ಆಸೆ

ಅವು ಪಿಯುಸಿಯ ದಿನಗಳು. ರೂಲ್ಸು ರೆಗ್ಯುಲೇಷನ್ ತುಂಬಿದ್ದ ಹೈಸ್ಕೂಲು ಮುಗಿಯಿತೆಂದರೆ ಅದೇನೋ ಸಂಭ್ರಮ. ಸ್ವತಂತ್ರವಾಗುವ ಭಾವ. ಅಡಾಲಸೆನ್ಸ್ ದಿನಗಳೇ ಹಾಗೆ.. ಮನದಂಗಳದಲ್ಲಿ ಬಣ್ಣ ಬಣ್ಣದ ರಂಗೋಲಿ.. ಆಸೆ, ಗುರಿ, ಕನಸು ಯಾವುದೂ ನನಗಾವಾಗ ಸ್ಪಷ್ಟವಿರಲಿಲ್ಲ. ಅಸಲಿಗೆ ಅವುಗಳ ನಡುವಿನ ವ್ಯತ್ಯಾಸ ಕೂಡ ಗೊತ್ತಿರಲಿಲ್ಲ. ಅಂಥ ದಿನಗಳಲ್ಲಿ ಕವನಗಳನ್ನು ಬರೆಯದವರು ಬಹುಶಃ ಯಾರೂ ಇರಲಿಕ್ಕಿಲ್ಲ. ನಾನೂ ಮನ ಬಂದಂತೆ ಗೀಚಿದ್ದು ಆವಾಗಲೇ. ನಮ್ಮ ಎಸ್.ಡಿ.ಎಂ ಕಾಲೇಜು ಪಠ್ಯೇತರ ಚಟುವಟಿಕೆಗಳಿಗೆಲ್ಲ ತುಂಬ ಪ್ರೋತ್ಸಾಹ ಕೊಡುತ್ತಿದ್ದ ಕಾರಣ ನಮ್ಮ ಬರಹಗಳು ಕಾಲೇಜಿನ ಪ್ರಾಯೋಗಿಕ ಪತ್ರಿಕೆಗಳಲ್ಲಿ, “ಚಿಗುರು” ಮುಂತಾದವುಗಳಲ್ಲಿ ಪ್ರಕಟವಾಗುತ್ತಿತ್ತು. ನನಗಂತೂ ಹಿಮಾಲಯ ಗೆದ್ದಂಥ ಖುಷಿ ಕೊಡುವ ಸಂಗತಿಯದು. ಪಿಯುಸಿಯಲ್ಲಿ ನನ್ನ ಬೆಂಚಿನಲ್ಲಿ ಕೂಡುತ್ತಿದ್ದ ಒಂದಿಬ್ಬರು “ತುಳು ಭಾಷೇಲಿ ಬರಿ ನೋಡೋಣ” ಅಂತ ಚಾಲೆಂಜ್ ಥರಾ (?) ಹೇಳಿದ್ದರ ಫಲ ಈ ಕವನ. ತುಳು ನನ್ನ ಮಾತೃ ಭಾಷೆ ಅಲ್ಲದಿದ್ದರೂ ಅಷ್ಟೇ ಅತ್ಮೀಯವಾದ ಹೃದಯದ ಭಾಷೆ; ತುಳು ಮಾತು ಕೇಳಿದರೆ ಸಾಕು ಕಿವಿ ನೆಟ್ಟಗಾಗುತ್ತದೆ. ನಮ್ಮೂರ ಮಂದಿಗೆ ಯುನೀಕ್ ಆದ ಐಡೆಂಟಿಟಿ ಕೊಡುವುದು ಇದೇ ಭಾಷೆ. ಅಂದು ಬರೆದ (ಬಹುಶಃ 1994ರಲ್ಲಿರಬೇಕು) ಈ ಪುಟ್ಟ ಕವನದಂಥದ್ದು (?) ಇಲ್ಲಿದೆ ಓದಿಕೊಳ್ಳಿ.

ಆಸೆ

ಪೊರ್ಲುದ ಪ್ರಕೃತಿಡ್ ತೆಲಿಪುನ
ಪಜಿ ಇರೆತ ಮಿತ್ತ್…
ಕಮ್ಮೆನ ಕೊರ್ದು ನಲಿಪುನ
ಪೂತ ರಾಸಿದ ಮಿತ್ತ್…
ಪುಣ್ಣಮೆದ ಚಂದ್ರನ ಮಿತ್ತ್…
ಬಾಲೆ ಕಂಜಿದ ಬಿಮ್ಮದ ಮಿತ್ತ್…
ಸಮುದ್ರದ ನೀರ್ದ ಮಿತ್ತ್…
ನೀಲಿ ಬಾನದ ಮಿತ್ತ್…
ಮಾಲೆ ಕಟ್ಟಿನ ಮೋಡದ ಮಿತ್ತ್…
ಎನ್ನ ಮನಸ್ದ ಗೋಡೆದ ಮಿತ್ತ್…
ಕಣ್ಣ ಬೊಂಬೆದ ಮಿತ್ತ್…
ಮನಸ್ ದಿಂಜಿದ್ ಬರೆಪುನ ಆಸೆ
ನಿನ್ನ ಮೋಕೆದ ಪುದರ್ನ್ …

%%%%%%%%%%

ತುಳು ಬರದವರು ಜಗಳಕ್ಕೆ ಬೀಳುವುದು ಬೇಡವೆಂಬ ಭಯಕ್ಕೆ ಅದರ ಕನ್ನಡ ರೂಪವೂ ಇದೆ ನೋಡಿ.
(ಇದು ಅಕ್ಷರಕ್ಷರ ಅನುವಾದವಲ್ಲ; ಭಾವಾನುವಾದ)

ಆಸೆ

ಸೃಷ್ಟಿಯ ಮಡಿಲಲ್ಲರಳಿದ
ಚಿಗುರೆಲೆಗಳ ಮೇಲೆ…
ಘಮಘಮಿಸಿ ನಗುವ
ಸುಮ ರಾಶಿಯ ಮೇಲೆ…
ಹುಣ್ಣಿಮೆ ಚಂದ್ರನ ಮೇಲೆ…
ಎಳೆಗರುವಿನ ತುಟಿಗಳ ಮೇಲೆ…
ಸಪ್ತ ಸಾಗರದ ನೀಲ ನೀರಿನ ಮೇಲೆ…
ಬಾನ ವಿಸ್ತಾರದ ಮೇಲೆ…
ಮೇಘ ಮಾಲೆಗಳ ಮೇಲೆ…
ಮಿನುಗುವ ಚಿಕ್ಕಿಗಳಿಂದಲೇ ಬರೆವಾಸೆ
ನಿನ್ನ ಮೋಹಕ ಹೆಸರನು…

%%%%%%%%%