ತಪ್ಪೊಪ್ಪಿಗೆಯೊಂದಿದೆ…

ತಲೆಯೆತ್ತಿ ನೋಡಿದರೆ ಕಪ್ಪು ಆಕಾಶ… ಮಳೆಯನ್ನೂ ಸುರಿಸದೆ ಸುಮ್ಮನಾದ ಮೋಡ… ಮನಸಿನಲ್ಲಿ ಹೆಪ್ಪುಗಟ್ಟಿ ನಿಂತ ದುಖಃದಂತೆ. “ಅಡಿಗೆ ಚುಚ್ಚಿದ ಮುಳ್ಳು ಒಳಗಡೆಯೆ ಮುರಿದಂತೆ…” ನಿಸಾರರ ಸಾಲುಗಳು ನೆಪಾದವು. ಮೊನ್ನೆ ಗೆಳೆಯ ಹೇಳುತ್ತಿದ್ದ; ನಿನ್ನೊಳಗೇನೋ ಇದೆ ಕಣೇ ಅದನ್ನು ಹೊರ ಹಾಕದ ಹೊರತು ನೀನು ನೀನಾಗುವುದಿಲ್ಲ ಹುಡುಗೀ. ಹೇಳು ಅದೇನು ನಿನ್ನ ಕಾಡುವ ನೋವು ಅಂತ… ಗೊತ್ತಿಲ್ಲ, ಒಮ್ಮೊಮ್ಮೆ ಹೀಗಾಗುತ್ತೆ. ಕಾರಣವೇ ಇಲ್ಲದೆ ಮನ ಮೌನ; ಹೊರಗೆ ಬರಲೊಲ್ಲೆ ಎಂಬಂತೆ ಘನೀಭವಿಸಿ ಒಳಗೆ ಕುಳಿತ ಕಂಬನಿ… ಒಮ್ಮೊಮ್ಮೆ ಚೀರಿ ಹೇಳಬೇಕೆನಿಸುತ್ತದೆ. ಆದರೆ ಬೆಳಕಿನಲ್ಲೇ ಬೆಳೆದ ಸಿದ್ದಾರ್ಥರಿಗದು ಅರ್ಥವಾಗುವುದಿಲ್ಲ. ಕೇಳಬೇಕೆನಿಸುವ ಮನಸೂ ಇಲ್ಲ. ಹಾಗಂತ ಮುನಿಸೇನಿಲ್ಲ. ಸಾಂತ್ವನ ಬೇಕಿನಿಸಿದ ಕ್ಷಣಗಳಲ್ಲಿ ಅನೇಕ ಬಾರಿ ಸಿಕ್ಕಿದ್ದು ಸರಿ ತಪ್ಪುಗಳ ವಿಮರ್ಶೆ. ದಿನವೂ ಬದಲಾಗುತ್ತಿರುವ ಮನುಷ್ಯ ಜಾತಿಯ ಜತೆ ಸಂಬಂಧ ಬೆಸೆದುಕೊಂಡ ನಂತರ ಅರ್ಥ ಮಾಡಿಕೊಳ್ಳುವಿಕೆ ಎಂಬುದು ನನಗರ್ಥವಾಗದ ಮತ್ತು ಬೇಡವಾದ ವಿಚಾರ; ನನ್ನದೇನಿದ್ದರೂ ಒಪ್ಪಿ ಅಪ್ಪುವ ಪ್ರಕ್ರಿಯೆಯಷ್ಟೇ. ಯಾವುದೇ ಉದ್ದೇಶವಿಲ್ಲದೆ ನನ್ನವರೆಂಬ ಸಲಿಗೆಯಿಂದ ಫಿಲ್ಟರ್ ಹಾಕದೆ ಸಹಜವಾಗಿ ಆಡಿದ ಯಾವುದೋ ಮಾತಿಗೆ ನೂರು ವ್ಯಾಖ್ಯಾನ ಟೀಕೆ, ಟಿಪ್ಪಣಿಗಳು, ಮುನಿಸು, ಹಠಗಳ ಪ್ರತಿಕ್ರಿಯೆ. ಎಲ್ಲ ಅವರವರ ಮೂಗಿನ ನೇರಕ್ಕೆ. ಯಾಕೆ ಹಾಗಂದೆ ಏನಾಯ್ತು ನಿನಗೆ ಕೇಳುವ ವ್ಯವಧಾನಕ್ಕಿಂತ ಪಾಠ ಕಲಿಸುವ ತರಾತುರಿ ಹೆಚ್ಚಿನದು. ಆ ಸಂದರ್ಭದಲ್ಲಿ ಹಾಗಲ್ಲ ಹೀಗೆ ಅಂತ ನನ್ನನ್ನೇ ವಿವರಿಸಿಕೊಳ್ಳುವುದು ಸಾಧ್ಯವಾಗದ ಮತ್ತು ಬೇಡವಾದ ವಿಚಾರ. ಬರೆಯ ಹೊರಡುತ್ತೇನೆ ಎಲ್ಲವನ್ನು ಪೂರ್ತಿಗೊಳಿಸಲಾಗದು. ಹಾಗೇ ಅಪೂರ್ಣವಾಗಿ ಉಳಿದವುಗಳು ಹಲವಾರು. ಮತ್ತೆ ಮನ ಮೊಗ್ಗು. ಎಲ್ಲಿ ಹೋದಳು ಶಮಾ ಅಂತ ತಮ್ಮ ಮೆಸೇಜು ಕಳಿಸಿದ್ದಾನೆ… ತಿಂಗಳಿಗೂ ಹೆಚ್ಚಾಯಿತು ಬ್ಲಾಗಿನಂಗಳಕ್ಕೆ ನೀವು ಬರದೆ ಅಂದಿದೆ ಮಾಲತಿಯ ಎಸ್.ಎಂ.ಎಸ್. ನಾ ಹೀಗಾಡ್ತೀನಿ ಅನ್ನೋ ಒಂದೇ ಕಾರಣಕ್ಕೆ ಜೀವದ ಗೆಳೆಯ ಬ್ಲಾಗಿಗೆ ಬರೋದೇ ಬಿಟ್ಟಿದ್ದಾನೆ. ಇನ್ ಬಾಕ್ಸ್ ತೆರೆದು ನೋಡಿದರೆ ಅಲ್ಲೂ ಇದೇ ಪ್ರಶ್ನೆ. ಕೆಲವರಿಗೆ ಬೇಸರ; ಕೆಲವರಿಗೆ ಏನಾಯಿತೆಂಬ ಕಾತರ; ಕೆಲವರಿಗೆ ಕೋಪ. ನನಗರ್ಥವಾಗುತ್ತೆ ಎಲ್ಲವೂ; ಎಲ್ಲರ ಕಾಳಜಿಯೂ… ಆದರೆ ಉತ್ತರಿಸಲಾಗುತ್ತಿಲ್ಲ. ಏನೂ ಬೇಡದ ಭಾವ; ಊಟ ತಿಂಡಿಯೂ, ನಾನು ತುಂಬ ಇಷ್ಟಪಡುವ ರುಮಾಲಿ ರೋಟಿಯೂ ಸೇರುತ್ತಿಲ್ಲ. ಕಾರಣ ಕೇಳಿದರೆ ಗೊತ್ತಿಲ್ಲ ಒಂದೇ ಶಬ್ದ. ಒಟ್ಟಿನಲ್ಲಿ ಮೋಡ ಕವಿದ ವಾತಾವರಣ… ಒಮ್ಮೊಮ್ಮೆ ಹೀಗಾಗುವುದುಂಟು ಕ್ರಮೇಣ ಸರಿ ಹೋಗುತ್ತದೆಯೆಂದ ಗೆಳೆಯನಂಥ ತಮ್ಮ. ನಿಜವಿರಬಹುದು ಆತ ಹೇಳಿದ್ದು… ಅವನಿಗೆ ಇಂಥ ಅನುಭವಗಳು ಹಲವಾರು… (ಲೆಕ್ಕವಿಲ್ಲದಷ್ಟು ಬಾರಿ ನಾನೂ ಆತನನ್ನು ನೋಯಿಸಿ ಬೆನ್ನು ಹಾಕಿ ನಡೆದದ್ದುಂಟಲ್ಲ)

ಈ ಮೌನಕ್ಕೆ ಮುನಿಯಬೇಡಿ; ಕ್ಷಮೆಯಿರಲಿ ಸ್ನೇಹದಲಿ. ನೋಯಿಸುವ ಉದ್ದೇಶ ನಂಗಿಲ್ಲ. Am Sorry… ಗೆಳೆಯರು ನೀವು. ನೀವೆಲ್ಲರೂ ಬೇಕು ನಂಗೆ. ಎಂದಿನಂತೆ ಮತ್ತೆ ಬನ್ನಿ….
%%%%%%%%%%%%%%%%

ಚೇತನಾ ಬರೆಸಿದ ಪತ್ರ

ಒಂದಾನೊಂದು ಕಾಲದಲ್ಲಿ ಕಳೆದು ಹೋದ ಗುಬ್ಬಚ್ಚಿಯನ್ನು ನೆನೆಪಿಸಿಕೊಂಡು ಅದಕ್ಕೊಂದು ಪತ್ರ ಬರೆದಿದ್ದೆ.. ಅದನ್ನು ಜ್ಞಾಪಿಸಿಕೊಂಡು ಚೇತನಾ ತೀರ್ಥಹಳ್ಳಿ ನಂಗೆ ಮೇಲ್ ಮಾಡಿ “GUBBACHCHI’ Shamaa neewe anta tiLidu khushi hAgU bEsara.. Khushiya kAraNa nimage gottAguvanthadE biDi. bEsara yAkendare, aShTella chenda bareyaballa neewu EnU bareyade summane uLidubiTTirOdakke… gubbachchi Odida nenapu innU hachcha hasurAgide gottA? Aga nAnu GARVA dalli sakriyaLAgidde. Sigi, mAtADuva” ಇಷ್ಟು ಬರೆದು ತಿವಿದರು. ಅದಕ್ಕಾಗಿ ಅವರಿಗೊಂದು ಉತ್ತರ…

ಗೆಳತೀ,

ನಾನು ಗುಬ್ಬಚ್ಚಿಗೆ ಬರೆದ ಹಳೆಯ ಪತ್ರ ನೆನಪಿಸಿಕೊಂಡು ನೀ ಬರೆದ ಸಾಲುಗಳು ಯಾಕೋ ಮನದಿಂದ ಮರೆಯಾಗುತ್ತಿಲ್ಲ. ಇರೋದು ಎರಡೇ ಸಾಲುಗಳಾದರೂ ಪುಟಗಟ್ಟಲೇ ಬೇಸರವನ್ನು ಅದರಲ್ಲೇ ತುಂಬಿದ್ದೀಯೆ. ನಾನೀಗ ಬರೆಯುತ್ತಿಲ್ಲ ಅನ್ನೋದಕ್ಕಿಂತಲೂ ನಂಗೀಗ ಬರೆಯಲಾಗುತ್ತಿಲ್ಲ ಎಂಬುದು ಸತ್ಯ. ಹಳೆಯ “ಶಮ” ಕಳೆದು ಹೋಗಿದ್ದಾಳಾ ? ಬಹುಶಃ ಹೌದು..

ಡಿಗ್ರಿ ಪರೀಕ್ಷೆ ಮುಗಿದು ಎರಡೇ ದಿನಕ್ಕೆ ಕೆಲಸ ಹುಡುಕಿ ಬೆಂಗಳೂರಿಗೆ ಬಂದಿದ್ದೆ. ಬಂದು ಒಂದು ವಾರಕ್ಕೆ ಕೆಲಸ ಕೈ ಹಿಡಿಯಿತು. ಜಗತ್ತನ್ನೇ ಗೆದ್ದ ಸಂಭ್ರಮ. ಬಡತನ ತಂದುಕೊಟ್ಟ ಅವಮಾನದ ಗುರುತುಗಳನ್ನೆಲ್ಲ ಸಾಧನೆಯ ಬ್ರಶ್ನಿಂದ ಅಳಿಸುವ ಕಾತರ; ದುಡ್ಡಿಲ್ಲ ಎಂಬ ಒಂದೇ ಕಾರಣಕ್ಕೆ ನಮ್ಮನ್ನು ತುಳಿದವರೆದುರು ತಲೆಯೆತ್ತಿ ನಿಲ್ಲುವ ಹಂಬಲ; ಅವರನ್ನು ತುಳಿಯುವ ಬದಲು ಅವರನ್ನು ಮೀರಿ ಬೆಳೆದು ಸಡ್ಡು ಹೊಡೆಯುವುದೇ ನಿಜವಾದ ರಿವೆಂಜ್ ಅಂತ ಅಮ್ಮ ಹೇಳಿದ್ದು ಕಿವಿಯಲ್ಲಿ ಗುಂಯ್ ಗುಡುತ್ತಿತ್ತಲ್ಲ, ಹಗಲೂ ರಾತ್ರಿ ದುಡಿದೆ. ನನ್ನ ಓರಗೆಯವರೆಲ್ಲ ಪಿ.ಜಿ ಸೀಟ್ ಸಿಗುತ್ತಾ ಇಲ್ಲವಾ ? ಸಿಕ್ಕಿದರೆ ಎಷ್ಟು ದೂರ ಎಂಬೆಲ್ಲಾ ಲೆಕ್ಕಾಚಾರದಲ್ಲಿದ್ದರೆ ನಾನು ಮೊದಲ ತಿಂಗಳ ಸಂಬಳ ಎಣಿಸುತತಿದ್ದೆ. ಶ್ರಮದ ದುಡಿತಕ್ಕೆ ಒಳ್ಳೆಯ ಪ್ರತಿಫಲ ದೊರಕಿತ್ತು. ಬಯಸಿದ್ದ ಸ್ಥಾನ ಮಾನವೆಲ್ಲ ನನ್ನ ಬಳಿ ಬಂತು. ಡಾಕ್ಟರೇಟ್ ಪಡೆದವರೆಲ್ಲ ನನ್ನ ಕೈ ಕೆಳಗೆ ಕೆಲಸ ಮಾಡುವಾಗ ನಾ ಪಿ.ಜಿ ಮಾಡಿಲ್ಲವೆಂಬ ನೋವು ಪೂತರ್ಿ ಮರೆಯಾಗಿತ್ತು. ಬರೀ ಬಿ.ಎ ಎಂಬ ಹೀಯಾಳಿಕೆಗೆ ಪಡೆದು ಬಂದಿದ್ದ ನಾನು, ಕೇವಲ ನಾಲ್ಕು ರೂಪಾಯಿ ಕೊಟ್ಟು ಪಾನಿ ಪೂರಿ ತಿನ್ನಲಾಗದ ಸ್ಥಿತಿಯಲ್ಲಿ ಪದವಿ ಮುಗಿಸಿದ್ದ ನಾನು ನಾನ್ನೂರು ರೂಪಾಯಿ ಕೊಟ್ಟು ಲೀಲಾ ಪ್ಯಾಲೇಸ್ನಲ್ಲಿ ಕಾಫಿ ಕುಡಿಯಬಲ್ಲವಳಾಗಿದ್ದೆೆ. ಅದೂ ಸಾಫ್ಟವೇರ್ ಸ್ವರ್ಗ ಬೆಂಗಳೂರಿನಲ್ಲಿ !! ನಿಂಗೊತ್ತಾ ದಶಕಗಳ ಅಪಮಾನಗಳ ಕಿಚ್ಚು ಆರಲು ಇವೆಲ್ಲ ಸಾಧಿಸಲೇ ಬೇಕಿತ್ತು. ನನ್ನ ಕಾಲೆಳೆದು ಕೈ ತಟ್ಟಿದವರ ಕೈಗೆ ಇನ್ನೆಂದೂ ನನ್ನ ಕಾಲು ಸಿಗಬಾರದು ಅಷ್ಟೆತ್ತರಕ್ಕೆ ನಾನು ಏರಿ ನಿಲ್ಲಬೇಕೆಂಬ ಛಲ. ಕೈಗೊಂದು ಕಾಲಿಗೊಂದು ಎಂಬಂತೆ ಜನ. ಛೇಂಬರಲ್ಲಿ ಕೂತು ಬೆಲ್ ಮಾಡಿದ್ರೆ ಇಬ್ಬಿಬ್ಬರು ಬಂದು ನಿಲ್ಲೋರು.. ಎಷ್ಟು ಎಂಜಾಯ್ ಮಾಡ್ತಿದ್ದೆ ಗೊತ್ತಾ ಅದನ್ನೆಲ್ಲ. ಬಹುಶಃ ನನ್ನ ಹಾಗಿರುವ ಎಲ್ಲರಿಗೂ ಹೀಗೇ ಆಗುತ್ತೇನೋ.. ಹೆಸರಿನ ಹಂಬಲದ ಈ ದಿನಗಳಲ್ಲಿ ಉಸಿರಂತಿದ್ದ ಎಲ್ಲ ಹಳೆಯ ಅಭ್ಯಾಸಗಳು ನನ್ನ ಬಿಟ್ಟು ಹೋದವು. ಪ್ರತಿ ದಿನ ಒಂದಷ್ಟು ಓದಿಯೇ ಮಲಗುತ್ತಿದ್ದ ನಾನು ದುಡಿಯುವ ಹಠಕ್ಕೆ ಬಿದ್ದು ರಾತ್ರಿ ಮನೆಗೆ ಬಂದಾಕ್ಷಣ ಲಾಪ್ಟಾಪಿನೆದುರು ಸ್ಥಾಪಿತಳಾಗುತ್ತಿದ್ದೆ. ಇನ್ನೇನು ಅದಕ್ಕೆ ಹಿಂದಿರುಗಬೇಕು ಎಂಬಷ್ಟರಲ್ಲಿ ಆಲ್ಟೋ ಬಂತು.. ಮತ್ತೆ ಚವರ್ಿತ ಚರ್ವಣ.. ಮೊದಲಿಗಿಂತ ಹೆಚ್ಚು ಕೆಲಸ ಮಾಡಲಾರಂಭ.. ನನ್ನ ಜತೆ ಕಾರನ್ನೂ ಸಾಕಬೇಕಿತ್ತಲ್ಲ.. ಎಲ್ಲಕ್ಕೂ ಹೆಚ್ಚಾಗಿ ನಂಗಿಲ್ಲಿ ಕಂಪನಿಯೇ ಇರಲಿಲ್ಲ. ಹಳೆಯ ಸ್ನೇಹವೆಲ್ಲ ಊರಿನಲ್ಲಿತ್ತು. ‘ಬೆಂಗಳೂರು ಮನೋಭಾವ’ದವರು ನನಗೆ ಒಗ್ಗುತ್ತಿರಲಿಲ್ಲ (ಬೆಂಗಳೂರು ಮನೋಭಾವಕ್ಕೆ ವಿವರಣೆ ಕೇಳಬೇಡ; ವಿವರಿಸಲಾರೆ) ಏಕಾಂಗಿಯಾಗಿ ಎಲ್ಲೂ ಹೋಗಲಾರದ ಕಾರಣಕ್ಕೆ ಆಫೀಸಿಗೇ ಕಚ್ಚಿಕೊಂಡಿದ್ದೆನಾ ? ಇದ್ದರೂ ಇರಬಹುದು.

ಸಂತೋಷ, ದುಖಃಗಳ ಹಾಗೆ ಈ ಹುದ್ದೆ, ಅಧಿಕಾರ ಕೊಡೋ ಹಮ್ಮು ಕೂಡ ಒಂದು ದಿನ ಸಾಕಾಗಲೇ ಬೇಕಿತ್ತು; ಸಾಕಾಯ್ತು.. ಆದರೆ ಅಷ್ಟರಲ್ಲಿ ಇನ್ನೇನೋ ಅವಘಡ ಸಂಭವಿಸಿತ್ತು. ನನ್ನ ನೆಚ್ಚಿನ ಕಾಮ್ರೇಡ್ ಆಲ್ಟೋ ಅಪಘಾತದಲ್ಲಿ ಪ್ರಾಣ ತೆತ್ತಿತ್ತು.. ಅದರಿಂದ ಹೊರ ಬರುವಷ್ಟರಲ್ಲಿ ಇನ್ನೊಂದು ಅಪಘಾತವಾಗಿ ಹೋಯ್ತು… ಅದರ ಹೆಸರು ಮದುವೆ… !!! ಬದುಕಿನ ಹೊಸ ಅದ್ಯಾಯ ಓದುವ ಸಂಭ್ರಮ.. ರಾಜಕುಮಾರಿಯಂತೆ ನನ್ನ ನೋಡಿಕೊಳ್ಳುವ ಹುಡುಗ.. ಎಲ್ಲ ಖುಷಿ ಖುಷಿ.. ಆದರೂ ಆಗೀಗ ಕಾಡುವ ಯಾವುದೋ ಅವ್ಯಕ್ತ ಸಂಕಟ.. ಏನೋ ಖಾಲಿತನ. ಅದೇನೆಂದು ಹುಡುಕಿ ಹಿಡಿಯೋದಿಕ್ಕೇ ಸಾಕಷ್ಟು ಸಮಯ ಹಿಡಿಸಿತು. ಆದರೀಗ ನಂಗೆ ಅರ್ಥ ಆಗಿದೆ.. ನಾನೇನೂ ಓದುತ್ತಿಲ್ಲ; ಜಾಸ್ತಿ ಬರೆಯುವುದಿರಲಿ; ಕನಿಷ್ಟ ಡೈರಿ ಕೂಡ ಬರೆಯುತ್ತಿಲ್ಲ. ಅದಕ್ಕೇ ಈ ತಳಮಳ.. ಓದದೇ, ತೋಚಿದ್ದೇನಾದರೂ ಗೀಚದೇ ಇರಲಾರೆ ಅನ್ನೋದು ಸತ್ಯ. ಮತ್ತೆ ಓದಿಗೆ ಪ್ರಾಂಭಿಸಿದ್ದೇನೆ.. ತುಂಬಾ ಸಮಯ ಸಿಗದಿದ್ದರೂ ಸಿಕ್ಕಿದ ಎಲ್ಲಾ ಸಮಯವನ್ನು ಇದಕ್ಕೇ ಮೀಸಲಿಡುತ್ತೇನೆ. ಬರೆಯಲೂ ಪ್ರಾರಂಭ ಮಾಡಿದ್ದೇನೆ.. ಆದರೆ ಎಷ್ಟು ಬರೀತೀನಿ ಅನ್ನೋದು ಮಾತ್ರ ಈ ಪತ್ರದಾಣೆಗೂ ಗೊತ್ತಿಲ್ಲ… ಅಷ್ಟೆ.. ಹೇಳುವುದು ಇನ್ನೇನಿಲ್ಲ. ಇದ್ದರೆ ಇನ್ನೊಂದು ಪತ್ರ ಬರೆಯುವೆ… ಬರ್ಲಾ.
ನಲ್ಮೆಯಿಂದ,
ನಾನು