ರಾತ್ರಿ ರಸಘಳಿಗೆ; ಬೆಳಗ್ಗೆ ವಿಷಗುಳಿಗೆ

ಯುವ ಜನಾಂಗದ ಮೇಲೆ ಇಂಥ ಜಾಹೀರಾತುಗಳ ಪರಿಣಾಮವೆಷ್ಟು ?

ಅದಿನ್ನೂ ಸ್ಯಾನಿಟರಿ ನ್ಯಾಪ್ ಕಿನ್ ಗಳು ನಮ್ಮಲ್ಲಿಗೆ ಕಾಲಿಡುತ್ತಿದ್ದ ಸಮಯ. ಅವುಗಳನ್ನು ಜನಪ್ರಿಯವಾಗಿಸೋದೇ ದೊಡ್ಡ ಸವಾಲಾಗಿತ್ತು. ಅವುಗಳ ಹೆಸರೆತ್ತಿದರೆ ಜಾಹೀರಾತು ಬಂದರೆ ಅಮ್ಮಂದಿರು ಮುಖ ಸಿಂಡರಿಸಿಕೊಳ್ಳುತ್ತಿದ್ದರು. ನ್ಯಾಪ್ ಕಿನ್ ಕಂಪನಿ ಈ ಜಾಹೀರಾತಿಗೆ ಅವತ್ತು ಎಲ್ಲರನ್ನು ತಲುಪಬಲ್ಲ ಜನಪ್ರಿಯತೆ ಹೊಂದಿದ್ದ ರೇಣುಕಾ ಶಹಾನೆಯ ಮೂಲಕ ನೈರ್ಮಲ್ಯದ ಪಾಠ ಹೇಳಿತ್ತು. ಈಗಿನಂತೆ ನ್ಯಾಪ್ಕಿನ್ ಹೂವಾಗಿ ಅರಳುವುದಾಗಲೀ, ಹ್ಯಾಪ್ಪಿ ಪೀರಿಯಡ್ ಆಗಲೀ ಅದರಲ್ಲಿರಲಿಲ್ಲ. ಯಾರಿಗೂ ಮುಜುಗರವಾಗದ ರೀತಿಯಲ್ಲಿ ಬಹಳ ನಾಜೂಕಿನಿಂದ ಹೆಣೆದ ಶಬ್ದ ಮಾಲಿಕೆ ಮಡಿವಂತ ಅಮ್ಮಂದಿರನ್ನೂ ಗೆದ್ದಿತ್ತು. ಆರೋಗ್ಯ ಇಲಾಖೆ ಕಲಿಸಲು ವಿಫಲವಾಗಿದ್ದ ಶುಚಿತ್ವದ ಪಾಠವನ್ನು ಈ ಜಾಹೀರಾತು ಸುಲಭವಾಗಿ ಹೇಳಿತ್ತು.  ಅದೇ ಸಮಾಜ ಇಂದು ಆಶ್ಚರ್ಯಕರ ರೀತಿಯಲ್ಲಿ ಬದಲಾಗಿದೆ. ಗರ್ಭ ನಿರೋಧಕ ಮಾತ್ರೆಗಳ ಜಾಹೀರಾತುಗಳು ಕೂಡ ಎಗ್ಗಿಲ್ಲದೇ ಪ್ರಸಾರವಾಗುತ್ತಿದೆ.  ಆಕಸ್ಮಿಕವೊಂದು ಸಂಭವಿಸಿದಾಗ ಸುರಕ್ಷತೆಗಾಗಿ ಇರುವ ಈ ಮಾತ್ರೆಗಳನ್ನು ಯಾರು ಯಾವಾಗ ಬೇಕಾದರೂ ತೆಗೆದುಕೊಳ್ಳಬಹುದು ಎಂದಂತಿದೆ.

ಅವಳು ಗೆಳತಿಗೆ ಫೋನ್ ಮಾಡ್ತಾಳೆ; ಗೆಳತಿ ಬಹು ಬುದ್ಧಿವಂತೆ. ಮಾತ್ರೆ ನುಂಗುವಂತೆ ಸಲಹೆ ಕೊಟ್ಟು ನಿರಾಳವಾಗಿಸುತ್ತಾಳೆ. ಎಲ್ಲ ಮುಗಿದ ನಂತರ ಮಾತ್ರೆಯೊಂದನ್ನು ನುಂಗಿದರಾಯ್ತು ಬಿಡು ಎಂಬ ಉಡಾಫೆಯಂತೆ ಬಿಂಬಿತವಾಗಿದೆ ಮರುದಿನದ ಮಾತ್ರೆಗಳ (Morning After Pills) ಜಾಹೀರಾತು. ಈ ಸೌಲಭ್ಯವಿರುವ ಕಾರಣ ಚಿಂತೆ, ಚಿಂತನೆ ಎರಡೂ ಮಾಡದೆ ಯಾರು ಬೇಕಾದರೂ ಲೈಂಗಿಕತೆಯ ಅನುಭವ ಹೊಂದಬಹುದು ಎಂಬ ಸ್ಪಷ್ಟ ಸಂದೇಶವನ್ನು ಈ ಜಾಹೀರಾತುಗಳು ನೀಡುವುದು ಸುಳ್ಳಲ್ಲ. ಯಾಕೆಂದರೆ ಈ ಜಾಹೀರಾತಿನಲ್ಲಿರುವವರು ಮದುವೆಯಾದವರು ಎಂಬ ಯಾವ ಪುರಾವೆಯೂ ಇಲ್ಲ. ಮದುವೆಯಾದವರು ಮಾತ್ರ ಬಳಸಿ ಎಂದು ಅವರೂ ಹೇಳಿಲ್ಲ. ಹೊಸದೇನಾದರೂ ಕಂಡ ಕೂಡಲೇ ಪ್ರಯೋಗಿಸಿ ನೋಡುವ ಕುತೂಹಲ ಹೊಂದಿದ ಇಂದಿನ ಯುವಜನತೆಯ ಮೇಲೆ ಯಾವ ಪ್ರಭಾವ ಬೀರಬಹುದು ಎಂಬುದು ಚಿಂತನಾರ್ಹ. ಜವಾಬ್ದಾರಿ ರಹಿತವಾದ ಸ್ವೇಚ್ಛೆಯ ಜನಾಂಗವೊಂದರ ಉಗಮಕ್ಕೆ ಇಂಥದ್ದೂ ಒಂದು ಕಾರಣವಾಗಬಹುದಲ್ಲ ಎಂಬ ಕಳವಳ.

ಹೀಗಂದ ಮಾತ್ರಕ್ಕೆ ಈ ಮಾತ್ರೆಗಳನ್ನು ಸಂಪೂರ್ಣವಾಗಿ ತಡೆಯುವುದು ಅಥವಾ ವಿರೋಧಿಸುವುದು ಸಾಧುವೂ ಅಲ್ಲ; ಸಾದ್ಯವೂ ಇಲ್ಲ. ಮಹಿಳೆಯರಿಗೆ ತಮ್ಮ ಲೈಂಗಿಕ ಬದುಕು ಮತ್ತು ಗರ್ಭಧಾರಣೆಯ ಮೇಲೆ ಹಿಡಿತ ಮತ್ತು ವೈಯಕ್ತಿಕ ಸ್ವಾತಂತ್ರ್ಯವಿರುವುದು ಅವಶ್ಯಕವೆಂಬ ಕಾರಣಕ್ಕಾಗಿಯೇ ಇಂಥ ಜಾಹೀರಾತುಗಳ ಪ್ರಸಾರಕ್ಕೆ ಪರವಾನಗಿ ನೀಡಲಾಗಿದೆ. ಆದರೆ ಮಹಿಳೆಯರ ದೈಹಿಕ ಸ್ವಾಸ್ಥ್ಯದಷ್ಟೇ ಮುಖ್ಯವಾದ ಸಾಮಾಜಿಕ ಸ್ವಾಸ್ಥ್ಯ ಅಂದರೆ ಸಮಾಜದ ನೈತಿಕ ಸ್ವಾಸ್ಥ್ಯದ ಬಗ್ಗೆ  ಪ್ರಮುಖವಾಗಿ ಗಮನ ನೀಡಬೇಕಾಗಿತ್ತು; ಆದರೆ ಆ ವಿಚಾರವನ್ನೇ ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಜಾಹೀರಾತುಗಳು ಇಂದು ಬಹಳ ಪ್ರಭಾವಶಾಲಿಯಾಗಿರುವ ಕಾರಣ ತುಂಬ ಜಾಗರೂಕತೆಯಿಂದ ಅವುಗಳನ್ನು ರೂಪಿಸಿ ಎಲ್ಲೂ ಅಂಕೆ ಮೀರದಂತೆ ಸಂದೇಶ ರವಾನಿಸುವುದು ಬಹಳ ಮುಖ್ಯ.

ಹಾಗೆ ನೋಡಿದರೆ, ನಾವು ತುಂಬಾ ಮುಂದುವರಿದ ಮತ್ತು ಮುಕ್ತ ಸಮಾಜ ಎಂದುಕೊಂಡಿರುವ ಬಹಳಷ್ಟು ದೇಶಗಳಲ್ಲಿ ಈ ಜಾಹೀರಾತು ಪ್ರಸಾರಕ್ಕೆ ಕಠಿಣ ಕಾನೂನುಗಳಿವೆ. ಇಂತಿಂಥ ಹೊತ್ತಿನಲ್ಲಿ ಮಾತ್ರ ಪ್ರಸಾರ ಮಾಡಬೇಕೆಂಬ ನಿಯಮವಿದೆ. (ಬಹುತೇಕ ಮಕ್ಕಳು ಮಲಗಿರುವ ಸಮಯಕ್ಕೆ ಇಂಥವು ಪ್ರಸಾರವಾಗುತ್ತವೆ). ಕೆಲವೊಂದು ದೇಶಗಳಲ್ಲಿ ಇಂಥ ಜಾಹೀರಾತು ಪ್ರಸಾರ ಕೇವಲ 3-4 ವರ್ಷಗಳ ಹಿಂದಷ್ಟೇ ಶುರುವಾಗಿದೆ. ಹಾಗಿದ್ದೂ ಕೂಡ ವಿಷಯದ ಗಂಭೀರತೆಯನ್ನು ಅದು ಎತ್ತಿ ಹಿಡಿದಿಲ್ಲವಾದ್ದರಿಂದ ಅಪಾಯಕ್ಕೆಡೆಮಾಡಿ ಕೊಡಬಹುದು ಎಂದು ಅವರು ಪ್ರತಿಭಟನೆ ಮಾಡಿದ್ದರು. ನಮ್ಮ ನೆರೆ ರಾಜ್ಯವಾದ ಕೇರಳದಲ್ಲಿ ಕೂಡ ಕಳೆದೆರಡು ವರ್ಷಗಳ ಹಿಂದೆ ಮಿಸ್-ಟೇಕ್ ಎಂಬ ಮಾತ್ರೆಯ ಬಗ್ಗೆ ಪ್ರತಿಭಟನೆ ನಡೆದಿತ್ತು. ಮಿಸ್-ಟೇಕ್ ಅಂದರೆ ಮದುವೆಯಾಗದವರು ಕೂಡ ತೆಗೆದುಕೊಳ್ಳಬಹುದು ಎಂಬ ತಪ್ಪು ಸಂದೇಶ ರವಾನಿಸುತ್ತಿದೆ ಎಂಬುದು ಅವರ ವಾದ. ದುರಾದೃಷ್ಟವಶಾತ್ ನಮ್ಮಲ್ಲಿ ಈಗ ಆಗುತ್ತಿರುವುದೂ ಅದೇ. “ಈ ಮಾತ್ರೆಗಳು OTC Drug (Over The Counter Drug) ಆಗಿರುವ ಕಾರಣ 15 ರಿಂದ 30 ವರ್ಷದೊಳಗಿನವರೇ ಇದನ್ನು ಒಯ್ಯುವುದು ಮಾಮೂಲು. ಮದುವೆಯಾಗಿದೆಯೋ ಇಲ್ಲವೋ ಕೇಳುವ ಅಧಿಕಾರ ನಮಗಿಲ್ಲದ ಕಾರಣ ಅವರು ಕೇಳಿದ ತಕ್ಷಣ ಕೊಡಬೇಕಾಗುತ್ತದೆ. ಜತೆಗೆ ಬೆಲೆಯೂ ತುಂಬ ಕಡಿಮೆ ಇರುವ ಕಾರಣ ಸುಭವಾಗಿ ಕೈಗೆಟಕುತ್ತದೆ. ನನ್ನ ಅನುಭವದ ಪ್ರಕಾರ ಮದುವೆಯಾಗದ ಯುವತಿಯರು, ವಿದ್ಯಾರ್ಥಿನಿಯರೇ ಇದನ್ನು ಹೆಚ್ಚಾಗಿ ಬಳಸುತ್ತಾರೆ. ಇದನ್ನು ಡಾಕ್ಟರ ಸಲಹೆಯ (prescription) ಮೇರೆಗೆ ಮಾತ್ರ ತೆಗೆದುಕೊಳ್ಳುವಂತಾಗಬೇಕು” ಎಂಬುದು ಎರಡು ದಶಕಗಳಿಂದ ಔಷಧ ವ್ಯಾಪಾರದಲ್ಲಿ ತೊಡಗಿರುವ ಹೆಸರು ಹೇಳಲಿಚ್ಛಿಸದ ಹಿರಿಯರೊಬ್ಬರ ಕಳಕಳಿ ತುಂಬಿದ ಸ್ಪಷ್ಟ ನುಡಿ.

ನೈತಿಕತೆಯ ದೃಷ್ಟಿಯಿಂದ ಈ ಮಾತು ಸರಿ ಕಂಡರೂ ವಾಸ್ತವವಾಗಿ ಇದನ್ನು ಜಾರಿಗೆ ತರುವುದು ಸುಲಭವಲ್ಲ.  ಬಹಳಷ್ಟು ಸಲ ವಿವಾಹಿತರೇ ಯಾವುದೋ ಕಾರಣದಿಂದಾಗಿ ಸುರಕ್ಷತಾ ಕ್ರಮ ಕೈಗೊಳ್ಳಲು ಮರೆತಿರಬಹುದು. ಇನ್ನು ಗಂಡ ತಾನು ಸುರಕ್ಷತಾ ಕ್ರಮ ಕೈಗೊಳ್ಳದೇ ಇದ್ದಾಗ ಗಂಡಸು ಕೂಡ “ಬೆಳಗ್ಗೆದ್ದು ನೀನೇ ಮಾತ್ರೆ ನುಂಗುವುದಕ್ಕೇನು ಕಷ್ಟ?” ಎಂಬ ಪ್ರಶ್ನೆ ಕೇಳುವುದಿಲ್ಲ ಎಂಬ ಖಾತ್ರಿ ಇಲ್ಲ. ಅಂಥ ಸಂದರ್ಭಗಳಲ್ಲಿ ವೈದ್ಯರ ಬಳಿ ಹೋಗಿ ನನಗಿದನ್ನು ಬರೆದು ಕೊಡಿ ಎಂದು ಕೇಳುವುದು ಎಂಥವರಿಗೂ ಮುಜುಗರ ತರುವ ವಿಷಯ. ಬಹಳಷ್ಟು ಸಲ ವೈದ್ಯರು ನಮ್ಮ ಸಮಯಕ್ಕೆ ದೊರಕದೇ ಹೋಗಬಹುದು. ಮಾತ್ರವಲ್ಲ ಹೀಗೆ ಕೇಳುವ ಹೆಂಗಸರನ್ನ ಆಪಾದಮಸ್ತಕ ದೃಷ್ಟಿಸಿ ಹುಳ್ಳ ನಗೆ ಬೀರುವ ವೈದ್ಯರೂ ನಮ್ಮಲ್ಲಿ ಇಲ್ಲದಿಲ್ಲ. ಅಲ್ಲದೇ ಅವರು ವಿವಾಹಿತರೋ ಅವಿವಾಹಿತರೋ ಎಂಬುದನ್ನು ಪರೀಕ್ಷಿಸುವುದು ವೈದ್ಯರಿಗೂ ಸಾಧ್ಯವಾಗದ ಮಾತು. ಯಾವುದೋ ಅಚಾತುರ್ಯಕ್ಕೋ, ಕಾಮುಕರ ದಾಹಕ್ಕೋ ಬಲಿಯಾದಾಗ ಮುಂದಿನ ಪರಿಣಾಮಗಳನ್ನು ನೆನೆದೇ ಜೀವ ಕಳಕೊಳ್ಳುವ ಹೆಣ್ಣು ಮಕ್ಕಳು ನಮ್ಮಲ್ಲಿ ಇಂದಿಗೂ ಬಹಳಷ್ಟಿದ್ದಾರೆ. ಅಂಥ ಸಂದರ್ಭದಲ್ಲಿ ವೈದ್ಯರ ಬಳಿ ಹೋಗಿ ಎಲ್ಲವನ್ನು ಮತ್ತೊಮ್ಮೆ ವಿವರಿಸುವ ಮನೋಸ್ಥಿತಿಯಲ್ಲಿ ಆಕೆ ಇರುವುದಿಲ್ಲ. ಹಾಗಾದಾಗ ಘಾಸಿಗೊಂಡ ಮನಸ್ಸನ್ನು ಸಂತೈಸಿ ನಿರಾಳವಾಗಿಸುವಲ್ಲಿ ಈ ಮಾತ್ರೆಯ ಪಾತ್ರ ಮಹತ್ತರವಾಗಿದ್ದು ಒಂದು ಜೀವವನ್ನೇ ಉಳಿಸಬಲ್ಲುದು. ಇಂಥ ಸಂರ್ಭಗಳಲ್ಲಿ ಮಾತ್ರ ಇವನ್ನು ಬಳಸಿಕೊಳ್ಳಿರೆಂದು ಜಾಹೀರಾತಿನಲ್ಲಿ ಎಲ್ಲೂ ಸೂಚಿಸಿಲ್ಲ.

ಇವೆಲ್ಲದರ ಜತೆ ಇನ್ನೊಂದು ಗಮನಾರ್ಹ ಅಂಶವೆಂದರೆ ಇವುಗಳನ್ನು ಬಳಸಬೇಕಾದ ಕ್ರಮಗಳ ಬಗ್ಗೆ ಹೇಳಿಲ್ಲವೆಂಬುದು ಇನ್ನೂ ಆತಂಕಕಾರಿ. ಇದು ಸಾಮಾನ್ಯ ಕುಟುಂಬ ಯೋಜನೆಯ ಮಾತ್ರೆಯಂತಲ್ಲ. ಅವುಗಳಲ್ಲಿರುವುದರ ಐದು ಪಟ್ಟು ಹೆಚ್ಚು ರಾಸಾಯನಿಕಗಳು ಇವುಗಳಲ್ಲಿರುತ್ತವೆ. ಇಂದು ಪ್ರತಿ ಮನೆಗಳಲ್ಲೂ ಟಿ.ವಿ ಬಂದಿದ್ದು ಇವುಗಳಲ್ಲಿ ಬರುವ ಜಾಹೀರಾತುಗಳು ಎಲ್ಲ ವರ್ಗದವರನ್ನೂ ತಟ್ಟುತ್ತವೆ. ಜಾಹೀರಾತು ನೋಡುವ ಅವಿದ್ಯಾವಂತ ಹೆಂಗಸರು ಇದನ್ನು ದಿನ ನಿತ್ಯವೂ ಬಳಸುವ ಮಾತ್ರೆ ಎಂದುಕೊಂಡು ಸೇವಿಸುವ ಅಪಾಯ ಇದ್ದೇ ಇದೆ. ಆಕಸ್ಮಿಕಗಳಾದಾಗ ಮಾತ್ರ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲೋಸುಗ ಇರುವ ಈ ಮಾತ್ರೆ ಚಟವಾಗಿಬಿಟ್ಟರೆ ಕ್ಯಾನ್ಸರ್ ನಂಥ ಕಾಯಿಲೆಗಳಿಗೆ ಬಲಿಯಾಗಬಹುದಾದ ಎಲ್ಲಾ ಸಾಧ್ಯತೆಗಳಿವೆ. ಅಲ್ಲದೇ ಈ ಮಾತ್ರೆ ಗರ್ಭ ಕಟ್ಟದಂತೆ ತಡೆಯುತ್ತದೆಯೇ ಹೊರತು ಏಡ್ಸ್ ಸೇರಿದಂತೆ ಇತರ ಯಾವುದೇ ಲೈಂಗಿಕ ಖಾಯಿಲೆಗಳಿಂದ ರಕ್ಷಣೆ ನೀಡುವುದಿಲ್ಲ; ಇದು ಕಾಂಡೋಮ್ ಗೆ ಬದಲಿ ವ್ಯವಸ್ಥೆ ಅಲ್ಲ ಎಂಬ ತಿಳುವಳಿಕೆಯನ್ನು ಜಾಹೀರಾತಿನಲ್ಲಿ ನೀಡುವುದು ಅತ್ಯಾವಶ್ಯ. ಈ ಮಾತ್ರೆ ಎಲ್ಲವನ್ನೂ ಸರಿ ಮಾಡುತ್ತದೆಂಬ ನಂಬಿಕೆಯಲ್ಲಿ ಯಾವುದೇ ರೀತಿಯ ಸುರಕ್ಷತೆಯನ್ನು ತೆಗೆದುಕೊಳ್ಳದವರ ಭವಿಷ್ಯವೇ ಕತ್ತಲಾಗಬಹುದು.

ಇನ್ನು ಯಾವ ಸಂದರ್ಭಗಳಲ್ಲಿ ಇವುಗಳನ್ನು ಬಳಸಬಾರದು ಎಂಬ ಮುನ್ನೆಚ್ಚರಿಕೆಯನ್ನು ಕೂಡ ಜನರಿಗೆ ತಲುಪಿಸುವುದು ಜಾಹೀರಾತುಗಳ ಜವಾಬ್ದಾರಿ. ಈ ಮಾತ್ರೆಗಳಲ್ಲಿ ಬಹಳಷ್ಟು ರಾಸಾಯನಿಕಗಳೂ ಹಾರ್ಮೋನುಗಳೂ ಇರುವ ಕಾರಣ ಕೆಲವು ಅನಾರೋಗ್ಯದ ಸ್ಥಿತಿಯಲ್ಲಿ ಇವುಗಳನ್ನು ಬಳಸುವುದು ಜೀವಕ್ಕೇ ಅಪಾಯ ತರಬಹುದು. ಸಿಗರೇಟಿನ ಪ್ಯಾಕ್ ಗಳ ಮೇಲೆ ಮುದ್ರಿಸುವಂಥ ಕನಿಷ್ಟ ಎಚ್ಚರಿಕೆಗಳನ್ನೂ ಇವರು ನೀಡುವುದಿಲ್ಲ.

ವ್ಯಾಪಾರ ಹೆಚ್ಚಿಸಿಕೊಳ್ಳುವುದರ ಕಡೆಗೆ ಮಾತ್ರ ಗಮನ ಕೊಡುವ ಮರುದಿನದ ಮಾತ್ರೆ ತಯಾರಿಕಾ ಕಂಪನಿಗಳು ಉಳಿದೆಲ್ಲ ಸಾಮಾಜಿಕ ಜವಾಬ್ದಾರಿಗಳ ಕಡೆಗೂ ಗಮನ ಹರಿಸಬೇಕು. ಭಾರತದಲ್ಲಿ ಶೇಕಡಾ 40ರಷ್ಟು ಜನ ಇಂಥ ಮಾತ್ರೆಗಳನ್ನು ಕೇಳುವುದಕ್ಕೇ ಮುಜುಗರ ಪಡುತ್ತಾರೆ ಎಂಬ ಸಮೀಕ್ಷಾ ವರದಿಯ ನಡುವೆಯೂ ತಿಂಗಳೊಂದಕ್ಕೆ ಒಂದು ಕಂಪನಿ ತಯಾರಿಸುವ ಮಾತ್ರೆಯೇ ಸುಮಾರು 2ಲಕ್ಷಕ್ಕೂ ಹೆಚ್ಚು ಮಾತ್ರೆಗಳು ಮಾರಾಟವಾಗುತ್ತಿವೆ ಎನ್ನುತ್ತದೆ ಇನ್ನೊಂದು ಅಂಕಿ ಅಂಶ. ಇತರ ಕಂಪನಿಗಳು ತಯಾರಿಸುವ ಮಾತ್ರೆಗಳ ಮಾರಾಟದ ಲೆಕ್ಕವೂ ಸೇರಿದರೆ ಇದು ದುಪ್ಪಟ್ಟಾದೀತು.

ಬದಲಾಗುತ್ತಿರುವ ಜೀವನ ಶೈಲಿ, ವಿಭಕ್ತ ಕುಟುಂಬಗಳಲ್ಲಿ ಹಲವಾರು ಕಾರಣಗಳಿಂದಾಗಿ ಕಡಿಮೆಯಾಗುತ್ತಿರುವ ನೈತಿಕ ಶಿಕ್ಷಣ, ತಂದೆ ತಾಯಿಯರು ಟಿ.ವಿ ನೋಡಲು ಬಿಡದೇ ಹೋದಲ್ಲಿ ಬೇಕಾದ್ದನ್ನು ಕ್ಷಣ ಮಾತ್ರದಲ್ಲಿ ಕಣ್ಣ ಮುಂದೆ ತಂದಿಡುವ ಇಂಟರ್ ನೆಟ್, ಆಧುನಿಕತೆಯ ಹಪಹಪಿಯಲ್ಲಿ ಸ್ವಾತಂತ್ರ್ಯಕ್ಕೂ ಸ್ವೇಚ್ಛೆಗೂ ವ್ಯತ್ಯಾಸವರಿಯದ ಇಂದಿನ ಕಾಲಮಾನದಲ್ಲಿ ಜಾಹೀರಾತುಗಳು ತೀವ್ರ ಪರಿಣಾಮ ಬಿರಬಲ್ಲವು. ಬೇಜವಾಬ್ದಾರಿಯ ಇಂಥ ಜಾಹೀರಾತುಗಳು ಯುವಜನಾಂಗವನ್ನು ಎತ್ತ ಕೊಂಡೊಯ್ದಾವು ? ಪ್ರಜ್ಞಾವಂತರೆಲ್ಲರೂ ಚಿಂತಿಸಬೇಕಾದ ವಿಚಾರವಿದು.

%%%%%%%%%%%%%%%%%

ಸೆಪ್ಟೆಂಬರ್ ನ “ಸಖಿ”ಯಲ್ಲಿ ಪ್ರಕಟವಾದ ಬರಹ. 

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: