Fact that surprised me…

SMS sent by my friend : Why is “Live” backwards “Evil” & “Lived” backwards “Devil” ?? 

ಬದುಕಿನಾ ಬೊಗಸೆಯಲಿ ನೆನಪುಗಳ ಮೆರವಣಿಗೆ…

ಹೂ ಹನಿಯೇ...

ಹೂ ಹನಿಯೇ...


ಮೊದಲ ಪ್ರೇಮದ ನೆನಪಿನಂತೆ ಸುರಿವ ಮಳೆಗೆ ಮುಖವೊಡ್ಡಿ ಬೊಗಸೆ ತುಂಬ ಮಳೆ ನೀರು ತುಂಬಿಕೊಂಡು ಈ ಕ್ಷಣ ಅವನಿದ್ದಿದ್ದರೆ…. ಅಂದುಕೊಳ್ಳುತ್ತಿದ್ದ ಹಾಗೇ ಪಕ್ಕದಲ್ಲಿದ್ದ ಮೊಬೈಲ್ ಚಿಂವ್ ಚಿಂವ್ ಅಂದಿತ್ತು. ತೆರೆದು ನೋಡಿದರೆ ಮನದ ಮಾತು ಓದಿದೆ ಕಣೇ ಅಂತ ಮೆಸೇಜು ಕಳಿಸಿದ್ದ….. ಅರರೇ ಇವನಿಗೆ ಹ್ಯಾಗೆ ಗೊತ್ತಾಯ್ತು ಅನ್ನುತ್ತ ಕಣ್ ಕಣ್ ಬಿಟ್ಟೆ ಮರುಕ್ಷಣ ಹೊಳೀತು ಮೊನ್ನೆ ಸುಧಾ ಮೂರ್ತಿ ಬರೆದ “ಮನದ ಮಾತು” ಓದುತ್ತಿದ್ದ… ಅದರ ಬಗ್ಗೆ ಹೇಳುತಿದ್ದಾನೆ ಅಂತ. ಹೇಗೂ ಚುಮು ಚುಮು ಚಳಿ.. ಸ್ವಲ್ಪ ರೋಮಾನ್ಸ್ ಮಾಡೋಣ ಅಂತ ಫೋನ್ ಮಾಡಿದರೆ ಪಾಪಿ ಪುಸ್ತಕದ ಬಗೆ ಹೇಳುತ್ತಲೇ ಹೋದ.. ಒಂದಷ್ಟು ಮಾತಾಡಿ ಫೋನಿಟ್ಟ ನಂತರ ಮನಸು ಹಿಂದಕ್ಕೋಡಿತ್ತು.. ಪಿಯುಸಿಯ ದಿನಗಳವು.. ಆವಾಗೆಲ್ಲ ಓದು ಅಂದರೆ ಕೇವಲ ನಲ್ಗಾದಂಬರಿಗಳು. ಸಾಯಿಸುತೆ, ಉಷಾನವರತ್ನರಾಮ್, ಅಶ್ವಿನಿ ಮುಂತಾದ ಒಂದಷ್ಟು ಹೆಸರು ಬಿಟ್ಟರೆ ಬೇರೆ ಯಾರು ಬೇಡ. ಅಂದು ಕ್ಲಾಸಿಗೆ ಚಕ್ಕರ್ ಹೊಡೆದು ತಲೆನೋವು, ಹೊಟ್ಟೆನೋವು (ಇವೆರಡೇ ಕಾರಣ ಯಾಕೆಂದರೆ ಎರಡೂ ಲೆಕ್ಚರರ್ ಕಣ್ಣಿಗೆ ಕಾಣದವು) ಕಾರಣ ಹೇಳ ಕ್ಲಾಸಿನಿಂದ ಹೊರ ಬಂದು ಲೈಬ್ರರಿಗೆ ಹೋಗಿ ಅವುಗಳನ್ನೋದುತ್ತಿದ್ದೆ. ಈಗವುಗಳನ್ನು ಫ್ರೀಯಾಗಿ ಕೊಟ್ಟರು ಬೇಡವೆನಿಸುತ್ತೆ. ಎಷ್ಟು ಬದಲಾಗಿದ್ದೀನಲ್ವಾ ಅನ್ನಿಸಲು ಶುರುವಾಯ್ತು…
ಬಟ್ಟೆ ನೆನೆಸಲು ಸೋಪು ನೀರು ಕದಡಿ ಟಬ್ ನಲ್ಲಿಟ್ಟರೆ ಅದರೊಳಗೆ ಕೂತು ಚಪ್ಪಾಳೆ ಬಡಿಯುತ್ತ ಆಟವಾಡುತ್ತಿದ್ದ ನಾನು.. ಸ್ವಲ್ಪ ದೊಡ್ಡವಳಾಗಿ ಬೆಕ್ಕಿನ ಮರಿಯಂತೆ ಮನೆ ಮಂದಿಯ ಹಿಂದೆಯೇ ಸುಳಿದಾಡುತ್ತಿದ್ದ ನಾನು.. ಎಸ್.ಎಸ್.ಎಲ್.ಸಿ.ಕಳೆದ ನಂತರವೂ ಕ್ಲಾಸಲ್ಲಿ ಉಳಿದೆಲ್ಲರಿಗಿಂತ ಪೆದ್ದಿಯೇ ಆಗಿದ್ದ ನಾನು ಹೀಗಾದ್ದು ಯಾವಾಗ ? ಪ್ರಶ್ನೆಗೆ ಉತ್ತರವಿಲ್ಲ, ಬದುಕೆಂಬ ಕಲೆಗಾರನ ಕೈಚಳಕವೇ ಹೀಗೆ ದಾರಿ ಹೋಕನ ಕಾಲಡಿಯಲಿದ್ದ ಕಲ್ಲು ಶಿಲ್ಪವಾಗಿ ಬದಲಾಗಿದ್ದು ಗೊತ್ತೇ ಆಗದು. ಹೇಗೆ ನೆನಪಿಸಿಕೊಳ್ಳಲೆತ್ನಿಸಿದರೂ ನಾ ಬದಲಾದ ಘಳಿಗೆ ನೆನಪಿಗೆ ಬರಲೊಲ್ಲದು. ಬದುಕಿನ ಒಂದೊಂದೇ ವರುಷಗಳು ಸರಿದಂತೆಲ್ಲ ನಾವೆಷ್ಟು ಬದಲಾಗುತ್ತೇವಲ್ಲಾ….. ತಿರುಗಿ ನೋಡಿದರೆ ಮೂವತ್ತು ವಸಂತಗಳು.. ಕೈ ಬೆರಳ ಸಂದಿಯಿಂದ ಜಾರಿ ಹೋಗುತ್ತಿರುವ ಮಳೆ ಹನಿಯ ಹಾಗೇ ನುಸುಳಿ ಹೋಗಿವೆ…
ನನ್ನ ಸುತ್ತ ನೋಡಿದರೆ ನನ್ನ ಪ್ರಪಂಚ ತುಂಬ ಬದಲಾಗಿದೆ. ಒಂದು ಎರಡನೇ ತರಗತಿಯಲ್ಲ ಬೆಸ್ಟ್ ಫ್ರೆಂಡ್ ಆಗಿದ್ದ ಶ್ರೀಲತಾ, ನಾಲ್ಕರಿಂದ ಆರನೇ ಕ್ಲಾಸ್ವರೆಗೆ ಮೊದಲ ರ್ಯಾಂಕ್ಗೆ ನಂಜತೆ ಫೈಟ್ ಮಾಡುತ್ತಿದ್ದ ಪೋಸ್ಟ್ ಮಾಸ್ಟರ ಮಗಳು ನಮೃತಾ, ಕಾಂಪೌಂಡರ್ ಚಂದ್ರಣ್ಣನ ಮಗಳು ನನ್ನ ಜೀವದ ಗೆಳತಿ ಚಂದ್ರಿಕಾ ಯಾರ ಮುಖವೂ ನೆನಪಾಗುತ್ತಿಲ್ಲ. ಏಳನೇ ಕ್ಲಾಸಿನಲ್ಲಿ ನನ್ನ ಪಕ್ಕದಲ್ಲೇ ಕೂರುತ್ತಿದ್ದ ಪ್ರಕಾಶ, ಮುಖೇಶ, ಮಾವಿನ ಕಾಯಿ ತಂದು ಟೀಚರ ಕಣ್ಣು ತಪ್ಪಿಸಿ ಉಪ್ಪು ಖಾರ ಹಾಕಿ ತಿನ್ನುತ್ತಿದ್ದ ನಮ್ಮ ನೊಟೋರಿಯಸ್ ಗ್ಯಾಂಗಿನ ಪುಟ್ಟ ಹುಡುಗಿ ಗ್ರೇಸಿ.. ಎಲ್ಲರು ಮರೆತು ಹೋಗಿದ್ದು ಯಾವಾಗ ? ಹಳೆಯ ಆಲ್ಬಂ ತೆರೆದು ನೋಡಿದರೆ ಉದ್ದಲಂಗ ಹಾಕಿ ನನ್ನ ಪಕ್ಕ ಕೂತವಳ ಹೆಸರು ರಾಧಾ ಅಂತಲೋ ರಂಜಿನಿ ಅಂತಲೋ ಸ್ಪಷ್ಟವಾಗ್ತಿಲ್ಲ. ಎಲ್ಲ ಅಸ್ಪಷ್ಟ.. ಯಾವುದೋ ಕನಸು ಬಿದ್ದು ಫಕ್ಕನೆ ಎಚ್ಚರಾದಾಗಿನ ಅಲವರಿಕೆಯಂತೆ.. ಅವರೇ ಏನು ಕಾಲೇಜಿನ ಗೆಳತಿ ಗೆಳೆಯರೂ ಇಂದು ನನ್ನ ಬದುಕಿನ ಭಾಗವಾಗಿ ಉಳಿದಿಲ್ಲ.. ಫಸ್ಟ್ ಪಿಯುಸಿಯಲ್ಲಿದ್ದಾಗ ಕಿಟಕಿ ಬದಿಗೆ ಬಂದು ಟಾಟಾ ಮಾಡುತ್ತಿದ್ದ ಮೊದಲ ಹುಡುಗನ ಹೆಸರು ಕೂಡ ಇಂದು ಮನಸಿಗೆ ಬರುತ್ತಿಲ್ಲ.. ನನ್ನ ಭಾವಕೋಶದ ಎಳೆಗಳು ತುಂಬ ಬದಲಾಗಿವೆ.. ಆದರೆ ನನ್ನನ್ನದು ಕಾಡುತ್ತಿಲ್ಲವೇಕೆ ಎಂಬ ತಣ್ಣನೆಯ ಪ್ರಶ್ನೆಯ ಸಣ್ಣ ಗಿರಕಿ ಮನದಲ್ಲಿ..
ಜನರು ಮಾತ್ರವಲ್ಲ ಹೇಗೆ ಬದಲಾಗುತ್ತವೆ ಬದುಕಿನ ಆದ್ಯತೆಗಳೂ ಕೂಡ.. ಒಂದನೇ ಕ್ಲಾಸಿನಲ್ಲಿದ್ದಾಗ ಮಾವನ ಹಾಗೆ ಬಜಾಜ್ ಚೇತಕ್ ಓಡಿಸಿದರೆ ಸಾಕು ಎಂಬಾಸೆ, ಆರು ಏಳಕ್ಕೆ ಬಂದಾಗ ಅಜ್ಜಿ ಮನೆಗೆ ಸುಯ್ಯನೆ ಹೋಗುತ್ತಿದ್ದ ಅಂಬಿಕಾ ಬಸ್ ಡ್ರೈವರ್ ಆಗುವಾಸೆ, ಕಾಲೇಜು ಮೆಟ್ಟಲಿನಲ್ಲಿ ನಿಂತ ಕ್ಷಣ ಪೈಲಟ್ ಆಗಿ ಹಾರುವ ಕನಸು, ಡಿಗ್ರಿಯ ದಿನಗಳಲ್ಲಿ ಮಿಲಿಟರಿಗೆ ಸೇರಲು ಅಪ್ಲಿಕೇಷನ್, (ನನ್ನಂಥ ಕುಳ್ಳಿ ಮಿಲಿಟರಿಗೆ ಲಾಯಕ್ಕಿಲ್ಲ ಅಂತ ಗೊತ್ತಾಗಿದ್ದು ಆಮೇಲೆ) ಓದಿದ್ದು ಸಾಹಿತ್ಯ, ಪತ್ರಿಕೋದ್ಯಮ.. ಮಾಡ್ತಿರೋದು ಉದ್ಯಮ.. ಎಷ್ಟು ಬದಲಾಗಿದೆ ಎಲ್ಲವೂ..
ಹಾಗಂತ ಏನೂ ನೆನಪಿಲ್ಲವೇನೇ ಅಂತ ಮನಸನ್ನು ಕೇಳಿದರೆ ಇನ್ನೊಂದಷ್ಟು ನೆನಪುಗಳ ತಣ್ಣನೆ ಮೆರವಣಿಗೆ.. ಮಳೆಗಾಲದ ಸಂಜೆಗಳಲ್ಲಿ ಹದವಾಗಿ ಸುಟ್ಟು ಎಣ್ಣೆ ಸವರಿ ಅಜ್ಜಿಯ ಮಡಿಲಲ್ಲಿ ಕೂತು ಮೆಲ್ಲುತ್ತಿದ್ದ ಹಲಸಿನ ಹಪ್ಪಳದ ರುಚಿ, ದೊಡ್ಡಮ್ಮ ಹಾಲು ಕರೆಯಲು ಕೂಡುವಾಗ ಗಂಗೆ ಹಸುವಿನ ಕೆಚ್ಚಲಿಗೆ ಹಚ್ಚುತ್ತಿದ್ದ ಬೆಣ್ಣೆಯ ನುಣುಪು, ಬಟ್ಟೆ ಜಗಿಯುವ ಅಭ್ಯಾಸವಿದ್ದ ಪುಟ್ಟ ಕರು ಸುಭದ್ರೆ ತಿಂದು ಹಾಕಿದ ನನ್ನ ಸಿಂಡ್ರೆಲ್ಲಾ ಫ್ರಾಕಿನ ಫ್ರಿಲ್ಲು, ನಾನೆಟ್ಟ ಗಿಡದಲ್ಲರಳಿದ ಮೊದಲ ಪಾರಿಜಾತದ ಸೌರಭ, ಈಶ್ವರ ಮಾವನ ಜತೆ ಹೋಗಿ ನೋಡಿದ ಯಕ್ಷಗಾನದ ದೇವಿ ಕೂತಿದ್ದ ಬೆಳ್ಳಿಯ ಜೋಕಾಲಿಯ ಫಳ ಫಳ, ಅಪ್ಪನ ಹೆಗಲ ಮೇಲೆ ಕೂತು ನೋಡಿದ ಕಟೀಲು ಜಾತ್ರೆಯ ತೇರು.. ಉಹುಂ.. ಒಂಚೂರು ಮರೆತಿಲ್ಲ.. ಕೆಲವೊಂದು ಅಮೃತ ಘಳಿಗೆಗಳು ಯಾವತ್ತಿಗೂ ಬದಲಾಗುವುದೇ ಇಲ್ಲವೇನೋ.. ಮೊದಲ ಮಳೆಗೆ ಇಳೆ ಸೂಸುವ ಗಂಧದ ಹಾಗೆ… ಎಷ್ಟೋ ವರ್ಷಗಳಿಂದ ಜತೆಗಿದ್ದರೂ ಮದ್ಯಾಹ್ನವಾಗುತ್ತಿದ್ದಂತೆ ಫೋನ್ ಮಾಡಿ ಎಷ್ಟೊತ್ತಿಗೆ ಬರ್ತೀಯೇ ಎನ್ನುತ್ತ ಬಂದೊಡನೆ ಬರಸೆಳೆದು ಕಚಗುಳಿಯಿಟ್ಟು ತೆಕ್ಕೆಗೆಳೆದುಕೊಂಡು ಮುತ್ತಿನ ಮಳೆ ಸುರಿಸಿ “ನೀ ಅವತ್ತು ಹೇಗಿದ್ದೆಯೋ ಇವತ್ತೂ ಹಾಗೇ ಇದ್ದೀ ಮುದ್ದೂ… ಮಧ್ಯಾಹ್ನದ ಮೇಲೆ ಆಫೀಸಿಗೆ ರಜಾ ಹಾಕೇ..” ಎನ್ನುವ ಇವನ ಹಾಗೇ…

ಗೊತ್ತೇನು ?

Feel Loved
ಬದುಕಿನ ಹಾದಿಗೆ ಕಾಲಿಡುವ ಮೊದಲೇ
ಅರಳಿವೆ ಕನಸುಗಳು ಆಂಗಳದ ತುಂಬ
ನೀಲಿಯಾಕಾಶದಲ್ಲಿ ಹೊಳೆವ ತಾರೆಗಳಂತೆ
ಕಣ್ಣಲ್ಲಿ ಮೂಡಿಹುದು ನಿನ್ನ ಚಂದ್ರ ಬಿಂಬ

ಆರದೆಯೆ ಹೊಳೆವ ನಿನ್ನ ಕಂಗಳ ಕಾಂತಿ
ಸೂರ್ಯನಂದದಿ ದೇದೀಪ್ಯಮಾನ
ಎದೆಯ ಪ್ರೇಮಾಲಯಕೆ ನಂದಾದೀಪವದು
ಬಾಳನ್ನು ಸಿಂಗರಿಪ ಹೊನ್ನ ಕಿರಣ

ಮನಸೆಲ್ಲ ತುಂಬಿರುವ ನಿನ್ನುಸಿರ ಸೌಗಂಧ
ಹಬ್ಬಿದಂತೆ ಶ್ರೀ ಗಂಧದ ವಲ್ಲರಿ
ಮನೆ ತುಂಬ ಅಚ್ಚಾದ ನಿನ್ನ ಹೆಜ್ಜೆಯ ಗುರುತು
ಅಡಿಗಡಿಗೆ ಭರವಸೆಯ ಐಸಿರಿ

ನಿನ್ನ ಪ್ರೀತಿಯ ನವಿರಿಗೆಲ್ಲಿಯ ಸಾಟಿ
ಮೌನದಲಿ ಮೊಗ್ಗೊಡೆದು ಅರಳುವಂತೆ
ನೋವಿನ ನೆನಪುಗಳು ಹೇಳೆದೆಯೆ ಅಳಿದಿಹವು
ಸೂರ್ಯ ರಶ್ಮಿಗೆ ಕರಗೋ ಮಂಜಿನಂತೆ

ಒಣಗಿ ಬರಡಾಗಿರುವ ಎದೆಹೊಲವ ಉತ್ತು
ಹಸುರಾಗಿಸಲು ಕಾಯುತಿಹೆ ನಾನು
ಪ್ರೀತಿಯ ಮಳೆ ಸುರಿಸಿ ಹಸನು ಮಾಡಲು
ಪ್ರೇಮದ ನೇಗಿಲು ಹಿಡಿದಿರುವೆ ನೀನು

ಒಣಗಿರುವ ಕೊಂಬೆಯಲು ಹಸಿರುಕ್ಕಿಸುವ
ಸಂಜೀವಿನಿ ನಿನ್ನ ಒಲುಮೆಗಾಗಿ
ಹೃದಯದ ಬಾಗಿಲಿಗೆ ಆಸೆತೋರಣ ಕಟ್ಟು
ಕಾದಿರುವೆ ದೊರೆ ನಿನ್ನ ಬರುವಿಗಾಗಿ
***********

ಕಳ್ಳ ಬೆಕ್ಕುಗಳಿಗೆ ಗಂಟೆ ಕಟ್ಟುವ ಕೆಲಸ

 ಚುನಾವಣೆ ಸಮೀಪಿಸುತ್ತಿದೆ. ಎಲ್ಲ ಕಡೆ ಅದೊಂದೇ ಸುದ್ದಿ. ಬೇರೆ ಸುದ್ದಿಯೇ ಇಲ್ಲವೇನೋ ಎಂಬಂತೆ ಮೀಡಿಯಾಗಳಲ್ಲಿ ಅದೊಂದೇ ಸಮಾಚಾರ. ನೀತಿ ಸಂಹಿತೆಯಂತೆ, ದುಡ್ಡು ಹಂಚುವುದಂತೆ, ಪಕ್ಷಾಂತರವಂತೆ ಹಾಗಂತೆ.. ಹೀಗಂತೆ.. ಎಲ್ಲ ಅಂತೆ ಕಂತೆಗಳ ನಡುವೆ ಎಂದಿನಂತೆ ರಾಜಕೀಯವನ್ನು, ರಾಜಕಾರಣಿಗಳನ್ನು ಅವರ ಚಿಲ್ಲರೆ ವ್ಯವಹಾರಗಳನ್ನು ಬೈಯುತ್ತ ನಮ್ಮ ಪಾಡಿಗೆ ನಾವಿದ್ದೇವೆ. ಲಕ್ಷಾಂತರ ದುಡ್ಡು ಸಿಕ್ಕಿದ ಕೂಡಲೇ ಪಕ್ಷಾಂತರ.. ನಿನ್ನೆ ಎಣ್ಣೆ ಸೀಗೆ ಆಗಿದ್ದವರು ಇಂದು ಬೆಳಗ್ಗೆ ಹೊತ್ತಿಗಾಗಲೇ ಭಾಯಿ ಭಾಯಿ.. ಎಂಥ ಹೀನಾಯ ನಡವಳಿಕೆ. ಬಾಗಿಲ ಬಳಿಗೆ ಮತ ಯಾಚನೆಗೆ ಬಂದವರನ್ನು ಕೇಳಿ ನೋಡಿ ಚುನಾವಣಾ ನೀತಿ ಸಂಹಿತೆ ಅಂತಾರಲ್ಲ ಹಾಗಂದರೇನು ಅಂತ. ಯಾವೊಬ್ಬ ರಾಜಕಾರಣಿಗಾದರೂ ಸ್ಫಷ್ಟ ತಿಳುವಳಿಕೆ ಇದೆಯಾ ? ಆ ಕ್ಷೇತ್ರದ ಬಗ್ಗೆ ಒಂದಷ್ಟು ಮಾಹಿತಿ ಅಂತ ಅವರ ಕ್ಷೇತ್ರದಲ್ಲಿ ಎಷ್ಟು ಶಾಲೆಗಳಿವೆ, ಎಷ್ಟು ಆಸ್ಪತ್ರೆಗಳು ಅಂತಾದರೂ ಗೊತ್ತಾ ಕೇಳಿದರೆ ಬೆಬೆಬ್ಬೆ… ಅಲ್ಲ ಇಂಥವರಿಗೆ ನಾವು ಓಟು ಕೊಟ್ಟು ಗೆಲ್ಲಿಸುತ್ತೇವಲ್ಲಾ ನಿಜಕ್ಕೂ ನಮ್ಮ ಮತದ ಪಾವಿತ್ರ್ಯ ಉಳಿಯುತ್ತಾ ?
 ಇನ್ನು ಇಂಥಾ ಕ್ಷೇತ್ರದಲ್ಲಿ ಇಷ್ಟು ಅಭ್ಯಥರ್ಿಗಳು ನೀತಿ ಸಂಹಿತೆ ಮುರಿದರು ಅಂತ ವರದಿ ಮಾಡ್ತಾರಲ್ಲ ಅನಂತರ ಅವರಿಗೇನಾಯಿತು ? ಯಾವುದಾದರೂ ಶಿಕ್ಷೆಯಿದೆಯಾ ವರದಿ ಮಾಡಿದ್ದಾರಾ ? ಹಂಚಿದ ದುಡ್ಡು, ಹಂಚಲು ಸಾಗಿಸುತ್ತಿರುವ ದುಡ್ಡು ಹಿಡಿದರೆಂಬ ಸುದ್ದಿಗೆ ಮುಗೀತು.. ಆ ದುಡ್ಡನ್ನು ಆಮೇಲೇನು ಮಾಡಿದರು ? ಅದನ್ನು ಯಾರೂ ಹೇಳಲಿಲ್ಲ. ನಾವೂ ಕೇಳಲಿಲ್ಲ. ಅಷ್ಟಕ್ಕೂ ಅವರು ಹಂಚುವುದೆಲ್ಲಾ ನಮ್ಮ ದುಡ್ಡನ್ನೇ ಅಲ್ವಾ ? ತಾವು ಸ್ವತಃ ದುಡಿದು ಗಳಿಸಿದ್ದೇ ಆಗಿದ್ರೆ ಈ ಥರ ಖಚರ್ು ಮಾಡ್ತಾ ಇದ್ರಾ ?
 ಒಂದು ವೇಳೆ ಒಬ್ಬನನ್ನು ಈ ಬಾರಿ ಗೆಲ್ಲಿಸಿದರೆ ಅವನು ಇನ್ನೆರಡು ತಿಂಗಳಿಗೆ ಪಕ್ಷಾಂತರ. ಮತ್ತೆ ಚುನಾವಣೆ. ಅದಕ್ಕೂ ಖಚರ್ಾಗುವುದು ನಮ್ಮದೇ ಹಣ. ಇದನ್ನೆಲ್ಲ ತಡೆಗಟ್ಟುವುದು ಹೇಗೆ ? ಯಾರು ? ನನ್ ಪ್ರಕಾರ ನಮ್ಮಲ್ಲಿ ನಾಯಿಕೊಡೆಗಳಂತೆ ಉದಯಿಸುವ ಪಕ್ಷಗಳ ಹುಟ್ಟಿಗೆ ಅವಕಾಶವೇ ಇರದಂತೆ ಮೊದಲು ತಡೆಗಟ್ಟಬೇಕು. ಇಡೀ ದೇಶದಲ್ಲಿ 2-3 ಪಕ್ಷಗಳು ಮಾತ್ರ ಇರಬೇಕು. ಒಂದು ಪಕ್ಷದಿಂದ ಗೆದ್ದು ಬಂದ ಮೇಲೆ ಆತನ ಅವಧಿ ಪೂರ್ಣಗೊಳ್ಳುವ ವರೆಗೆ ಆತ ಪಕ್ಷ ಬದಲಾಯಿಸುವಂತಿಲ್ಲ; ಪಕ್ಷಾಂತರ ಮಾಡುವುದೇ ಆದಲ್ಲಿ ಮುಂದಿನ 5 ವರ್ಷ ಅವನು ಯಾವ ಪಕ್ಷದಿಂದಲೂ ಚುನಾವಣೆಗೆ ಸ್ಪಧರ್ಿಸಲು ಅವಕಾಶ ಇರದಂತೆ ಕಾನೂನು ಮಾಪರ್ಾಟಾಗಬೇಕು. ಆದರೆ ಇದೆಲ್ಲ ಮಾಡುವವರ್ಯಾರು ಎಂಬುದಲ್ಲವೇ ಪ್ರಶ್ನೆ ?
 ಇವೆಲ್ಲಕ್ಕಿಂತ ಬಹುಮುಖ್ಯವಾಗಿ ನಂಗೆ ಅನಿಸಿದ್ದೆಂದರೆ ಜನರು ಫುಡಾರಿಗಳು ನೀಡುವ ಕಾಸಿಗೆ ಕೈಯೊಡ್ಡುವುದನ್ನು ನಿಲ್ಲಿಸಬೇಕು.(ಹೀಗಾಗಬೇಕಾದಲ್ಲಿ ಪ್ರತಿಯೊಬ್ಬನಿಗೂ ದಿನದ ಅನ್ನಕ್ಕೆ ಕೊರತೆಯಾಗದಂಥ ವ್ಯವಸ್ಥೆ ಬೇಕಾಗಬಹುದೇನೋ). ಚುನಾವಣೆಗಾಗಿ ಕಂತೆ ಕಂತೆ ದುಡ್ಡು ನೀಡುವ ಉದ್ಯಮಿಗಳಾಗಲೀ, ಭೂಗತ ದೊರೆಗಳಾಗಲೀ ಇತರರಾಗಲೀ ದುಡ್ಡು ಸುರಿಯೋದನ್ನು
ನಿಲ್ಲಿಸಬೇಕು. (ರಾಜಕಾರಣಿಗಳಿಂದ ತಮಗೆ ಬೇಕಾದಂಥ ಎಲ್ಲ ಉಪಕಾರಗಳನ್ನು ಮಾಡಿಸಿಕೊಂಡ ನಂತರ ದುಡ್ಡು ಕೊಡದೇ ಇರುವುದಾದರೂ ಹೇಗೆ). ಈ ಫುಡಾರಿಗಳು ಖಚರ್ು ಮಾಡೋದೇ ಆದರೆ ಸ್ವಂತ ದುಡ್ಡಿನಿಂದ ಮಾತ್ರ ಎಂಬಂತಾಗಬೇಕು (ಹಾಗಿದ್ದಲ್ಲಿ ಮತದಾರನಿಗೆ ಯಾವ ಅಭ್ಯಥರ್ಿಯೂ ಏನೂ ಕೊಡಲಿಕ್ಕಿಲ್ಲವೇನೋ).

 ಮತ ಅಮೂಲ್ಯ, ಪವಿತ್ರ; ಪ್ರತಿಯೊಬ್ಬನೂ ಮತ ಚಲಾಯಿಸಲೇ ಬೇಕು. ಅದು ನಮ್ಮ ಹಕ್ಕುಮತ್ತು ಕರ್ತವ್ಯ ಅಂತಾರಲ್ಲ, ನಿಮಗ್ಗೊತ್ತಾ ಎಲ್ಲ ಅಭ್ಯಥರ್ಿಗಳೂ ಅಸಮರ್ಥರೆನಿಸಿದರೆ 49-ಓರಂತೆ ತಟಸ್ಥ ಮತ ಚಲಾವಣೆ ಸಾಧ್ಯ. ನಮಗೆ ಆ ಹಕ್ಕೂ ಇದೆ.

“49-ಓ” ಅಂದರೇನು ?
 ನನಗೆ ಗೊತ್ತಿರುವ ಮಾಹಿತಿಯಂತೆ ನಮ್ಮ ಸಂವಿಧಾನ ನಮಗಿತ್ತ ಅಧಿಕಾರ ಇದು. 1969ರ ಚುನಾವಣೆಯ ಕಾಯ್ದೆ ನಿಯಮಾವಳಿಯ ಸೆಕ್ಷನ್ 49-ಓ ಹೀಗೆ ಹೇಳುತ್ತೆ. ಮತದಾರ ಮತಗಟ್ಟೆಗೆ ಹೋಗಿ ತನ್ನ ಗುರುತು ಹೇಳಿ ತನ್ನ ಬೆರಳಿಗೆ ಗುರುತು ಹಾಕಿಸಿಕೊಂಡು ಮತಗಟ್ಟೆಯ ಅಧಿಕಾರಿಯಲ್ಲಿ ತಾನು ಯಾರಿಗೂ ಮತ ಹಾಕಲು ಬಯಸುತ್ತಿಲ್ಲವೆಂಬುದನ್ನು ತಿಳಿಸಿ ಫಾಮರ್್ 17ರಲ್ಲಿ ತನ್ನ ಸಹಿ ಹಾಕಿ ಬರಬೇಕು. ಅಲ್ಲಿಗೆ, ನಮ್ಮನ್ನಾಳಲು ನಿಮಗೆ ಯೋಗ್ಯತೆಯಿಲ್ಲ ಎಂಬುದನ್ನು ನಾವು ಸಮರ್ಥವಾಗಿ ಹೇಳಿದಂತಾಗುತ್ತದೆ.(ಆದರೆ ದುರಂತ ನೋಡಿ ನಮ್ಮಲ್ಲಿ ಬಹುಪಾಲು ಜನಕ್ಕೆ ಈ ವಿಚಾರ ಗೊತ್ತೇ ಇರುವುದಿಲ್ಲ) ಇಡೀ ದೇಶದಲ್ಲೊಂದು ಬಾರಿ ಹೀಗಾದಲ್ಲಿ ಒಂದಷ್ಟು ಅನಾಚಾರಗಳು ಕಡಿಮೆಯಾದೀತೇನೋ ಎಂಬ ಆಸೆ. ಮರೀಚಿಕೆ ಅಂತೀರಾ ?

(ಸೆಕ್ಷನ್ 49-ಓ ಬಗ್ಗೆ ನಾನು ಎಲ್ಲೋ ಓದಿದ ಮಾಹಿತಿಯನ್ನಷ್ಟೆ ಇಲ್ಲಿ ಹೇಳಿದ್ದೇನೆ. ತಪ್ಪಿದ್ದರೆ ಗೊತ್ತಿರೋರು ತಿಳಿಹೇಳಿ)

%d bloggers like this: