ಮಾವಿನ ಹಣ್ಣಿನ “ಸಾಸ್ವೆ”/”ಸೀಕರಣೆ”

Sihi sihi maavu

Sihi sihi maavu

ಮೊನ್ನೆ ನಾವಡರ ಪಾಕಚಂದ್ರಿಕೆಯಲ್ಲಿ ಬೆಳ್ಳುಳ್ಳಿ ಅನ್ನ ಸವಿಯುತ್ತಿದ್ದೆ. ಕೊನೆಗೆ ಟೀನಾ ಮಾವಿನ ಹಣ್ಣಿನ ನೆನಪು ಮಾಡಿದ್ರು. ಈ ಸಲ ಊರಿಗೆ ಹೋದಾಗ ಸಿಗುತ್ತೋ ಇಲ್ಲವೋ ಅಂದುಕೊಳ್ಳುತ್ತಿದ್ದೆ. ಮಾರನೇ ದಿನ ಊರಿಂದ ಬಂದ ಅಪ್ಪನ ಬ್ಯಾಗಿನ ತುಂಬ ಮಾವಿನ ಹಣ್ಣು. ಅದೂ ಊರಲ್ಲಿ ಮಾತ್ರ ಸಿಗುವ ಕಾಡು ಮಾವು.. ತುಳುನಾಡ ಭಾಷೆಯಲ್ಲಿ ಹೇಳಬೇಕೆಂದರೆ “ಕಾಟು ಕುಕ್ಕು”.

ಆವಾಗ ಮಾಡಿದ ಅಡುಗೆಯನ್ನೇ ಇಲ್ಲಿ ಉಣಬಡಿಸುತ್ತಿದ್ದೇನೆ. ಇದನ್ನು ದಕ್ಷಿಣ ಕನ್ನಡದ ಕಡೆ “ಸಾಸ್ವೆ” ಅಂತಲೂ ಉತ್ತರ ಕನ್ನಡದ ಕಡೆ “ಸೀಕರಣೆ” ಅಂತಲೂ ಕರೆಯುತ್ತಾರೆ.

ಪಾಕಚಂದ್ರಿಕೆಗೆ/ನಾವಡರಿಗೆ ನಮಿಸುತ್ತಾ ನನ್ನ ಅಡಿಗೆ ಮನೆಯ ಉದ್ಘಾಟನೆ ಮಾಡುತ್ತಿದ್ದೇನೆ. ನೀವೂ ಮೆಚ್ಚಿದರೆ ಮತ್ತು ಗುರು ನಾವಡರು ಗುಡ್ ಅಂದರೆ ಧನ್ಯೆ ಎಂದುಕೊಳ್ಳುತ್ತಾ……

ಬೇಕಾಗುವ ಸಾಮಗ್ರಿಗಳು :

1. ಚೆನ್ನಾಗಿ ಕಳಿತ ಮಾವಿನ ಹಣ್ಣು (ಇಂತಿಷ್ಟೇ ಎಂಬ ಲೆಕ್ಕ ಇಲ್ಲ; ನೀವು ಹೆಚ್ಚು ಮಾವು ಪ್ರಿಯರಾದರೆ ಹೆಚ್ಚು ಹಣ್ಣು ಹಾಕಿ. ಕನಿಷ್ಟ ಆರೇಳಾದರೂ ಇದ್ದರೆ ಒಳ್ಳೆಯದು.)

2. ಎರಡು ಅಥವಾ ಮೂರು ಮಧ್ಯಮ ಗಾತ್ರದ ಹಸಿಮೆಣಸಿನ ಕಾಯಿ. (ಹೆಚ್ಚು ಮೆಣಸು ಹಾಕಿದರೆ ರುಚಿಯಾಗಲ್ಲ)

3. ಎರಡು ಅಚ್ಚು ಬೆಲ್ಲ (ಮಾವಿನ ಹಣ್ಣು ಹೆಚ್ಚು ಹುಳಿಯಿದ್ದರೆ ಬೆಲ್ಲ ಸ್ವಲ್ಪ ಜಾಸ್ತಿ ಬೇಕಾಗುತ್ತದೆ.)

4. ಅರ್ಧ ಟೀ ಸ್ಪೂನ್ ಸಾಸಿವೆ

5. ಮೂರು ಅಥವಾ ನಾಲ್ಕು ಕಪ್ ಕಾಯಿ ತುರಿ (ಕೊಬ್ಬರಿ ಆಗುವುದಿಲ್ಲ; ಹಸಿ ತೆಂಗಿನಕಾಯಿಯನ್ನೇ ಬಳಸಬೇಕು.)

6. ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ :

ಮಾವಿನ ಹಣ್ಣನ್ನು ಚೆನ್ನಾಗಿ ತೊಳೆದುಕೊಂಡು ಸಿಪ್ಪೆಯನ್ನು ಬೇರೊಂದು ಪಾತ್ರೆಯಲ್ಲಿ ತೆಗೆದಿಟ್ಟುಕೊಳ್ಳಿ. ನಂತರ ಸಿಪ್ಪೆಗೆ ಅರ್ಧ ಲೋಟ ನೀರು ಹಾಕಿ ಚೆನ್ನಾಗಿ ಕಿವುಚಿ. ಅದರ ಒಳಪದರದಲ್ಲಿರುವ ಸಾರವೆಲ್ಲ ಬಿಟ್ಟುಕೊಳ್ಳುತ್ತದೆ. ಒಂದು ಬಾರಿ ಕಿವುಚಿದಾಗ ಬಿಟ್ಟುಕೊಳ್ಳದಿದ್ದರೆ ಇನ್ನೊಂದು ಬಾರಿ ನೀರು ಹಾಕಿಕೊಂಡು ಕಿವುಚಿಕೊಳ್ಳಿ. ನಂತರ ಆ ನೀರನ್ನು ಮಾವಿನ ಹಣ್ಣಿಗೆ ಮಿಶ್ರ ಮಾಡಿ. ಸಿಪ್ಪೆ ತೆಗೆದ ಮಾವಿನ ಹಣ್ಣುಗಳನ್ನು ಒಂದೆರಡು ಬಾರಿ ಮೃದುವಾಗಿ ಕಿವುಚಿ ಹಣ್ಣನ್ನು ಮೆತ್ತಗಾಗಿಸಿಕೊಳ್ಳಿ. (ಚಪಾತಿಗೆ ಹಿಟ್ಟು ನಾದುವ ರೀತಿಯಲ್ಲಿ) ನಂತರ ಬೆಲ್ಲ ತುರಿದು ಅಥವಾ ಪುಡಿ ಮಾಡಿ ಅದೇ ಹಣ್ಣಿಗೆ ಬೆರೆಸಿಕೊಳ್ಳಿ. ಈ ಮಿಶ್ರಣಕ್ಕೆ ಚಿಟಿಕೆ ಉಪ್ಪು ಬೆರೆಸಿ ಹತ್ತು ಹದಿನೈದು ನಿಮಿಷ ಹಾಗೇ ಇಡಿ. ಇದರಿಂದ ಹಣ್ಣು ಉಪ್ಪು ಬೆಲ್ಲ ಚೆನ್ನಾಗಿ ಬೆರೆತಿರುತ್ತದೆ.

ಹಸಿ (ನೀರಿರುವ) ತೆಂಗಿನ ಕಾಯಿಯನ್ನು ತುರಿದು ಮೂರು ಅಥವಾ ನಾಲ್ಕು ಕಪ್ ಕಾಯಿ ತುರಿಗೆ ಅರ್ಧ ಟೀ ಸ್ಪೂನ್ ಸಾಸಿವೆ, ಹಸಿಮೆಣಸು ಮತ್ತು ಚಿಟಿಕೆ ಉಪ್ಪು ಹಾಕಿಕೊಂಡು ನುಣ್ಣಗೆ ರುಬ್ಬಿ. ಕಾಯಿ ಹೆಚ್ಚು ನುಣ್ಣಗಾದಷ್ಟೂ ಹೆಚ್ಚು ರುಚಿ.

ಈಗ ಹಣ್ಣು ಮತ್ತು ಬೆಲ್ಲದ ಮಿಶ್ರಣವನ್ನು ಚೆನ್ನಾಗಿ ಸೌಟಿನಿಂದ ತಿರುಗಿಸಿ. ಬೆಲ್ಲ ಕರಗದೇ ತಳದಲ್ಲಿ ಉಳಿದಿದ್ದರೆ ಸೌಟಿನ ಸಹಾಯದಿಂದಲೇ ಪೂತರ್ಿಯಾಗಿ ಕರಗಿಸಿಕೊಳ್ಳಿ. ಅನಂತರ ರುಬ್ಬಿದ ಹಿಟ್ಟನ್ನು ಹಣ್ಣಿನ ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ಉಪ್ಪು ಹದವಾಗಿದೆಯಾ ನೋಡಿಕೊಳ್ಳಿ. ಬೇಕಿದ್ದರೆ ನಿಮ್ಮ ರುಚಿಗೆ ತಕ್ಕಂತೆ ಹಾಕಿಕೊಳ್ಳಿ. ಈಗ ರುಚಿಕಟ್ಟಾದ ಸಾಸ್ವೆ ಸಿದ್ಧ.

ಇದನ್ನು ಸಿಹಿ ಅಡಿಗೆ ಪ್ರಿಯರು ಸಾಂಬಾರಿನಂತೆ, ಉಳಿದವರು ಪಾಯಸದಂತೆ ಬಳಸಿದರೆ ಶೀತ ಪ್ರಿಯರು ತಂಗಳು ಪೆಟ್ಟಿಗೆಯಲ್ಲಿಟ್ಟು ಸ್ವಲ್ಪ ಹೊತ್ತಿನ ನಂತರ ತಿನ್ನಿ. ಇದನ್ನು ಬೆಳಗ್ಗೆಯೇ ಮಾಡಿದರೆ ನೀರು ದೋಸೆ (ವಿಧಾನ ನಾವಡರ ಅಡಿಗೆಮನೆ ಪಾಕಚಂದ್ರಿಕೆಯಲ್ಲಿದೆ) ಅಥವಾ ಚಪಾತಿಗೆ ಹಾಕಿಕೊಳ್ಳಲು ರಸಾಯನದಂತೆಯೂ ಬಳಸಬಹುದು.

ಗಮನಿಸಿ :

@ ಈ ಸಾಸ್ವೆಗೆ ಇದಮಿತ್ಥಂ ಅಂತ ಯಾವುದೂ ರೂಲ್ಸ್ ಇಲ್ಲ. ಅಳತೆಯೂ ಅಷ್ಟೆ ನಮ್ಮ ನಮ್ಮ ರುಚಿಗೆ ತಕ್ಕಂತೆ ಬದಲಾಗಬಹುದು. ಇಲ್ಲಿ ಮಾಡುವ ವಿಧಾನ ಮಾತ್ರ ಹೇಳಿದ್ದೇನೆ.

@ ಬೇರೆ ಯಾವುದೇ ಮಾವು ಬಳಸಿದಾಗಲೂ ಕಾಡು ಮಾವಿನಷ್ಟು ರುಚಿ ಆಗಿರಲಿಲ್ಲ ಎಂಬುದು ಸತ್ಯ.

@ ಮುಖ್ಯವಾದ ವಿಷಯ ಎಂದರೆ ಇದನ್ನು ಕುದಿಸುವ ಮತ್ತು ಒಗ್ಗರಣೆ ಹಾಕುವ ಕ್ರಮ ಇಲ್ಲ.

@ ಬೆಲ್ಲ ಮತ್ತು ಮಾವು ಎರಡೂ ಹಾಕಿರುವುದರಿಂದ ಬೇರೆ ಅಡಿಗೆಗಳಿಗೆ ಬಳಸಿದಂತೆ ಉಪ್ಪು ಬೇಕಾಗುವುದಿಲ್ಲ.

@ ಇಲ್ಲಿ ಹೇಳಿದಷ್ಟು ಪ್ರಮಾಣದಲ್ಲಿ ಮಾಡಿದರೆ ಮೂರು ಮಂದಿಗೆ ಸಾಕು; ನನ್ನಷ್ಟು ಮಾವು ಪ್ರಿಯರಾದರೆ ಇಬ್ಬರೇ ಮುಗಿಸಬಹುದು.

@ ಒಂದೊಮ್ಮೆ ಇದು ಉಳಿದರೆ (ತಂಗಳು ಪೆಟ್ಟಿಗೆಯಲ್ಲಿಟ್ಟರೂ ಕೂಡ) ಮಾರನೇ ದಿನಕ್ಕೆ ಅಷ್ಟು ಚೆನ್ನಲ್ಲ. ಆದರೆ ನಾಲ್ಕೈದು ಘಂಟೆ ಹೊತ್ತು ಇಡಬಹುದು; ರುಚಿ ಕೆಡುವುದಿಲ್ಲ.

ಒಮ್ಮೆ ಸಾಸ್ವೆ ಮಾಡಿ ನೋಡಿ. ಚೆನ್ನಾಗಿದೆ ಅನಿಸಿದರೆ ನಂಗೊಂಚೂರು ಕಳಿಸಿ. ಮಾಡಲಾಗಲಿಲ್ಲ ಅಂದ್ರೆ ತಂದ ಹಣ್ಣು ನನಗೆ ಕೊರಿಯರ್ ಮಾಡಿ. ನಾನೇ ಮಾಡಿಕೊಂಡು ತಿಂತೇನೆ. !!!!

%d bloggers like this: