……..ಗೆ

ಸವಿಯಬೇಕಿದೆ ನಾವು ಜತೆಯಾಗಿ
ಒಂದು ಸುಂದರ ರಾತ್ರಿ
ನನ್ನ ನಿನ್ನ ಹೃದಯ ಸೇರುವ
ಮಾರ್ದವತೆಯ ರಾತ್ರಿ
ಬಾನಂಚಿನ ಬೆಳ್ಳಿ ಮಿಂಚನು
ಭುವಿಗೆ ತರುವ ರಾತ್ರಿ
ನಿನ್ನ ತೆಕ್ಕೆಯಲಿ ನಾನು ಮಗುವಾಗಿ
ಸ್ವರ್ಗ ಕಾಣುವ ರಾತ್ರಿ
ಕನಸಿನೆಳೆಗಳ ಹಿಡಿದು ತಂದು
ನನಸು ನೇಯುವ ರಾತ್ರಿ
ಮುನಿಸು ತಂದ ಕಹಿಗಳೆಲ್ಲವ
ಅಳಿಸಿ ಹಾಕುವ ರಾತ್ರಿ
ಭಾರ ಬದುಕಿನ ದೂರ ದಾರಿಗೆ
ಬೆಳಕು ತೋರುವ ರಾತ್ರಿ
ತಪ್ಪುಗಳ ಲೆಕ್ಕ ಮರೆತು
ಒಪ್ಪ ಮಾಡುವ ರಾತ್ರಿ
ಮೈ ಮನಸಿನ ಹಂಗು ತೊರೆದು
ಆತ್ಮ ಬೆಸೆಯುವ ರಾತ್ರಿ
*****

(ಎಲ್ಲೋ ಓದಿದ್ದ ಕವನದ ಗುಂಗಿನಲ್ಲಿ ಬರೆದಿದ್ದು)

ಲೆಕ್ಕಾಚಾರ

ಅವತ್ತು
ಬಳಪ ಕಳೆದು ಹೋಗಿದ್ದಕ್ಕೆ
ಅತ್ತ ನೆನಪು ಇನ್ನೂ
ಸ್ಪಷ್ಟವಾಗಿದೆ…
ಇವತ್ತು
ಕಳಕೊಂಡಿದ್ದು ಬಹಳಷ್ಟಿದೆ..
ಅಳು ಬರುತ್ತಿಲ್ಲ..
(ಗಳಿಸಿದ ಅಹಂ ಇದೆಯಲ್ಲ)

ಸುಮ್ಮನೆ ಬರೆದದ್ದು

ಗೊತ್ತೇನು

ನಿನ್ನ ದಶಕೋಟಿ ಭಾವನೆಗಳ ಅಲೆಯ ಮೇಲೆ

ತೇಲುತಿದೆ ನನ್ನ ಮುಗುಳ್ನಗೆಯ ಹಾಯಿದೋಣಿ

ನಿನ್ನ ಶತಕೋಟಿ ಕಾಮನೆಯ ತರಂಗಗಳು

ಮಿಂಚಾಗಿ ಹೊಳೆಯುತಿವೆ ನನ್ನ ಕಣ್ಣಂಚಲಿ

ನಿನ್ನೆದೆಯ ಆಗಸದ ಒಲವ ಮೋಡಗಳು

ತಬ್ಬುತಿವೆ ನನ್ನ ಇಳಿಬಿಟ್ಟ ಮುಡಿಯಾಗಿ

ನಿನ್ನ ಹೃದಯ ತೋಟದ ಒಲುಮೆ ಹೂಗಳು

ಬೆರೆಸುತಿವೆ ಸವಿಗಂಪು ನನ್ನುಸಿರಿಗೆ

ನಿನ್ನೊಲುಮೆ ಶರಧಿಯ ಭಾವದ ಇನಿದನಿಗಳು

ಕಲೆಯುತಿವೆ ಇಂಪಾಗಿ ನನ್ನ ಕೊರಳಿಂಚರದಲಿ

*******

%d bloggers like this: