ಧನ್ಯವಾದ ಸಮರ್ಪಣೆ

ನಮ್ ನಮಸ್ಕಾರ ನಿಮಗ ...

ನಮ್ ನಮಸ್ಕಾರ ನಿಮಗ ...

ಪುಟ್ಟದಾಗಿ ಬ್ಲಾಗಿನಲ್ಲಿ ಪ್ರಕಟಿಸಿ ವಿಷಯ ತಿಳಿಸಿದ್ದಷ್ಟೇ ನಾವು. ವಿಶ್ವಾಸವಿಟ್ಟು ಕಾರ್ಯಕ್ರಮ ನೋಡಿದ್ದೀರಿ. ಅಭಿಪ್ರಾಯ ತಿಳಿಸಿದ್ದೀರಿ. ಆಯುರ್ವೇದಕ್ಕೆ ನೀವು ನೀಡಿದ ಪ್ರೋತ್ಸಾಹಕ್ಕೆ ಕೃತಜ್ಞರು ನಾವು. ಹೀಗೆ ಜತೆಗಿರೋಣ. ನಮ್ಮ ದೇಶದ ವೈದ್ಯ ಪದ್ಧತಿ ಜಗತ್ತಿನ ಮಾದರಿ ಪದ್ಧತಿಯಾಗಲಿ ಎಂಬಾಸೆ ನನ್ನದು. ಈ ಆಶಯಕ್ಕೆ ಕೈಗೂಡಿಸಿದ ನಿಮಗೆಲ್ಲ ಮತ್ತೊಮ್ಮೆ ವಂದನೆ.

ನಲ್ಮೆಯಿಂದ,
ಸುಕೃತಂ ಆಯುರ್ವೇದ

ಬದಲಾವಣೆಯೊಂದಿದೆ ಗಮನಿಸಿ

ಚಿಕ್ಕದೊಂದು ಕರೆಕ್ಷನ್ :

ಟಿವಿ 9 ನಲ್ಲಿ ಇವತ್ತಿಗಿದ್ದ ಕಾರ್ಯಕ್ರಮದ ಪ್ರಸಾರ ನಾಳೆಗೆ ಪೋಸ್ಟ್ ಪೋನ್ ಆಗಿದೆ. ತೊಂದರೆಗೆ ಕ್ಷಮೆಯಿರಲಿ. ಸಮಯದಲ್ಲಿ ಏನೂ ಬದಲಾವಣೆ ಇಲ್ಲ. ಟಿವಿ 9 ನಲ್ಲಿ ಮಧ್ಯಾಹ್ಣ 1:30ಕ್ಕೆ ಮತ್ತು ಸಂಜೆ 5:30ಕ್ಕೆ ಮರು ಪ್ರಸಾರ. ನೋಡಿ

ನಮ್ಮೆಜಮಾನ್ರು ಟೀವೀಲಿ ಬರ್ತಾರೆ

ನಮ್ಮ ಸುಕೃತಂ ಆಯುರ್ವೆದಾಲಯ

ನಮ್ಮ ಸುಕೃತಂ ಆಯುರ್ವೆದಾಲಯ


ನಸ್ಯ ಕರ್ಮ ಚಿಕಿತ್ಸಾ ನಿರತ ವೈದ್ಯರು

ನಸ್ಯ ಕರ್ಮ ಚಿಕಿತ್ಸಾ ನಿರತ ವೈದ್ಯರು

ನನ್ನ ಬಾಳ ಗೆಳೆಯ ಡಾ. ಗಿರಿಧರ ಟೀವಿಯಲ್ಲಿ ಬರ್ತಿರೋ ಸಂತೋಷ ನಂಗೆ. ನೀವುಗಳು ಜತೇಲಿರೋ ಮಿತ್ರರು. ನಿಮ್ಮೊಂದಿಗೆ ಹಂಚಿಕೊಳ್ಳದ ಹೊರತು ಖುಷಿ ಪರಿಪೂರ್ಣ ಅನಿಸೋಲ್ಲ. ನನ್ ಹುಡುಗ ಟೀವೀಲಿ ಬರ್ತಿರೋದನ್ನ ಎಲ್ಲರಲ್ಲೂ ಹೇಳೋವರೆಗೂ ನಂಗೆ ಸಮಾಧಾನ ಆಗೋಲ್ಲ. ಅವರ ಮಾತು ಸನಾತನ ವೇದ ಆಯುರ್ವೇದ ಮತ್ತು ಕೇರಳೀಯ ಪಂಚಕರ್ಮದ ಬಗ್ಗೆ. ಒಂದಷ್ಟು ಚಿಕಿತ್ಸೆಗಳ ವಿವರಗಳೂ ಇರ್ತಾವೆ. ನಮ್ಮ ಹಾಸ್ಪಿಟಲ್ “ಸುಕೃತಂ ಆಯುರ್ವೇದ”ದಲ್ಲೇ ಮಾಡಿದ ಶೂಟಿಂಗ್. ನೀವೆಲ್ಲ ನೋಡಿ ಚೆನ್ನಾಗನಿಸಿದ್ದನ್ನು ಹೇಳಬೇಕು. ಚನ್ನಾಗಿಲ್ಲ ಅನಿಸಿದ್ದನ್ನು ಕಡ್ಡಾಯವಾಗಿ ಹೇಳಬೇಕು. ಅದರಿಂದ ನಮ್ಮ ಬೆಳವಣಿಗೆ ಸುಲಭ.

ನಾಳೆ (ಮಂಗಳವಾರ) ಟಿವಿ 9 ನಲ್ಲಿ ಮಧ್ಯಾಹ್ಣ 1:30ಕ್ಕೆ “ಲೇಡೀಸ್ ಕ್ಲಬ್”ನಲ್ಲಿ ಕಾರ್ಯಕ್ರಮ ಪ್ರಸಾರ ಮಾಡ್ತಾರೆ. ಸಂಜೆ 5:30ಕ್ಕೆ ಮರು ಪ್ರಸಾರ. ನೋಡಿ, ನಮ್ಮ ಖುಷಿಗೆ ಮೆರುಗು ನೀಡಿ.

ಹೆಚ್ಚೇನಾದ್ರೂ ವಿವರಗಳು ಬೇಕಾದ್ರೆ : http://www.sukruthamayurveda.com

ಎಂದೂ ಬಾರದ ಕಂದನಿಗೆ

Withered Flower
ಮಗೂ,
ಇವತ್ತಿನಷ್ಟೇ ಅವತ್ತೂ ನೀನು ಬೇಕಾಗಿದ್ದೆ ನಮಗೆ. ಆದರೆ ಅವತ್ತು ಇವತ್ತಿನಷ್ಟು ಧೈರ್ಯವಿರಲಿಲ್ಲ. ನನ್ನೆಲ್ಲ ಕನಸುಗಳ ತುಂಬ ನೀನಿದ್ದೆ ಮತ್ತು ಬಹುಪಾಲು ನೀನು ಮಾತ್ರ ಇದ್ದೆ. ಅವು ಬರೀ ಕನಸು ಮಾತ್ರ ಕಾಣಬಹುದಾಗಿದ್ದ ದಿನಗಳು ಕಂದಾ. ನೀನು ಮೊಳಕೆಯೊಡೆದಾಗಷ್ಟೇ ನಾವು ವಾಸ್ತವದ ಕಡೆ ತಿರುಗಿದ್ದು; ಅಧೀರರಾಗಿದ್ದು. ನಿಜ ಹೇಳಲಾ ನಿನ್ನ ಇರುವಿಕೆಗಿಂತ ನೀ ಭೂಮಿಗೆ ಬಂದ ನಂತರದ ದಿನಗಳಿಗೆ ಹೆಚ್ಚು ಹೆದರಿದ್ದು. ಕಷ್ಟಗಳ ಕಣಿವೆಯಲ್ಲಿ ನಡೆಯುತ್ತಿದ್ದ ದಿನಗಳವು. ನಮಗೇ ಅದನ್ನೆದುರಿಸುವುದಾಗದೆ ತತ್ತರಿಸಿದಾಗ ನೀ ಬಂದು ನೀನೂ ಆ ನೊವಿನಲ್ಲಿ ಬೇಯುವುದು ಬೇಡವಾಗಿತ್ತು ಮಗೂ. ನಮ್ಮ ಬಾಲ್ಯದ ನಿರಾಸೆ, ಅವಮಾನಗಳು ನಿನ್ನ ಬಾಲ್ಯದ ವರೆಗೂ ಮುಂದುವರಿಯುವುದು ಇಷ್ಟವಿರಲಿಲ್ಲ. ಸುತ್ತೆಲ್ಲಿ ಕಣ್ಣು ಹಾಯಿಸಿದರೂ ಕಾಣುತ್ತಿದ್ದುದು ನಾವೇರಲಾರದ ಶಿಖರಗಳು…ಕಣ್ಣು ಮುಚ್ಚಿದ್ದರೂ ಏನೋ ಭೀತಿ, ಆತಂಕ.
ಆಗಿನ್ನೂ ಮೊಳಕೆಯೊಡೆದಿದ್ದರೂ ನೀನು ನಿನ್ನ ಇರುವುಕೆಯನ್ನು ನಾನಾ ರೀತಿಯಲ್ಲಿ ತೋರಿಸಿದ್ದೆ. ಆ ದಿನಗಳಲ್ಲಿ ನನ್ನ ಭಾವಲೋಕದ ಬಾಗಿಲಲ್ಲಿ ಸಪ್ತವರ್ಣದ ಕಾಮನಬಿಲ್ಲು. ಮುಸ್ಸಂಜೆ ಸುಮ್ಮನೇ ಮೆಟ್ಟಿಲ ಬಳಿ ಬಂದು ಕೂತರೆ ಛಕ್ಕನೆ ನೀ ಬಂದು “ಅಮ್ಮಾ” ಅಂದಂತೆ ಭಾಸ.. ಎದ್ದು ನೋಡಿದರೆ ನೀನಿಲ್ಲ ಆದರೂ ಪುಳಕ. ಅದುವರೆಗೂ ಸಾಮಾನ್ಯವೆನಿಸುತ್ತಿದ್ದ ಎಲ್ಲವೂ ನೀನಿದ್ದಾಗ ಬೆರಗು ಮೂಡಿಸುತ್ತಿತ್ತು. ಮಳೆಬಿಲ್ಲು, ನಕ್ಷತ್ರ, ನರ್ಸರಿ ಮಕ್ಕಳ ಹಾಡು, ಆಗಸದಲ್ಲಿ ಮೋಡ ಬರೆದ ಚಿತ್ರ, ಮಳೆ ಹನಿಯ ತುಂತುರು, ಮನೆಯೆದುರಿನ ಪಾರ್ಕಿಗೆ ವಾಕಿಂಗ್ ಬರುವ ಅಜ್ಜ ಅಜ್ಜಿ ಎಲ್ಲದರಲ್ಲೂ ಹೊಸತನ ದಕ್ಕಿದ್ದು ನಿನ್ನಿಂದ ಕಂದಾ. ಇಂಥದ್ದೊಂದು ಅದ್ಭುತ ಮಾಯಾಲೋಕದ ಸೃಷ್ಟಿಗೆ ಕಾರಣವಾದ ನಿನ್ನನ್ನೇ ನಾವು ಬೇಡವೆಂದೆವು. ಕ್ಷಮಿಸುವೆಯಾ ?
ತುಂಬಾ ಕನಸು ಕಂಡಿದ್ದೆ ನಾನು. ನಿನ್ನ ಪುಟಾಣಿ ಗುಲಾಬಿ ಪಾದಗಳಿಗೆ ಮುತ್ತಿಡುತ್ತಲೇ ಇರಬೇಕು, ಚಿಗುರು ಬೆರಳು ಹಿಡಿದು ತುಂಗೆಯ ತೀರದುದ್ದಕ್ಕೂ ಅಲೆದಾಡಬೇಕು, ನಾವಿಬ್ಬರೂ ಜತೆಯಾಗಿ ನೀರಿನಲ್ಲಿ ಕಾಲು ಇಳಿಬಿಟ್ಟು ಮೀನುಗಳ ಆಟ ನೊಡುತ್ತಾ ಮೈ ಮರೆಯಬೇಕು, ಮರಕೋತಿ ಆಟ ಆಡಬೇಕು, ಕನ್ನಡಿಯಷ್ಟು ನುಣುಪಾದ ನಿನ್ನ ಕೆನ್ನೆಯಲ್ಲಿ ನಗು ತುಂಬಿದಾಗ ನಾನದರ ಚಿತ್ರ ಬರೆಯಬೇಕು, ಪ್ರಕೃತಿಯ ಎಲ್ಲಾ ವಿಸ್ಮಯಗಳಿಗೆ ತೆರೆದುಕೊಳ್ಳುವಂತೆ ನೀನು ರೂಪುಗೊಳ್ಳಬೇಕು.. ಮುಂದೊಂದು ದಿನ ಜಗತ್ತೇ ಮೆಚ್ಚುವ ವಿಜ್ಞಾನಿ ನೀನಾಗಬೇಕು.. “ಹಿಂದೂಸ್ಥಾನವು ಎಂದೂ ಮರೆಯದ….” ಮತ್ತು ಇವೆಲ್ಲಕ್ಕೂ ಮೊದಲು ನಿಂಗೆ ನಿನ್ನಪ್ಪನಷ್ಟೇ ಒಳ್ಳೆಯ ಮನಸಿರಬೇಕು… ಪುಟ್ಟೂ, ನೀನು ಹೆಣ್ಣೇ ಆಗಿರುತ್ತೀ ಎಂಬ ದೊಡ್ಡ ನಂಬಿಕೆಯಿಂದ ನಿಂಗೆ “ಪ್ರಣತಿ” ಅಂತ ಹೆಸರಿಟ್ಟಿದ್ದೆ; ಒಂದು ವೇಳೆ ಅಲ್ಲದೇ ಹೋದರೆ “ಪ್ರಣೀತ್”.. ಹೀಗೇ ಕೋಟಿ ಕನಸುಗಳಿದ್ದವು. ಆದರೆ ವಿಧಿ ಅವನ್ನೆಲ್ಲ ಅಳಿಸಿ ಹಾಕಿತ್ತು. ಈಗ ಅನ್ನಿಸುತ್ತಿದೆ ಪರಿಸ್ಥಿತಿಯಲ್ಲ ಕಂದಾ, ಅದನ್ನೆದುರಿಸಲಾರದ ನಮ್ಮ ಹೇಡಿತನ ನಿನ್ನನ್ನು ಜಗತ್ತಿಗೆ ಬರಲಾರದಂತೆ ಮಾಡಿದ್ದು.
ಯಾವ ಭರವಸೆಯೂ ಇಲ್ಲದ ಆ ದಿನಗಳಲ್ಲಿ ನಮ್ಮನ್ನು ಜೀವಂತವಾಗಿರಿಸಿದ್ದು ಪ್ರೀತಿ..ಪ್ರೀತಿ ಮತ್ತು ಪ್ರೀತಿ. ಅದೊಂದು ನಮ್ಮ ದಾಂಪತ್ಯದಲ್ಲಿ ಹೊಳೆಯಾಗಿ ಹರಿಯುತ್ತಿತ್ತು. ಅಂಥದ್ದೇ ಯಾವುದೋ ಒಂದು ಘಳಿಗೆಯಲ್ಲಿ ಬಹುಶಃ ನೀ ಕುಡಿಯೊಡೆದಿದ್ದೆ. ನಾವು ಅಷ್ಟೇ ಪ್ರೀತಿಯಿಂದ ರಾಜಕುಮಾರಿಯಂತೆ ಬರಮಾಡಿಕೊಳ್ಳಬಹುದೆಂಬ ಆಸೆಯಿಂದ ನೀನೂ ಬಂದಿರಬೇಕು ಅಲ್ವಾ ? ಅಂಥಾ ನಿಂಗೆ ತುಂಬಾ ನೋವು ಮಾಡಿದೆ ನಾನು ಅಲ್ವಾ ? ಸಾರಿ ಕಂದಾ..
ಅವತ್ತು ನೀ ಬೇಡವೆಂದು ನಿರ್ಧಾರ ಮಾಡಿದ ದಿನವೂ ಕೂಡ ಎಂದಿನಂತಿರಲು ಪ್ರಯತ್ನ ಮಾಡಿದೆ. ಆಫೀಸಿಗೂ ಹೋಗಿ ಬಂದೆ. ಆದ್ರೆ ರಾತ್ರಿ ರಾಣಿ ತನ್ನ ಕತ್ತಲ ಚಾದರ ಹಾಸುತ್ತಿದ್ದಂತೆ ಯಾಕೋ ದುಖಃ ತಡೆಯಲಾಗಲಿಲ್ಲ. ನಾನೊಂದು ಕಡೆ, ಅವನೊಂದು ಕಡೆ ಕೂತು ಕಂಬನಿಯ ಕುಯಿಲು… ನಂತರದ ದಿನಗಳಲ್ಲಿ ಅರ್ಥವಾಯಿತು ಕಂದಾ, ಕಷ್ಟಗಳಿಗೆ ಹೆದರಿ ನಿನ್ನನ್ನು ಬೇಡವೆಂದಿದ್ದೇ ಬದುಕಿನ ಅತಿ ದೊಡ್ಡ ತಪ್ಪಾಯಿತು. ನಿನ್ನನ್ನು ಕಳಕೊಂಡ ಯಾತನೆಯಿಂದ ಹೊರಬರಲಾರದೇ ಹೋದೆ. ತಪ್ಪಿತಸ್ಥ ಭಾವ ನನ್ನ ದಿನವೂ ಕೊಲ್ಲುತ್ತಿತ್ತು. ಬದುಕಲ್ಲಿ ಮೊತ್ತ ಮೊದಲ ಬಾರಿಗೆ ಸೋಲಿನ ಅನುಭವವಾಯ್ತು. ಸುತ್ತಲಿನವರ ಮಾತು ಒತ್ತಟ್ಟಿಗಿರಲಿ, ನನ್ನೊಳಗಿನ ಪ್ರಶ್ನೆಗಳಿಗೇ ನನ್ನಲ್ಲಿ ಉತ್ತರವಿರಲಿಲ್ಲ. ಪೂರ್ತಿಯಾಗಿ ಸೋತಿದ್ದೆ ನಾನು. ನಂತರ ನನಗೆ ನಿನ್ನ ಹೊರತಾಗಿ ಬೇರೇನೂ ಬೇಡವೆನಿಸಿತ್ತು. ಕುಡಿಯಲು ಕಣ್ಣೀರು, ಉಣ್ಣಲು ಬೇಸರ, ಮಲಗಲು ಸಂಕಟದ ಹಾಸಿಗೆ, ಸೋಲಿನ ಹೊದಿಕೆ, ನಿರಾಸೆಯ ದಾರಿ…. ನನ್ನನ್ನೇ ನಾನು ಕ್ಷಮಿಸಲಾಗಿಲ್ಲ ಕಣೋ… ಬೆಳದಿಂಗಳಾಗಿ ಬರಬಹುದಾಗಿದ್ದ ಜೀವ ನೀನು; ಆದರೆ ನನಗೇ ಅದೃಷ್ಟವಿರಲಿಲ್ಲ. ನಿನ್ನಂಥ ಬೆಳಕಿನ ಕುಡಿಯನ್ನು ಮನೆಯೊಳಗಿರಿಸಿಕೊಳ್ಳಲಾರದೇ ಹೋದೆ. ಕತ್ತಲಲ್ಲಿ ಹೊಳೆದ ಬೆಳ್ಳಿ ಮಿಂಚನ್ನು ಗುರುತಿಸಲಾರದ ಮೂರ್ಖಳಾಗಿಬಿಟ್ಟೆ. ನಾ ಅವತ್ತು ಕಳಕೊಂಡಿದ್ದು ಕೇವಲ ನಿನ್ನನ್ನಲ್ಲ; ಬಾಳಿನುದ್ದಕ್ಕೂ ಜತೆಗಿರಬಹುದಾಗಿದ್ದ ಸಂಭ್ರಮವನ್ನು ಕೂಡ. ಅವತ್ತು ಬೇಡವಾಗಿದ್ದ ನೀನು ಇವತ್ತು ಮನೆಯ ಮಂದಾರವೆನಿಸುತ್ತಿದ್ದೀ. ಇದಲ್ಲವೇ ದುರಂತ ಅಥವಾ ಸ್ವಯಂಕೃತಾಪರಾಧ ?
ಕಂದಾ, ಈ ಮನೆಯಲ್ಲೀಗ ಕಷ್ಟಗಳಿಲ್ಲ. ನಾವಿಬ್ಬರಿದ್ದರೂ ಇದ್ದರೂ ಯಾರಿಲ್ಲ ಅನಿಸಹತ್ತಿದೆ. ನೀ ಬಿಟ್ಟು ಹೋದ ನೆನಪುಗಳು ಪದೇ ಪದೇ ಕೈ ಹಿಡಿದು ಜಗ್ಗುತ್ತಿವೆ. ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು; ಕನಸಿಲ್ಲದ ದಾರಿಯಲ್ಲಿ ನಡೆಯಲಾಗದು ಕಂದಾ, ಅರ್ಥವಾಗಿದೆ. ಒಡ್ಡಿಲ್ಲದ ಅಣೆಕಟ್ಟಿನಂತೆ ಯಾತನೆಯ ಧಾರೆ. ಅವ್ಯಕ್ತ ವೇದನೆಯೊಂದು ಹಿಂಡುತ್ತಿದೆ. ಎಲ್ಲಿದ್ದೀ ಹುಡುಗಾ ಅಂದರೆ “ಯಾಕೆ” ಎಂಬೊಂದು ಮೆಸೇಜು ಕಳುಹಿಸಿದ ನೋಡು ಆ ಕ್ಷಣ ನೀನು ನೆನಪಾದೆ. ಇಷ್ಟು ದಿನ ಸುಡುತ್ತಿದ್ದ ಎಲ್ಲ ಬೆಂಕಿಯನ್ನು ನಿನ್ನೆದುರು ಹೊರ ಚೆಲ್ಲಿರುವೆ. ಬಹುಶಃ ಈ ನೋವುಗಳೆಲ್ಲ ನಿನ್ನ ಕಂಬನಿಯ ಶಾಪ. ಬೇಡ ಕಂದಾ ಭರಿಸಲಾರೆ ಈ ಯಾತನೆ. ಬೇಸರದ ಬಿಸಿ ಬದುಕು ಸಾಕಾಗಿದೆ ನನಗೆ; ಕ್ಷಮಿಸಿದ್ದೇನೆ ಅಂತೊಮ್ಮೆ ಅಲ್ಲಿಂದಲೇ ಅಂದು ಬಿಡು. ಮನದಲ್ಲಿ ಮನೆಯಲ್ಲಿ ತಂಗಾಳಿ ಹರಡಲಿ. ಇನ್ನು ನನ್ನ ಕಾಡಬೇಡ ಪ್ಲೀಸ್…
“ದೀಪವು ನಿನ್ನದೇ ಗಾಳಿಯು ನಿನ್ನದೇ…
ಆರದಿರಲಿ ಬೆಳಕು… ಮುಳುಗದಿರಲಿ ಬದುಕು…”
(ಬರಹ ಕಾಲ್ಪನಿಕ, ಚಿತ್ರ ಮಾತ್ರ ನಿಜಾ ನಿಜ…)

%d bloggers like this: