ಹಕ್ಕೀ ನಿನ್ನ ಅಡ್ರಸ್ ಹೇಳು..

ಗುಬ್ಬಚ್ಚೀ...

ಗುಬ್ಬಚ್ಚೀ...

ಮೈ ಡಿಯರ್ ಗುಬ್ಬಚ್ಚೀ,
ವರ್ಷಗಳ ನಂತರ ಇವತ್ತು ನಿನ್ನನ್ನು ನೋಡಿದೆನಲ್ಲ ಆ ಸಂತೋಷಕ್ಕೆ ಈ ಪತ್ರ. ನಿನ್ನನ್ನು ನೋಡ್ತಿದ್ದಂತೆ ನಾನು ಛಕ್ಕಂತ ಚಿಕ್ಕೋಳಾಗ್ಬಿಟ್ಟೆ. ಬಾಲ್ಯದ ಖುಷ್ ಖುಷಿಯ ದಿನಗಳ ಚಿತ್ರ ಕಣ್ಣ ಮುಂದೆ. ಹೌದು ಗುಬ್ಬಚ್ಚೀ.. ನನ್ನ ಬಾಲ್ಯಕ್ಕೂ ನಿಂಗೂ ಬಿಡಿಸಲಾರದ ನಂಟು..

ನಿಂಗೊತ್ತಾ ಹಕ್ಕೀ.. ಅವತ್ತು ನಾವಿದ್ದುದು ಪುಟ್ಟ ಹಳ್ಳೀಲಿ. ಹೆಂಚು, ಆರ್.ಸಿ.ಸಿಗಳ ಹಂಗಿಲ್ಲದ ತೆಂಗು ಅಡಿಕೆಯ ಗರಿಗಳ ಛಾವಣಿ.. ಅದರ ಕೆಳಗೆ ನಮ್ಮ ವಾಸ; ಮೇಲ್ಗಡೆ ನಿನ್ನ ಆವಾಸ. ಈಗ ಟೆರೇಸು ಮನೆ ಕಟ್ಟಿಕೊಂಡು ನಿಂಗೆ ಮನೆಯಿಲ್ಲದಂತೆ ಮಾಡಿದೆವಾ ನಾವು ? ನನ್ನಂತೆಯೇ ಪುಟ್ಟದಾಗಿದ್ದ, ತಮ್ಮನ ತೊದಲು ಮಾತಿನಂತೆ ಚಿಂವ್ ಚಿಂವ್ ಎನ್ನುತ್ತಿದ್ದ ನಿನ್ನ ಕಂಡರೆ ನಂಗೆ ಅದೇನೋ ಅಕ್ಕರೆ. ಎಲ್ಲ ಅಮ್ಮಂದಿರು ಚಂದಮಾಮ ತೋರಿಸಿ ಉಣಿಸುತ್ತಿದ್ದರೆ ನನ್ನಮ್ಮ ನಿನ್ನ ತೋರಿಸಿ ಉಣಿಸುತ್ತಿದ್ದಳು. ಅವತ್ತಿಂದ ಶುರುವಾದ ಈ ಅಪ್ಯಾಯತೆ ಇನ್ನೂ ಹಾಗೇ ಇದೆ.

ಅದ್ಯಾಕೋ ಗೊತ್ತಿಲ್ಲ, “ಗುಬ್ಬಚ್ಚಿ” ಅಂದ್ರೆ ಸಾಕು ಸುಮ್ ಸುಮ್ನೇ ಪ್ರೀತಿ; ಈ ಒರಟನ ಮೇಲಿದೆಯಲ್ಲ ಹಾಗೆ.. ನಿನಗಿಂತ ಚೆಂದದ ಹಕ್ಕಿಗಳು ಅದೆಷ್ಟೋ ಇದ್ದಾವು. ಆದರೆ ನಿನ್ನ ಚಿಲಿಪಿಲಿ, ನಿನಗೇ ಯುನೀಕ್ ಆಗಿರೋ ಪುಟ್ಟ ಆಕಾರ, ನಿನ್ನ ಹಾರಾಟದ ಸೊಗಸು, ಒಂದೊಂದೇ ಕಡ್ಡಿ ಹೆಕ್ಕಿ ತಂದು ನೀ ಗೂಡು ಕಟ್ಟುವ ಪರಿಯ ಚೆಂದವೇ ಬೇರೆ. ನಿನಗಿಂತಲೂ ಪುಟ್ಟ ಕಂದಮ್ಮಗಳಿಗೆ ನೀ ತುತ್ತು ಕೊಡುತ್ತಿದ್ದರೆ ಅದು ಜಗತ್ತಿನ ಅದ್ಭುತ ದೃಶ್ಯ.

ಗುಬ್ಬಚ್ಚಿ ಡಿಯರ್, ಅಜ್ಜಿ ಮನೇಲಿದ್ದು ನಾನು ಅಂಗನವಾಡಿಗೆ ಹೋಗ್ತಿದ್ದೆ ನೋಡು, ಆವಾಗ ಅಡಿಗೆ ಮನೆಯ ಬಲಗಡೆ ಮೂಲೇಲಿ ನಿನ್ನ ಗೂಡಿತ್ತು ನೆನಪಿದೆಯಾ ? ನಾ ಶಾಲೆ ಬಿಟ್ಟ ಕೂಡಲೇ ಓಡುತ್ತ ಮನೆಗೆ ಬರಲು ಇದ್ದ ಸೆಳೆತವೇ ನೀನು ಕಣೋ.. ನಿನ್ನಾಟ ಚಿನ್ನಾಟ ನೋಡುತ್ತಾ ತಿಂತಾ ಇದ್ರೆ ತಟ್ಟೆ ಖಾಲಿ ಆಗಿದ್ದೇ ಗೊತ್ತಾಗ್ತಾ ಇರಲಿಲ್ಲ. ಈಗ ನೋಡು ಮಕ್ಕಳ ಊಟ ತಿಂಡಿಗೆ ಕಾರ್ಟೂನ್ ನೆಟ್ವರ್ಕ್, ವಿಡಿಯೋ ಗೇಮ್ ಬಂದ್ಬಿಟ್ಟಿದೆ. ನಿಂಗೆ ಬೇಜಾರಾಗಲ್ವೇನೋ ?

ಆವಾಗೆಲ್ಲ ಮನೆಗಳು ವಿಶಾಲ. ನಿಂಗೆ ಎಲ್ಲೆಂದರಲ್ಲಿ ಗೂಡು ಕಟ್ಟುವ ಸ್ವಾತಂತ್ರ್ಯ. ಈಗ ನಾವಿರುವ ಮನೆಗಳೇ ಬೆಂಕಿ ಪೆಟ್ಟಿಗೆ. ನಿಂಗೆಲ್ಲಿ ಜಾಗ ಕೊಡೋಣ .. ಅಜ್ಜಿ ಮನೆಯ ಹಜಾರದ ಗೋಡೆಯ ತುಂಬೆಲ್ಲ ಹಾಕಿದ್ದ ಮುತ್ತಜ್ಜ ಅಜ್ಜಿಯರ ಫೋಟೋ ಫ್ರೇಮಿನ ಹಿಂದೆ ನಿನ್ನ ಪರಿವಾರದ ತರಹೇವಾರಿ ಮನೆಗಳು. ನಮ್ಮದು ನಾಗರಿಕರ ಜಗತ್ತು. ಹಿರಿತಲೆಗಳ ಫೋಟೋ ಮನೆಯ ಅಂದ ಕೆಡಿಸುತ್ತವೆ. ಅವುಗಳ ಬದಲು ಯಾವ ಬದಿಯಿಂದ ನೋಡಿದರೂ ಅರ್ಥವೇ ಆಗದ ಫ್ರೇಮಿಲ್ಲದ ಲ್ಯಾಮಿನೇಟೆಡ್ ಪೈಂಟಿಂಗುಗಳು. ಇದಕ್ಕೆ ಇಂಟೀರಿಯರ್ ಡಿಸೈನು ಎಂಬ ಹೆಸರು. ನಿನಗೆ ಜಾಗ ಕೊಡದ ಸ್ವಾರ್ಥಿಗಳು ಅಲ್ವಾ ನಾವು ?

ನೀನು ನಮ್ಮ ಪಾಲಿಗೆ ಹಕ್ಕಿಯಲ್ಲ; ನಮ್ಮ ಮನೆ ಮಂದಿ ಎಂದರೆ ನೀನೂ ಸೇರಿದ್ದೆ. ನಾವು ಮಕ್ಕಳೆಲ್ಲ ಸೇರಿ ನಿನ್ನ ಕುಟುಂಬಕ್ಕೆ ಅಂತ್ಲೇ ಕಾಳು ಸಂಗ್ರಹಿಸುತ್ತಿದ್ದೆವು. ಅಜ್ಜಿಯ ಬೈಗುಳಕ್ಕೆ ಕವಡೆ ಕಿಮ್ಮತ್ತು ಕೊಡದೆ ನಿನಗೆ ಗೂಡು ಕಟ್ಟಲು ಅನುಕೂಲ ಆಗ್ಲಿ ಅಂತ ಒಂದಷ್ಟು ಹುಲ್ಲುಗರಿ ತಂದಿಡ್ತಿದ್ದೆವು. ನೀನು ಬರುತ್ತೀ ಅಂತ ಕಾಯ್ತಿದ್ರೆ ನಮಗೆ ಸುಸ್ತಾಗೋ ವರೆಗೂ ನೀನು ಬರ್ತಿರಲಿಲ್ಲ. ನಾವು ಹೋದ ಎರಡೇ ಕ್ಷಣಕ್ಕೆ ಮೆತ್ತಗೆ ಬಂದು ಮಾಯಾವಿಯಂತೆ ಎತ್ತಿ ಒಯ್ಯುತ್ತಿದ್ದೆ ನೀನು. ನಾವು ನಿಂಗೇನಾದ್ರೂ ತಂದ್ರೆ ಬೈಯುತ್ತಿದ್ದ ಅದೇ ಅಜ್ಜಿ ನಿಂಗೆ ಅಂತ್ಲೇ ಒಂದಷ್ಟು ಧಾನ್ಯಗಳನ್ನು ತೆಂಗಿನ ಚಿಪ್ಪಿಗೆ ಹಾಕಿ ಮಾಳಿಗೆ ಮೆಟ್ಟಿಲ ಮೂಲೇಲಿಡ್ತಾ ಇದ್ರು !!

ಗುಬ್ಬಚ್ಚಿ ಪುಟ್ಟೂ, ಈಗಿವೆಲ್ಲ ಬರೀ ನೆನಪುಗಳು ಕಣೋ.. ನಮ್ಮ ಧಾವಂತದ ಬದುಕಲ್ಲಿ, ಪಕ್ಕದವರಿಗಿಂತ ಮೇಲೇರುವ ಆತುರದಲ್ಲಿ ನಾವು ಬದುಕು ಸವೆಸುತ್ತಿದ್ದೇವೆ; ಸವಿಯಲಾಗುತ್ತಿಲ್ಲ. ಅವತ್ತಿನ ದಿನಗಳಲ್ಲಿ ಈ ಓಟವಿರಲಿಲ್ಲ; ಎಲ್ಲರಿಗೂ ಮೊದಲು ಗುರಿ ಮುಟ್ಟಬೇಕೆಂಬ ಸ್ಪರ್ಧೆ ಇರಲಿಲ್ಲ; ಆದರೆ ಬದುಕಲ್ಲಿ ಖುಷಿಯಿತ್ತು. ಮನೆಯ ಅಂಗಣಕ್ಕೆ ಬಂದ ಪಶು ಪಕ್ಷಿಗಳೆಲ್ಲ ನಮ್ಮವು ಅನಿಸುತ್ತಿತ್ತು; ಆದರೀಗ ಮನೆಯವರೇ ದೂರದವರಾಗುತ್ತಿದ್ದಾರೆ. ಇವನ್ನೆಲ್ಲ ನೋಡಿ ನಿಂಗೂ ರೋಸಿ ಹೋಯ್ತಾ ? ಅದಕ್ಕೇ ನೀನು ಕೂಡ ನೇಪಥ್ಯಕ್ಕೆ ಸರಿದು ಹೋದೆಯಾ ? ಹೋಗುವಾಗ ನಮ್ಮ ಖುಷಿ, ನಗು ಎಲ್ಲವನ್ನು ಜತೆಗೇ ಹೊತ್ತೊಯ್ದೆಯಾ ? ಮಗಳು ಐಶ್ವರ್ಯ ಇದಾಳಲ್ಲ…ಅವಳೂ ಥೇಟ್ ನಿನ್ನ ಹಾಗೇ.. ಮುದ್ದು ಸುರಿವ ಮುಖ.. ಹೊಳೆ ಹೊಳೆವ ಕಣ್ಣು.. ಐಶು ಮರಿ ಚಿಕ್ಕಮ್ಮಾ ಎನ್ನುತ್ತ ಎದುರು ನಿಂತರೆ ನೀನೇ ನೆನಪಾಗಿ ಕಾಡ್ತೀಯ… ನಾನೇ ಬಂದು ನಿನ್ನನ್ನು ನೋಡಿಯೇನು ಎಂದರೆ ಹೋಗುವಾಗ ಅಡ್ರಸ್ ಕೂಡ ಕೊಡಲಿಲ್ಲ ನೀನು.. ಈ ಬಾರಿ ಬಂದಾಗ ಮರೀದೇ ಕೊಟ್ಟು ಹೋಗು…

ಗುಬ್ಬಚ್ಚಿ ನೋಡ್ಬೇಕು ಅಂದ್ರೆ ಕಾಡಿಗೇ ಹೋಗಬೇಕು ಅಂತಾರೆ ಮಂದಿ. ನಾವು ಪುರುಸೊತ್ತಿಲ್ಲದ ಜನ; ಕಾಡಿಗೆ ಹೋಗಲು ಸಮಯವಿಲ್ಲ ನಮ್ ಬಳಿ. ಅಷ್ಟಕ್ಕೂ ಕಾಡೆಲ್ಲಿದೆ ಈಗ ? ಅದನ್ನೂ ನಾವು ಹೀಗೆ ತಿನ್ನುತ್ತಲೇ ಇದ್ರೆ ನಮ್ಮದೇ ವೇಗದಲ್ಲಿ ನೀನು ಅಲ್ಲಿಂದಲೂ ಮರೆಯಾಗ್ತೀಯೇನೋ ಅಲ್ವಾ ? ನೋಡು ಎಷ್ಟೊಂದು ಪ್ರಶ್ನೆಗಳು ನನ್ನವು.. ಇದಕ್ಕೆಲ್ಲ ಉತ್ತರಿಸೋಕೆ ಅಂತಲೇ ಮತ್ತೆ ಬರ್ತೀಯಾ ನನ್ನ ಪುಟ್ಟ ಹಕ್ಕೀ ? ಆ ನೆಪದಿಂದ ನಾ ಮತ್ತೆ ಬಾಲ್ಯಕ್ಕೆ ಜಿಗಿಯಬೇಕು; ನೆನಪುಗಳ ಸಂಭ್ರಮದಲ್ಲಿ ಮೀಯಬೇಕು. ನಾವು ಮನುಷ್ಯರಿಗಿಂತ ಒಳ್ಳೆಯ ಮನಸ್ಸು ನಿಂದು.. ನಂಗೆ ನಿರಾಸೆ ಮಾಡಲ್ಲ ಅಲ್ವಾ ? ಕಾಯುತ್ತಿರುತ್ತೇನೆ… ನೀ ಮೊನ್ನೆ ನನ್ನ ಭೇಟಿಯಾದ ಅದೇ ಜಾಗದಲ್ಲಿ.. ಅದೇ ಸಂಪಿಗೆ ಮರದ ಹಸುರೆಲೆ ಕೆಳಗೆ…

%d bloggers like this: