನಲ್ಮೆಯಿಂದ,
ನಾನು

%d bloggers like this: