ಹಲಸಿನ ಬೀಜ… ಸುಕ್ರುಂಡೆ ತಿನ್ನುವ ಮಜ..

“ಹಸಿದು ಹಲಸು; ಉಂಡು ಮಾವು” ಅಂತ ಗಾದೆಯಿದ್ದರೂ ನಂಗೆ ಈ ಎರಡು ಹಣ್ಣುಗಳು ಹಸಿದಾಗ, ಹಸಿವಿಲ್ಲದಾಗ, ಉಂಡಾಗುವ ಮೊದಲು, ನಂತರ, ಊಟದ ನಡುವೆ ಯಾವಾಗ ಸಿಕ್ಕರೂ ಸರಿ ಗುಳುಂ ಗುಳುಂ. ಈ ಹಲಸಿನ ವಿಶೇಷವೆಂದರೆ ಬಹುಪಯೋಗ. ತುಂಬ ಎಳೆಯದಾದರೆ ಇಡಿಡೀ ಹಾಕಿ ಪಲ್ಯ, ಸ್ವಲ್ಪ ಬಲಿತ ಮೇಲೆ ಸಾಂಬಾರು, ಮಜ್ಜಿಗೆ ಹುಳಿ, ಬೇಳೆಯಾದ ನಂತರ ತೊಳೆ ತೆಗೆದು ಮತ್ತೆ ಅಡಿಗೆ. ಬೇಳೆಯದು ಮತ್ತಷ್ಟು ವಿಧದ ಐಟಮ್ಸ್. ಹಸಿ ಬೇಳೆ ಸಾಂಬಾರಿಗೆ, ಕೆಲವು ಪಲ್ಯಗಳಿಗೆ, ಒಣಗಿದ ಬೇಳೆ ಸಾಂತಾಣಿಗೆ ಬಹೂಪಯೋಗಿ ಮತ್ತು ಬಹು ರುಚಿ..

ಬೇಕಾಗುವ ಸಾಮಗ್ರಿ : ನನ್ನ ಇಂಥ ಅಡುಗೆ ಎಲ್ಲವೂ ಕಣ್ಣಳತೆ ಆದ ಕಾರಣ ಪಕ್ಕಾ ಅಳತೆ ಹೇಳುವುದು ಕಷ್ಟ.

 1. ಹಲಸಿನ ಬೀಜಗಳು (ಬಿಸಿಲಿನಲ್ಲಿಟ್ಟು ಒಣಗಿಸದೆ ಇರುವಂಥವು) – 20 ರಿಂದ 25
 2. ಬೆಲ್ಲ – ಸಿಹಿಗೆ ಬೇಕಾದಷ್ಟು
 3. ಮೈದಾ – ಸುಮಾರು ಕಾಲು ಕಿಲೋದಷ್ಟು.
 4. ತೆಂಗಿನಕಾಯಿ – ಅರ್ಧ
 5. ಉಪ್ಪು
 6. ಕರಿಯಲು ಎಣ್ಣೆ

ಮೊದಲು ಬೀಜದ ಸಿಪ್ಪೆಯನ್ನು ಪೂರ್ತಿಯಾಗಿ ತೆಗೆಯಬೇಕು. ಅಂದರೆ ಹೊರ ಕವಚದಂಥದ್ದನ್ನು ಮಾತ್ರವಲ್ಲ, ಒಳಗೆ ಕಂದು ಬಣ್ಣದಂಥದ್ದಿರುತ್ತದಲ್ಲ  ಸಿಪ್ಪೆಯನ್ನು ಕುಡಾ ಚಾಕುವಿನಲ್ಲಿ ಕೆರೆದು ತೆಗೆದುಕೊಳ್ಳಬೇಕು. ಪೂರ್ತಿ ಸಿಪ್ಪೆ ಹೋಗಿ ಬೆಳ್ಳಗಾದರೆ ಬಲು ರುಚಿ. ಇಲ್ಲದೇ ಹೋದರೆ ಎಷ್ಟಾಗುತ್ತದೋ ಅಷ್ಟು ತೆಗೆಯಬೇಕು. (ಚಿತ್ರ 1) ನಂತರ ಉಪ್ಪು ಹಾಕಿ ಚೆನ್ನಾಗಿ ಬೇಯಿಸಬೇಕು. ಕುಕ್ಕರಿನಲ್ಲಾದರೆ 5-6 ವಿಷಲ್ ಆದರೂ ಸರಿಯೇ. ನೀರು ಬಸಿದ ನಂತರ ಬೇಳೆ, ತೆಂಗಿ ತುರಿ ಮತ್ತು ಬೆಲ್ಲ ಸೇರಿಸಿ. ಬೆಲ್ಲ ಮತ್ತು ತೆಂಗಿನ ತುರಿ ಸೇರಿಸಿದಾಗ ಬೆಲ್ಲ ಕರಗಿ ನೀರಾಗುತ್ತದೆ. (ಚಿತ್ರ 2). ನೀರು ಆರುವವವರೆಗೂ ಸಣ್ಣ ಉರಿಯಲ್ಲಿ ಬೇಯಿಸಬೇಕು. (ಹೀಗೆ ತೆಂಗಿನಕಾಯಿ ಸೇರಿಸಿದ ನಂತರ ಬೇಯಿಸಿದರೆ ತಿಂಡಿ ಒಂದೆರಡು ದಿನ ಹಾಳಾಗದೆ ಉಳಿಯುತ್ತದೆ.) ಆಮೇಲೆ ಈ ಮಿಶ್ರಣವನ್ನು ತಣ್ಣಗಾಗಲು ಬಿಡಿ. ತಣ್ಣಗಾದ ನಂತರ ಇದನ್ನು ರುಬ್ಬಬೇಕು. ರುಬ್ಬಿದಾಗ ಅದು ಗಟ್ಟಿಯಾಗಿ ಉಂಡೆ ಮಾಡಲು ಬರುತ್ತದೆ. (ಚಿತ್ರ 3). ನಂತರ ಉಂಡೆ ಮಾಡಬೇಕು (ಚಿತ್ರ 4). ಉಂಡೆ ಸಣ್ಣದಿದ್ದರೆ ಚೆನ್ನಾಗಿ ಬೇಯಲು ಅನುಕೂಲ. ಮೈದಾ ಹಿಟ್ಟನ್ನು ಸ್ವಲ್ಪೇ ಸ್ವಲ್ಪ ಪ್ಪು ಹಾಕಿ ಬೊಂಡಾ ಹಿಟ್ಟಿನ ಹದದಲ್ಲಿ ನೀರಿನಲ್ಲಿ ಕಲಸಿಕೊಳ್ಳಬೇಕು. ಕೊನೆಗೆ ಎಣ್ಣೆ ಇಟ್ಟು ಕೊಂಡು ಉಂಡೆಗಳನ್ನು ಹಿಟ್ಟಿನಲ್ಲಿ ಅದ್ದಿ (ಮುಳಕಾ ಥರ) ಎಣ್ಣೆಗೆ ಬಿಡಬೇಕು. ರುಚಿಯಾದ ಸುಕ್ರುಂಡೆ ರೆಡಿ (ಚಿತ್ರ 5).

ಹಲವಾರು Nuetrients ಹೊಂದಿರುವ ಹಲಸಿನ ಬೀಜ ಆರೋಗ್ಯಕ್ಕೂ ಒಳ್ಳೆಯದಾದ ಕಾರಣ ಅದನ್ನು ಶುಚಿಯಾಗಿ ತೊಳೆದು ಆರಿಸಿ ಹಾಳಾಗದಂತೆ ತೆಗೆದಿಡಲು ಸಾದ್ಯವಾದರೆ ವರ್ಷದ ಯಾವ ಸೀಸನ್ ನಲ್ಲಿ ಕೂಡ ದನ್ನು ತಯಾರಿಸಿ ಹಲಸಿನ ರುಚಿ ಮತ್ತೆ ಮೆಲುಕು ಹಾಕಿಕೊಳ್ಳಬಹುದು.

%%%%%%%%%%%%%%%%

ಇದು ಎಣ್ಣೆಗಾಯಿ ಅಲ್ಲ; ಎಣ್ಣೆಯೊಳಗೆ ಕಾಯಿ…

ನಂಗೆ ಅತ್ಯಂತ ಇಷ್ಟದ ತರಕಾರಿಗಳಲ್ಲಿ ಬದನೇಕಾಯಿಗೆ ಮೊದಲ ಸ್ಥಾನ. ಅದರ ಚೊಗರು, ನಾಲಕ್ಕಾಗಿ ಸೀಳಿದರೆ ಹೂವರಳಿದಂತ ಕಾಣುವ ಅದರ ನವಿರು ನನಗಿಷ್ಟ. ನಾ ಚಿಕ್ಕವಳಿದ್ದಾಗ ಅಜ್ಜಿ “ಬದನೆ ತೊಟ್ಟಿನಲ್ಲಿ ಅಮೃತ ಇರುತ್ತೆ; ತಿಂದರೆ ಕ್ಲಾಸಲ್ಲಿ ಫಸ್ಟ್ ಬರುವಷ್ಟು ಜಾಣತನ ಬರುತ್ತೆ; ಅದಕ್ಕೇ ಅದನ್ನು ಬದಿಗೆ ಸರಿಸದೆ ತಿನ್ನು” ಅಂದಿದ್ದು ಸುಳ್ಳು ಅಂತ ಗೊತ್ತಾದ ಮೇಲೂ ಪಲ್ಯ, ಸಾಂಬಾರಿನಿಂದ ಯಾರಿಗೂ ಕಾಣದಂತೆ ತೊಟ್ಟು ಹುಡುಕಿ ತಟ್ಟೆಗೆ ಹಾಕಿಕೊಳ್ಳುವ ಜಾಣತನವಂತೂ ಇದೆ. ನನ್ ಪ್ರೀತಿ ಕಂಡು “ಇವ್ಳಿಗೆ ಬದನೆಕಾಯಿ ಜ್ಯೂಸ್ ಮಾಡಿಕೊಟ್ರೂ ಕುಡೀತಾಳೆ” ಅನ್ನೋರು ಗೆಳತಿಯರು. ಇವತ್ತಿಗೂ ತರಕಾರಿ ಅಂಗಡಿಗೆ ಹೋದಾಗ ಮೊದಲು ಹುಡುಕೋದು ಅದನ್ನೇ. ಈ ಒಂದು ತರಕಾರಿಯಲ್ಲೇ ಎಷ್ಟು ಬಣ್ಣ, ರೂಪ, ವಿಧಗಳು.  ಹಸಿರು, ಗಾಢ ಹಸಿರು, ನೇರಳೆ…. ಉರುಟು ಬದನೆ, ಉದ್ದ ಬದನೆ, ಬೇಬಿ ಬದನೆ (ಪುಟ್ಟ ಬದನೆಗೆ ನಾನಿಟ್ಟ ಹೆಸರು), ಉಡುಪಿ ಗುಳ್ಳ, ಊರ ಬದನೆ ಹೀಗೇ.

ಸಾಂಬಾರಿಗೆ, ಮಜ್ಜಿಗೆ ಹುಳಿಗೆ, ಬೋಂಡಾಕ್ಕೆ, ಪಲ್ಯಕ್ಕೆ, ಎಣ್ಣೆಗಾಯಿಗೆ, ವಾಂಗೀ ಬಾತಿಗೆ, ಬೋಳು ಸಾರಿಗೆ, ಹುಳಿ ಗೊಜ್ಜಿಗೆ, ಮೊಸರು ಗೊಜ್ಜಿಗೆ ಹೀಗೆ ಎಲ್ಲಾದಕ್ಕೂ ತಕರಾರಿಲ್ಲದೆ ಸೈ ಎನ್ನುವ ಬದನೆಕಾಯಿಗೆ ಇನ್ಯಾವ ತರಕಾರಿಯೂ ಸಾಟಿಯಿಲ್ಲ. ಅಂಥ ಪರಮಾಪ್ತ ತರಕಾರಿಯಿಂದ ಛಾಯಾ ಭಗವತಿ ಮಾಡಿಕೊಟ್ಟ ಎಣ್ಣೆಗಾಯಿಯನ್ನ ನಾನೂ ಮಾಡಲು ಹೊರಟು ಸತತ ವಿಫಲ ಯತ್ನಗಳ ನಂತರ ನನ್ನದೇ ಹೊಸ ವಿಧಾನವೊಂದನ್ನು ಕಂಡುಕೊಂಡೆ. ಅದು ಎಣ್ಣೆಗಾಯಿಯೇ ಅಂತ ನಾನೂ ನಂಬಿ ಮನೆಯಲ್ಲಿ ಎಲ್ಲಾರನ್ನೂ ನಂಬಿಸಿ ಚೆನ್ನಾಗಿ ತಿಂದು ತೇಗಿ ಖುಷಿ ಪಡುತ್ತಿದ್ದೇವೆ. ಇದು ದೋಸೆ, ಚಪಾತಿಗಳ ಜತೆಗೂ ಆಗುತ್ತೆ. ಪಲ್ಯದ ಬದಲಿಗೂ ಸರಿಯೇ. ಮಜ್ಜಿಗೆ, ಮೊಸರನ್ನಕ್ಕೆ ನೆಂಚಿಕೊಳ್ಳಲಿಕ್ಕೂ ಫೈನ್. ಅಂಥ ರುಚಿಕರವಾದ್ದನ್ನು ನಿಮಗೂ ಕೊಡುವ ಆಸೆಯಿಂದ ಇಲ್ಲಿ ತಂದಿಡುತ್ತಿದ್ದೇನೆ. ತಿಂದು ಆನಂದಿಸಿ…

ಬೇಕಾಗುವ ಸಾಮಗ್ರಿ :

 1. ಬೇಬಿ ಬದನೆಕಾಯಿಗಳು – 20 ರಿಂದ 25
 2. ಕೆಂಪುಮೆಣಸು/ಒಣ ಮೆಣಸು/ಬ್ಯಾಡಗಿ ಮೆಣಸು/ಕುಮ್ಟೆ ಮೆಣಸು
 3. ಕಡ್ಲೆ ಬೇಳೆ – 2 ಟೀ ಸ್ಪೂನ್
 4. ಉದ್ದಿನ ಬೇಳೆ – 2 ಟೀ ಸ್ಪೂನ್
 5. ಬೆಲ್ಲ –  2 ಟೀ ಸ್ಪೂನ್
 6. ಹುಣಸೇ ಹುಳಿ – 2 ನಿಂಬೆ ಹಣ್ಣಿನ ಗಾತ್ರದಷ್ಟು
 7. ವಾಂಗೀ ಬಾತ್ ಮಿಕ್ಸ್/ ಸಾರಿನ ಪುಡಿ ಅಥವಾ ಸಾಂಬಾರ್ ಪುಡಿ (ನಿಮಗ್ಯಾವುದು ಹೆಚ್ಚು ಇಷ್ಟ/ರುಚಿ ಅನಿಸುತ್ತೋ ಅದು) –  2 ಟೀ ಸ್ಪೂನ್
 8. ತೆಂಗಿನ ಕಾಯಿ – ಮಧ್ಯಮ ಗಾತ್ರದ್ದು (ನೀರಿಲ್ಲದ ಕಾಯಿಯಾದ್ರೆ ಒಳ್ಳೆ ರುಚಿ; ಆದ್ರೆ ಒಣ ಕೊಬ್ಬರಿಯಲ್ಲ)
 9. ರುಚಿಗೆ ತಕ್ಕಷ್ಟು ಉಪ್ಪು
 10. ಬೇಯಿಸಲು ಎಣ್ಣೆ
 11. ಒಗ್ಗರಣೆಗೆ ಎಣ್ಣೆ, ಸಾಸಿವೆ, ಒಣ ಮೆಣಸು, ಉದ್ದಿನ ಬೇಳೆ, ಕರಿಬೇವು ಸೊಪ್ಪು ಸ್ವಲ್ಪ ಹೆಚ್ಚೇ ಇರಲಿ.

ಬದನೆಕಾಯನ್ನು ಚೆನ್ನಾಗಿ ತೊಳೆಯಬೇಕು. ತೊಟ್ಟು ತೆಗೆಯಬಾರದು (ಅಮೃತ ಇರುತ್ತೆ). ತೊಟ್ಟಿನ ವರೆಗೆ ನಾಲ್ಕು ಸೀಳಬೇಕು. ಅದು ನಾಲ್ಕಾಗಿ ತುಂಡಾಗಬಾರದು ಆ ಥರ ಸೀಳಬೇಕು. ಚಿಟಿಕೆ ಸುಣ್ಣ (ಚೊಗರು ತೆಗೆಯಲು) ಚಿಟಿಕೆ ಅರಶಿನ (ನಂಜು ತೆಗೆಯಲು) ಹಾಕಿದ ನೀರಿನಲ್ಲಿ ಹದಿನೈದು ನಿಮಿಷ ನೆನೆಸಿ ತೆಗೆದಿಟ್ಟುಕೊಳ್ಳಬೇಕು. (ಇದಕ್ಕೆ ಇಷ್ಟೇ ಹೊತ್ತು ಅಂತೇನಿಲ್ಲ; ಅರ್ಧ ಗಂಟೆಗೂ ಹೆಚ್ಚು ನೆನೆಸುವ ಅಗತ್ಯವಿಲ್ಲ.).

ಮೆಣಸು, ಕಡ್ಲೆ ಬೇಳೆ, ಉದ್ದಿನ ಬೇಳೆಯನ್ನು ಬಣ್ಣ ಬದಲುವವರೆಗೆ ಹುರಿದು ಅದರ ಜತೆ ಕಾಯಿ, ಬೆಲ್ಲ, ವಾಂಗೀ ಬಾತ್ ಮಿಕ್ಸ್ ಅಥವಾ ಸಾರಿನ ಪುಡಿ ಅಥವಾ ಸಾಂಬಾರ್ ಪುಡಿ, ಹುಣಸೇ ಹುಳಿ (ಹುಳಿ ತುಂಬ ಗಟ್ಟಿ ಇದ್ರೆ ಮೊದಲೇ ನೀರಲ್ಲಿ ನೆನೆಸಿಟ್ಟುಕೊಳ್ಳುವುದು ಒಳ್ಳೆಯದು), ಬೆಲ್ಲ, ಉಪ್ಪು ಸೇರಿಸಿ ಸ್ವಲ್ಪವೇ ಹಾಕಿ ಗಟ್ಟಿ ಚಟ್ನಿ ಥರ ರುಬ್ಬಿಕೊಳ್ಳಬೇಕು. ನಂತರ ಇದನ್ನು ನಿಧಾನವಾಗಿ ಬದನೆಕಾಯಿಯೊಳಗೆ ತುಂಬಬೇಕು. (ಚಿತ್ರದಲ್ಲಿ ತೋರಿಸಿದಂತೆ) ತುಂಬುವಾಗ ಸೀಳಿದ ಬದನೆಕಾಯಿ ಹೋಳಾಗದಂತೆ ನೋಡಿಕೊಳ್ಳಿ. ಎಲ್ಲಾ ಬದನೆಕಾಯಿಗಳಿಗೂ ತುಂಬಿದ ನಂತರ ಒಗ್ಗರಣೆಗೆ ಇಟ್ಟರೆ ಸಾಕು. ಎಣ್ಣೆಯಲ್ಲೇ ಬೇಯಿಸುವ ಕಾರಣ ಎಣ್ಣೆ ಸ್ವಲ್ಪ ಜಾಸ್ತಿಯೇ ಬೇಕಾಗುತ್ತೆ. 20 ರಿಂದ 25 ಬದನೆಕಾಯಿಗಳಿದ್ದಲ್ಲಿ ಸುಮಾರು 50 ಮಿ.ಲೀ. ಎಣ್ಣೆ ಬೇಕಾದೀತು. (ನನ್ನದು ಕಣ್ಣಳತೆ). ಎಣ್ಣೆ ಬಿಸಿಯಾದ ತಕ್ಷಣ ಸಾಸಿವೆ, ಒಣ ಮೆಣಸು, ಉದ್ದಿನ ಬೇಳೆ ಹಾಕಿ ಕರಿಬೇವು ಸೊಪ್ಪು ಹಾಕಬೇಕು. ನಂತರ ಚಟ್ನಿ ತುಂಬಿದ ಬದನೆಕಾಯಿಗಳನ್ನು ಒಂದೊಂದಾಗಿ ಬಾಣಲಿಯಲ್ಲಿ ಬಾಣಲೆಯ ಒಳ ಬದಿಯಲ್ಲಿ ವೃತ್ತಾಕಾರವಾಗಿ ಇಡುತ್ತಾ ಬರಬೇಕು. (ಚಿತ್ರದಲ್ಲಿ ತಟ್ಟೆಯಲ್ಲಿ ಜೋಡಿಸಿರುವಂತೆ ಬಾಣಲಿಯಲ್ಲೂ ಇಡುವುದು). ಒಂದು ವೇಳೆ ಚಟ್ನಿ ಉಳಿದರೆ ಕೊನೆಗೆ ಅದನ್ನು ಈ ಬದನೆಕಾಯಿಗಳ ಮೇಲೆ ಹರಡಬಹುದು. ಅಥವಾ ಸಪರೇಟ್ ಆಗಿ ಒಗ್ಗರಣೆ ಹಾಕಿ ಅದನ್ನು ಬೇಯಿಸಿಟ್ಟರೆ ಅನ್ನಕ್ಕೆ ಕಲಸಿಕೊಂಡು ತಿನ್ನಲು ಬಹಳ ರುಚಿ. ಬಾಣಲಿಯಲ್ಲಿಡುವಾಗ ತುಂಬಾ ಜೋಪಾನವಾಗಿರಬೇಕು. ಎಣ್ಣೆ ಸಿಡಿದರೆ ಸುಕೋಮಲ ಮುಖಕ್ಕೆ ಕಷ್ಟ. ಬದನೆಕಾಯಿ ಪೂರ್ತಿ ಬೇಯುವವರೆಗೂ ಸಣ್ಣ ಉರಿಯಲ್ಲಿಟ್ಟು ಬೇಯಿಸಬೇಕು. ಆವಾಗಾವಾಗ ಸೌಟಿನಲ್ಲಿ ಮಗುಚುತ್ತಿರುವುದು ಬಹಳ ಅಗತ್ಯ. ನೀರು ಹಾಕದಿರುವ ಕಾರಣ ಬಹಳ ಬೇಗ ತಳ ಹಿಡಿಯುತ್ತೆ. ನಾನ್ ಸ್ಟಿಕ್ ತವಾ ಆದ್ರೆ ಈ ತೊಂದರೆ ಕಡಿಮೆ. ಫ್ರಿಜ್ ನಲ್ಲಿಟ್ಟರೆ ಇದನ್ನು ಒಂದು ವಾರದ ವರೆಗೂ ಬಳಸಬಹುದು.

ಇಷ್ಟೆಲ್ಲ ಮಾಡಲು ಸುಮಾರು ಒಂದು ಗಂಟೆ ಬೇಕಾಗುತ್ತೆ. ಎಲ್ಲಾ ಮುಗಿದ ನಂತರ ಮಾಡಬೇಕಾದ ಬಹು ಮುಖ್ಯ ಕೆಲಸವೆಂದರೆ ಕಾಲು ಚಾಚಿ ಬಿದ್ಕೊಂಡು ರೆಸ್ಟ್ ತೊಗೊಳ್ಳೋದು.

ವಿ.ಸೂ :

 1. ನೀವು ತುಂಬಾ ಖಾರದವರಾದರೆ ಬೆಲ್ಲ ಹಾಕುವ ಅಗತ್ಯವಿಲ್ಲ.
 2. ನೀವು ತುಂಬಾ ಸಿಹಿಯವರಾದರೆ, ಮಕ್ಕಳಿಗೂ ಕೊಡಬೇಕೆಂದಾದರೆ ಬೆಲ್ಲ ಸ್ವಲ್ಪ ಹೆಚ್ಚೇ ಹಾಕಬಹುದು.
 3. ಇದನ್ನು ಓದಿ ನೀವು ಪ್ರಯೋಗ ಮಾಡಿದಿರಾದರೆ ಗುರುದಕ್ಷಿಣೆ ಅಂತ ನನಗೊಂದಷ್ಟು ಕಳುಹಿಸಿ ಪುಣ್ಯ ಕಟ್ಟಿಕೊಳ್ಳುವುದು.

ಹಾಗಲಕಾಯಿಯನ್ನೂ ಇದೇ ವಿಧಾನದಲ್ಲಿ ಮಾಡಬಹುದು. ಆದರೆ ಅದನ್ನು ವೃತ್ತಾಕಾರವಾಗಿ ಹೆಚ್ಚಿಕೊಂಡು ತಿರುಳು ಮತ್ತು ಬೀಜ ತೆಗೆಯಬೇಕು. ಈ ಹೋಳುಗಳು ಚಟ್ನಿ ತುಂಬಿಸುವಷ್ಟು ದಪ್ಪಗೆ, ಹೋಳಾಗಿ ಹೋಗದಷ್ಟು ತೆಳ್ಳಗೆ ಇರಬೇಕು. ಹೋಳುಗಳನ್ನು ಪಾತ್ರೆಗೆ ಹಾಕಿಟ್ಟು ಒಂದೆರಡು ಚಮಚ ಉಪ್ಪು ಮತ್ತು ಅರಶಿನದ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಿಡಬೇಕು. ಅರ್ಧ ಗಂಟೆ ನಂತರ ಹಿಂಡಿ ತೆಗೆದಿಡಬೇಕು. ಹಾಗಲಕಾಯಿಗೆ ವಾಂಗೀಬಾತ್ ಪುಡಿ ಹಾಕಿದ್ರೆ ರುಚಿ ಚೆನ್ನಾಗಿರುವುದಿಲ್ಲ. ಅದೇ ರೀತಿ ಹೆಚ್ಚಿ ಕೊಳ್ಳುವುದು ಕಷ್ಟವೆನಿಸಿದರೆ ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಮಾಡಿ ಮೊದಲು ಅದನ್ನು ಮಾತ್ರ ಒಗ್ಗರಣೆಯಲ್ಲಿ ಹುರಿದುಕೊಂಡು ನಂತರ ಚಟ್ನಿ ಸೇರಿಸಬೇಕು.

|| ಶುಭಂ ||

ಆಯುರ್ವೇದ: ಅವಕಾಶಗಳ ಆಗರ

ಶತಮಾನಗಳ ಹಿಂದೆ ಭರತಖಂಡವನ್ನು ಆಳಿದ್ದ ಸನಾತನ ಆರೋಗ್ಯ ವೇದ ಆಯುರ್ವೇದ ಪದ್ಧತಿ ಮತ್ತೆ ಮರುಕಳಿಸುತ್ತಿದೆ. ಅಡ್ಡ ಪರಿಣಾಮಗಳಿಲ್ಲದ ಆರೋಗ್ಯಕರ ರೋಗ ನಿವಾರಣಾ ಕ್ರಮದತ್ತ ಜನ ಹೆಚ್ಚಾಗಿ ವಾಲುತ್ತಿದ್ದಾರೆ. ಪರಿಣಾಮ ಆಯುರ್ವೇದ ಮತ್ತೆ  ಪ್ರಜ್ವಲಿಸುತ್ತಿದೆ. ಆಯುರ್ವೇದ ಶಿಕ್ಷಣ ಪೂರೈಸುತ್ತಿರುವವರಿಗೆ ಇರುವ ಹೊಸ ಸವಾಲು ಮತ್ತು ಭವಿಷ್ಯ, ಜಾಗತಿಕ ಮಟ್ಟದಲ್ಲಿ ಗಳಿಸಿದ ಮನ್ನಣೆಗೆ ಪೂರಕವಾಗುತ್ತಾ ಬಂದ ಅಂಶಗಳೇನು ? ಇವರಿಗಿರುವ ಉದ್ಯೋಗಾವಕಾಶಗಳ ಕುರಿತು ವಿವರ ಇಲ್ಲಿದೆ.

ಈ ನಿಟ್ಟಿನಲ್ಲಿ ನೋಡಿದರೆ ಹೊಸದಾಗಿ ಡಿಗ್ರಿ ಕೈಯಲ್ಲಿ ಹಿಡಿದು ಕಾಲೇಜಿನಿಂದ ಹೊರ ಬರುತ್ತಿರುವ ವೈದ್ಯರು ಎದುರಿಸಬೇಕಾದ ಪ್ರಮುಖ ಸವಾಲೆಂದರೆ ಸಮಾಜದ ನಿರೀಕ್ಷೆಯನ್ನು ಸಮರ್ಥವಾದ ರೀತಿಯಲ್ಲಿ ಪೂರೈಸುವುದು. ಆಯುರ್ವೇದ ಪದ್ಧತಿಯಲ್ಲಿ ರೋಗ ನಿರ್ಧಾರ ಮತ್ತು ಚಿಕಿತ್ಸೆಯ ವಿಧಾನದ ನಿರ್ಣಯ ಬಹುತೇಕ ವೈದ್ಯರ ವೃತ್ತಿಪರ ಕೌಶಲ್ಯ ಮತ್ತು ಬುದ್ಧಿಶಕ್ತಿಯ ಆಧಾರದ ಮೇಲೆ ಅವಲಂಬಿಸಿದೆ. ಅಷ್ಟಲ್ಲದೆ ಬಹಳಷ್ಟು ಸಂದರ್ಭಗಳಲ್ಲಿ ಯಾವುದೇ ಆಧುನಿಕ ಪ್ರಯೋಗಾಲಯದ ಪರೀಕ್ಷೆಗಳಿಲ್ಲದೆ (Modern Diagnostic Reports) ಯೋಗ ರತ್ನಾಕರದಲ್ಲಿ ಹೇಳಿರುವಂತೆ ನಾಡಿ, ಮೂತ್ರ, ಮಲ, ಜಿಹ್ವ, ಸ್ಪರ್ಶ, ಶಬ್ದ, ದೃಕ್, ಆಕೃತಿಗಳ ಮೂಲಕ ಮಾಡಿದ ರೋಗನಿರ್ಣಯದ (Diagnosis) ವಿಶ್ವಸನೀಯತೆಯನ್ನು ರೋಗಿಗೆ ಮನವರಿಕೆ  ಮಾಡಿಕೊಡುವುದು ಬಹು ದೊಡ್ಡ ಸವಾಲು. ಆಯುರ್ವೇದ ಔಷಧಿಗಳು ತುಂಬಾ ನಿಧಾನವೆಂಬ ತಪ್ಪು ಕಲ್ಪನೆಯಿಂದಾಗಿ ಕೆಮ್ಮು, ಶೀತ, ಜ್ವರದಂಥ ಸಾಮಾನ್ಯ ಖಾಯಿಲೆಗಳಿಗೆ ಈಗಲೂ ಆಯುರ್ವೇದವು ಜನರ ಮೊದಲನೇ ಆಯ್ಕೆಯಾಗಿಲ್ಲ. ತಪ್ಪು ಅಭಿಪ್ರಾಯಗಳನ್ನು ಹೋಗಲಾಡಿಸಿ ಆಯುರ್ವೇದದ ಅನುಕೂಲಗಳನ್ನು ಮನದಟ್ಟು ಮಾಡಿ ಅದನ್ನು  ಪ್ರಥಮ ಆದ್ಯತೆಯನ್ನಾಗಿಸುವುದು ಕಠಿಣ ಸವಾಲಾಗಿದೆ. ಜನಸಾಮಾನ್ಯರಲ್ಲಿ ಜ್ಞಾನದ ಮಟ್ಟ ಹೆಚ್ಚಿದ್ದರ ಪರಿಣಾಮ ಆಧುನಿಕ ವೈದ್ಯ ಪದ್ಧತಿಯಲ್ಲಿ ಯಾವ ರೋಗ ಎಷ್ಟರ ಮಟ್ಟಿಗೆ ವಾಸಿಯಾಗಬಲ್ಲದು ಎಂಬುದು ಜನರಿಗೆ ಅರ್ಥವಾಗುತ್ತಿದೆ. ಸಹಜವಾಗಿ ಆಯುರ್ವೇದದ ಮೇಲಿನ ನಿರೀಕ್ಷೆಗಳೂ ಹೆಚ್ಚಾಗುತ್ತಿದೆ. ಈ ನಿರೀಕ್ಷೆಯನ್ನು ಸಮರ್ಥವಾಗಿ ಎದುರಿಸಿ ಅದನ್ನು ಪೂರೈಸಲು ಕಠಿಣ ಶ್ರಮ ಮತ್ತು ಜ್ಞಾನದ ಅಗತ್ಯವಿದೆ. ಆಗಾಧವಾಗಿ ಚಾಲ್ತಿಯಲ್ಲಿರುವ ಆಲೋಪತಿಕ್ ಪದ್ಧತಿಯ ಜತೆ ಹೋರಾಟ ನಡೆಸಬೇಕಾಗಿರುವುದು ಇನ್ನೊಂದು ಸಮಸ್ಯೆ. “ಈ ವೃತ್ತಿಪರ ನೈಪುಣ್ಯವನ್ನು ಪಡೆಯಬೇಕೆಂದರೆ ಆತ ಒಂದಷ್ಟು ಸಮಯ ಪರಿಣಿತರ ಬಳಿ ತರಬೇತಿ ಪಡೆದುಕೊಂಡು ಬರುವುದು ಅನಿವಾರ್ಯ” ಎನ್ನುತ್ತಾರೆ ಖ್ಯಾತ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿರುವ ಡಾ. ಪ್ರವೀಣ್ ಕುಮಾರ್.

“ಆಯುರ್ವೇದ ಪದ್ಧತಿಯಲ್ಲಿ ಪ್ರತಿ ರೋಗಿಯ ದೇಹ ಪ್ರಕೃತಿಗೆ ತಕ್ಕಂತೆ (ಪುರುಷ ಪುರುಷಂ ವೀಕ್ಷ್ಯಾ) ಔಷಧಿ ಕೊಡುವ ಕಾರಣ ಅಡ್ಡ ಪರಿಣಾಮಗಳು ಇರುವುದಿಲ್ಲ/ತುಂಬಾ ಕಡಿಮೆ ಇರುತ್ತವೆ. ಮತ್ತು ಔಷಧಿಗಳ ಅವಶ್ಯಕತೆಯೇ ಇಲ್ಲದೆ ದೇಹ ಪ್ರಕೃತಿ ಮತ್ತು ಹವಾಮಾನಕ್ಕನುಗುಣವಾದ ಆಹಾರ ಸೇವಿಸುವ ಮೂಲಕ ಬಹಳಷ್ಟು ಖಾಯಿಲೆಗಳನ್ನು ದೂರವಿಡಲು ಅವಕಾಶವಿದೆ. ಅಷ್ಟಲ್ಲದೆ ಯಾವುದೇ ವೈದ್ಯ ಪದ್ಧತಿಯಲ್ಲೂ ಕಡಿಮೆಯಾಗದ ಆಮವಾತ (Rheumatoid Arthritis), ಆಮ್ಲ ಪಿತ್ತ (Chronic Ulcer), ಮುಂತಾದ ದೀರ್ಘಕಾಲದ (Chronic) ಖಾಯಿಲೆಗಳಿಗೆ ಆಯುರ್ವೇದದಲ್ಲಿ ಮಾತ್ರ ಪರಿಹಾರವಿದೆ. ಆಯುರ್ವೇದದ ಇಂಥ ಅನನ್ಯತೆಯೇ ಜಾಗತಿಕ ಮನ್ನಣೆಗೆ ಕಾರಣ” ಎಂಬ  ಅಭಿಪ್ರಾಯ ವ್ಯಕ್ತ ಪಡಿಸುತ್ತಾರೆ ಬೆಂಗಳೂರಿನಲ್ಲಿ ವೈದ್ಯವೃತ್ತಿ ನಡೆಸುತ್ತಿರುವ ಡಾ. ಗಿರಿಧರ ಎನ್.ಕೆ.

ಜಗತ್ತಿನೆಲ್ಲೆಡೆ ಆಯುರ್ವೇದಕ್ಕೆ ಮಣೆ ಹಾಕುತ್ತಿರುವ ಹಿನ್ನೆಲೆಯಲ್ಲಿ ಬಹಳಷ್ಟು ವಿದ್ಯಾರ್ಥಿಗಳು ಮತ್ತು ಪೋಷಕರು ಆಯುರ್ವೇದದ ಕಲಿಕೆಗೆ ಒಲವು ತೋರಿಸುತ್ತಿದ್ದಾರೆ. ಪರಿಣಾಮ ಎಂಬಿಬಿಎಸ್‌ ಸೀಟ್‌ ಸಿಗದ ಕಾರಣ ಬಿಎಎಂಎಸ್‌ ಓದುತ್ತಾರೆ ಎಂಬ ಭಾವನೆ ಸಂಪೂರ್ಣ ಬದಲಾಗಿದೆ. ಹಾಗೆಯೇ ಓದಲು ಇಚ್ಛಿಸಿದವರಿಗೆ ವಿಷಯಗಳ ಆಯ್ಕೆಯೂ ಬಹಳಷ್ಟಿದೆ. ಆಯುರ್ವೇದದ ಸ್ನಾತಕೋತ್ತರ ಪದವಿಗಳಲ್ಲಿ ಹದಿನೈದು ಆಯ್ಕೆಗಳಿವೆ.

 1. ದ್ರವ್ಯಗುಣ – ಆಯುರ್ವೇದೀಯ ದ್ರವ್ಯಗಳ ಗುಣಲಕ್ಷಣಗಳ ಕಲಿಕೆ (Pharmacology)
 2. ಸಂಹಿತಾ ಸಿದ್ಧಾಂತ – ಆಯುರ್ವೇದದ ಮೂಲಭೂತ ಸಿದ್ಧಾಂತಗಳು ಮತ್ತು ಶಾಸ್ತ್ರಗಳ ಕಲಿಕೆ. (Study of Basic Principles & Classical Texts)
 3. ಸ್ತ್ರೀ ರೋಗ ಮತ್ತು ಪ್ರಸೂತಿ ತಂತ್ರ (Obstetrics & Gynaecology)
 4. ಪಂಚಕರ್ಮ (Panchakarma)
 5. ಕಾಯ ಚಿಕಿತ್ಸಾ – ಸಾಮಾನ್ಯ ರೋಗಗಳ ಚಿಕಿತ್ಸಾ ಕಲಿಕೆ. (General Medicine)
 6. ಶಾಲಾಕ್ಯ – ಕಣ್ಣು, ಕಿವಿ, ಮೂಗು ಮತ್ತು ಗಂಟಲು ಚಿಕಿತ್ಸಾ ಕಲಿಕೆ. (Eye & E.N.T)
 7. ಶಲ್ಯ – ಶಸ್ತ್ರ ಚಿಕಿತ್ಸೆ (ಕ್ಷಾರ ಸೂತ್ರ, ಕ್ಷಾರ ಕರ್ಮ, ಅಗ್ನಿ ಕರ್ಮ) ಕಲಿಕೆ. (Surgery)
 8. ಅಗದ ತಂತ್ರ – ವಿಷವೈದ್ಯ ಕಲಿಕೆ (Toxicology)
 9. ಬೈಷಜ್ಯ ಕಲ್ಪನಾ ಮತ್ತು ರಸಶಾಸ್ತ್ರ – ಗಿಡಮೂಲಿಕೆಗಳು ಮತ್ತು ಖನಿಜ ಮೂಲಗಳಿಂದ ಔಷಧಿ ತಯಾರಿಕಾ ವಿಧಾನಗಳ ಕಲಿಕೆ. (Ayurvedic Pharmaceutics)
 10. ಸ್ವಸ್ಥ ವೃತ್ತ – ಯೋಗ ಮತ್ತು ಯೋಗ್ಯ ಜೀವನಶೈಲಿಯಿಂದ ಸಾಮುದಾಯಿಕ ಮತ್ತು ಸಾಂಕ್ರಾಮಿಕ ರೋಗಗಳ ತಡೆ ಕಲಿಕೆ. (Preventive & Social Medicines)
 11. ಶರೀರ ರಚನಾ – ಅಂಗರಚನಾ ಶಾಸ್ತ್ರ (Anatomy)
 12. ಶರೀರ ಕ್ರಿಯಾ – ಶರೀರ ವಿಜ್ಞಾನ (ಅಂಗಾಂಗಗಳ ಸಹಜಕ್ರಿಯೆ ಮತ್ತು ದೈಹಿಕ ವ್ಯಾಪಾರಗಳ ಕಲಿಕೆ) (Physiology)
 13. ರೋಗ ನಿಧಾನ – ರೋಗ ಲಕ್ಷಣಗಳ ಕಲಿಕೆ (Pathology)
 14. ಮಾನಸರೋಗ – ಮನೋರೋಗಗಳ ಚಿಕಿತ್ಸೆ. (Psychiatry)
 15. ಕೌಮಾರಭೃತ್ಯ – ಬಾಲಚಿಕಿತ್ಸೆ (Paediatrics)

ಇಷ್ಟಲ್ಲದೆ ಆರು ತಿಂಗಳ ಪಂಚಕರ್ಮ ಶಿಕ್ಷಣದ ಕೋರ್ಸ್ ಇದ್ದು ಇಲ್ಲಿ ತರಗತಿಯೊಳಗಿನ ಪಾಠಕ್ಕಿಂತ ವೃತ್ತಿಪರ ತರಬೇತಿಗೆ ಹೆಚ್ಚು ಒತ್ತು ಕೊಡಲಾಗುತ್ತದೆ. ಆಯುರ್ವೇದದ ತೊಟ್ಟಿಲೆನಿಸಿಕೊಂಡ ಕೇರಳ ರಾಜ್ಯದಲ್ಲಿ ಆಯುರ್ವೇದ ನರ್ಸಿಂಗ್ ಬಿ.ಎಸ್ಸಿ, ಮತ್ತು ಆಯುರ್ವೇದ ಬಿ.ಫಾರ್ಮ ಕೋರ್ಸ್ ಗಳು ಲಭ್ಯವಿವೆ. ಇವುಗಳಲ್ಲಿ ಸ್ತ್ರೀ ರೋಗ ಮತ್ತು ಪ್ರಸೂತಿ ತಂತ್ರ, ಪಂಚಕರ್ಮ, ಕಾಯ ಚಿಕಿತ್ಸಾ, ಶಾಲಾಕ್ಯ, ಶಲ್ಯ ಮತ್ತು ಕೌಮಾರಭೃತ್ಯಗಳು ಬಹು ಬೇಡಿಕೆಯಲ್ಲಿರುವ ವಿಷಯಗಳಾಗಿವೆ.

ಜಾಗತಿಕ ಮನ್ನಣೆಯ ಕಾರಣದಿಂದಾಗಿ ಆಯುರ್ವೇದ ವೈದ್ಯರಿಗೆ ಉದ್ಯೋಗಾವಕಾಶಗಳು ಮೊದಲಿಗಿಂತ ಹೆಚ್ಚಾಗಿವೆ. ಆದರೆ “ ಆಯುರ್ವೇದ ಪದ್ಧತಿ ಆಧಾರವಿಲ್ಲದ್ದು, ಅದನ್ನು ಒಪ್ಪುವುದಕ್ಕೆ ಸಾಧ್ಯವಿಲ್ಲ” ಎಂಬ ಕಾರಣ ನೀಡಿ ಐರೋಪ್ಯ ರಾಷ್ಟ್ರಗಳಲ್ಲಿ ಕೆಲವೊಂದು ಸಣ್ಣಪುಟ್ಟ ಮೂಲಿಕೆಗಳನ್ನು ಹೊರತುಪಡಿಸಿ ಉಳಿದೆಲ್ಲ ಮೂಲಿಕೆಗಳಿಗೆ ಮೇ 1, 2011 ರಿಂದ ನಿಷೇಧ ಜಾರಿಯಾಗಿದೆ. ಮದ್ದುಗಳೇ ಸಿಗದ ಈ ರಾಷ್ಟ್ರಗಳಲ್ಲಿ ಆಯುರ್ವೇದ ವೈದ್ಯರುಗಳಿಗೆ ಅವಕಾಶ ಇಲ್ಲದಂತಾದರೂ ಜಗತ್ತಿನ ಉಳಿದ ಭಾಗಗಳಲ್ಲಿ ನಿರ್ಬಂಧಗಳಿಲ್ಲ. “ಆದರೆ ಸ್ನಾತಕೋತ್ತರ ಪದವಿ ಮುಗಿಸಿಕೊಂಡವರಿಗೆ ಹೇರಳವಾದ ಅವಕಾಶಗಳಿವೆ. ಇಲ್ಲದೇ ಹೋದಲ್ಲಿ ವೈದ್ಯರು ತನ್ನ ನೈಪುಣ್ಯವನ್ನು ಸಾಬೀತು ಪಡಿಸಿದ ನಂತರವಷ್ಟೇ ಅವಕಾಶಗಳು ತೆರೆದುಕೊಳ್ಳುತ್ತವೆ” ಎಂಬುದು ಸಂಶೋಧಕರಾದ ಡಾ. ಮಧು ಕೆ.ಪಿ ಯವರ ಅಭಿಪ್ರಾಯ. ಆಧಾರವಿಲ್ಲದ ಪದ್ಧತಿ ಎಂಬ ಅಪವಾದವನ್ನು ತೊಡೆದು ಹಾಕುವ ಮತ್ತು ಉಳಿದ ಪದ್ಧತಿಗಳ ನಡುವೆ ಶಕ್ತಿಯುತವಾಗಿ ಎದ್ದು ನಿಲ್ಲುವ ನಿಟ್ಟಿನಲ್ಲಿ ಸಂಶೋಧನೆಗಳು ದಿನೇ ದಿನೇ ಹೆಚ್ಚಾಗುತ್ತಿದ್ದು ಆಸಕ್ತರಿಗೆ  ಈ ಕ್ಷೇತ್ರವು ಉದ್ಯೋಗಕ್ಕಾಗಿ ಕೈ ಬೀಸಿ ಕರೆಯುತ್ತಿದೆ. ಸರ್ಕಾರವೂ “ಆಯುಷ್” ಮೂಲಕ ನಮ್ಮ ಪ್ರಾಚೀನ ಪದ್ದತಿಗೆ ಬೆಂಬಲ ನೀಡುತ್ತಿದ್ದು ಪ್ರತಿ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳ ಪ್ರಾಥಮಿಕ ರೋಗ್ಯ ಕೇಂದ್ರಗಳಲ್ಲಿ ಆಯುರ್ವೇದವನ್ನು ಕಡ್ಡಾಯ ಮಾಡುವ ನಿಟ್ಟಿನಲ್ಲಿ ಯೋಜನೆ ರೂಪಿಸುತ್ತಿದೆ. ಆಯುರ್ವೇದ ಶಿಕ್ಷಣ ಸಂಸ್ಥೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಕ ವೃತ್ತಿಯ ಉದ್ಯೋಗಾವಕಾಶಗಳಿವೆ. ಬೇರೆ ಯಾವುದೇ ವೈದ್ಯ ಪದ್ಧತಿಗಳನ್ನು ಮೀರಿ ಬೆಳೆಯಬಲ್ಲ ಸಾಮರ್ಥ್ಯವುಳ್ಳ ಆಯುರ್ವೇದ ದಿನೇ ದಿನೇ ಹೊಸ ಉದ್ಯೋಗಾವಕಾಶಗಳನ್ನು ಕಲ್ಪಿಸುತ್ತಿದೆ. ಬಳಸಿಕೊಳ್ಳುವ ಜಾಣ್ಮೆ ಮತ್ತಿ ನಿಭಾಯಿಸಿ ಗೆಲ್ಲುವ ತಾಕತ್ತಿರಬೇಕು ಅಷ್ಟೇ.

%%%%%%%%%%%%%%%%%%%%%%%

(ವಿ.ಕ 18 ಜುಲೈ 2012, ಲವಲvk 2nd Page)

ಹೆಲಿಕಾಪ್ಟರ್ ಹಾರಿಸಬೇಡಿ ಉತ್ತಮ ಪಾಲಕರಾಗಿ

ಹದಿಮೂರು ವರ್ಷದ ಮುದ್ದಿನ ಮಗಳು ದಿಶಾ ಇದ್ದಕ್ಕಿದ್ದಂತೆ ವಾಂತಿ ತಲೆಸುತ್ತು ಎಂದಾಗ ಅಮ್ಮನಿಗೆ ಗಾಬರಿ. ಪರೀಕ್ಷೆ ಮಾಡಿದ ಡಾಕ್ಟರು ಹೇಳಿದ್ದು ಆಘಾತಕಾರಿ ಸುದ್ದಿ. ಆಡುವ ಕೂಸಿನ ಗರ್ಭದಲ್ಲಿ ಕಾಡುವ ಕೂಸೊಂದು ಚಿಗುರೊಡೆದಿತ್ತು. ವಿಚಾರಿಸಿ ನೋಡಿದಾಗ ಟ್ಯೂಷನ್ ಟೀಚರ್ ಹೆಸರು ಹೇಳಿತ್ತು ಹುಡುಗಿ. ಈ ವಯಸ್ಸಿನ ಹೆಣ್ಣುಮಗಳಿಗಿರುವ ಸಾಮಾನ್ಯ ಜ್ಞಾನ ಅವಳಿಗಿಲ್ಲದ್ದರ ಫಲವಿದು. ಅನೇಕ ವಿದ್ಯಾರ್ಥಿಗಳಿರುವ ಟ್ಯೂಷನ್ ಕ್ಲಾಸಿಗೆ ಹೋದರೆ ಮಗಳಿಗೆ ಅಧ್ಯಾಪಕರ ಪರ್ಸನಲ್ ಅಟೆನ್ಶನ್ ಸಿಗುವುದಿಲ್ಲ; ಅದರಿಂದಾಗಿ ನಿರೀಕ್ಷಿತ ಅಂಕಗಳನ್ನು ಗಳಿಸದೇ ಹೋದರೆ ಭವಿಷ್ಯ ಕಟ್ಟುವುದೇ ಕಷ್ಟ ಎಂಬ ಕಾರಣಕ್ಕೆ ಮನೆಯಲ್ಲೇ ಪ್ರತ್ಯೇಕ ಟ್ಯೂಷನ್ ಟೀಚರ್ ಗೊತ್ತು ಮಾಡಿದ್ದರು. ಮಗಳ ಮೇಲಿನ ಅತಿಯಾದ ಕಾಳಜಿಯ “ಹೆಲಿಕಾಪ್ಟರ್ ಪೇರೆಂಟಿಂಗ್”ನ ಪರಿಣಾಮದ ಒಂದು ಉದಾಹರಣೆಯಷ್ಟೇ. ಪ್ರತಿಯೊಂದರಲ್ಲೂ ಬೆಸ್ಟ್ ಎಂಬುದನ್ನು ಕೊಟ್ಟರೆ ಮಾತ್ರ ಮಗು ಯಶಸ್ವಿ ಎನ್ನಿಸಿಕೊಳ್ಳಲು ಸಾಧ್ಯ ಎಂಬ ತಂದೆ ತಾಯಿಯರ ನಂಬಿಕೆಯ ಫಲಶ್ರುತಿಯೇ “ಹೆಲಿಕಾಪ್ಟರ್ ಪೇರೆಂಟಿಂಗ್”.

ಮಕ್ಕಳ ಪ್ರತಿ ಹೆಜ್ಜೆಯನ್ನೂ ತಾವೇ ನಿರ್ಧರಿಸಿ ನಡೆಸುವ ಅಪ್ಪ ಅಮ್ಮಂದಿರಿಗೆ “ಹೆಲಿಕಾಪ್ಟರ್ ಪೇರೆಂಟ್ಸ್” ಎಂದು ಹೆಸರಿಸಿದವರು  ಫಾಸ್ಟರ್ ಡಬ್ಲ್ಯು ಕ್ಲೈನ್ ಹಾಗೂ ಜಿಮ್ ಫೇ. ಇವರು 1990ರಲ್ಲಿ ತಮ್ಮ ಪುಸ್ತಕ “ಪೇರೆಂಟಿಂಗ್ ವಿತ್ ಲವ್ ಅಂಡ್ ಲಾಜಿಕ್: ಟೀಚಿಂಗ್ ಚಿಲ್ಡ್ರನ್ ರೆಸ್ಪಾನ್ಸಿಬಿಲಿಟಿ”ದಲ್ಲಿ ಈ ಪದವನ್ನು ಬಳಸಿದ್ದಾರೆ. ಮಕ್ಕಳ ಬಗ್ಗೆ ತೋರುವ ಅತಿ ಕಾಳಜಿಯನ್ನು ಓವರ್ ಪೇರೆಂಟಿಂಗ್ ಎನ್ನುತ್ತಾರೆ ಮನಃಶಾಸ್ತ್ರಜ್ಞರು. ಪಾಶ್ಚಾತ್ಯ ದೇಶಗಳ ಕೆಲವು ತಜ್ಞರು  “ಲಾನ್‌ಮೋವರ್ ಪೇರೆಂಟ್ಸ್” ಎಂದೂ ಕರೆಯುತ್ತಾರೆ. ಮಕ್ಕಳ ಬದುಕಿನ ಉದ್ಯಾನವನದಲ್ಲಿ ಪುಟ್ಟದೊಂದು ಕಳೆ ಕೂಡ ಬೆಳೆಯದಂತೆ ಕಾಯುವವರೆಂದು ಅವರು ವ್ಯಾಖ್ಯಾನಿಸುತ್ತಾರೆ.

ಆರ್ಥಿಕ ಸಬಲತೆ ಸಾಧಿಸಿದ ನಂತರವೇ ಮಗುವಾದರೆ ಸಾಕು ಎಂಬ ನಿರ್ಧಾರವನ್ನು ಬಲವಾಗಿ ನೆಚ್ಚಿಕೊಳ್ಳುವ ಇಂಥವರು ಮಗು ಗರ್ಭಾವಸ್ಥೆಯಲ್ಲಿದ್ದಾಗಲೇ “ದಿ ಬೆಸ್ಟ್” ಶಾಲೆಯ ಹುಡುಕಾಟಕ್ಕೆ ತೊಡಗುತ್ತಾರೆ. ಮಗುವನ್ನು ಯಶಸ್ವಿಯಾಗಿಸುವುದು ಹೇಗೆ ಎಂಬ ಅಷ್ಟೂ ಪುಸ್ತಕಗಳನ್ನು ತಂದಿಟ್ಟುಕೊಂಡು ಅಧ್ಯಯನ ಮಾಡುತ್ತಾರೆ. ಯಶಸ್ಸಿನ ದಾರಿಯನ್ನು ತಾವೇ ಹಾಕಿಕೊಟ್ಟು ನಡೆಸಿದರೆ ಮಾತ್ರ ಅದು ಸಾಧ್ಯ ಭ್ರಮೆಯಲ್ಲಿ ಮಕ್ಕಳನ್ನು ಬೆಳೆಸಹೊರಡುತ್ತಾರೆ. ಈ ಮೂಲಕ ಸಹಜ ಬದುಕಿನಿಂದ ಮಕ್ಕಳನ್ನು ವಂಚಿಸುತ್ತಿದ್ದೇವೆನ್ನುವುದು ಅರಿವಾಗುವುದೇ ಇಲ್ಲ. “ಬೆಸ್ಟ್” ಅನ್ನುವಂಥದ್ದನ್ನು ಮಗುವಿಗೆ ಕೊಡಬೇಕೆಂಬ ಹಪಹಪಿಯಲ್ಲಿ ಅವರು ಪ್ರತಿ ಹೆಜ್ಜೆಯನ್ನೂ ಖುದ್ದಾಗಿ ಗಮನಿಸುತ್ತಾರೆ. ಮಗುವಿನ ದೈನಂದಿನ ಅವಶ್ಯಕತೆಗಳಿಂದ ಹಿಡಿದು ಯಾವ ಶಾಲೆ, ಯಾವ ಬೆಂಚು, ಯಾರ ಗೆಳೆತನ, ಯಾವ ಆಟ, ಯಾವ್ಯಾವ ಸಂದರ್ಭಕ್ಕೆ ಯಾವ್ಯಾವ ಬಟ್ಟೆ ಎಲ್ಲವನ್ನೂ ಅಪ್ಪ ಅಮ್ಮನೇ ನೋಡಿಕೊಳ್ಳುವ ಕಾರಣ ಮಗು ಬದುಕಿಗೆ ತೆರೆದುಕೊಳ್ಳುವುದೇ ಇಲ್ಲ. ಇಂಥ ಅಪ್ಪ ಅಮ್ಮಂದಿರು ಮಕ್ಕಳಿಗೆ ಏನು ಬೇಕು ಅನ್ನೋದನ್ನ ತಾವೇ ನಿರ್ಧರಿಸಿ ಅವರು ಕೇಳುವ ಮೊದಲೇ ತಂದು ಕೊಟ್ಟಿರುತ್ತಾರೆ. ಮಗು ತನ್ನ ಆಸಕ್ತಿಯನ್ನು ಗುರುತಿಸಿಕೊಳ್ಳುವ ಮೊದಲೇ ತಮ್ಮ ಆಸೆಗನುಸಾರವಾಗಿ ಡಾಕ್ಟರ್, ಇಂಜಿನಿಯರ್, ಮಾಡೆಲ್, ವಿಜ್ಞಾನಿ ಏನಾಗಬೇಕೆಂದು ನಿರ್ಧರಿಸಿ ಅದನ್ನು ಸಾಧಿಸಲು ಏನು ಬೇಕೋ ಅಷ್ಟನ್ನು ಒದಗಿಸುತ್ತಾರೆ. ಯಾವುದೇ ಜವಾಬ್ದಾರಿಯನ್ನು ಮಗುವಿಗೆ ಕೊಡದೇ ಇರುವ ಮೂಲಕ ಮಗು ತನ್ನ ಪೂರ್ತಿ ಬುದ್ಧಿಶಕ್ತಿ ಮತ್ತು ಸಮಯವನ್ನು ಗುರಿ ಮುಟ್ಟಲು ಬೇಕಾದ ಸಿದ್ಧತೆಗಾಗಿ ವ್ಯಯಿಸಲು ಅನುವು ಮಾಡಿದ್ದೇವೆಂದು ಬೀಗುತ್ತಾರೆ. ಎಲ್ಲವೂ ಕಾಲ ಬಳಿಗೇ ಬಂದು ಬೀಳುವ ಕಾರಣ ಹೊರ ಜಗತ್ತಿಗೆ ಕಾಲಿಡಬೇಕಾದ ಅವಶ್ಯಕತೆ ಮಗುವಿಗೂ ಇರುವುದಿಲ್ಲ. ತಾವೇ ಎಲ್ಲವನ್ನು ಮಾಡುವ ಭರದಲ್ಲಿ ಮಕ್ಕಳಿಗೆ ಏನನ್ನೂ ಕಲಿಸಿಲ್ಲ ಅನ್ನುವುದು ಅವರ ಅರಿವಿಗೇ ಬಂದಿರುವುದಿಲ್ಲ. ಪರಿಣಾಮ ಬದುಕಿನ ಮೊದಲ ಮೆಟ್ಟಿಲಲ್ಲೇ ಎಡವುವ ದಿಶಾಳಂಥ ಮಕ್ಕಳು ಸಿದ್ಧರಾಗುತ್ತಾರೆ. ಬದುಕಿನ ಬಗ್ಗೆ ಅಕ್ಕರೆ ಹುಟ್ಟುವ ಮೋದಲೇ ಬದುಕನ್ನು ಆಸ್ವಾದಿಸುವ ಆಸಕ್ತಿ ಹೊರಟು ಹೋಗುತ್ತದೆ.

ಚಟ್ಟನ್ನೂಗಾದಲ್ಲಿರುವ ಟೆನ್ನೆಸ್ಸೀ ಯುನಿವರ್ಸಿಟಿಯಲ್ಲಿನ (University of Tennessee at Chattanooga) ಇತ್ತೀಚಿನ ಸಂಶೋಧನೆಗಳ ಪ್ರಕಾರ “ಹೆಲಿಕಾಪ್ಟರ್ ಪೇರೆಂಟಿಂಗ್” ಮಕ್ಕಳ ಮೇಲೆ ಋಣಾತ್ಮಕ ಪರಿಣಾಮ ಬೀರುವುದೇ ಹೆಚ್ಚು. ಇಂಥ ಮಕ್ಕಳಲ್ಲಿ ತಾರುಣ್ಯದಲ್ಲಿ ಖಿನ್ನತೆ, ಮಾನಸಿಕ ಒತ್ತಡ ಗಣನೀಯ ಪ್ರಮಾಣದಲ್ಲಿ ಕಂಡು ಬರುತ್ತದೆ ಎನ್ನಲಾಗಿದೆ. ಸಂಶೋಧಕರೂ ಆಪ್ತ ಸಲಹೆಗಾರರೂ ಆಗಿರುವ ರೋಜರ್ ಟ್ರಿಪ್ (Roger Tripp) ಪ್ರಕಾರ “ತಾರುಣ್ಯದಲ್ಲಿ ಬಹಳ ಅವಶ್ಯಕವೆನಿಸುವ ಸಾಮಾಜಿಕ ನಡವಳಿಕೆಗಳು ಹೆಲಿಕಾಪ್ಟರ್ ಪೇರೆಂಟ್ಸ್ ನ ಮಕ್ಕಳಲ್ಲಿ ಬಹಳ ಕಡಿಮೆಯಾಗಿರುತ್ತವೆ. ಮಗುವನ್ನು ನೋವಾಗದಂತೆ ಬೆಳೆಸುವುದು ಅವರ ಮುಖ್ಯ ಉದ್ದೇಶವಾಗಿದ್ದು ಇದು ಯಾವ ಮಟ್ಟಕ್ಕೆಂದರೆ ಕೆಲವು ಪೇರೆಂಟ್ಸ್ ಮಕ್ಕಳು ಕೆಲಸಕ್ಕೆ ಸೇರುವಾಗ ಸಂದರ್ಶನಕ್ಕೂ ಜತೆಯಲ್ಲೇ ಹೋಗುತ್ತಾರೆ ಮತ್ತು ವೇತನದ ವಿಚಾರವನ್ನೂ ತಾವೇ ಚರ್ಚೆ ಮಾಡಲು ಮುಂದಾಗುತ್ತಾರೆ. ಈ ಮೂಲಕ ಬದುಕನ್ನು ಎದುರಿಸಲಾಗದಂತೆ ಅವರನ್ನು ಬೆಳೆಸುತ್ತಿದ್ದೇವೆಂಬುದು ಬಹಳಷ್ಟು ಸಂದರ್ಭಗಳಲ್ಲಿ ಅವರಿಗೆ ಅರಿವಾಗಿರುವುದಿಲ್ಲ. ತಮ್ಮ ಕಾಳಜಿಯ ಮೂಲಕ ಪ್ರೀತಿ ತೋರಿಸುತ್ತಿದ್ದೇವೆಂದು ನಂಬಿರುತ್ತಾರೆ.”

ಬದುಕೇ ಮಗುವಿಗೆ ನಿಜವಾದ ಪಾಠಶಾಲೆ. ಬೆಳೆಯುತ್ತ ಹೋದಂತೆ ಮಗು ಕಲಿಯುತ್ತ ಹೋಗುತ್ತದೆ. ಅತೀ ಕಾಳಜಿ ಅವಶ್ಯಕತೆಯಿಲ್ಲ. ಈ ನಿಟ್ಟಿನಲ್ಲಿ ತಂದೆ ತಾಯಂದಿರು ಒಂದಷ್ಟು ಅಂಶಗಳನ್ನು ಗಮನಿಸಲೇಬೇಕು.

 • ಮಗು ಬದುಕಿನ ಎಲ್ಲ ಭಾವನೆಗಳನ್ನು ಅನುಭವಿಸಲಿ. ಅದರಿಂದ ವ್ಯಕ್ತಿತ್ವ ಗಟ್ಟಿಯಾಗುತ್ತದೆ.
 • ಒಂದಷ್ಟು ಆಕಸ್ಮಿಕಗಳನ್ನು ಚಿಕ್ಕವರಿದ್ದಾಗ ಎದುರಿಸಿದಾಗಲಷ್ಟೇ ದೊಡ್ಡವರಾದ ಮೇಲೆ ಅವುಗಳನ್ನು ನಿರ್ವಹಿಸುವ ತಾಕತ್ತು ಬರುತ್ತದೆ.
 • ಮಗು ಖುಷಿಯಾಗಿರುವುದು ಎಂದರೆ ಸಮಸ್ಯೆಗಳು ಬರದಂತೆ ತಡೆಯುವುದಲ್ಲ; ಸಮಸ್ಯೆಗಳನ್ನು ಎದುರಿಸುವುದರಲ್ಲಿ ಇರುವ ಖುಷಿ ಅರ್ಥವಾಗಲಿ.
 • ಮಗು ಹೋಮ್ ವರ್ಕ್ ಗಳನ್ನು ಅಥವಾ ವಹಿಸಿದ ಇತರ ಯಾವುದೇ ಕೆಲಸಗಳನ್ನು ಸರಿಯಾಗಿ ಮಾಡುತ್ತಿದೆಯೇ ಎಂದು ನಿಗಾವಹಿಸಿ; ನೀವೇ ಮಾಡಿಕೊಡಬೇಡಿ.
 • ಕೇಳುವ ಮೊದಲೇ ಅವಶ್ಯಕತೆಗಳನ್ನು ಪೂರೈಸುವುದು ನಿಮ್ಮ ಹೆಮ್ಮೆಯಿರಬಹುದು. ಆದರೆ ಅದರಿಂದ ಮಗುವಿನಲ್ಲಿ ಕೇಳುವ ರೀತಿ ನೀತಿಗಳನ್ನೂ ನಿರೀಕ್ಷೆಯ ಖುಷಿಯನ್ನೂ ನೀವು ಕಸಿದುಕೊಳ್ಳುತ್ತಿದ್ದೀರಿ ಎಂಬುದು ಗೊತ್ತಿರಲಿ.
 • ಮಗು ಸಹಪಾಠಿಯ ಜತೆಗೋ ಶಿಕ್ಷಕರ ಜತೆಗೋ ವಾದದಲ್ಲಿ ಸೋತರೆ ಮಗುವಿನ ಪರ ವಹಿಸಿಕೊಂಡು ಹೋಗಿ ಗೆಲುವನ್ನು ತಟ್ಟೆಯಲ್ಲಿಟ್ಟು ಕೊಡಬೇಡಿ. ಸೋಲನ್ನು ಎದುರಿಸುವ ತಾಕತ್ತು ಗೆಲುವಿನ ಬೆಲೆ ಎರಡೂ ಅರ್ಥವಾಗಲು ಬಿಡಿ. ಸೋಲು ಕೂಡ ಗೆಲುವಿನಷ್ಟೇ ಸಹಜ ಮತ್ತು ಅವೆರಡೂ ಬದುಕಿನ ಸಹಜ ಪ್ರಕ್ರಿಯೆ ಎಂಬುದು ಗೊತ್ತಾಗಲಿ.
 • ಯಾವುದೋ ಸಣ್ಣ ಪುಟ್ಟ ಜಗಳಗಳಿಂದ ಗೆಳೆಯರ ಜತೆ ಮಾತು ಬಿಟ್ಟಿದ್ದರೆ ನೀವು ಮಧ್ಯವರ್ತಿಯಾಗಬೇಡಿ. ತಪ್ಪು ತಿಳುವಳಿಕೆಗಳನ್ನು ಸರಿ ಪಡಿಸಿಕೊಂಡು ಅವರೇ ಒಂದಾಗಲಿ. ರಾಜಿಯಾಗುವುದನ್ನು, ಬದುಕಿನ ತೊಡಕುಗಳನ್ನು ಬಿಡಿಸಿಕೊಳ್ಳುವುದನ್ನು ಮಗು ತಾನಾಗಿ ಕಲಿಯಲಿ.
 • ಯಾವ ರೀತಿಯ ಸ್ನೇಹಿತರನ್ನು ಆಯ್ಕೆ ಮಾಡಿದ್ದಾರೆಂದು ಗಮನಿಸುತ್ತಿರಿ; ಆದರೆ ನೀವೇ ಆಯ್ಕೆ ಮಾಡಬೇಡಿ. ಅವರ ಆಯ್ಕೆಯಲ್ಲಿ ತಪ್ಪಿದ್ದಾಗ ತಿದ್ದಿ.
 • ಮಗು ಕೇಳಿದ್ದನ್ನು ತಕ್ಷಣ ತಂದು ಕೊಡಬೇಡಿ; ಒಂದಷ್ಟು ಕಾಯಲಿ. ಕಾಯುವಿಕೆ ವ್ಯಕ್ತಿತ್ವಕ್ಕೆ ತಾಳ್ಮೆಯನ್ನು ತಂದು ಕೊಡುತ್ತದೆ. ತಾಳ್ಮೆಗೆ ಬದುಕಿನಲ್ಲಿ ಅದರದೇ ಆದ ಘನತೆಯಿದೆ.
 • ನಿಮ್ಮ ಕಾಲಕ್ಕಿಂತ ಹೆಚ್ಚು ಆಟಿಕೆಗಳು, ಮನೋರಂಜನೆಯ ಸಾಮಗ್ರಿಗಳು ಇಂದು ಲಭ್ಯವಿದೆ. ನನಗೆ ಸಿಗದೇ ಇದ್ದುದು ಮಗುವಿಗೆ ಸಿಗಲಿ ಎಂದು ಅತಿಯಾಗಿ ತಂದು ಗುಡ್ಡೆ ಹಾಕಬೇಡಿ. ಮಗು ಯಂತ್ರಗಳ ಜತೆಗಾರನಾಗದಿರಲಿ.
 • ಸದಾ ಮಗುವಿನ ಜತೆಗೇ ಇರಬೇಡಿ; ಒಂದಷ್ಟು ಹೊತ್ತು ಮಗು ಒಂಟಿಯಾಗಿರಲಿ. ಒಂಟಿತನ ಕ್ರಿಯಾಶೀಲ ಯೋಚನೆಗಳಿಗೆ ರಹದಾರಿ ಜತೆಗೇ ಒಂಟಿತನದಲ್ಲಿನ ಖುಷಿಯೂ ಅರಿವಾಗಲು ಅವಕಾಶ.
 • ಸಾಧ್ಯವಾದಷ್ಟು ಮಗುವನ್ನು ಒಂಟಿಯಾಗಿ ತರಬೇತಿಗಾಗಲೀ ಟ್ಯೂಷನ್ ಗಾಗಲೀ ಕಳುಹಿಸಬೇಡಿ. ಎಲ್ಲರ ಜತೆ ಬೆರೆತು ಕಲಿಯಲಿ. ಅದು ಸುರಕ್ಷಿತವೂ ಹೌದು. ಮಗು ಸಾಮಾಜಿಕ ನಡೆನುಡಿಯನ್ನು ಕಲಿಯಲು ಸಹಕಾರಿಯೂ ಹೌದು.

ಹೆಲಿಕಾಪ್ಟರ್ ಪೇರೆಂಟ್ ಅಲ್ಲ ಅಂದಾಕ್ಷಣ ನೀವು ಮಗುವಿನ ಜವಾಬ್ದಾರಿ ತೆಗೆದುಕೊಳ್ಳದವರು ಅಂತಲ್ಲ. ಮಗುವಿಗೆ ಒಂದಷ್ಟು ಸ್ವಾತಂತ್ರ್ಯ ಕೊಡುವ ಮೂಲಕ ಸ್ವಾವಲಂಬನೆಯಿಂದ ಬದುಕು ಕಟ್ಟಲು ತಳಪಾಯ ಹಾಕುತ್ತಿದ್ದೀರಿ ಎಂದರ್ಥ. ಕಷ್ಟದ ಕ್ಷಣಗಳಲ್ಲಿ ಯಾವತ್ತೂ ನಿಮ್ಮ ಸಹಾಯ ಹಸ್ತ ಜತೆಗಿರುತ್ತದೆ ಎಂಬ ನಂಬಿಕೆಯೊಂದನ್ನು ಮಗುವಿನಲ್ಲಿ ಹುಟ್ಟು ಹಾಕಿದರೆ ಸಾಕು. ನೀವು ಮಗು ಇಬ್ಬರೂ ಗೆದ್ದಂತೆಯೇ.

ಮಗು ಡಾಕ್ಟರು, ಇಂಜಿನಿಯರ್, ಮಾಡೆಲ್, ಕ್ರಿಕೆಟರ್ ಆಗುವ ಮುನ್ನ ಸ್ವಾವಲಂಬಿಯಾಗುವುದು ಮುಖ್ಯ. ಆ ಬಹುಮಾನವನ್ನು ಮಗುವಿಗೆ ಕೊಡಿ. ಮಗು ಯಾವತ್ತಿದ್ದರೂ ನಿಮ್ಮದೇ ಆಗಿ ಉಳಿಯುತ್ತದೆ.

(ವಿ.ಕ. ಲವಲvk, 7th July 2012, Page 12)

Helicopter Parenting V.K 7 July 2012

Importance of Early Childhood Education

ಶಿಕ್ಷಣದ ಮಹತ್ವ ಹೆಚ್ಚಾಗುತ್ತಿದ್ದಂತೆ ಅದರ ವ್ಯಾಪ್ತಿ ಮತ್ತು ವಿಸ್ತಾರಗಳೂ ಬದಲಾಗುತ್ತಿವೆ. ಮಕ್ಕಳಿಗೆ ಎಳವೆಯಲ್ಲೇ ಅಂದರೆ ಪೂರ್ವ  ಬಾಲ್ಯಾವಧಿ ಶಿಕ್ಷಣ ನೀಡುವತ್ತ ಪ್ರಮುಖವಾಗಿ ಗಮನ ಹರಿಸಲಾಗುತ್ತಿದೆ.

ಮಗುವೊಂದರ ಎಂಟನೇ ವಯಸ್ಸಿನ ವರೆಗಿನ ಅವಧಿ ಅದರಲ್ಲೂ ಹುಟ್ಟಿನಿಂದ ನಾಲ್ಕನೇ ವರ್ಷದ ವರೆಗಿನ ಅವಧಿ ಇಡೀ ಬದುಕಿನ ತಳಹದಿ ಎಂಬುದು ಸಂಶೋಧನೆಗಳಿಂದ ದೃಢ ಪಟ್ಟಿದೆ. ವ್ಯಕ್ತಿಯ ಬೌದ್ಧಿಕತೆಗೆ ಸಂಬಂಧಪಟ್ಟ ನರಮಂಡಲಗಳ ಬೆಳವಣಿಗೆ ಮತ್ತು ಅವುಗಳ ವಿನ್ಯಾಸಗಳು ಈ ಹಂತದಲ್ಲೇ ರೂಪುಗೊಳ್ಳುವ ಕಾರಣ ಪೂರ್ವ  ಬಾಲ್ಯಾವಧಿ ಶಿಕ್ಷಣದ ಕೊಡುಗೆ ಮಹತ್ತರವಾಗಿದೆ. ಗರ್ಭಧಾರಣೆಯ ಕ್ಷಣದಿಂದಲೇ  ಮೆದುಳಿನ ನರ ಕೋಶಗಳು ಇತರ ನರಕೋಶಗಳಿಗಿಂತ ವೇಗವಾಗಿ ವೃದ್ಧಿಯಾಗುತ್ತವೆ. ಹುಟ್ಟಿನ ನಂತರವೂ ಪ್ರಾಥಮಿಕ ಹಂತದಲ್ಲಿ ಬೆಳವಣಿಗೆಯು ಅದೇ ವೇಗದಲ್ಲಿದ್ದು ಹುಟ್ಟಿದಾಗ ಪ್ರೌಢವಯಸ್ಕರ ಮೆದುಳಿನ 25% ತೂಕ ಹೊಂದಿರುತ್ತದೆ. ಒಂದನೇ ವರ್ಷಕ್ಕೆ 50%, ಎರಡನೇ ವರ್ಷಕ್ಕೆ 75% ಮತ್ತು ಮೂರು ವರ್ಷ ತುಂಬುವ ಹೊತ್ತಿಗೆ 90% ಆಗಿರುತ್ತದೆ. ಪ್ರೌಢರಲ್ಲಿ ಸುಮಾರು ನೂರು ಬಿಲಿಯನ್ ನ್ಯೂರಾನ್ ಗಳಿದ್ದು ಅವುಗಳಲ್ಲಿ ಬಹುಭಾಗ ಗರ್ಭದೊಳಗಿದ್ದ ಮೊದಲ ಐದು ತಿಂಗಳಿನಲ್ಲಿ ರೂಪುಗೊಂಡವುಗಳಾಗಿರುತ್ತವೆ. ಇತ್ತೀಚಿನ ಸಂಶೋಧನೆಗಳ ಪ್ರಕಾರ ಜೀವಿತಾವಧಿಯಲ್ಲಿ ಯಾವಾಗ ಬೇಕಾದರೂ ಇವುಗಳ ಹೊಸ ಹುಟ್ಟು ಸಾಧ್ಯವಾಗಿದ್ದರೂ ಹಳೆಯ ಸತ್ತು ಹೋಗಿರುವ ನ್ಯೂರಾನ್ ಗಳ ಜಾಗವನ್ನು ತುಂಬುವಷ್ಟು ಮಾತ್ರ ಹೊಸದು ಜನ್ಮ ತಳೆಯುತ್ತವೆ. ಆದ್ದರಿಂದಲೇ ಬಾಲ್ಯಾವಸ್ಥೆಯು ಬದುಕಿಗೆ ಪರಿಪೂರ್ಣ ರೂಪ ನೀಡುವ ರೂವಾರಿ ಎನಿಸಿದೆ.

ಪ್ರೂನಿಂಗ್ (pruning) ಎಂಬ ನರಕೋಶಗಳ ನಡುವಣ ಸಂಪರ್ಕಗಳು ನಶಿಸುತ್ತ ಹೋಗುವ ಬೆಳವಣಿಗೆಯ ಬಹುಮುಖ್ಯ ಹಂತವನ್ನು ಮಗು ದಾಟಿ ಬಂದಿರುವುದಿಲ್ಲವಾದ್ದರಿಂದ ಮಗುವಿನ ಮೆದುಳಿನ ಸಾಮರ್ಥ್ಯ ಆಗಾಧವಾಗಿರುತ್ತದೆ ಮತ್ತು ದೊಡ್ಡವರಿಗಿಂತ ಹೆಚ್ಚು ಸಂಖ್ಯೆಯ ಸಿನ್ಯಾಪ್ಸಿಸ್ (ಕ್ರೋಮೋಸೋಮ್ ಜೋಡಿಗಳ ಸಂಗಮ) ಮತ್ತು ಡೆಂಡ್ರೈಟು (ನರ ಸಂಬಂಧಿ ಪ್ರಚೋದನೆಯನ್ನು ಜೀವಕೋಶಕ್ಕೆ ತಲುಪಿಸುವ ಜೀವಕೋಶದ ಕವಲು ಚಾಚಿಕೆಗಳು) ಗಳಿರುತ್ತವೆ. ಅಂದರೆ ಯಾವುದೇ ವಿಚಾರಗಳು ವಿವಿಧ ರೀತಿಯಲ್ಲಿ ಸಂಚರಿಸಬಹುದಾಗಿದ್ದು ಸಂಕೀರ್ಣ ಯೋಚನೆಗಳಿಗೆ ಮೆದುಳು ಬಹು ಬೇಗ ತೆರೆದುಕೊಳ್ಳುತ್ತದೆ. ಮೆದುಳಿನ ಪ್ರೂನಿಂಗ್ ಸಂಪೂರ್ಣವಾಗಿ ಮಗು ಬೆಳೆಯುವ ವಾತಾವರಣವನ್ನು ಅವಲಂಬಿಸಿರುತ್ತದೆ. ಇತ್ತೀಚೆಗೆ ನಡೆದ ಸಂಶೋಧನೆಯೊಂದರಲ್ಲಿ ಹುಟ್ಟಿನ ನಂತರದ ಹಲವು ತಿಂಗಳುಗಳ ಕಾಲ ಬೆಕ್ಕಿನ ಮರಿಗಳ ಕಣ್ಣುಗಳನ್ನು ಬಟ್ಟೆಯಿಂದ ಕಟ್ಟಿಡಲಾಯಿತ್ತು. ಬಟ್ಟೆಯನ್ನು ಬಿಚ್ಚಿದ ನಂತರವೂ ಅವುಗಳ ದೃಷ್ಟಿ ಸಾಮರ್ಥ್ಯ ಸಮರ್ಪಕವಾಗಿರಲಿಲ್ಲ. ಏಕೆಂದರೆ ದೃಷ್ಟಿ ಸಂಬಂಧಿ ನರಗಳ ಬೆಳವಣಿಗೆಗೆ ಅವಕಾಶವೇ ಸಿಕ್ಕಿರಲಿಲ್ಲ. ಹಾಗೆಯೇ ಮಕ್ಕಳಲ್ಲೂ ಬುದ್ಧಿಯನ್ನು ಸಾಣೆ ಹಿಡಿದಷ್ಟೂ ಹೆಚ್ಚು ಹರಿತವಾಗುತ್ತ ಹೋಗುತ್ತದೆ. ಉತ್ತೇಜನದ ಕೊರತೆಯಿಂದಾಗಿ ಮೆದುಳಿನ ಸಾಮರ್ಥ್ಯ ನಶಿಸುವುದಕ್ಕಿಂತ ಹೆಚ್ಚಿನ ದುರಂತ ಇನ್ನೊಂದಿಲ್ಲ ಎಂಬುದು ಇಂದಿನ ಬಹಳಷ್ಟು ಶಿಕ್ಷಣ ತಜ್ಞರ ಅಭಿಪ್ರಾಯವಾಗಿದೆ.

ಮೆದುಳಿನ ಎಡ ಭಾಗವು ತಾರ್ಕಿಕ ಯೋಚನೆಗಳಿಗೆ (Logical) ಸಂಬಂಧ ಪಟ್ಟಿದ್ದು, ಬಲಭಾಗವು ಸೃಜನಶೀಲತೆ ಮತ್ತು ಸ್ಫುಟ ನೆನಪುಗಳಿಗೆ  (Creative & Photographic Memory) ಸಂಬಂಧಿಸಿದ  ಕಾರ್ಯ ನಿರ್ವಹಿಸುತ್ತದೆ. ಇವುಗಳನ್ನು ನಾವು ಯಾವ ರೀತಿ ಉತ್ತೇಜಿಸುತ್ತೇವೆಂಬುದರ ಮೇಲೆ ಅದರ ಸಾಮರ್ಥ್ಯ ಹೆಚ್ಚುತ್ತಾ ಹೋಗುತ್ತದೆ. ಶಾಲೆಗೆ ಸೇರಿದ ನಂತರವೇ ಕಲಿಕೆ ಪ್ರಾರಂಭಿಸುವುದು ತಪ್ಪೇನಲ್ಲ; ಆದರೆ ಅಷ್ಟರಲ್ಲಾಗಲೇ ಮೆದುಳಿನ ಬಹುಪಾಲು ಬೆಳವಣಿಗೆ ಮುಗಿದು ಹೋಗಿರುವುದರಿಂದ ಅದರ ಸಾಮರ್ಥ್ಯ ವೃದ್ಧಿಸುವ ಅವಕಾಶವನ್ನು ನಾವು ಕಳೆದುಕೊಂಡಾಗಿರುತ್ತದೆ.

ಪೂರ್ವ  ಬಾಲ್ಯಾವಧಿ ಶಿಕ್ಷಣ  ನೀಡುವವರು ಯಾರು  ಮತ್ತು ಅವರಿಗಿರಬೇಕಾದ ಅರ್ಹತೆಗಳೇನು ಎಂಬ ಪ್ರಶ್ನೆ ತುಂಬಾ ಮೌಲಿಕವಾದುದಾಗಿದೆ. ಚೈಲ್ಡ್ ಕೇರ್ ಸೆಂಟರ್ ಗಳು, ನರ್ಸರಿಗಳು, ಪ್ಲೇ ಹೋಮ್ ಗಳೆಲ್ಲವೂ ಇದೇ ವರ್ಗಕ್ಕೆ ಸೇರುತ್ತವೆ. ಪ್ರಸ್ತುತ ತಂದೆ ತಾಯಿಯರಿಬ್ಬರೂ ಕೆಲಸಕ್ಕೆ ಹೋಗುವುದು ಸರ್ವೇ ಸಾಮಾನ್ಯವಾಗಿರುವ ಕಾರಣ ಮಗುವನ್ನು ಅಲ್ಲಿ ಬಿಟ್ಟು ಹೋಗುವುದು ಅನಿವಾರ್ಯವಾಗಿದೆ. ಅಂಥ ಸಂದರ್ಭಗಳಲ್ಲಿ ಇವರು ಮಗುವಿನ ಬುದ್ಧಿ ಬೆಳವಣಿಗೆಯನ್ನು ಪೋಷಿಸುವ ಕೆಲಸ ಮಾಡಬೇಕಿರುತ್ತದೆ. ಅಲ್ಲಿರುವಷ್ಟೂ ಹೊತ್ತು ಮಗುವಿನ ಬೇಕು ಬೇಡಗಳನ್ನು ನೋಡಿಕೊಳ್ಳುವುದೇ ಅಲ್ಲದೆ ಶಾರೀರಿಕ, ಭಾವನಾತ್ಮಕ, ಬೌದ್ಧಿಕ ಮತ್ತು ಸಾಮಾಜಿಕ ನಡವಳಿಕೆಗಳನ್ನು ಕಲಿಸುವ ಮತ್ತು ತಿದ್ದುವ ಜವಾಬ್ದಾರಿಯೂ ಅವರದೇ ಆಗಿರುತ್ತದೆ. ಮಗುವಿನ ಆಸಕ್ತಿಯ ಕ್ಷೇತ್ರಗಳನ್ನು ಗುರುತಿಸುವುದು,  ಪ್ರತಿಭೆ ಮತ್ತು ಸ್ವಾವಲಂಬನೆ ಬೆಳೆಸುವಿಕೆ, ಆತ್ಮಗೌರವದ ವೃದ್ಧಿಗೂ ಇವರ ಕೊಡುಗೆ ಅಪಾರವಾಗಿರುತ್ತದೆ.

ಇತ್ತೀಚಿನ ಬೆಳವಣಿಗೆಗಳನ್ನು ನೋಡಿದಾಗ ನರ್ಸರಿ ಅಥವಾ ಪ್ಲೇ ಹೋಂಗಳಲ್ಲಿ ಮಕ್ಕಳನ್ನು ಬಿಡುವ ಮೊದಲು ಅಲ್ಲಿನ ಸಿಬ್ಬಂದಿಗಳು ಈ ನಿಟ್ಟಿನಲ್ಲಿ ಸರಿಯಾದ ಶಿಕ್ಷಣ ಪಡೆದಿದ್ದಾರೆಯೇ ಎಂದು ಪರಿಶೀಲಿಸಿದ ನಂತರವೇ ಮಕ್ಕಳನ್ನು ಅಡ್ಮಿಷನ್ ಮಾಡಿಸುವ ಪ್ರವೃತ್ತಿ ಹೆಚ್ಚಿದೆ. “ನಾವು ಪೂರ್ವ ಬಾಲ್ಯಾವಧಿ ಶಿಕ್ಷಣದ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಂಡಿದ್ದು ಮಗುವಿನ ಸರ್ವತೋಮುಖ ಬೆಳವಣಿಗೆಯನ್ನು ಸಮರ್ಥವಾಗಿ ಪೋಷಿಸುವ ಅರ್ಹತೆಯುಳ್ಳವರ ಬಳಿ ಮಾತ್ರ ಮಗುವನ್ನು ಬಿಡುವ ನಿರ್ಧಾರ ಮಾಡಿದ್ದೇವೆ”  ಎನ್ನುತ್ತಾರೆ ಪುಟ್ಟ ಮಗುವಿನ ತಾಯಿ ರಮ್ಯಾ ಸುಹಾಸ್.

ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಮಕ್ಕಳೊಂದಿಗೆ ಕೆಲಸ ಮಾಡಬಯಸುವವರು ಈ ಕ್ಷೇತ್ರದಲ್ಲಿ ಶಿಕ್ಷಣ ಪಡೆಯುವುದು ಕಡ್ಡಾಯವಾಗಲೂಬಹುದು. ಬೆಂಗಳೂರು ವಿಶ್ವ ವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಶ್ರೀಮತಿ ವಿ.ಹೆಚ್.ಡಿ. ಸೆಂಟ್ರಲ್ ಇನ್ ಸ್ಟಿಟ್ಯೂಟ್ ಆಫ್ ಹೋಮ್ ಸೈನ್ಸ್ ಈ ನಿಟ್ಟಿನಲ್ಲಿ ಹೊಸದೊಂದು ಹೆಜ್ಜೆಯಿಟ್ಟಿದೆ. ಇಲ್ಲಿನ ಮಾನವ ವಿಕಾಸ ವಿಭಾಗವು ಪೂರ್ವ ಬಾಲ್ಯಾವಧಿ ಶಿಕ್ಷಣ ಮತ್ತು ನಿರ್ವಹಣೆ (M.Sc. in Early Childhood Education And Administration (ECEA)) ಎಂಬ ಎರಡು ವರ್ಷದ ಸ್ನಾತಕೋತ್ತರ ಪದವಿಯನ್ನು ಪ್ರಾರಂಭಿಸಿದ್ದು ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಸಾಮಾನ್ಯ ಮಕ್ಕಳು ಮಾತ್ರವಲ್ಲದೆ ವಿಶಿಷ್ಟ ಚೇತನ ಮಕ್ಕಳ ಬಾಲ್ಯ ನಿರ್ವಹಣೆಯನ್ನೂ ಒಳಗೊಂಡಿರುವುದು ಈ ಪದವಿಯ ವೈಶಿಷ್ಟ್ಯ. ಈ ಪದವಿಯು ಪೂರ್ವ ಬಾಲ್ಯಾವಧಿ ಶಿಕ್ಷಣ ಮತ್ತು ನಿರ್ವಹಣೆಗೆ ಸಂಬಂಧಿಸಿದ ಸಮಗ್ರ ಪಾಠಗಳನ್ನು ಹೊಂದಿದ್ದು ಅವುಗಳ ಪ್ರಾಯೋಗಿಕ ಅಳವಡಿಕೆಗಾಗಿ “ಮಕ್ಕಳ ಮಂದಿರ” ಎಂಬ ಪ್ರಾಯೋಗಿಕ ಶಿಶು ವಿಹಾರ ಕೂಡಾ ಇಲ್ಲಿದ್ದು ಇದು ಕಲಿಕೆಗೆ ಬಹಳಷ್ಟು ಸಹಕಾರಿಯಾಗಿದೆ.

ಈ ಪದವಿ ಮುಗಿಸಿದವರು ಡೇ ಕೇರ್, ಪ್ರೀ ಸ್ಕೂಲ್ ಹಾಗೂ ವಿಶೇಷ ಶಿಕ್ಷಣ ಸಂಸ್ಥೆಗಳನ್ನು ಇತರರಿಗಿಂತ ಭಿನ್ನವಾಗಿ ಮತ್ತು ಸಮರ್ಥವಾಗಿ ನಡೆಸಲು ಅರ್ಹರಾಗುತ್ತಾರೆ. ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರಗಳಲ್ಲಿ ಸಂಶೋಧಕರಾಗಿ, ಮಕ್ಕಳ ಜಾಹೀರಾತು ಸಂಸ್ಥೆಗಳು, ಮಕ್ಕಳ ಪುಸ್ತಕ ಮತ್ತು ಆಟಿಕೆ ತಯಾರಿಕಾ ಸಂಸ್ಥೆಗಳಲ್ಲಿ, ವಾಕ್-ಶ್ರವಣ ಕೇಂದ್ರಗಳು ಮತ್ತು ಮಕ್ಕಳ ಆಡಿಯೋ ವಿಡಿಯೋ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಹುದಾಗಿದೆ.  ಪೂರ್ವ ಬಾಲ್ಯಾವಧಿ ಕಲ್ಯಾಣಕ್ಕಾಗಿ ಶ್ರಮಿಸುವ ಸರ್ಕಾರೇತರ ಸಂಸ್ಥೆಗಳಲ್ಲಿ, ಅಥವಾ ಶಾಲೆಗಳಲ್ಲಿ ಆಪ್ತ ಸಮಾಲೋಚಕರಾಗಿ ಕೆಲಸ ನಿರ್ವಹಿಸಬಹುದಾಗಿದೆ. ಇವೆಲ್ಲಕ್ಕೂ ಹೆಚ್ಚಾಗಿ ಈ ತಳಹದಿಯ ಮೇಲೆ ಸ್ವ ಉದ್ಯೋಗದ ಎಲ್ಲಾ ಅವಕಾಶವಿದೆ.  ಪೂರ್ವ ಬಾಲ್ಯಾವಧಿ ಶಿಕ್ಷಣವೆಂಬುದು ನಮ್ಮಲ್ಲಿ ಹೊಸದಾಗಿ ಬರುತ್ತಿರುವ ಪರಿಕಲ್ಪನೆಯಾದ (Concept) ಕಾರಣ ಉದ್ಯೋಗಾವಕಾಶಗಳು ಹೇರಳವಾಗಿವೆ. ಮಕ್ಕಳಿಗಾಗಿ ಕೆಲಸ ಮಾಡುವ ಜಾಣ್ಮೆ, ಮಕ್ಕಳ ಜತೆಗೇ ಇದ್ದು ಕೆಲಸ ನಿರ್ವಹಿಸುವ ತಾಳ್ಮೆ ಇರುವುದು ಮುಖ್ಯವಷ್ಟೆ.

ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಈ ಬರಹದ ಲಿಂಕ್ ಇಲ್ಲಿದೆ. V.H.D COLLEGE  ನಲ್ಲಿನ ಈ ಕೋರ್ಸ್ ಬಗ್ಗೆ ಯಾವುದೇ ಮಾಹಿತಿ ಬೇಕಿದ್ದಲ್ಲಿ ನನ್ನನ್ನು ಸಂಪರ್ಕಿಸಬಹುದು.

http://www.vijaykarnatakaepaper.com/pdf/2012/07/02/20120702l_004101006.jpg

pdf ಬೇಕಿದ್ದಲ್ಲಿ.:

Early Childhood Education V.K 2 June 2012

%d bloggers like this: