ತಪ್ಪೊಪ್ಪಿಗೆಯೊಂದಿದೆ…

ತಲೆಯೆತ್ತಿ ನೋಡಿದರೆ ಕಪ್ಪು ಆಕಾಶ… ಮಳೆಯನ್ನೂ ಸುರಿಸದೆ ಸುಮ್ಮನಾದ ಮೋಡ… ಮನಸಿನಲ್ಲಿ ಹೆಪ್ಪುಗಟ್ಟಿ ನಿಂತ ದುಖಃದಂತೆ. “ಅಡಿಗೆ ಚುಚ್ಚಿದ ಮುಳ್ಳು ಒಳಗಡೆಯೆ ಮುರಿದಂತೆ…” ನಿಸಾರರ ಸಾಲುಗಳು ನೆಪಾದವು. ಮೊನ್ನೆ ಗೆಳೆಯ ಹೇಳುತ್ತಿದ್ದ; ನಿನ್ನೊಳಗೇನೋ ಇದೆ ಕಣೇ ಅದನ್ನು ಹೊರ ಹಾಕದ ಹೊರತು ನೀನು ನೀನಾಗುವುದಿಲ್ಲ ಹುಡುಗೀ. ಹೇಳು ಅದೇನು ನಿನ್ನ ಕಾಡುವ ನೋವು ಅಂತ… ಗೊತ್ತಿಲ್ಲ, ಒಮ್ಮೊಮ್ಮೆ ಹೀಗಾಗುತ್ತೆ. ಕಾರಣವೇ ಇಲ್ಲದೆ ಮನ ಮೌನ; ಹೊರಗೆ ಬರಲೊಲ್ಲೆ ಎಂಬಂತೆ ಘನೀಭವಿಸಿ ಒಳಗೆ ಕುಳಿತ ಕಂಬನಿ… ಒಮ್ಮೊಮ್ಮೆ ಚೀರಿ ಹೇಳಬೇಕೆನಿಸುತ್ತದೆ. ಆದರೆ ಬೆಳಕಿನಲ್ಲೇ ಬೆಳೆದ ಸಿದ್ದಾರ್ಥರಿಗದು ಅರ್ಥವಾಗುವುದಿಲ್ಲ. ಕೇಳಬೇಕೆನಿಸುವ ಮನಸೂ ಇಲ್ಲ. ಹಾಗಂತ ಮುನಿಸೇನಿಲ್ಲ. ಸಾಂತ್ವನ ಬೇಕಿನಿಸಿದ ಕ್ಷಣಗಳಲ್ಲಿ ಅನೇಕ ಬಾರಿ ಸಿಕ್ಕಿದ್ದು ಸರಿ ತಪ್ಪುಗಳ ವಿಮರ್ಶೆ. ದಿನವೂ ಬದಲಾಗುತ್ತಿರುವ ಮನುಷ್ಯ ಜಾತಿಯ ಜತೆ ಸಂಬಂಧ ಬೆಸೆದುಕೊಂಡ ನಂತರ ಅರ್ಥ ಮಾಡಿಕೊಳ್ಳುವಿಕೆ ಎಂಬುದು ನನಗರ್ಥವಾಗದ ಮತ್ತು ಬೇಡವಾದ ವಿಚಾರ; ನನ್ನದೇನಿದ್ದರೂ ಒಪ್ಪಿ ಅಪ್ಪುವ ಪ್ರಕ್ರಿಯೆಯಷ್ಟೇ. ಯಾವುದೇ ಉದ್ದೇಶವಿಲ್ಲದೆ ನನ್ನವರೆಂಬ ಸಲಿಗೆಯಿಂದ ಫಿಲ್ಟರ್ ಹಾಕದೆ ಸಹಜವಾಗಿ ಆಡಿದ ಯಾವುದೋ ಮಾತಿಗೆ ನೂರು ವ್ಯಾಖ್ಯಾನ ಟೀಕೆ, ಟಿಪ್ಪಣಿಗಳು, ಮುನಿಸು, ಹಠಗಳ ಪ್ರತಿಕ್ರಿಯೆ. ಎಲ್ಲ ಅವರವರ ಮೂಗಿನ ನೇರಕ್ಕೆ. ಯಾಕೆ ಹಾಗಂದೆ ಏನಾಯ್ತು ನಿನಗೆ ಕೇಳುವ ವ್ಯವಧಾನಕ್ಕಿಂತ ಪಾಠ ಕಲಿಸುವ ತರಾತುರಿ ಹೆಚ್ಚಿನದು. ಆ ಸಂದರ್ಭದಲ್ಲಿ ಹಾಗಲ್ಲ ಹೀಗೆ ಅಂತ ನನ್ನನ್ನೇ ವಿವರಿಸಿಕೊಳ್ಳುವುದು ಸಾಧ್ಯವಾಗದ ಮತ್ತು ಬೇಡವಾದ ವಿಚಾರ. ಬರೆಯ ಹೊರಡುತ್ತೇನೆ ಎಲ್ಲವನ್ನು ಪೂರ್ತಿಗೊಳಿಸಲಾಗದು. ಹಾಗೇ ಅಪೂರ್ಣವಾಗಿ ಉಳಿದವುಗಳು ಹಲವಾರು. ಮತ್ತೆ ಮನ ಮೊಗ್ಗು. ಎಲ್ಲಿ ಹೋದಳು ಶಮಾ ಅಂತ ತಮ್ಮ ಮೆಸೇಜು ಕಳಿಸಿದ್ದಾನೆ… ತಿಂಗಳಿಗೂ ಹೆಚ್ಚಾಯಿತು ಬ್ಲಾಗಿನಂಗಳಕ್ಕೆ ನೀವು ಬರದೆ ಅಂದಿದೆ ಮಾಲತಿಯ ಎಸ್.ಎಂ.ಎಸ್. ನಾ ಹೀಗಾಡ್ತೀನಿ ಅನ್ನೋ ಒಂದೇ ಕಾರಣಕ್ಕೆ ಜೀವದ ಗೆಳೆಯ ಬ್ಲಾಗಿಗೆ ಬರೋದೇ ಬಿಟ್ಟಿದ್ದಾನೆ. ಇನ್ ಬಾಕ್ಸ್ ತೆರೆದು ನೋಡಿದರೆ ಅಲ್ಲೂ ಇದೇ ಪ್ರಶ್ನೆ. ಕೆಲವರಿಗೆ ಬೇಸರ; ಕೆಲವರಿಗೆ ಏನಾಯಿತೆಂಬ ಕಾತರ; ಕೆಲವರಿಗೆ ಕೋಪ. ನನಗರ್ಥವಾಗುತ್ತೆ ಎಲ್ಲವೂ; ಎಲ್ಲರ ಕಾಳಜಿಯೂ… ಆದರೆ ಉತ್ತರಿಸಲಾಗುತ್ತಿಲ್ಲ. ಏನೂ ಬೇಡದ ಭಾವ; ಊಟ ತಿಂಡಿಯೂ, ನಾನು ತುಂಬ ಇಷ್ಟಪಡುವ ರುಮಾಲಿ ರೋಟಿಯೂ ಸೇರುತ್ತಿಲ್ಲ. ಕಾರಣ ಕೇಳಿದರೆ ಗೊತ್ತಿಲ್ಲ ಒಂದೇ ಶಬ್ದ. ಒಟ್ಟಿನಲ್ಲಿ ಮೋಡ ಕವಿದ ವಾತಾವರಣ… ಒಮ್ಮೊಮ್ಮೆ ಹೀಗಾಗುವುದುಂಟು ಕ್ರಮೇಣ ಸರಿ ಹೋಗುತ್ತದೆಯೆಂದ ಗೆಳೆಯನಂಥ ತಮ್ಮ. ನಿಜವಿರಬಹುದು ಆತ ಹೇಳಿದ್ದು… ಅವನಿಗೆ ಇಂಥ ಅನುಭವಗಳು ಹಲವಾರು… (ಲೆಕ್ಕವಿಲ್ಲದಷ್ಟು ಬಾರಿ ನಾನೂ ಆತನನ್ನು ನೋಯಿಸಿ ಬೆನ್ನು ಹಾಕಿ ನಡೆದದ್ದುಂಟಲ್ಲ)

ಈ ಮೌನಕ್ಕೆ ಮುನಿಯಬೇಡಿ; ಕ್ಷಮೆಯಿರಲಿ ಸ್ನೇಹದಲಿ. ನೋಯಿಸುವ ಉದ್ದೇಶ ನಂಗಿಲ್ಲ. Am Sorry… ಗೆಳೆಯರು ನೀವು. ನೀವೆಲ್ಲರೂ ಬೇಕು ನಂಗೆ. ಎಂದಿನಂತೆ ಮತ್ತೆ ಬನ್ನಿ….
%%%%%%%%%%%%%%%%

ಎಂದೂ ಬಾರದ ಕಂದನಿಗೆ

Withered Flower
ಮಗೂ,
ಇವತ್ತಿನಷ್ಟೇ ಅವತ್ತೂ ನೀನು ಬೇಕಾಗಿದ್ದೆ ನಮಗೆ. ಆದರೆ ಅವತ್ತು ಇವತ್ತಿನಷ್ಟು ಧೈರ್ಯವಿರಲಿಲ್ಲ. ನನ್ನೆಲ್ಲ ಕನಸುಗಳ ತುಂಬ ನೀನಿದ್ದೆ ಮತ್ತು ಬಹುಪಾಲು ನೀನು ಮಾತ್ರ ಇದ್ದೆ. ಅವು ಬರೀ ಕನಸು ಮಾತ್ರ ಕಾಣಬಹುದಾಗಿದ್ದ ದಿನಗಳು ಕಂದಾ. ನೀನು ಮೊಳಕೆಯೊಡೆದಾಗಷ್ಟೇ ನಾವು ವಾಸ್ತವದ ಕಡೆ ತಿರುಗಿದ್ದು; ಅಧೀರರಾಗಿದ್ದು. ನಿಜ ಹೇಳಲಾ ನಿನ್ನ ಇರುವಿಕೆಗಿಂತ ನೀ ಭೂಮಿಗೆ ಬಂದ ನಂತರದ ದಿನಗಳಿಗೆ ಹೆಚ್ಚು ಹೆದರಿದ್ದು. ಕಷ್ಟಗಳ ಕಣಿವೆಯಲ್ಲಿ ನಡೆಯುತ್ತಿದ್ದ ದಿನಗಳವು. ನಮಗೇ ಅದನ್ನೆದುರಿಸುವುದಾಗದೆ ತತ್ತರಿಸಿದಾಗ ನೀ ಬಂದು ನೀನೂ ಆ ನೊವಿನಲ್ಲಿ ಬೇಯುವುದು ಬೇಡವಾಗಿತ್ತು ಮಗೂ. ನಮ್ಮ ಬಾಲ್ಯದ ನಿರಾಸೆ, ಅವಮಾನಗಳು ನಿನ್ನ ಬಾಲ್ಯದ ವರೆಗೂ ಮುಂದುವರಿಯುವುದು ಇಷ್ಟವಿರಲಿಲ್ಲ. ಸುತ್ತೆಲ್ಲಿ ಕಣ್ಣು ಹಾಯಿಸಿದರೂ ಕಾಣುತ್ತಿದ್ದುದು ನಾವೇರಲಾರದ ಶಿಖರಗಳು…ಕಣ್ಣು ಮುಚ್ಚಿದ್ದರೂ ಏನೋ ಭೀತಿ, ಆತಂಕ.
ಆಗಿನ್ನೂ ಮೊಳಕೆಯೊಡೆದಿದ್ದರೂ ನೀನು ನಿನ್ನ ಇರುವುಕೆಯನ್ನು ನಾನಾ ರೀತಿಯಲ್ಲಿ ತೋರಿಸಿದ್ದೆ. ಆ ದಿನಗಳಲ್ಲಿ ನನ್ನ ಭಾವಲೋಕದ ಬಾಗಿಲಲ್ಲಿ ಸಪ್ತವರ್ಣದ ಕಾಮನಬಿಲ್ಲು. ಮುಸ್ಸಂಜೆ ಸುಮ್ಮನೇ ಮೆಟ್ಟಿಲ ಬಳಿ ಬಂದು ಕೂತರೆ ಛಕ್ಕನೆ ನೀ ಬಂದು “ಅಮ್ಮಾ” ಅಂದಂತೆ ಭಾಸ.. ಎದ್ದು ನೋಡಿದರೆ ನೀನಿಲ್ಲ ಆದರೂ ಪುಳಕ. ಅದುವರೆಗೂ ಸಾಮಾನ್ಯವೆನಿಸುತ್ತಿದ್ದ ಎಲ್ಲವೂ ನೀನಿದ್ದಾಗ ಬೆರಗು ಮೂಡಿಸುತ್ತಿತ್ತು. ಮಳೆಬಿಲ್ಲು, ನಕ್ಷತ್ರ, ನರ್ಸರಿ ಮಕ್ಕಳ ಹಾಡು, ಆಗಸದಲ್ಲಿ ಮೋಡ ಬರೆದ ಚಿತ್ರ, ಮಳೆ ಹನಿಯ ತುಂತುರು, ಮನೆಯೆದುರಿನ ಪಾರ್ಕಿಗೆ ವಾಕಿಂಗ್ ಬರುವ ಅಜ್ಜ ಅಜ್ಜಿ ಎಲ್ಲದರಲ್ಲೂ ಹೊಸತನ ದಕ್ಕಿದ್ದು ನಿನ್ನಿಂದ ಕಂದಾ. ಇಂಥದ್ದೊಂದು ಅದ್ಭುತ ಮಾಯಾಲೋಕದ ಸೃಷ್ಟಿಗೆ ಕಾರಣವಾದ ನಿನ್ನನ್ನೇ ನಾವು ಬೇಡವೆಂದೆವು. ಕ್ಷಮಿಸುವೆಯಾ ?
ತುಂಬಾ ಕನಸು ಕಂಡಿದ್ದೆ ನಾನು. ನಿನ್ನ ಪುಟಾಣಿ ಗುಲಾಬಿ ಪಾದಗಳಿಗೆ ಮುತ್ತಿಡುತ್ತಲೇ ಇರಬೇಕು, ಚಿಗುರು ಬೆರಳು ಹಿಡಿದು ತುಂಗೆಯ ತೀರದುದ್ದಕ್ಕೂ ಅಲೆದಾಡಬೇಕು, ನಾವಿಬ್ಬರೂ ಜತೆಯಾಗಿ ನೀರಿನಲ್ಲಿ ಕಾಲು ಇಳಿಬಿಟ್ಟು ಮೀನುಗಳ ಆಟ ನೊಡುತ್ತಾ ಮೈ ಮರೆಯಬೇಕು, ಮರಕೋತಿ ಆಟ ಆಡಬೇಕು, ಕನ್ನಡಿಯಷ್ಟು ನುಣುಪಾದ ನಿನ್ನ ಕೆನ್ನೆಯಲ್ಲಿ ನಗು ತುಂಬಿದಾಗ ನಾನದರ ಚಿತ್ರ ಬರೆಯಬೇಕು, ಪ್ರಕೃತಿಯ ಎಲ್ಲಾ ವಿಸ್ಮಯಗಳಿಗೆ ತೆರೆದುಕೊಳ್ಳುವಂತೆ ನೀನು ರೂಪುಗೊಳ್ಳಬೇಕು.. ಮುಂದೊಂದು ದಿನ ಜಗತ್ತೇ ಮೆಚ್ಚುವ ವಿಜ್ಞಾನಿ ನೀನಾಗಬೇಕು.. “ಹಿಂದೂಸ್ಥಾನವು ಎಂದೂ ಮರೆಯದ….” ಮತ್ತು ಇವೆಲ್ಲಕ್ಕೂ ಮೊದಲು ನಿಂಗೆ ನಿನ್ನಪ್ಪನಷ್ಟೇ ಒಳ್ಳೆಯ ಮನಸಿರಬೇಕು… ಪುಟ್ಟೂ, ನೀನು ಹೆಣ್ಣೇ ಆಗಿರುತ್ತೀ ಎಂಬ ದೊಡ್ಡ ನಂಬಿಕೆಯಿಂದ ನಿಂಗೆ “ಪ್ರಣತಿ” ಅಂತ ಹೆಸರಿಟ್ಟಿದ್ದೆ; ಒಂದು ವೇಳೆ ಅಲ್ಲದೇ ಹೋದರೆ “ಪ್ರಣೀತ್”.. ಹೀಗೇ ಕೋಟಿ ಕನಸುಗಳಿದ್ದವು. ಆದರೆ ವಿಧಿ ಅವನ್ನೆಲ್ಲ ಅಳಿಸಿ ಹಾಕಿತ್ತು. ಈಗ ಅನ್ನಿಸುತ್ತಿದೆ ಪರಿಸ್ಥಿತಿಯಲ್ಲ ಕಂದಾ, ಅದನ್ನೆದುರಿಸಲಾರದ ನಮ್ಮ ಹೇಡಿತನ ನಿನ್ನನ್ನು ಜಗತ್ತಿಗೆ ಬರಲಾರದಂತೆ ಮಾಡಿದ್ದು.
ಯಾವ ಭರವಸೆಯೂ ಇಲ್ಲದ ಆ ದಿನಗಳಲ್ಲಿ ನಮ್ಮನ್ನು ಜೀವಂತವಾಗಿರಿಸಿದ್ದು ಪ್ರೀತಿ..ಪ್ರೀತಿ ಮತ್ತು ಪ್ರೀತಿ. ಅದೊಂದು ನಮ್ಮ ದಾಂಪತ್ಯದಲ್ಲಿ ಹೊಳೆಯಾಗಿ ಹರಿಯುತ್ತಿತ್ತು. ಅಂಥದ್ದೇ ಯಾವುದೋ ಒಂದು ಘಳಿಗೆಯಲ್ಲಿ ಬಹುಶಃ ನೀ ಕುಡಿಯೊಡೆದಿದ್ದೆ. ನಾವು ಅಷ್ಟೇ ಪ್ರೀತಿಯಿಂದ ರಾಜಕುಮಾರಿಯಂತೆ ಬರಮಾಡಿಕೊಳ್ಳಬಹುದೆಂಬ ಆಸೆಯಿಂದ ನೀನೂ ಬಂದಿರಬೇಕು ಅಲ್ವಾ ? ಅಂಥಾ ನಿಂಗೆ ತುಂಬಾ ನೋವು ಮಾಡಿದೆ ನಾನು ಅಲ್ವಾ ? ಸಾರಿ ಕಂದಾ..
ಅವತ್ತು ನೀ ಬೇಡವೆಂದು ನಿರ್ಧಾರ ಮಾಡಿದ ದಿನವೂ ಕೂಡ ಎಂದಿನಂತಿರಲು ಪ್ರಯತ್ನ ಮಾಡಿದೆ. ಆಫೀಸಿಗೂ ಹೋಗಿ ಬಂದೆ. ಆದ್ರೆ ರಾತ್ರಿ ರಾಣಿ ತನ್ನ ಕತ್ತಲ ಚಾದರ ಹಾಸುತ್ತಿದ್ದಂತೆ ಯಾಕೋ ದುಖಃ ತಡೆಯಲಾಗಲಿಲ್ಲ. ನಾನೊಂದು ಕಡೆ, ಅವನೊಂದು ಕಡೆ ಕೂತು ಕಂಬನಿಯ ಕುಯಿಲು… ನಂತರದ ದಿನಗಳಲ್ಲಿ ಅರ್ಥವಾಯಿತು ಕಂದಾ, ಕಷ್ಟಗಳಿಗೆ ಹೆದರಿ ನಿನ್ನನ್ನು ಬೇಡವೆಂದಿದ್ದೇ ಬದುಕಿನ ಅತಿ ದೊಡ್ಡ ತಪ್ಪಾಯಿತು. ನಿನ್ನನ್ನು ಕಳಕೊಂಡ ಯಾತನೆಯಿಂದ ಹೊರಬರಲಾರದೇ ಹೋದೆ. ತಪ್ಪಿತಸ್ಥ ಭಾವ ನನ್ನ ದಿನವೂ ಕೊಲ್ಲುತ್ತಿತ್ತು. ಬದುಕಲ್ಲಿ ಮೊತ್ತ ಮೊದಲ ಬಾರಿಗೆ ಸೋಲಿನ ಅನುಭವವಾಯ್ತು. ಸುತ್ತಲಿನವರ ಮಾತು ಒತ್ತಟ್ಟಿಗಿರಲಿ, ನನ್ನೊಳಗಿನ ಪ್ರಶ್ನೆಗಳಿಗೇ ನನ್ನಲ್ಲಿ ಉತ್ತರವಿರಲಿಲ್ಲ. ಪೂರ್ತಿಯಾಗಿ ಸೋತಿದ್ದೆ ನಾನು. ನಂತರ ನನಗೆ ನಿನ್ನ ಹೊರತಾಗಿ ಬೇರೇನೂ ಬೇಡವೆನಿಸಿತ್ತು. ಕುಡಿಯಲು ಕಣ್ಣೀರು, ಉಣ್ಣಲು ಬೇಸರ, ಮಲಗಲು ಸಂಕಟದ ಹಾಸಿಗೆ, ಸೋಲಿನ ಹೊದಿಕೆ, ನಿರಾಸೆಯ ದಾರಿ…. ನನ್ನನ್ನೇ ನಾನು ಕ್ಷಮಿಸಲಾಗಿಲ್ಲ ಕಣೋ… ಬೆಳದಿಂಗಳಾಗಿ ಬರಬಹುದಾಗಿದ್ದ ಜೀವ ನೀನು; ಆದರೆ ನನಗೇ ಅದೃಷ್ಟವಿರಲಿಲ್ಲ. ನಿನ್ನಂಥ ಬೆಳಕಿನ ಕುಡಿಯನ್ನು ಮನೆಯೊಳಗಿರಿಸಿಕೊಳ್ಳಲಾರದೇ ಹೋದೆ. ಕತ್ತಲಲ್ಲಿ ಹೊಳೆದ ಬೆಳ್ಳಿ ಮಿಂಚನ್ನು ಗುರುತಿಸಲಾರದ ಮೂರ್ಖಳಾಗಿಬಿಟ್ಟೆ. ನಾ ಅವತ್ತು ಕಳಕೊಂಡಿದ್ದು ಕೇವಲ ನಿನ್ನನ್ನಲ್ಲ; ಬಾಳಿನುದ್ದಕ್ಕೂ ಜತೆಗಿರಬಹುದಾಗಿದ್ದ ಸಂಭ್ರಮವನ್ನು ಕೂಡ. ಅವತ್ತು ಬೇಡವಾಗಿದ್ದ ನೀನು ಇವತ್ತು ಮನೆಯ ಮಂದಾರವೆನಿಸುತ್ತಿದ್ದೀ. ಇದಲ್ಲವೇ ದುರಂತ ಅಥವಾ ಸ್ವಯಂಕೃತಾಪರಾಧ ?
ಕಂದಾ, ಈ ಮನೆಯಲ್ಲೀಗ ಕಷ್ಟಗಳಿಲ್ಲ. ನಾವಿಬ್ಬರಿದ್ದರೂ ಇದ್ದರೂ ಯಾರಿಲ್ಲ ಅನಿಸಹತ್ತಿದೆ. ನೀ ಬಿಟ್ಟು ಹೋದ ನೆನಪುಗಳು ಪದೇ ಪದೇ ಕೈ ಹಿಡಿದು ಜಗ್ಗುತ್ತಿವೆ. ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು; ಕನಸಿಲ್ಲದ ದಾರಿಯಲ್ಲಿ ನಡೆಯಲಾಗದು ಕಂದಾ, ಅರ್ಥವಾಗಿದೆ. ಒಡ್ಡಿಲ್ಲದ ಅಣೆಕಟ್ಟಿನಂತೆ ಯಾತನೆಯ ಧಾರೆ. ಅವ್ಯಕ್ತ ವೇದನೆಯೊಂದು ಹಿಂಡುತ್ತಿದೆ. ಎಲ್ಲಿದ್ದೀ ಹುಡುಗಾ ಅಂದರೆ “ಯಾಕೆ” ಎಂಬೊಂದು ಮೆಸೇಜು ಕಳುಹಿಸಿದ ನೋಡು ಆ ಕ್ಷಣ ನೀನು ನೆನಪಾದೆ. ಇಷ್ಟು ದಿನ ಸುಡುತ್ತಿದ್ದ ಎಲ್ಲ ಬೆಂಕಿಯನ್ನು ನಿನ್ನೆದುರು ಹೊರ ಚೆಲ್ಲಿರುವೆ. ಬಹುಶಃ ಈ ನೋವುಗಳೆಲ್ಲ ನಿನ್ನ ಕಂಬನಿಯ ಶಾಪ. ಬೇಡ ಕಂದಾ ಭರಿಸಲಾರೆ ಈ ಯಾತನೆ. ಬೇಸರದ ಬಿಸಿ ಬದುಕು ಸಾಕಾಗಿದೆ ನನಗೆ; ಕ್ಷಮಿಸಿದ್ದೇನೆ ಅಂತೊಮ್ಮೆ ಅಲ್ಲಿಂದಲೇ ಅಂದು ಬಿಡು. ಮನದಲ್ಲಿ ಮನೆಯಲ್ಲಿ ತಂಗಾಳಿ ಹರಡಲಿ. ಇನ್ನು ನನ್ನ ಕಾಡಬೇಡ ಪ್ಲೀಸ್…
“ದೀಪವು ನಿನ್ನದೇ ಗಾಳಿಯು ನಿನ್ನದೇ…
ಆರದಿರಲಿ ಬೆಳಕು… ಮುಳುಗದಿರಲಿ ಬದುಕು…”
(ಬರಹ ಕಾಲ್ಪನಿಕ, ಚಿತ್ರ ಮಾತ್ರ ನಿಜಾ ನಿಜ…)