ಚಿತ್ರೋತ್ಸವದ ಆಫ್ಟರ್ ಇಫೆಕ್ಟ್

ಪರಿಸರದೆಡೆಗೆ ಸಾಂಗತ್ಯದ ನಡಿಗೆ

ಪರಿಸರದೆಡೆಗೆ ಸಾಂಗತ್ಯದ ನಡಿಗೆ

ಕುಪ್ಪಳ್ಳಿಯ ತಣ್ಣನೆ ಹವೆಯಲ್ಲಿ ಕಾಲಿಟ್ಟ ನಮಗೆ ಸಂಭ್ರಮದ ಚಿತ್ರೋತ್ಸವದ ಆರಂಭಕ್ಕೇ ಸಿಕ್ಕಿದ್ದು ಬೇಂದ್ರೆ ತಾತನ ಕುರಿತಾದ ಸಾಕ್ಷ್ಯ ಚಿತ್ರ. ಕೆಲವು ಕಡೆಯಂತೂ ಅವರೇ ಎದ್ದು ಬಂದಂತೆ ಭಾಸ.

ನಂತರದ್ದು “ಕಾರಂತಜ್ಜನಿಗೊಂದು ಪತ್ರ” ಸಚ್ಚಿದಾನಂದ ಹೆಗಡೆಯವರ ಕಥೆ, ಜೋಗಿಯವರ ಚಿತ್ರಕಥೆಯಿರುವ ಈ ಸಿನೆಮಾ ನೋಡಿದ್ದು ಕಥೆ ಆಧಾರಿತ ಚಿತ್ರಗಳ ವಿಭಾಗದಲ್ಲಿ. ಭಾರತಿ ಶಂಕರ್ ನಿದರ್ೇಶನ ಬಿಗುವಿಲ್ಲದೆ ಸಾಗಿದಂತೆಯೂ ಮೂವತ್ತು ನಿಮಿಷಗಳಲ್ಲಿ ಮುಗಿಸಬಹುದಾದ ಚಿತ್ರವನ್ನು ಗಂಟೆಗಟ್ಟಲೇ ತೋರಿಸಿದಂತೆಯೂ ನನಗನಿಸಿದ್ದು ಬಹುಶ: ಸೋಜಿಗವೇನಲ್ಲ. ಶಾನುಭೋಗರ ಮಗ ಅಷ್ಟು ಸಣ್ಣ ವಯಸಿನ ರಾಘು ಬಾಯಲ್ಲಿ ಆಡಿಸಿದ ಮಾತುಗಳು ವಯಸಿಗೆ ಮೀರಿದವೇನೋ ಅಂತಲೂ ಅನಿಸಿದ್ದು ಹೌದು. ಕಡಲ ಕೊರೆತದಂಥಾ ವಿಷಯವನ್ನು ನಿರಂತರ ತಲೆ ಕೊರೆವಷ್ಟು ಗಾಢವಾಗಿ ಚಿತ್ರಿಸುವಲ್ಲಿ ಸೋತಿದ್ದಾರೆ. ಕಡಲತೀರದ ಕಥೆಗೆ ಅಲ್ಲಿನದೇ ಭಾಷೆಯ ಟಚ್ ಕೊಟ್ಟಿದ್ದರೆ ಚಿತ್ರಕ್ಕೆ ಮೂವತ್ತು ಮಾರ್ಕು ಹೆಚ್ಚಿಗೆ ಕೊಡಬಹುದಿತ್ತು. ಮೀನುಗಾರ ಅಷ್ಟು ದೊಡ್ಡ ಅಲೆ ಬರುತ್ತೆ ಅಂತ ಹುಡುಗನಿಗೆ ಹೇಳುವಾಗ ತೆರೆಯ ಮೇಲೆ ಕಾಣುವ ಅಲೆ ತೀರಾ ಸಾಮಾನ್ಯ ಗಾತ್ರದ್ದು. ಇನ್ನುಳಿದಂತೆ ಶಾನುಭೋಗರ ಆಡಳಿತ ವ್ಯವಸ್ಥೆಯ ಅಡಿಯಲ್ಲಿರುವ ಊರಿನ ರಾಜಕೀಯಗಳು, ಅಧಿಕಾರಿಗಳ ಉಡಾಫೆ, ಊರಿಗೆ ಊರೇ ಅಳುತ್ತಿದ್ದಾಗಲೂ ನಿರಾಳವಾಗಿ ಕೂರಬಲ್ಲ ತಹಶೀಲ್ದಾರ, ಎಂದೋ ಊರು ಬಿಟ್ಟು ಹೋದ ಮಗನಿಗಾಗಿ ಇನ್ನೂ ಕಾಯುತ್ತಲೇ ಇರುವ ತಾತ, ಮುದ್ದಿನ ಹಸು ಕಪಿಲೆಯನ್ನು ಬಿಟ್ಟು ಹೋಗಲಾರದೆ ಅಳುವ ಶಾನುಭೋಗರ ತಾಯಿಯ ವೇದನೆ ಎಲ್ಲ ಸಹಜ ಸಹಜ.. ನನ್ನ ಮನ ತಟ್ಟಿದ್ದು ಸದಾನಂದ ಮೇಷ್ಟ್ರು ಮಕ್ಕಳನ್ನು ಆವರಿಸಿಕೊಳ್ಳುವ ಪರಿ. ನಾನು ಶಾಲೆಗೆ ಹೋಗುತ್ತಿದ್ದ ದಿನಗಳಲ್ಲಿ ಅಂಥದ್ದೇ ಅವಿನಾಭಾವ ಸಂಬಂಧ. ಒಂದನೇ ಕ್ಲಾಸಿನ ರುಕ್ಮಯ ಮಾಸ್ತರು, ಎರಡನೇ ಕ್ಲಾಸಿನ ರಮಾನಂದ ಮಾಸ್ತರು, ಪ್ರಮೀಳಾ ಟೀಚರು, ಸುಧಾ, ಶಶಿಕಲಾ ಟೀಚರುಗಳೆಲ್ಲರೂ ನನ್ನ ಮನದಂಗಳದಲ್ಲಿ ಸುಳಿದಾಡಿದ್ದರು. ಮನೆಗಿಂತ ಹೆಚ್ಚು ಹೊತ್ತು ಶಾಲೆಯಲ್ಲಿ ಕಳೆಯುತ್ತಿದ್ದ ನಮಗೆ ಟೀಚರುಗಳೆಂದರೆ ಎಲ್ಲರಿಗಿಂತ ಹೆಚ್ಚು ಶಕ್ತಿವಂತರೆಂಬ ಭಾವ. ಮೂರನೇ ಕ್ಲಾಸಿನಲ್ಲಿದ್ದಾಗ ಶಶಿಕಲಾ ಟೀಚರು ಉಟ್ಟ ಸೀರೆ ನನ್ನಮ್ಮನ ಬಳಿಯೂ ಇತ್ತೆಂಬ ಕಾರಣಕ್ಕೆ ಅದೆಷ್ಟು ಸಂಭ್ರಮವಿತ್ತು ನನಗೆ.. ಮನಸನ್ನು ಪೂರ್ತಿಯಾಗಿ ಬಾಲ್ಯದ ಕಡೆಗೆ ಸೆಳೆದ ಶಾಲೆ ಮತ್ತು ಮಕ್ಕಳ ಚಿತ್ರಣಕ್ಕೆ ವಂದೇ.
ಎಲ್ಲೋ ಓದಿದ ತರಂಗದ ನೆನಪಿನಿಂದ ಮಕ್ಕಳೆಲ್ಲ ಒಟ್ಟಾಗಿ ಕಾರಂತಜ್ಜನಿಗೆ ಪತ್ರ ಬರೆಯುವುದು, ಅವರ ಮಾರುತ್ತರದ ನಿರೀಕ್ಷೆ, ಅವರೊಬ್ಬರು ಜತೆಗಿದ್ದರೆ ಎಲ್ಲಾ ಗೆಲ್ಲಬಲ್ಲೆವೆಂಬ ನಂಬಿಕೆ, ಅವರದೇ ರೀತಿಯಲ್ಲಿ ಮಾಡುವ ಸಂಘಟನೆ, ಕಾರಂತಜ್ಜ ಹೇಳಿದ್ದೇ ಸರಿ ಅವರ ಮಾತಿಗೆ ಎದುರಿಲ್ಲವೆಂಬಂತೆ ಪ್ರತಿರೋಧವಿಲ್ಲದೇ ಮೌನವಾಗಿ ಊರು ಬಿಡುವುದು, ಎಲ್ಲ ಸಹಜವಾಗಿ ಮೂಡಿ ಬಂದಿದೆ. ಈ ಮಕ್ಕಳೆಲ್ಲ ಎಲ್ಲೋ ಒಂದು ಕಡೆ ಭವಿಷ್ಯದ ಬೆಳಕಿನಂತೆ ಕಾಣುವುದು ನಿಜ. ಪರಿಸರ ಸಂರಕ್ಷಣೆ, ಮನುಕುಲ ವಿನಾಶ ತಡೆಯ ನಿಟ್ಟಿನಲ್ಲಿ ಮಾಡಿದ ಈ ಸಿನೆಮಾ ತನ್ನ ಆಶಯವನ್ನು ಪೂರ್ತಿಯಾಗಲ್ಲದಿದ್ದರೂ ಸ್ವಲ್ಪ ಮಟ್ಟಿಗೆ ಪೂರೈಸುವಲ್ಲಿ ಯಶಸ್ವಿಯಾಗಿದೆ. ಹೈಸ್ಕೂಲು ಮಕ್ಕಳಿಗೆ ತೋರಿಸಿದರೆ ಇನ್ನೂ ಹೆಚ್ಚು ಪರಿಣಾಮಕಾರಿಯಾದೀತು. ಒಟ್ಟಾರೆಯಾಗಿ ನಾನು ಕೊಡಬಹುದಾದ್ದು ಅರವತ್ತು ಮಾರ್ಕು. ಚಿತ್ರದ ಕ್ಲೈಮಾಕ್ಸು ಎಂಬುದನ್ನು ಮೊದಲಿಗೇ ತೋರಿಸುವ ಬದಲು ಕೊನೆಯಲ್ಲಿ ತೋರಿಸಿದ್ದರೆ ಇನ್ನೊಂದೈದು ಜಾಸ್ತಿ ಕೊಡಬಹುದಿತ್ತೇನೋ…

ಇನ್ನುಳಿದ ಚಿತ್ರಗಳ ಬಗ್ಗೆ ನಿಧಾನವಾಗಿ ಬರೆಯುವೆ

(ಚಿತ್ರ ಗೌತಮನ ಅಪ್ಪಣೆಯಿಲ್ಲದೆ ಕದ್ದದ್ದು)

Delhi 6

 ಮಸಕ್ಕಲಿ..ಮಸಕ್ಕಲಿ.. ಮೌಲಾ..ಮೌಲಾ.. ದಂಥ ಹಾಡಿಲ್ಲದೇ ಹೋದಲ್ಲಿ ಇಷ್ಟು ಆಸೆಯಿಂದ ಬಂದು ಡಾಕ್ಯುಮೆಂಟರಿ ನೋಡುವುದಾಯ್ತಲ್ಲ ಎನಿಸುತ್ತಿತ್ತು.. ನಾವೂ ಮಂಗ ಆದೆವಲ್ಲ ಅನ್ನಿಸದೆ ಇರುತ್ತಿರಲಿಲ್ಲ. ಡೆಲ್ಲಿ 6 ಚಿತ್ರ ನೋಡಿ ಬಂದ ನಂತರ ಹೊಳೆದದ್ದಿಷ್ಟು… sonam

ನಮ್ಮೆಲ್ಲರೊಳಗೂ ಒಂದು ಕರಿ ಬಂದರ್ ಇರುತ್ತೆ.. ಬೇರೆಯವರಿಗೆ ತೊಂದರೆ ಕೊಟ್ಟು ತಾನು ಖುಷಿ ಪಡುತ್ತಾ ಇರುತ್ತೆ. ಮೂಲಭೂತವಾಗಿ ನಮ್ಮೊಳಗೆ ಅಡಕವಾಗಿರುವ ಈ ಸ್ವಭಾವದ ಎಳೆಯ ಮೇಲೆ ಇಡೀ ಕಥೆ ಸಾಗುತ್ತದೆ. ಇದಕ್ಕೆ ಸಪೋಟರ್ು ಎಂಬಂತೆ ಹಿಂದೊಮ್ಮೆ ದೆಹಲಿಯಲ್ಲಿ ಆಗಿದ್ದ ಮಂಗನ ಕಾಟವನ್ನು ಇಲ್ಲೂ ಬಳಸಿಕೊಂಡಿದ್ದಾರೆ. ಅಭಿಷೇಕ್, ವಹೀದಾರಂಥ ಅಜ್ಜಿ ಮೊಮ್ಮಗ, ಅವರ ನಡುವಿನ ಅನುಪಮ ಭಾವ ಬಂಧ, ಜತೆಗೆ ಸೋನಂ ಕಪೂರ್ ಎಂಬ ಚಿನಕುರುಳಿಯನ್ನು ಆಯ್ಕೆ ಮಾಡಿಕೊಂಡು ಈ ಚಿತ್ರ ಒಂದು ಡಾಕ್ಯುಮೆಂಟರಿ ಆಗುವ ಅಪಾಯದಿಂದ ತಪ್ಪಿಸಿಕೊಂಡಿದ್ದಾರೆ ರಾಕೇಶ್ ಮೆಹ್ರಾ. ಭಾರತೀಯ ಭಾವಸೂಕ್ಷ್ಮತೆ, ಕೋಮು ಸಂವೇದನೆ, ನಮ್ಮ ದೇಶದ ವಿಭಿನ್ನತೆ, ಜತೆಗೇ ತಳುಕು ಹಾಕಿಕೊಂಡಿರುವ ನಮ್ಮ ಸಂಸ್ಕೃತಿಯ ಅನನ್ಯತೆಗಳನ್ನು ಸುಂದರವಾಗಿ ಹೆಣೆದು ಚಂದದೊಂದು ಚಿತ್ರ ಮಾಡಿದ್ದಾರೆ.

ಅಜ್ಜಿಯ(ವಹೀದಾ) ಕೊನೆಗಾಲಕ್ಕೆ ನೆಮ್ಮದಿಗಾಗಿ ಆಕೆಯನ್ನು ಮೊಮ್ಮಗ(ಅಭಿಷೇಕ್) ದೆಹಲಿಗೆ ಕರ್ಕೊಂಡು ಬರ್ತಾನೆ. ಅವರು ಬಂದಾಗ ಇಲ್ಲಿ “ಕಾಲಾ ಬಂದರ್”ನದೇ ಕಾರುಬಾರು ನಡೆಯುತ್ತಿರುತ್ತದೆ. ಯಾರೋ ಕಿಡಿಗೇಡಿಗಳು ‘ಮಂಗ’ನ ಹೆಸರಿನಲ್ಲಿ ಜನರನ್ನು ಹೆದರಿಸುತ್ತಾ ಒಂದು ತೆರನಾದ ಮಾಸ್ ಹಿಪ್ನಾಟಿಸಂ ಸೃಷ್ಟಿ ಮಾಡಿರುತ್ತಾರೆ ಮತ್ತು ಅದೇ ಅವರ ಸಂತೋಷ. ಮೊಮ್ಮಗ ರೋಷನ್ಗೆ ಇದೆಲ್ಲಾ ಹಿಡಿಸದೆ ಮತ್ತೆ ವಿದೇಶಕ್ಕೆ ತೆರಳೋಣ ಎಂದಾಗ ಅಜ್ಜಿ ಒಪ್ಪದೆ ಆಕೆಗಾಗಿ ಇಲ್ಲೇ ಉಳಿಯುತ್ತಾನೆ. ಇದೆಲ್ಲದರ ಮಧ್ಯೆ “ಬಿಟ್ಟು”(ಸೋನಂ) ಪರಿಚಯವೂ ಆಗಿರುತ್ತದೆ ಮತ್ತು ಆಕೆ ಇವನಿಗೆ ಚೂರೂ ಮಾರುಹೋಗಿರುವುದಿಲ್ಲ!! ಟಿಪಿಕಲ್ ಭಾರತೀಯ ಮಧ್ಯಮ ವರ್ಗದ ಮನೋಭಾವದ ಅಪ್ಪನ ಮಗಳಾದ ಆಕೆಗೆ ಇಂಡಿಯನ್ ಐಡೋಲ್ ಆಗಿ ತನ್ನ ಐಡೆಂಟಿಟಿ ತೋರಿಸಿಕೊಳ್ಳುವ ಬಯಕೆಯಾದರೆ ಅವರಪ್ಪನಿಗೆ ಮಗಳ ಮದುವೆ ಮಾಡಿ ಜವಾಬ್ದಾರಿ ಕಳಕೊಳ್ಳುವ ತರಾತುರಿ. ಈ ಸಂದರ್ಭದಲ್ಲಿ ಆಕೆಗೆ ರೋಷನ್ನೊಳಗೊಬ್ಬ ಗೆಳೆಯ ಸಿಗುತ್ತಾನೆ ಮತ್ತು ಆತನೂ ವಿಭಿನ್ನ ಮನೋಭಾವದ ಈಕೆಗೆ ಸೋಲುತ್ತಾನೆ. ಅಷ್ಟರಲ್ಲಿ ಕಾಲಾ ಬಂದರ್ ನೆಪದಲ್ಲಿ ಹಿಂದು ಮುಸ್ಲಿಂ ಗಲಾಟೆ ಪ್ರಾರಂಭವಾಗುತ್ತದೆ. ಸೌಹಾರ್ದತೆ ತರಲು ಪ್ರಯತ್ನಿಸುವ ರೋಷನ್ ಎಲ್ಲರಿಂದ ಬೈಗುಳ ತಿನ್ನುತ್ತಾನೆ. ಈಗ ಅಜ್ಜಿಗೇ ವಿದೇಶಕ್ಕೆ ಹೋಗಬೇಕೆನಿಸುತ್ತದೆ. ಆದರೆ ಪ್ರಿಯತಮೆಯೂರು ದೆಹಲಿಯ ಸೆಳೆತ ಮೊಮ್ಮಗನನ್ನು ಕಟ್ಟಿ ಹಾಕಿದೆ.  ಇಷ್ಟೆಲ್ಲ ಆಗುವಾಗ ತನ್ನ ಹುಡುಗಿ ಇಂಡಿಯನ್ ಐಡೋಲ್ ಆಗುವ ಹಂಬಲದಿಂದ ಅಲ್ಲಿನ ಖತರ್ನಾಕ್ ಫೋಟೋಗ್ರಾಫರ್ ಜತೆ ಮುಂಬೈಗೆ ಓಡಿ ಹೋಗುತ್ತಾಳೆಂಬುದು ಗೊತ್ತಾಗಿ ಆತಂಕವಾಗುತ್ತದೆ. ಈಗ ತಾನು ಕಾಲಾ ಬಂದರ್ ಸೃಷ್ಟಿಸಿದ ಭಯದ ಅಡ್ವಾಂಟೇಜ್ ತೆಗೆದುಕೊಳ್ಳ ಬಯಸಿದ ಹುಡುಗ ಮಂಗನ ವೇಷದಲ್ಲಿ ಆಕೆಯನ್ನು ತಡೆಯಲು ಹೋಗುತ್ತಾನೆ. ಅದೇ ಸಮಯದಲ್ಲಿ ಮಂಗನನ್ನು ಹುಡುಕಿಕೊಂಡು ಬಂದವರ ಕೈಗೆ ಸಿಕ್ಕಿಬಿದ್ದು ಹೊಡೆತ ತಿನ್ನುತ್ತಾನೆ. ಆ ಕ್ಷಣದವರೆಗೂ ತಮ್ಮ ತಮ್ಮಲ್ಲಿ ಹೊಡೆದಾಡುತ್ತಿದ್ದ ಎರಡೂ ಕೋಮಿನವರು ತಮ್ಮ ಜೀವದ ಪ್ರಶ್ನೆ ಬಂದಾಗ ಧರ್ಮ ಮರೆತು ಒಂದಾಗುತ್ತಾರೆ. ಜಾತಿ ಧರ್ಮ ಬೇಧ ತೋರದೆ ಎಲ್ಲರನ್ನು ಪ್ರೀತಿಸಿದವನನ್ನು ಎರಡೂ ಧರ್ಮದವರು ಸೇರಿ ಸಾಯ ಹೊಡೆಯುತ್ತಾರೆ. ಅಲ್ಲಿಗೆ ಮನದಲ್ಲಿ ಹೊತ್ತಿ ಉರಿಯುತ್ತಿದ್ದ ಕೋಪ ಆರುತ್ತದೆ. ಎಲ್ಲರು ತಣ್ಣಗಾಗುತ್ತಾರೆ. delhi 6

ಸಾವರಿಯಾದಲ್ಲಿ ನೋಡಿದಾಗ ಏನೂ ಅನಿಸದ ಹುಡುಗಿ ಸೋನಂ ಇಲ್ಲಿ ಪೂತರ್ಿಯಾಗಿ ಮನತುಂಬಿಕೊಳ್ಳುತ್ತಾಳೆ. ಅಭಿಷೇಕ್ಗೂ ಫುಲ್ ಮಾಕ್ಸರ್್. ಪಾರಿವಾಳ ಚಂದ..ಚಂದ.. ವಹೀದಾ ಈಗಲೂ ಸೌಂದರ್ಯವತಿ… ಕಿತ್ತಾಡುತ್ತಲೇ ಇದ್ದರೂ ಅಂತರಂಗದಲ್ಲೆಲ್ಲೋ ಸಂಬಂಧವನ್ನು ಪೋಷಿಸುತ್ತಲೇ ಬರುವ ಅಣ್ಣ ತಮ್ಮ ನಾಗಿ ಓಂಪುರಿ ಮತ್ತು ಪವನ್ ಮಲ್ಹೋತ್ರಾ, ಅಸ್ಪೃಶ್ಯಳೆನಿಸಿಕೊಂಡರೂ ಸದಾ ಮಾನವೀಯವಾಗಿ ತುಡಿಯುವ ಪಾತ್ರದಲ್ಲಿ ದಿವ್ಯಾ ದತ್ತಾ, ಫ್ಯಾಮಿಲಿ ಫ್ರೆಂಡ್ ಆಗಿದ್ದು ನಿರಂತರ ಸ್ಪಂದಿಸುತ್ತ ಅವರ ಮನೆಯವನೇ ಆಗುವ ರಿಷಿ ಕಪೂರ್, ಅತುಲ್ ಕುಲಕರ್ಣಿ  ಎಲ್ಲರೂ ತಮ್ಮ ಪಾತ್ರಕ್ಕೆ ಪೂರ್ಣ ಜೀವ ತುಂಬಿದ್ದಾರೆ.

ರಂಗ್ ದೇ ಬಸಂತಿಯ ಥರಾ ಇಲ್ಲಿ ಅಬ್ಬರವಿಲ್ಲ, ಅಂಥದ್ದೊಂದು ಕೆಚ್ಚು ಹೈಲೈಟ್ ಆಗುವುದಿಲ್ಲ; ಆದರೆ ಮೌನವಾಗಿಯೇ ದೇಶವನ್ನು ಒಂದು ಮಾಡುವ ತುಡಿತವನ್ನು ಅಭಿಷೇಕ್ ಬಚ್ಚನ್ ಎಂಬ ಚಿತ್ರಿಕೆಯ ಮೂಲಕ ಹೇಳುತ್ತಾ ಸಾಗುತ್ತಾರೆ ಮೆಹ್ರಾ. ಅದ್ಭುತ ಎಂಬಂತೇನಿಲ್ಲದಿದ್ರೂ ಒಂದು ಬಾರಿ “ನೋಡಬಲ್” ಎನ್ನಬಹುದಾದ ಚಿತ್ರವಂತೂ ಖಂಡಿತಾ ಹೌದು. ಪುರುಸೊತ್ತಿಲ್ಲದಿದ್ದರೂ ಬಿಡುವು ಮಾಡಿಕೊಂಡು ಚೆಂದದ ಸೋನಂ, ಅಭಿಷೇಕ್, ಪಾರಿವಾಳ, ವಹೀದಾ ನೋಡಲಿಕ್ಕಾದರೂ ಹೋಗಿ ಬನ್ನಿ…. delhi-6

ಚಿತ್ರಗಳು : Netನಿಂದ ಕದ್ದದ್ದು

%d bloggers like this: