ಆಸೆ

ಅವು ಪಿಯುಸಿಯ ದಿನಗಳು. ರೂಲ್ಸು ರೆಗ್ಯುಲೇಷನ್ ತುಂಬಿದ್ದ ಹೈಸ್ಕೂಲು ಮುಗಿಯಿತೆಂದರೆ ಅದೇನೋ ಸಂಭ್ರಮ. ಸ್ವತಂತ್ರವಾಗುವ ಭಾವ. ಅಡಾಲಸೆನ್ಸ್ ದಿನಗಳೇ ಹಾಗೆ.. ಮನದಂಗಳದಲ್ಲಿ ಬಣ್ಣ ಬಣ್ಣದ ರಂಗೋಲಿ.. ಆಸೆ, ಗುರಿ, ಕನಸು ಯಾವುದೂ ನನಗಾವಾಗ ಸ್ಪಷ್ಟವಿರಲಿಲ್ಲ. ಅಸಲಿಗೆ ಅವುಗಳ ನಡುವಿನ ವ್ಯತ್ಯಾಸ ಕೂಡ ಗೊತ್ತಿರಲಿಲ್ಲ. ಅಂಥ ದಿನಗಳಲ್ಲಿ ಕವನಗಳನ್ನು ಬರೆಯದವರು ಬಹುಶಃ ಯಾರೂ ಇರಲಿಕ್ಕಿಲ್ಲ. ನಾನೂ ಮನ ಬಂದಂತೆ ಗೀಚಿದ್ದು ಆವಾಗಲೇ. ನಮ್ಮ ಎಸ್.ಡಿ.ಎಂ ಕಾಲೇಜು ಪಠ್ಯೇತರ ಚಟುವಟಿಕೆಗಳಿಗೆಲ್ಲ ತುಂಬ ಪ್ರೋತ್ಸಾಹ ಕೊಡುತ್ತಿದ್ದ ಕಾರಣ ನಮ್ಮ ಬರಹಗಳು ಕಾಲೇಜಿನ ಪ್ರಾಯೋಗಿಕ ಪತ್ರಿಕೆಗಳಲ್ಲಿ, “ಚಿಗುರು” ಮುಂತಾದವುಗಳಲ್ಲಿ ಪ್ರಕಟವಾಗುತ್ತಿತ್ತು. ನನಗಂತೂ ಹಿಮಾಲಯ ಗೆದ್ದಂಥ ಖುಷಿ ಕೊಡುವ ಸಂಗತಿಯದು. ಪಿಯುಸಿಯಲ್ಲಿ ನನ್ನ ಬೆಂಚಿನಲ್ಲಿ ಕೂಡುತ್ತಿದ್ದ ಒಂದಿಬ್ಬರು “ತುಳು ಭಾಷೇಲಿ ಬರಿ ನೋಡೋಣ” ಅಂತ ಚಾಲೆಂಜ್ ಥರಾ (?) ಹೇಳಿದ್ದರ ಫಲ ಈ ಕವನ. ತುಳು ನನ್ನ ಮಾತೃ ಭಾಷೆ ಅಲ್ಲದಿದ್ದರೂ ಅಷ್ಟೇ ಅತ್ಮೀಯವಾದ ಹೃದಯದ ಭಾಷೆ; ತುಳು ಮಾತು ಕೇಳಿದರೆ ಸಾಕು ಕಿವಿ ನೆಟ್ಟಗಾಗುತ್ತದೆ. ನಮ್ಮೂರ ಮಂದಿಗೆ ಯುನೀಕ್ ಆದ ಐಡೆಂಟಿಟಿ ಕೊಡುವುದು ಇದೇ ಭಾಷೆ. ಅಂದು ಬರೆದ (ಬಹುಶಃ 1994ರಲ್ಲಿರಬೇಕು) ಈ ಪುಟ್ಟ ಕವನದಂಥದ್ದು (?) ಇಲ್ಲಿದೆ ಓದಿಕೊಳ್ಳಿ.

ಆಸೆ

ಪೊರ್ಲುದ ಪ್ರಕೃತಿಡ್ ತೆಲಿಪುನ
ಪಜಿ ಇರೆತ ಮಿತ್ತ್…
ಕಮ್ಮೆನ ಕೊರ್ದು ನಲಿಪುನ
ಪೂತ ರಾಸಿದ ಮಿತ್ತ್…
ಪುಣ್ಣಮೆದ ಚಂದ್ರನ ಮಿತ್ತ್…
ಬಾಲೆ ಕಂಜಿದ ಬಿಮ್ಮದ ಮಿತ್ತ್…
ಸಮುದ್ರದ ನೀರ್ದ ಮಿತ್ತ್…
ನೀಲಿ ಬಾನದ ಮಿತ್ತ್…
ಮಾಲೆ ಕಟ್ಟಿನ ಮೋಡದ ಮಿತ್ತ್…
ಎನ್ನ ಮನಸ್ದ ಗೋಡೆದ ಮಿತ್ತ್…
ಕಣ್ಣ ಬೊಂಬೆದ ಮಿತ್ತ್…
ಮನಸ್ ದಿಂಜಿದ್ ಬರೆಪುನ ಆಸೆ
ನಿನ್ನ ಮೋಕೆದ ಪುದರ್ನ್ …

%%%%%%%%%%

ತುಳು ಬರದವರು ಜಗಳಕ್ಕೆ ಬೀಳುವುದು ಬೇಡವೆಂಬ ಭಯಕ್ಕೆ ಅದರ ಕನ್ನಡ ರೂಪವೂ ಇದೆ ನೋಡಿ.
(ಇದು ಅಕ್ಷರಕ್ಷರ ಅನುವಾದವಲ್ಲ; ಭಾವಾನುವಾದ)

ಆಸೆ

ಸೃಷ್ಟಿಯ ಮಡಿಲಲ್ಲರಳಿದ
ಚಿಗುರೆಲೆಗಳ ಮೇಲೆ…
ಘಮಘಮಿಸಿ ನಗುವ
ಸುಮ ರಾಶಿಯ ಮೇಲೆ…
ಹುಣ್ಣಿಮೆ ಚಂದ್ರನ ಮೇಲೆ…
ಎಳೆಗರುವಿನ ತುಟಿಗಳ ಮೇಲೆ…
ಸಪ್ತ ಸಾಗರದ ನೀಲ ನೀರಿನ ಮೇಲೆ…
ಬಾನ ವಿಸ್ತಾರದ ಮೇಲೆ…
ಮೇಘ ಮಾಲೆಗಳ ಮೇಲೆ…
ಮಿನುಗುವ ಚಿಕ್ಕಿಗಳಿಂದಲೇ ಬರೆವಾಸೆ
ನಿನ್ನ ಮೋಹಕ ಹೆಸರನು…

%%%%%%%%%

ಕರಿಯಾ ಐ ಲವ್ ಯೂ…

.......

ಪ್ರಶ್ನೆ

ಏನ ಬರೆಯಲಿ ಹೇಳು
ಬರಿದಾಗಿದೆ ಭಾವ
ಉಲಿಯುವೆನೆಂದರೆ ಸಖಾ
ಬತ್ತಿ ಹೋಗಿದೆ ಜೀವ
ಎದೆಯ ತುಂಬೆಲ್ಲ
ಶಿಥಿಲ ಅವಶೇಷ
ಹುಡುಕಿ ಹುಡುಕಿ ಸೋತೆ
ಬೆಳಕು ಲವಲೇಶ
ಒಡೆದ ಹಡಗಿನ ತುಂಬ
ಕಣ್ಣೀರ ಸವಾರಿ
ಕಣ್ಣಳತೆಯಲಿದೆ ತೀರ
ಸಿಗುತಿಲ್ಲ ಗುರಿ
ಕೆಳೆಯ ಸುಧೆಯಿಂದ
ಸಾಂತ್ವನದ ಸಿಂಚನ
ಆದರೂ ಕಳೆಯಿಲ್ಲ
ಬಿಳುಪೇರಿದೆ ವದನ
ಮನದ ಹಾಳೆಯ ತುಂಬ
ಪ್ರಶ್ನೆಗಳ ಚಿತ್ತಾರ
ನೀಡುವೆಯಾ ಗೆಳೆಯಾ
ನಿನ್ನೆದೆಯ ಉತ್ತರ ?

ಪರಿಣಾಮ

ನಿನ್ನ ನಿಟ್ಟುಸಿರ ಬಿಸಿಗೆ
ನನ್ನ ಕನಸಿನ ಹೂಗಳು
ಒಣಗಿ ಹೋದವು..

ನಿನ್ನ ಕಣ್ಣೀರ ಹನಿಗೆ
ಮನದ ರಂಗೋಲಿಗಳು
ಕದಡಿ ರಾಡಿಯಾದವು..

ನಿನ್ನ ನಡಿಗೆಯ ಭಾರಕ್ಕೆ
ನನ್ನ ಉತ್ಸಾಹದ ಬುಗ್ಗೆಗಳು
ಒಡೆದು ಮರೆಯಾದವು..

ನಿನ್ನ ದುಗುಡದ ಪರಿಗೆ
ನನ್ನ ನಿರೀಕ್ಷೆ ಹಕ್ಕಿಗಳು
ರೆಕ್ಕೆ ಮುರಿದು ನರಳಿದವು..

ನಿನ್ನ ನೋವಿನ ದನಿಗೆ
ನನ್ನ ಮಧುರಾಲಾಪಗಳು
ಕೊರಳಲ್ಲೇ ಇಂಗಿಹೋದವು..

ಗೊತ್ತೇನು ?

Feel Loved
ಬದುಕಿನ ಹಾದಿಗೆ ಕಾಲಿಡುವ ಮೊದಲೇ
ಅರಳಿವೆ ಕನಸುಗಳು ಆಂಗಳದ ತುಂಬ
ನೀಲಿಯಾಕಾಶದಲ್ಲಿ ಹೊಳೆವ ತಾರೆಗಳಂತೆ
ಕಣ್ಣಲ್ಲಿ ಮೂಡಿಹುದು ನಿನ್ನ ಚಂದ್ರ ಬಿಂಬ

ಆರದೆಯೆ ಹೊಳೆವ ನಿನ್ನ ಕಂಗಳ ಕಾಂತಿ
ಸೂರ್ಯನಂದದಿ ದೇದೀಪ್ಯಮಾನ
ಎದೆಯ ಪ್ರೇಮಾಲಯಕೆ ನಂದಾದೀಪವದು
ಬಾಳನ್ನು ಸಿಂಗರಿಪ ಹೊನ್ನ ಕಿರಣ

ಮನಸೆಲ್ಲ ತುಂಬಿರುವ ನಿನ್ನುಸಿರ ಸೌಗಂಧ
ಹಬ್ಬಿದಂತೆ ಶ್ರೀ ಗಂಧದ ವಲ್ಲರಿ
ಮನೆ ತುಂಬ ಅಚ್ಚಾದ ನಿನ್ನ ಹೆಜ್ಜೆಯ ಗುರುತು
ಅಡಿಗಡಿಗೆ ಭರವಸೆಯ ಐಸಿರಿ

ನಿನ್ನ ಪ್ರೀತಿಯ ನವಿರಿಗೆಲ್ಲಿಯ ಸಾಟಿ
ಮೌನದಲಿ ಮೊಗ್ಗೊಡೆದು ಅರಳುವಂತೆ
ನೋವಿನ ನೆನಪುಗಳು ಹೇಳೆದೆಯೆ ಅಳಿದಿಹವು
ಸೂರ್ಯ ರಶ್ಮಿಗೆ ಕರಗೋ ಮಂಜಿನಂತೆ

ಒಣಗಿ ಬರಡಾಗಿರುವ ಎದೆಹೊಲವ ಉತ್ತು
ಹಸುರಾಗಿಸಲು ಕಾಯುತಿಹೆ ನಾನು
ಪ್ರೀತಿಯ ಮಳೆ ಸುರಿಸಿ ಹಸನು ಮಾಡಲು
ಪ್ರೇಮದ ನೇಗಿಲು ಹಿಡಿದಿರುವೆ ನೀನು

ಒಣಗಿರುವ ಕೊಂಬೆಯಲು ಹಸಿರುಕ್ಕಿಸುವ
ಸಂಜೀವಿನಿ ನಿನ್ನ ಒಲುಮೆಗಾಗಿ
ಹೃದಯದ ಬಾಗಿಲಿಗೆ ಆಸೆತೋರಣ ಕಟ್ಟು
ಕಾದಿರುವೆ ದೊರೆ ನಿನ್ನ ಬರುವಿಗಾಗಿ
***********

……..ಗೆ

ಸವಿಯಬೇಕಿದೆ ನಾವು ಜತೆಯಾಗಿ
ಒಂದು ಸುಂದರ ರಾತ್ರಿ
ನನ್ನ ನಿನ್ನ ಹೃದಯ ಸೇರುವ
ಮಾರ್ದವತೆಯ ರಾತ್ರಿ
ಬಾನಂಚಿನ ಬೆಳ್ಳಿ ಮಿಂಚನು
ಭುವಿಗೆ ತರುವ ರಾತ್ರಿ
ನಿನ್ನ ತೆಕ್ಕೆಯಲಿ ನಾನು ಮಗುವಾಗಿ
ಸ್ವರ್ಗ ಕಾಣುವ ರಾತ್ರಿ
ಕನಸಿನೆಳೆಗಳ ಹಿಡಿದು ತಂದು
ನನಸು ನೇಯುವ ರಾತ್ರಿ
ಮುನಿಸು ತಂದ ಕಹಿಗಳೆಲ್ಲವ
ಅಳಿಸಿ ಹಾಕುವ ರಾತ್ರಿ
ಭಾರ ಬದುಕಿನ ದೂರ ದಾರಿಗೆ
ಬೆಳಕು ತೋರುವ ರಾತ್ರಿ
ತಪ್ಪುಗಳ ಲೆಕ್ಕ ಮರೆತು
ಒಪ್ಪ ಮಾಡುವ ರಾತ್ರಿ
ಮೈ ಮನಸಿನ ಹಂಗು ತೊರೆದು
ಆತ್ಮ ಬೆಸೆಯುವ ರಾತ್ರಿ
*****

(ಎಲ್ಲೋ ಓದಿದ್ದ ಕವನದ ಗುಂಗಿನಲ್ಲಿ ಬರೆದಿದ್ದು)

ಲೆಕ್ಕಾಚಾರ

ಅವತ್ತು
ಬಳಪ ಕಳೆದು ಹೋಗಿದ್ದಕ್ಕೆ
ಅತ್ತ ನೆನಪು ಇನ್ನೂ
ಸ್ಪಷ್ಟವಾಗಿದೆ…
ಇವತ್ತು
ಕಳಕೊಂಡಿದ್ದು ಬಹಳಷ್ಟಿದೆ..
ಅಳು ಬರುತ್ತಿಲ್ಲ..
(ಗಳಿಸಿದ ಅಹಂ ಇದೆಯಲ್ಲ)

ತೊರೆದು ಹೋಗುವ ಮುನ್ನ

ಖಾಲಿ ಕಲ್ಲಿನ ಮಂಟಪ

ಅಳಲಾರದ ಅಸಹಾಯಕತೆಗೆ
ನಾನು ನಗಬೇಕಿದೆ ಗೆಳೆಯಾ

ನೋಯಲಾರದ ವಿಧಿಗಾಗಿ
ನಾನು ನಲಿಯಬೇಕಿದೆ ಕೆಳೆಯಾ

ಎಲ್ಲ ತುಂಬಿದೆ ಇಲ್ಲಿ
ಕೊರತೆಯಿಲ್ಲ ಸ್ಥಾನ ಮಾನಾಭರಣಕೆ
ಸಾಟಿಯಾದೀತೆ ಕೋಟಿಯು
ಹೃದಯ ತುಂಬಿದ ನಿನ್ನ ಸ್ನೇಹಕೆ

ನಿನ್ನ ಅರೆಘಳಿಗೆಯೂ ಬಿಟ್ಟಿರಲಾರೆ
ನಿನ್ನ ಪ್ರೇಮಕೆ ಬೆಲೆಯ ಕಟ್ಟಲಾರೆ
ಹೇಗಿರಲಿ ನೀನಿಲ್ಲದ ಮನೆಯಲಿ
ಉರಿದಿದೆ ಜ್ವಾಲಾಗ್ನಿ ಮನದಲಿ

ಕತ್ತಲಲಿ ಕರಗುತ್ತಿದೆ ಕನಸುಗಳು
ಅರಳದೇ ಬಾಡುತ್ತಿದೆ ಹೂವು
ಕೊರಳಲೇ ಸೊರಗುತ್ತಿದೆ ಹಾಡು
ಕಣ್ಣಲೇ ಇಂಗುತ್ತಿದೆ ಬೆಳಕು

ಆದರೂ…..
   
ನೋವೆಲ್ಲ ನನ್ನಲಿಟ್ಟುಕೊಂಡು

   
ನಿನ್ನ ಕಳುಹುತಿರುವೆ

ನಿಂಗೊತ್ತಾ…..
   
ಇಷ್ಟು ದಿನವೂ ಬೆಳಕು ನೀಡಿ

   
ಈಗ ಗುಡಿಯ ಬರಿದು ಮಾಡಿ
   
ನೀನು ಹೋಗುತ್ತಿರುವೆ….
   
ನಾನು ನಗುತ್ತಿರುವೆ.

 

 

ಪ್ರಾರ್ಥನೆ

ಕಣ್ಣ ಕಂಬನಿ ಮುತ್ತು

ಎಂದಿಗೂ ಬೆಳಕಿಗೆ ಬಾರದ
ಸಂಬಂಧದ ಸಂಕೋಲೆ

ನನ್ನ ಕೊರಳು ಹಿಚುಕುವ
ಮೊದಲೇ ಕೊಂದುಬಿಡು

ತಂಪು ಇರುಳಿನಲಿ
ಅರಳಿದ ಸ್ವಪ್ನದ ಹೂ
ಬದುಕಿನ ಕುಲುಮೆಯಲಿ
ಬಿದ್ದು ಬಿರಿಯಲಾಗದೆ
ಬೇಯಲಾಗದೆ ನರಳಿ
ಕರಕಾಗುತಿದೆ ನೋಡು

ನಿನ್ನೆದೆ ಸವರಿ ಮತ್ತೆ ಬಳಸಿ 
ಚುಂಬಿಸಲೆಳಸುವಾಗಲೂ

 
ನಿನ್ನೆದೆಯಲ್ಲಿ ನಾನಿಲ್ಲದೆ

ಇನ್ನಾವುದೋ ಕನವರಿಕೆಯಲಿ

ನೀ ಕಳೆದು ಹೋಗಿ
ನಾ ನರಳುವ ಮುನ್ನ

ಕಳಚಿಬಿಡು

ನೀ ನನ್ನ ಜತೆಗಿರುವ ಭ್ರಮೆ
ಒಂಟಿತನದ ವಾಸ್ತವದ
ಕಮರಿಯಲಿ ಬಿದ್ದು
ಆಕ್ರಂದನಗೈಯುತಿದೆ
ವಿರಸವಾಗುವ ಮೊದಲೇ
ಅಳಿಸಿಬಿಡು….

ನೋವಿನ ಹಸಿಗಾಯಕೆ
ನಗೆಯ ಬಟ್ಟೆಯ ಸುತ್ತಿ

ಕಂಬನಿಯ ರಕ್ತ ಒಸರಿದ್ದನ್ನು
ಮುಚ್ಚಿಡುವ ಮುಖವಾಡ
ನನಗೆ ಸಾಧ್ಯವಾಗುತಿಲ್ಲ
ಸಾಯಿಸಿಬಿಡು…..

************

ಸ್ವಾತಿ ಮುತ್ತು

ನನ್ನ ಹೃದಯದ

ಚಿಪ್ಪಿಗೆ

ನಿನ್ನೊಲವ ಹನಿ

ಬಿದ್ದಾಗ ನನ್ನೊಡಲಲಿ

ಅರಳಿತ್ತು

ಸ್ವಾತಿ ಮುತ್ತು

 

      *******

Previous Older Entries