ಗುಟ್ಟು

ನಿನ್ನೆ ನಿನ್ನ ಮಡಿಲಲ್ಲಿ
ತಲೆಯಿಯಿಟ್ಟು
ವಿರಮಿಸಿದಾಗ
ನಾ ಕಳೆದುಕೊಂಡ
ನನ್ನವ್ವ ನೆನಪಾದಳು..

ಮಣಿಕಾಂತ್ (ಪುಸ್ತಕ) ಬಿಡುಗಡೆಯ ಬಗ್ಗೆ…

ಪುಸ್ತಕ ಬಿಡುಗಡೆಯ ಕಾರ್ಯಕ್ರಮವೊಂದಕ್ಕೆ ಅಷ್ಟು ಮಂದಿ ಸೇರಬಹುದೆಂದು ಮತ್ತು ಪುಸ್ತಕಕ್ಕಾಗಿ ಕ್ಯೂ ನಿಂತವರು sorry, ಖಾಲಿ ಆಯ್ತು ಎಂಬೊಂದು ಮಾತು ಕೇಳಿ ಮುಖ ಸಣ್ಣ ಮಾಡಿಕೊಳ್ಳಬಹುದೆಂದು ಕಲಾಕ್ಷೇತ್ರದಾಣೆಗೂ ನಾನು ನಿರೀಕ್ಷೆ ಮಾಡಿರಲಿಲ್ಲ. ಅಲ್ಲಿನ ಎರಡೂ ಅಂತಸ್ತು ಪೂತರ್ಿ ಭತರ್ಿಯಾಗಿ ಕೊನೆಗೆ ಸುತ್ತೆಲ್ಲ ನಿಂತು ನೋಡುವ ಅನಿವಾರ್ಯತೆ. ಅಮ್ಮನನ್ನು ಪ್ರೀತಿಸುವ ಮಕ್ಕಳು, ಪ್ರಕಾಶ್ ರೈ ಎಂಬ ಮಹಾನ್ ಕಲಾವಿದನ ಅಭಿಮಾನಿಗಳು, ಮಣಿಕಾಂತ್ ಬರಹದ ಫ್ಯಾನ್ಗಳು, ಭಟ್ರನ್ನೊಮ್ಮೆ ನೋಡಿ ಹೋಗಲು, ಕೃಷ್ಣೇಗೌಡ್ರ ಗದ್ದಲ ಕೇಳಲು, ಬೆಳಗೆರೆಯ ಅಟೋಗ್ರಾಫ್ ಪಡೆಯಲು ಬಂದವರು… ಹೀಗೆ ಜನಸಾಗರ.. ಎಲ್ಲರಿಗೂ ಅಮ್ಮ ಹೇಳಿದ ಸುಳ್ಳುಗಳನ್ನು ಕೇಳುವ ಕಾತರ.. ಆದರೆ ಮೊದಲು ಮಾತಾಡಿದ ಕೃಷ್ಣೇಗೌಡರಿಂದ ಕೊನೆಯಲ್ಲಿ ಮಾತಾಡಿದ ವಿಶ್ವೇಶ್ವರ ಭಟ್ ತನಕ ಯಾರೂ ಸುಳ್ಳು ಹೇಳಲಿಲ್ಲ.

ಇಂಪಾದ ಕಲರವದೊಡನೆ ಇಳೆಗಿಳಿವ ತಂಪಾದ ಮಳೆಯ ಕೋಟಿಗಟ್ಟಲೇ ಹನಿಗಳು ಎಲ್ಲೋ ಹರಿದು ಕೊನೆಗೆ ತನ್ನ ಯಾವ ಗುರುತನ್ನೂ ಉಳಿಸದೆ ಸಾಗರ ಗರ್ಭವನ್ನು ಸೇರುತ್ತದೆ. ಆದರೆ ಸ್ವಾತಿ ನಕ್ಷತ್ರದಲ್ಲಿ ಹೃದಯ ತೆರೆದು ನಿಂತ ಚಿಪ್ಪಿಗೆ ಬಿದ್ದ ಒಂದೇ ಒಂದು ಹನಿ ಮಾತ್ರ ಮುತ್ತಾಗುತ್ತದೆ. ಹಾಗೆಯೇ ವಿಶ್ವದ ಜೀವಕೋಟಿಗಳಲ್ಲಿ ಅಮ್ಮ ಮಾತ್ರ ಸಾಟಿಯಿಲ್ಲದ ಸ್ವಾತಿ ಮುತ್ತಾಗಿ ಉಳಿಯುತ್ತಾಳೆ. ಬದುಕಿನ ಸಾಮಾನ್ಯ ಚಿತ್ರಕ್ಕೆ ಅಮ್ಮ ಚಿನ್ನದ ಚೌಕಟ್ಟು. ಅಂಥ ಅಮ್ಮನನ್ನು ಮೊದಲು ವೇದಿಕೆಗೆ ತಂದಿದ್ದು ಉಪಾಸನಾ ಮೋಹನ್ ತಂಡ. ಅವರ ತಂಡದ ಎಲ್ಲ ಹಾಡುಗಳೂ ಅವರಷ್ಟೇ ಚಂದ ಅನ್ನೋದು ನನ್ನ ಕಮೆಂಟು ಮತ್ತು ಕಾಂಪ್ಲಿಮೆಂಟು.. ಅದಕ್ಕೂ ಮೊದಲು ಕಾಫಿ ತಿಂಡಿ ಸಮಾರಾಧನೆ ಇತ್ತಾದರೂ ನಾನು ಮನೆಯಲ್ಲೇ ಮುಗಿಸಿ ಬಂದಿದ್ದರಿಂದ ಅನಿವಾರ್ಯವಾಗಿ ಅವಕಾಶ ವಂಚಿತಳಾದೆ ಎಂಬ ಬೇಸರವೂ ಮುಂದಿನ ಸಲಕ್ಕೊಂದು ಪಾಠವಾಯ್ತು ಎಂಬ ಸಂತೋಷವೂ ಜತೆಗೇ ಇದೆ.

ಸೀಟ್ ಸಿಗಲಿಕ್ಕಿಲ್ಲ ಅನ್ನೋ ಕಾರಣಕ್ಕೋ ಏನೋ ಗೊತ್ತಾಗಲಿಲ್ಲ; ಪ್ರಕಾಶ್ ರೈ ಕೂಡ ನಮ್ಮ ಹಾಗೇ ಬೇಗ ಬಂದಿದ್ದರು. ಹತ್ತು ಘಂಟೆಗೇ ಬಂದ ರೈಗಳು ಪುಟ್ಟ ಹುಡುಗನಂತೆ ಕಲಾಕ್ಷೇತ್ರದ ಆವರಣದ ತುಂಬೆಲ್ಲ ಅಡ್ಡಾಡಿದರು. ಹಳೆಯ ಮಧುರ ನೆನಪುಗಳೆಲ್ಲ ತೇಲಿ ಬಂದಿರಬೇಕು. ಚಿತ್ರ ಜಗತ್ತಿನಲ್ಲಿ ಮೇರು ಪ್ರತಿಭೆಯಾದ ನಂತರವೂ ಸರಳತೆ, ಸೌಜನ್ಯ ಉಳಿಸಿಕೊಂಡ ಪರಿ ನಿಜಕ್ಕೂ ಅನನ್ಯವೆನಿಸಿತು ನಂಗೆ. ಅಷ್ಟು ದೂರದಿಂದ ಬಂದ ಸುಸ್ತಾಗಲೀ, ಅನವಶ್ಯಕ ಶಿಸ್ತಾಗಲೀ ಇಲ್ಲದೆ ನಗುವನ್ನಷ್ಟೇ ಧರಿಸಿದ್ದ ರೈ ಅಪ್ಪಟ ನಮ್ಮವರೆ ಅನಿಸಿದ್ದು ನಿಜ. ಮೋಹನ್ ಮತ್ತು ಪಂಚಮ್ ಹಾಡುತ್ತಿದ್ದರೆ ಎಷ್ಟು ದಿನ ಆಯ್ತು ಈ ಥರ ಕನ್ನಡ ಭಾವಗೀತೆಗಳನ್ನು ಲೈವ್ ಆಗಿ ಕೇಳದೆ.. ಏನ್ ಚನಾಗ್ ಹಾಡ್ತಾರಲ್ರೀ ಅಂದು ಸಂಭ್ರಮಿಸುತ್ತಿದ್ದ ಕ್ಷಣವಿತ್ತಲ್ಲ ಅದು ಬರಹಕ್ಕೆ ನಿಲುಕದ್ದು. ಮಾತುಗಳೂ ಅಷ್ಟೆ ಸರಳ, ಸುಂದರ, ಸುಲಲಿತ. ಕನ್ನಡದ ನೆಲದಲ್ಲಿ ವಾಸ ಮಾಡುತ್ತಿಲ್ಲ ಅನ್ನೋದು ಚೂರೂ ಗೊತ್ತಾಗದಷ್ಟು ಸ್ಪಷ್ಟವಾಗಿತ್ತು ಭಾಷೆ. ನಮ್ಮ ನಡುವೆಯೇ ಇದ್ದು ಮಾತಿಗೊಮ್ಮ ಐ ಮೀನ್, ಯು ನೋ ಅನ್ನುವವರೆಲ್ಲ ನನ್ನ ಕಣ್ಣ ಮುಂದೆ ಸುಳಿದಾಡಿದರು. ತೆರೆಯಾಚೆಗೆ ನಟನೆ ಬಾರದ ಕಾರಣ ಕೆಲವೇ ಮಾತುಗಳಲ್ಲಿ ಇಡೀ ಪುಸ್ತಕದ ಭಾವವನ್ನು ಸೆರೆಹಿಡಿದಿಟ್ಟರು.

ಯಾವತ್ತೂ ಬರೀ ಹರಟೆ ಹಾಸ್ಯಗಳಲ್ಲೇ ಮಾತು ಮುಗಿಸಿ ನಗಿಸುವ ಗೌಡರು ತುಂಬಾ ಜವಾಬ್ದಾರಿಯುತವಾಗಿ ಅದೆಷ್ಟು ಸೂಕ್ಷ್ಮವಾಗಿ ಗಮನಿಸಿ ಪುಸ್ತಕದ ಬಗ್ಗೆ ಮಾತಾಡಿದರು ! ಜಾಸ್ತಿಯೇ ಹೊತ್ತು ಮಾತಾಡಿದರೂ ಹಾಗನ್ನಿಸಲಿಲ್ಲ. ಹಾಸ್ಯವನ್ನಷ್ಟೇ ಅವರ ಬಾಯಿಂದ ಕೇಳಿದ್ದ ನಂಗೆ ಅವರ ಒಳನೋಟ, ಪುಸ್ತಕದ ಜತೆ ಜತೆಗೇ ಲೇಖಕನ, ಅದರ ಹಿಂದಿರಬಹುದಾದ ತಲ್ಲಣಗಳ, ಖುಷಿ, ನೋವುಗಳ ಬಗ್ಗೆ ವಿಶ್ಲೇಸಿಸಿದ ರೀತಿಯಿತ್ತಲ್ಲ ಅಚ್ಚರಿ ತರಿಸಿತು.

ಮಾತಿಗೆ ಗೌಡರು ಹಾಕಿ ಕೊಟ್ಟ ಬುನಾದಿ ಸಖತ್ ಭದ್ರವಾಗೇ ಇತ್ತು. ನಂತರ ಮಾತಿಗಿಳಿದವರು ದೈತ್ಯ (ಬರಹದಲ್ಲೂ, ದೇಹದಲ್ಲೂ) ರವಿ ಬೆಳಗೆರೆ. ಮಣಿಕಾಂತ್ ಎಂಬ ಭಾವಜೀವಿಯ ಬದುಕಿನ ತಲ್ಲಣಗಳನ್ನೂ ಅದರ ಅನನ್ಯತೆಯನ್ನೂ ಬಿಚ್ಚಿಡುತ್ತಾ ಬೆನ್ನು ತಟ್ಟಿದರು. ಜತೆಗೇ ಅವರ ಪ್ರೇಮ್ ಕಹಾನಿಯ ಹನಿಗಳನ್ನೂ… ಇನ್ನು ಅಮ್ಮನ ಬಗ್ಗೆ ರವಿ ಮಾತಾಡಿದರೆ ಅದು ನವಿರು ಸಂವೇದನೆ (someವೇದನೆ?) ಗಳಿಂದ ಹೆಣೆದ ಭಾವ ಬುಟ್ಟಿ. ಟಿಪಿಕಲ್ ಪತ್ರಕರ್ತನಂತೆ ಮಣ್ಣಿನ ಮಕ್ಕಳ ಬಗ್ಗೆ ಪ್ರಸ್ತಾಪ ಮಾಡುತ್ತಲೇ ಅಪ್ಪನ ಸುಳ್ಳು ಹೇಳಿದರೆ ಎಂಟಕ್ಕೆ ನಿಲ್ಲದು ನೂರೆಂಟಾಗುವುದು ಎಂಬ ಸತ್ಯವನ್ನು ಬಯಲಿಗಿಟ್ಟರು. ಮಣಿ ಮದುವೆಯ ಸಮಯದಲ್ಲಿ ತನ್ನ ಬಳಿ ದುಡ್ಡಿರಲಿಲ್ಲ ಎಂಬ ಸತ್ಯದ ಜತೆಗೇ ಈಗಲೂ ಇಲ್ಲ ಅನ್ನೋ ಸುಳ್ಳನ್ನೂ ಲೀಲಾಜಾಲವಾಗಿ ಹೇಳಿದರು. ಅಮ್ಮನನ್ನು ದತ್ತು ತೆಗೆದುಕೊಳ್ಳುವ, ಆಕೆಗೊಂದು ರೂಮ್ ಕಟ್ಟಿಸಿಕೊಡುವ ಮಿನಿಮಮ್ ಅವಶ್ಯಕತೆಯಿದೆ ಎಂದಿದ್ದು ಹೊಸ ವಿಚಾರವೊಂದನ್ನು ನಾ ಯೋಚಿಸುವಂತೆ ಮಾಡಿದ್ದಂತೂ ಹೌದು.

ಇವೆಲ್ಲದರ ನಡುವೆ ತನಗೆ ಕನ್ನಡ ಕಲಿಸಿದ ಪ್ರಮೀಳಾ ಟೀಚರನ್ನು ವೇದಿಕೆಗೆ ಕರೆದು ಸನ್ಮಾನ ಮಾಡಿಸಿದರಲ್ಲ ಇದೊಂದು ಕೃತಜ್ಞತೆ ಸೂಚಿಸಿದ ವಿಚಾರಕ್ಕೇ ಪ್ರತ್ಯೇಕವಾಗಿ ಮಣಿಕಾಂತ್ಗೆ ವಂದೇ. ಆಕೆಗೆ ತನ್ನ ಶಿಷ್ಯ ಈ ಮಟ್ಟಕ್ಕೆ ಬೆಳೆದ ಹೆಮ್ಮೆಯೊಂದು ಕಡೆ; ಪ್ರಕಾಶ್ ರೈ, ಬೆಳಗೆರೆಯಂಥ ದಿಗ್ಗಜರ ನಡುವೆ ನಿಂತು ಸನ್ಮಾನ ಪಡೆದ ಖುಷಿಯೊಂದು ಕಡೆ. ಜತೆಗೇ ಮುಖಪುಟ ಚಿತ್ರ ಕಲಾವಿದ ಮಲ್ಲಿಕಾಜರ್ುನ, ರೂಪದಶರ್ಿಗಳು, ಉಪಾಸನಾ ತಂಡದವರು ಹೀಗೆ ಹಲವರಿಗೆ ಮಾಡಿದ ಸನ್ಮಾನ ಕಮಷರ್ಿಯಲ್ ಬ್ರೇಕ್ ಥರ ಬಂದು ಹೋಯ್ತು. ಉಪಾಸನಾ ಮೋಹನ್ ಎಂದಿಗಿಂತ ಸ್ವಲ್ಪ ಹೆಚ್ಚೇ ಮಿಂಚಿದರು. ನಮ್ಮ ಸಿಮ್ಮ ಮಾತ್ರ ಸ್ಟೇಜ್ ಪಕ್ಕದಲ್ಲೇ ಕೂತು ಕಾರ್ಯಕ್ರಮ ಆಸ್ವಾದಿಸಿದರು.

ಬಾಯಿಗಿಂತ ಬರಹದ ಮೂಲಕವೇ ಹೆಚ್ಚು ಮಾತಾಡುವ ಮಣಿಕಾಂತ್ ಯಾಕೋ ಮಾತಾಡುವ ಮೂಡಿನಲ್ಲಿದ್ದರು. ಆದರೆ ಹೆಚ್ಚು ಮಾತಾಡಲಾಗದೇ ಕಣ್ಣ ಹನಿಗಳ ಕಾಣಿಕೆ ಕೊಟ್ಟು ನಿಮಿಷದಲ್ಲಿ ಮಾತು ಮುಗಿಸಿದರು. ಈ ಭಾವುಕತೆಯೇ ಅವರ ಸ್ಟ್ರೆಂತ್ ಮತ್ತು ವೀಕ್ನೆಸ್ ಕೂಡ ಇರಬಹುದು ಅಂತ ಆ ಕ್ಷಣದಲ್ಲನಿಸಿತು. ಕೊನೆಯಲ್ಲಿ ಮಾತಿಗಿಳಿದ ವಿಶ್ವೇಶ್ವರ ಭಟ್ ಕೂಡ ಸರಿಯಾಗಿಯೇ ಕಾಂಪಿಟಿಷನ್ ಕೊಟ್ಟರು. ಈರುಳ್ಳಿ, ಮೆಣಸಿನಕಾಯಿ, ಕೊತ್ತಂಬರಿ ಬೆಲೆ ಬರೆಯುತ್ತಿದ್ದ ಮಣಿಕಾಂತ್ ಬರಹದ ಬೆಲೆ ಅರಿತ ಸಂದರ್ಭವನ್ನು ನೆನಪಿಸಿಕೊಂಡರು. ಈ ವರೆಗೂ ತಾವು ಬರೆಯಲು ಚೆಂದದೊಂದು ಟೇಬಲ್ ಕೊಡದೇ ಹೋದ ಸತ್ಯವನ್ನೂ ಹೇಳಿ ಅದೊಂದು ವ್ಯವಸ್ಥೆಯ ಭರವಸೆ ನೀಡಿದರು. ಬರಹವನ್ನೂ ಮಿಮಿಕ್ರಿ (imitation) ಮಾಡಬಲ್ಲ ಮಣಿಕಾಂತರ ವಿಶೇಷ ಚಾತುರ್ಯದ ಬಗ್ಗೆ ಮಾತಾಡಿದರು. ಮಾತು ಒಂದಷ್ಟು ಕಾಂಪ್ಲಿಮೆಟಿನಂತೆಯೂ ಒಂಚೂರು ಕಂಪ್ಲೇಂಟಿನಂತೆಯೂ ಇದ್ದಿದ್ದೇ ಇವರ ಮಾತಿನ ವಿಶೇಷ.

ಒಂದಷ್ಟು ನಗು, ಒಂದಷ್ಟು ಹರಟೆ, ತಿಳಿ ಹಾಸ್ಯ, ಚೂರು ಸೀರಿಯಸ್ನೆಸ್, ಎಲ್ಲಕ್ಕಿಂತ ಹೆಚ್ಚು ಭಾವನೆಗಳು, ಹನ್ನಿ ಕಣ್ಣಿರುಗಳ ಸಮ್ಮಿಲನವಾದ ಇಡೀ ಕಾರ್ಯಕ್ರಮ ಥೇಟ್ ಮಣಿಕಾಂತ್ ಥರವೇ ಇತ್ತು. ಪುಸ್ತಕ ಮಣಿಕಾಂತ್ಗಿಂತ ನೂರು ಪಟ್ಟು ಚೆಂದ. ಅಮ್ಮನ ಕಡೆ ನೊಡದೆ ತಮ್ಮ ಬದುಕು ಭಾವಗಳನ್ನು ಮಾತ್ರ ಜೀವಿಸುವ ಮಂದಿ ಈ ಸುಳ್ಳುಗಳನ್ನೋದಿದ ನಂತರವಾದರೂ ಒಂಚೂರು ಬದಲಾದರೆ, ಅಮ್ಮಂದಿರಿಗೆ ಹನಿ ಪ್ರೀತಿಯನ್ನೂ, ಬೊಗಸೆ ಸಂತೋಷವನ್ನೂ, ಒಂದಷ್ಟು ನೆಮ್ಮದಿಯನ್ನೂ ಕೊಡಮಾಡಿದರೆ ಮಣಿಕಾಂತ್ ಬರೆದ ಸುಳ್ಳುಗಳು ಸಾರ್ಥಕ. ಹಾಗಾಗಲೆಂಬುದು ಅಲ್ಲಿ ಬಂದಿದ್ದ ಪ್ರತಿಯೊಬ್ಬರ ಆಶಯ ಕೂಡ.

ಇಲ್ಲಿರುವುದು ನನ್ನ (ಕ್ಯಾಮರಾ ಎಂಬ) ಸಂಗಾತಿಯ ಕಣ್ಣಿಗೆ ಬಿದ್ದ ಚಿತ್ರಗಳು

ಎಲ್ಲರ ಚಿತ್ತ ಮಣಿಕಾಂತ್ ನತ್ತ..

ಎಲ್ಲರ ಚಿತ್ತ ಮಣಿಕಾಂತ್ ನತ್ತ..

 ಪ್ರಕಾಶ್ ರೈ ಜತೆ ಐಶ್ವರ್ಯ ಮತ್ತು ನೀಲಿ

ಪ್ರಕಾಶ್ ರೈ ಜತೆ ಐಶ್ವರ್ಯ ಮತ್ತು ನೀಲಿ

ಹೆಚ್ಚು ಮಿಂಚಿದವರು - ನನ್ನ ಪುಟ್ಟಿ ಮತ್ತು ಮೋಹನ್

ಹೆಚ್ಚು ಮಿಂಚಿದವರು - ನನ್ನ ಪುಟ್ಟಿ ಮತ್ತು ಮೋಹನ್

ಆಟೋಗ್ರಾಪ್  ಪ್ಲೀಸ್..

ಆಟೋಗ್ರಾಪ್ ಪ್ಲೀಸ್..

ಅಮ್ಮನ ಸುಳ್ಳು ಬಯಲಾಯ್ತು..

ಅಮ್ಮನ ಸುಳ್ಳು ಬಯಲಾಯ್ತು..

"ಸಿಂಹ" ಜತೆ ಉಭಯ ಕುಶಲೋಪರಿ ಸಾಂಪ್ರತ..

"ಸಿಂಹ" ಜತೆ ಉಭಯ ಕುಶಲೋಪರಿ ಸಾಂಪ್ರತ..

ಇದು ನಂಗೆ ಬಂದ ಎಸ್.ಎಂ.ಎಸ್. ಎಷ್ಟು ಚೆನ್ನಾಗಿದೆ ಅನಿಸಿತು … ಅದಕ್ಕೆ ಇಲ್ಲಿ ಹಾಕಿದೆ.. 

 

“The only court which forgives all my sins is my mom’s heart”

 

%d bloggers like this: