ಕೋರಿಕೆ

ಹಾಯ್,
ಪ್ರತಿ ವರ್ಷದ ಹಾಗೆ ಅಮ್ಮನ ಹುಟ್ಟು ಹಬ್ಬದ ಅಂಗವಾಗಿ ಮಾತೃ ಉತ್ಸವ ಮಾರ್ಚ್ ತಿಂಗಳ ಎರಡನೇ ಭಾನುವಾರ ಅಂದರೆ ಎಂಟನೇ ತಾರೀಖಿನಂದು ನಡೆಸಲಿದ್ದೇವೆ. ಅಂದವಾದ ಅಮ್ಮನಿಗೆ ಸಂಬಂಧಿಸಿದ ಒಳ್ಳೆಯ ಸೂಕ್ತಿಗಳು/ಕವನದ ಸಾಲುಗಳು/ Quotations ಇದ್ದರೆ ಬೇಕು. ನಿಮ್ಮಲ್ಲಿದ್ದರೆ ಫೆಬ್ರವರಿ ಎರಡನೇ ತಾರೀಖಿನೊಳಗೆ ನನಗೆ ಕಳುಹಿಸುವಿರಾ ? ಬರೆದವರ ಹೆಸರೂ ಇದ್ದರೆ ಅನುಕೂಲ.

ಅಂದ ಹಾಗೆ, ಆಹ್ವಾನ ಕಳುಹಿಸುವೆ … ತಪ್ಪದೆ ಬನ್ನಿ
ಧನ್ಯವಾದಗಳು,
ಶಮ, ನಂದಿಬೆಟ್ಟ

ಇವತ್ತು ನನಗನಿಸಿದ್ದು

ಪ್ರವಾಹದ ವಿರುಧ್ಧ ಈಜುವುದು ಕಷ್ಟಪ್ರಭಾವದ ವಿರುಧ್ಧ ಈಜುವುದು ಇನ್ನೂ ಕಷ್ಟ !!!!

ನಿಮ್ಗೇನನ್ಸುತ್ತೆ ??

 

 

 

ಸಂಕ್ರಾಂತಿ ಹಾರೈಕೆ

 

 

ಸಂಕ್ರಾಂತಿಯ ಬೆಳಕು

ಸಂಕ್ರಾಂತಿಯ ಬೆಳಕು

 

ಮನುಜನ ಎದೆಯಲಿ ಇಂದೇ ಬೆಳಗಲಿ

ಶಾಂತಿಯ ನಂದಾದೀಪ

ಉಗ್ರನ ಹೃದಯಕೂ ಒಲಿಯಲಿ ಪ್ರೀತಿ

ಅಳಿಯಲಿ ಭುವನದ ತಾಪ

ಬಂದೂಕು ಹಿಡಿದ ಕೈಯಲು ಕಾಣಲಿ

ಶ್ವೇತ ವರ್ಣದ ಜಾಜಿ

ರಕ್ತದ ಓಕುಳಿ ಹರಿವೆಡೆಯಲ್ಲಿ

ಚಿಮ್ಮಲಿ ಪ್ರೀತಿಯ ಕಾರಂಜಿ

ಸುಡು ಸೂರ್ಯನ ಹೊತ್ತಿಹ ಗಗನವೆ

ಈಯಲಿ ತಂಪಿನ ಮಳೆ

ಗುಂಡಿನ ಕರ್ಕಶ ಶಬ್ದವ ಅಳಿಸಿ

ಕುಹೂ ಎನ್ನಲಿ ಕೋಗಿಲೆ

ಅಹಮಿನ ಕೋಟೆಯ ಕೆಡವಿ ಹಾಕಿ

ಮನವು ತೆರೆಯಲಿ ಸ್ನೇಹಕೆ

ಜತೆಯಾಗಿ ಸಾಗಲಿ ಕೋಟಿ ಹೆಜ್ಜೆಗಳು

ಬಾಳಿನೊಲುಮೆಯ ತೀರಕೆ

$$$$$$$$$$$$$$

ಒಂದಷ್ಟು ಹನಿಗಳು

ನಿನ್ನ ತುಟಿ

ಸವಿಯಬೇಕೆನಿಸಿತು

ನಗುವಾಗಿ

ಅಲ್ಲಿ ನೆಲೆಯಾದೆ

*************

ಮೊನ್ನೆ ಸಂಜೆ

ಸಮುದ್ರ ದಂಡೆಯಲಿ

ನೀ ನನಗೆ ಮುತ್ತಿಟ್ಟದ್ದು

ಕಂಡ ಸೂರ್ಯ

ನಾಚಿ ಕೆಂಪಾಗಿ

ಮರೆಯಾಗಿ ಹೋದ

*************

ನನ್ನ ಕನಸುಗಳನ್ನು

ಮೋಡಗಳಾಗಿ

ಬಾನಲ್ಲಿ ತೇಲಿಬಿಟ್ಟೆ

ಅವು ಮಳೆಯಾಗಿ

ನಿನ್ನೆದೆಗೆ ಸುರಿದಾಗ

ಒಲವು ಚಿಗುರೊಡೆಯಿತು

*************

ಎಲೆ ತನ್ನ ರಕ್ತ

ಬಸಿದು ಕೊಟ್ಟಿತ್ತು

ನಾನು ಮದರಂಗಿ

ಎಂದು ಸಂಭ್ರಮಿಸಿದೆ

*************

ನನ್ನನ್ನು ಹೂವಿಗೆ

ಹೋಲಿಸಬೇಡವೋ

ಬಾಡಿದ ಮೇಲೆ

ಬದುಕಿಲ್ಲವಾಗುತ್ತದೆ

*************

ನೀ ನನ್ನ ಬಿಟ್ಟು

ಹೋಗಿದ್ದಕ್ಕೆ ಅಳುತ್ತೇನೆ

ಎಂದುಕೊಂಡೆಯಾ

ಮತ್ತೊಮ್ಮೆ ಸ್ವಾತಂತ್ರ್ಯ

ಸಿಕ್ಕಿದ ಖುಷಿಯನ್ನು

ಆಚರಿಸುತ್ತಿದ್ದೇನೆ

*************