ಇದು ಎಣ್ಣೆಗಾಯಿ ಅಲ್ಲ; ಎಣ್ಣೆಯೊಳಗೆ ಕಾಯಿ…

ನಂಗೆ ಅತ್ಯಂತ ಇಷ್ಟದ ತರಕಾರಿಗಳಲ್ಲಿ ಬದನೇಕಾಯಿಗೆ ಮೊದಲ ಸ್ಥಾನ. ಅದರ ಚೊಗರು, ನಾಲಕ್ಕಾಗಿ ಸೀಳಿದರೆ ಹೂವರಳಿದಂತ ಕಾಣುವ ಅದರ ನವಿರು ನನಗಿಷ್ಟ. ನಾ ಚಿಕ್ಕವಳಿದ್ದಾಗ ಅಜ್ಜಿ “ಬದನೆ ತೊಟ್ಟಿನಲ್ಲಿ ಅಮೃತ ಇರುತ್ತೆ; ತಿಂದರೆ ಕ್ಲಾಸಲ್ಲಿ ಫಸ್ಟ್ ಬರುವಷ್ಟು ಜಾಣತನ ಬರುತ್ತೆ; ಅದಕ್ಕೇ ಅದನ್ನು ಬದಿಗೆ ಸರಿಸದೆ ತಿನ್ನು” ಅಂದಿದ್ದು ಸುಳ್ಳು ಅಂತ ಗೊತ್ತಾದ ಮೇಲೂ ಪಲ್ಯ, ಸಾಂಬಾರಿನಿಂದ ಯಾರಿಗೂ ಕಾಣದಂತೆ ತೊಟ್ಟು ಹುಡುಕಿ ತಟ್ಟೆಗೆ ಹಾಕಿಕೊಳ್ಳುವ ಜಾಣತನವಂತೂ ಇದೆ. ನನ್ ಪ್ರೀತಿ ಕಂಡು “ಇವ್ಳಿಗೆ ಬದನೆಕಾಯಿ ಜ್ಯೂಸ್ ಮಾಡಿಕೊಟ್ರೂ ಕುಡೀತಾಳೆ” ಅನ್ನೋರು ಗೆಳತಿಯರು. ಇವತ್ತಿಗೂ ತರಕಾರಿ ಅಂಗಡಿಗೆ ಹೋದಾಗ ಮೊದಲು ಹುಡುಕೋದು ಅದನ್ನೇ. ಈ ಒಂದು ತರಕಾರಿಯಲ್ಲೇ ಎಷ್ಟು ಬಣ್ಣ, ರೂಪ, ವಿಧಗಳು.  ಹಸಿರು, ಗಾಢ ಹಸಿರು, ನೇರಳೆ…. ಉರುಟು ಬದನೆ, ಉದ್ದ ಬದನೆ, ಬೇಬಿ ಬದನೆ (ಪುಟ್ಟ ಬದನೆಗೆ ನಾನಿಟ್ಟ ಹೆಸರು), ಉಡುಪಿ ಗುಳ್ಳ, ಊರ ಬದನೆ ಹೀಗೇ.

ಸಾಂಬಾರಿಗೆ, ಮಜ್ಜಿಗೆ ಹುಳಿಗೆ, ಬೋಂಡಾಕ್ಕೆ, ಪಲ್ಯಕ್ಕೆ, ಎಣ್ಣೆಗಾಯಿಗೆ, ವಾಂಗೀ ಬಾತಿಗೆ, ಬೋಳು ಸಾರಿಗೆ, ಹುಳಿ ಗೊಜ್ಜಿಗೆ, ಮೊಸರು ಗೊಜ್ಜಿಗೆ ಹೀಗೆ ಎಲ್ಲಾದಕ್ಕೂ ತಕರಾರಿಲ್ಲದೆ ಸೈ ಎನ್ನುವ ಬದನೆಕಾಯಿಗೆ ಇನ್ಯಾವ ತರಕಾರಿಯೂ ಸಾಟಿಯಿಲ್ಲ. ಅಂಥ ಪರಮಾಪ್ತ ತರಕಾರಿಯಿಂದ ಛಾಯಾ ಭಗವತಿ ಮಾಡಿಕೊಟ್ಟ ಎಣ್ಣೆಗಾಯಿಯನ್ನ ನಾನೂ ಮಾಡಲು ಹೊರಟು ಸತತ ವಿಫಲ ಯತ್ನಗಳ ನಂತರ ನನ್ನದೇ ಹೊಸ ವಿಧಾನವೊಂದನ್ನು ಕಂಡುಕೊಂಡೆ. ಅದು ಎಣ್ಣೆಗಾಯಿಯೇ ಅಂತ ನಾನೂ ನಂಬಿ ಮನೆಯಲ್ಲಿ ಎಲ್ಲಾರನ್ನೂ ನಂಬಿಸಿ ಚೆನ್ನಾಗಿ ತಿಂದು ತೇಗಿ ಖುಷಿ ಪಡುತ್ತಿದ್ದೇವೆ. ಇದು ದೋಸೆ, ಚಪಾತಿಗಳ ಜತೆಗೂ ಆಗುತ್ತೆ. ಪಲ್ಯದ ಬದಲಿಗೂ ಸರಿಯೇ. ಮಜ್ಜಿಗೆ, ಮೊಸರನ್ನಕ್ಕೆ ನೆಂಚಿಕೊಳ್ಳಲಿಕ್ಕೂ ಫೈನ್. ಅಂಥ ರುಚಿಕರವಾದ್ದನ್ನು ನಿಮಗೂ ಕೊಡುವ ಆಸೆಯಿಂದ ಇಲ್ಲಿ ತಂದಿಡುತ್ತಿದ್ದೇನೆ. ತಿಂದು ಆನಂದಿಸಿ…

ಬೇಕಾಗುವ ಸಾಮಗ್ರಿ :

 1. ಬೇಬಿ ಬದನೆಕಾಯಿಗಳು – 20 ರಿಂದ 25
 2. ಕೆಂಪುಮೆಣಸು/ಒಣ ಮೆಣಸು/ಬ್ಯಾಡಗಿ ಮೆಣಸು/ಕುಮ್ಟೆ ಮೆಣಸು
 3. ಕಡ್ಲೆ ಬೇಳೆ – 2 ಟೀ ಸ್ಪೂನ್
 4. ಉದ್ದಿನ ಬೇಳೆ – 2 ಟೀ ಸ್ಪೂನ್
 5. ಬೆಲ್ಲ –  2 ಟೀ ಸ್ಪೂನ್
 6. ಹುಣಸೇ ಹುಳಿ – 2 ನಿಂಬೆ ಹಣ್ಣಿನ ಗಾತ್ರದಷ್ಟು
 7. ವಾಂಗೀ ಬಾತ್ ಮಿಕ್ಸ್/ ಸಾರಿನ ಪುಡಿ ಅಥವಾ ಸಾಂಬಾರ್ ಪುಡಿ (ನಿಮಗ್ಯಾವುದು ಹೆಚ್ಚು ಇಷ್ಟ/ರುಚಿ ಅನಿಸುತ್ತೋ ಅದು) –  2 ಟೀ ಸ್ಪೂನ್
 8. ತೆಂಗಿನ ಕಾಯಿ – ಮಧ್ಯಮ ಗಾತ್ರದ್ದು (ನೀರಿಲ್ಲದ ಕಾಯಿಯಾದ್ರೆ ಒಳ್ಳೆ ರುಚಿ; ಆದ್ರೆ ಒಣ ಕೊಬ್ಬರಿಯಲ್ಲ)
 9. ರುಚಿಗೆ ತಕ್ಕಷ್ಟು ಉಪ್ಪು
 10. ಬೇಯಿಸಲು ಎಣ್ಣೆ
 11. ಒಗ್ಗರಣೆಗೆ ಎಣ್ಣೆ, ಸಾಸಿವೆ, ಒಣ ಮೆಣಸು, ಉದ್ದಿನ ಬೇಳೆ, ಕರಿಬೇವು ಸೊಪ್ಪು ಸ್ವಲ್ಪ ಹೆಚ್ಚೇ ಇರಲಿ.

ಬದನೆಕಾಯನ್ನು ಚೆನ್ನಾಗಿ ತೊಳೆಯಬೇಕು. ತೊಟ್ಟು ತೆಗೆಯಬಾರದು (ಅಮೃತ ಇರುತ್ತೆ). ತೊಟ್ಟಿನ ವರೆಗೆ ನಾಲ್ಕು ಸೀಳಬೇಕು. ಅದು ನಾಲ್ಕಾಗಿ ತುಂಡಾಗಬಾರದು ಆ ಥರ ಸೀಳಬೇಕು. ಚಿಟಿಕೆ ಸುಣ್ಣ (ಚೊಗರು ತೆಗೆಯಲು) ಚಿಟಿಕೆ ಅರಶಿನ (ನಂಜು ತೆಗೆಯಲು) ಹಾಕಿದ ನೀರಿನಲ್ಲಿ ಹದಿನೈದು ನಿಮಿಷ ನೆನೆಸಿ ತೆಗೆದಿಟ್ಟುಕೊಳ್ಳಬೇಕು. (ಇದಕ್ಕೆ ಇಷ್ಟೇ ಹೊತ್ತು ಅಂತೇನಿಲ್ಲ; ಅರ್ಧ ಗಂಟೆಗೂ ಹೆಚ್ಚು ನೆನೆಸುವ ಅಗತ್ಯವಿಲ್ಲ.).

ಮೆಣಸು, ಕಡ್ಲೆ ಬೇಳೆ, ಉದ್ದಿನ ಬೇಳೆಯನ್ನು ಬಣ್ಣ ಬದಲುವವರೆಗೆ ಹುರಿದು ಅದರ ಜತೆ ಕಾಯಿ, ಬೆಲ್ಲ, ವಾಂಗೀ ಬಾತ್ ಮಿಕ್ಸ್ ಅಥವಾ ಸಾರಿನ ಪುಡಿ ಅಥವಾ ಸಾಂಬಾರ್ ಪುಡಿ, ಹುಣಸೇ ಹುಳಿ (ಹುಳಿ ತುಂಬ ಗಟ್ಟಿ ಇದ್ರೆ ಮೊದಲೇ ನೀರಲ್ಲಿ ನೆನೆಸಿಟ್ಟುಕೊಳ್ಳುವುದು ಒಳ್ಳೆಯದು), ಬೆಲ್ಲ, ಉಪ್ಪು ಸೇರಿಸಿ ಸ್ವಲ್ಪವೇ ಹಾಕಿ ಗಟ್ಟಿ ಚಟ್ನಿ ಥರ ರುಬ್ಬಿಕೊಳ್ಳಬೇಕು. ನಂತರ ಇದನ್ನು ನಿಧಾನವಾಗಿ ಬದನೆಕಾಯಿಯೊಳಗೆ ತುಂಬಬೇಕು. (ಚಿತ್ರದಲ್ಲಿ ತೋರಿಸಿದಂತೆ) ತುಂಬುವಾಗ ಸೀಳಿದ ಬದನೆಕಾಯಿ ಹೋಳಾಗದಂತೆ ನೋಡಿಕೊಳ್ಳಿ. ಎಲ್ಲಾ ಬದನೆಕಾಯಿಗಳಿಗೂ ತುಂಬಿದ ನಂತರ ಒಗ್ಗರಣೆಗೆ ಇಟ್ಟರೆ ಸಾಕು. ಎಣ್ಣೆಯಲ್ಲೇ ಬೇಯಿಸುವ ಕಾರಣ ಎಣ್ಣೆ ಸ್ವಲ್ಪ ಜಾಸ್ತಿಯೇ ಬೇಕಾಗುತ್ತೆ. 20 ರಿಂದ 25 ಬದನೆಕಾಯಿಗಳಿದ್ದಲ್ಲಿ ಸುಮಾರು 50 ಮಿ.ಲೀ. ಎಣ್ಣೆ ಬೇಕಾದೀತು. (ನನ್ನದು ಕಣ್ಣಳತೆ). ಎಣ್ಣೆ ಬಿಸಿಯಾದ ತಕ್ಷಣ ಸಾಸಿವೆ, ಒಣ ಮೆಣಸು, ಉದ್ದಿನ ಬೇಳೆ ಹಾಕಿ ಕರಿಬೇವು ಸೊಪ್ಪು ಹಾಕಬೇಕು. ನಂತರ ಚಟ್ನಿ ತುಂಬಿದ ಬದನೆಕಾಯಿಗಳನ್ನು ಒಂದೊಂದಾಗಿ ಬಾಣಲಿಯಲ್ಲಿ ಬಾಣಲೆಯ ಒಳ ಬದಿಯಲ್ಲಿ ವೃತ್ತಾಕಾರವಾಗಿ ಇಡುತ್ತಾ ಬರಬೇಕು. (ಚಿತ್ರದಲ್ಲಿ ತಟ್ಟೆಯಲ್ಲಿ ಜೋಡಿಸಿರುವಂತೆ ಬಾಣಲಿಯಲ್ಲೂ ಇಡುವುದು). ಒಂದು ವೇಳೆ ಚಟ್ನಿ ಉಳಿದರೆ ಕೊನೆಗೆ ಅದನ್ನು ಈ ಬದನೆಕಾಯಿಗಳ ಮೇಲೆ ಹರಡಬಹುದು. ಅಥವಾ ಸಪರೇಟ್ ಆಗಿ ಒಗ್ಗರಣೆ ಹಾಕಿ ಅದನ್ನು ಬೇಯಿಸಿಟ್ಟರೆ ಅನ್ನಕ್ಕೆ ಕಲಸಿಕೊಂಡು ತಿನ್ನಲು ಬಹಳ ರುಚಿ. ಬಾಣಲಿಯಲ್ಲಿಡುವಾಗ ತುಂಬಾ ಜೋಪಾನವಾಗಿರಬೇಕು. ಎಣ್ಣೆ ಸಿಡಿದರೆ ಸುಕೋಮಲ ಮುಖಕ್ಕೆ ಕಷ್ಟ. ಬದನೆಕಾಯಿ ಪೂರ್ತಿ ಬೇಯುವವರೆಗೂ ಸಣ್ಣ ಉರಿಯಲ್ಲಿಟ್ಟು ಬೇಯಿಸಬೇಕು. ಆವಾಗಾವಾಗ ಸೌಟಿನಲ್ಲಿ ಮಗುಚುತ್ತಿರುವುದು ಬಹಳ ಅಗತ್ಯ. ನೀರು ಹಾಕದಿರುವ ಕಾರಣ ಬಹಳ ಬೇಗ ತಳ ಹಿಡಿಯುತ್ತೆ. ನಾನ್ ಸ್ಟಿಕ್ ತವಾ ಆದ್ರೆ ಈ ತೊಂದರೆ ಕಡಿಮೆ. ಫ್ರಿಜ್ ನಲ್ಲಿಟ್ಟರೆ ಇದನ್ನು ಒಂದು ವಾರದ ವರೆಗೂ ಬಳಸಬಹುದು.

ಇಷ್ಟೆಲ್ಲ ಮಾಡಲು ಸುಮಾರು ಒಂದು ಗಂಟೆ ಬೇಕಾಗುತ್ತೆ. ಎಲ್ಲಾ ಮುಗಿದ ನಂತರ ಮಾಡಬೇಕಾದ ಬಹು ಮುಖ್ಯ ಕೆಲಸವೆಂದರೆ ಕಾಲು ಚಾಚಿ ಬಿದ್ಕೊಂಡು ರೆಸ್ಟ್ ತೊಗೊಳ್ಳೋದು.

ವಿ.ಸೂ :

 1. ನೀವು ತುಂಬಾ ಖಾರದವರಾದರೆ ಬೆಲ್ಲ ಹಾಕುವ ಅಗತ್ಯವಿಲ್ಲ.
 2. ನೀವು ತುಂಬಾ ಸಿಹಿಯವರಾದರೆ, ಮಕ್ಕಳಿಗೂ ಕೊಡಬೇಕೆಂದಾದರೆ ಬೆಲ್ಲ ಸ್ವಲ್ಪ ಹೆಚ್ಚೇ ಹಾಕಬಹುದು.
 3. ಇದನ್ನು ಓದಿ ನೀವು ಪ್ರಯೋಗ ಮಾಡಿದಿರಾದರೆ ಗುರುದಕ್ಷಿಣೆ ಅಂತ ನನಗೊಂದಷ್ಟು ಕಳುಹಿಸಿ ಪುಣ್ಯ ಕಟ್ಟಿಕೊಳ್ಳುವುದು.

ಹಾಗಲಕಾಯಿಯನ್ನೂ ಇದೇ ವಿಧಾನದಲ್ಲಿ ಮಾಡಬಹುದು. ಆದರೆ ಅದನ್ನು ವೃತ್ತಾಕಾರವಾಗಿ ಹೆಚ್ಚಿಕೊಂಡು ತಿರುಳು ಮತ್ತು ಬೀಜ ತೆಗೆಯಬೇಕು. ಈ ಹೋಳುಗಳು ಚಟ್ನಿ ತುಂಬಿಸುವಷ್ಟು ದಪ್ಪಗೆ, ಹೋಳಾಗಿ ಹೋಗದಷ್ಟು ತೆಳ್ಳಗೆ ಇರಬೇಕು. ಹೋಳುಗಳನ್ನು ಪಾತ್ರೆಗೆ ಹಾಕಿಟ್ಟು ಒಂದೆರಡು ಚಮಚ ಉಪ್ಪು ಮತ್ತು ಅರಶಿನದ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಿಡಬೇಕು. ಅರ್ಧ ಗಂಟೆ ನಂತರ ಹಿಂಡಿ ತೆಗೆದಿಡಬೇಕು. ಹಾಗಲಕಾಯಿಗೆ ವಾಂಗೀಬಾತ್ ಪುಡಿ ಹಾಕಿದ್ರೆ ರುಚಿ ಚೆನ್ನಾಗಿರುವುದಿಲ್ಲ. ಅದೇ ರೀತಿ ಹೆಚ್ಚಿ ಕೊಳ್ಳುವುದು ಕಷ್ಟವೆನಿಸಿದರೆ ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಮಾಡಿ ಮೊದಲು ಅದನ್ನು ಮಾತ್ರ ಒಗ್ಗರಣೆಯಲ್ಲಿ ಹುರಿದುಕೊಂಡು ನಂತರ ಚಟ್ನಿ ಸೇರಿಸಬೇಕು.

|| ಶುಭಂ ||

%d bloggers like this: