ಎಂದೂ ಬಾರದ ಕಂದನಿಗೆ

Withered Flower
ಮಗೂ,
ಇವತ್ತಿನಷ್ಟೇ ಅವತ್ತೂ ನೀನು ಬೇಕಾಗಿದ್ದೆ ನಮಗೆ. ಆದರೆ ಅವತ್ತು ಇವತ್ತಿನಷ್ಟು ಧೈರ್ಯವಿರಲಿಲ್ಲ. ನನ್ನೆಲ್ಲ ಕನಸುಗಳ ತುಂಬ ನೀನಿದ್ದೆ ಮತ್ತು ಬಹುಪಾಲು ನೀನು ಮಾತ್ರ ಇದ್ದೆ. ಅವು ಬರೀ ಕನಸು ಮಾತ್ರ ಕಾಣಬಹುದಾಗಿದ್ದ ದಿನಗಳು ಕಂದಾ. ನೀನು ಮೊಳಕೆಯೊಡೆದಾಗಷ್ಟೇ ನಾವು ವಾಸ್ತವದ ಕಡೆ ತಿರುಗಿದ್ದು; ಅಧೀರರಾಗಿದ್ದು. ನಿಜ ಹೇಳಲಾ ನಿನ್ನ ಇರುವಿಕೆಗಿಂತ ನೀ ಭೂಮಿಗೆ ಬಂದ ನಂತರದ ದಿನಗಳಿಗೆ ಹೆಚ್ಚು ಹೆದರಿದ್ದು. ಕಷ್ಟಗಳ ಕಣಿವೆಯಲ್ಲಿ ನಡೆಯುತ್ತಿದ್ದ ದಿನಗಳವು. ನಮಗೇ ಅದನ್ನೆದುರಿಸುವುದಾಗದೆ ತತ್ತರಿಸಿದಾಗ ನೀ ಬಂದು ನೀನೂ ಆ ನೊವಿನಲ್ಲಿ ಬೇಯುವುದು ಬೇಡವಾಗಿತ್ತು ಮಗೂ. ನಮ್ಮ ಬಾಲ್ಯದ ನಿರಾಸೆ, ಅವಮಾನಗಳು ನಿನ್ನ ಬಾಲ್ಯದ ವರೆಗೂ ಮುಂದುವರಿಯುವುದು ಇಷ್ಟವಿರಲಿಲ್ಲ. ಸುತ್ತೆಲ್ಲಿ ಕಣ್ಣು ಹಾಯಿಸಿದರೂ ಕಾಣುತ್ತಿದ್ದುದು ನಾವೇರಲಾರದ ಶಿಖರಗಳು…ಕಣ್ಣು ಮುಚ್ಚಿದ್ದರೂ ಏನೋ ಭೀತಿ, ಆತಂಕ.
ಆಗಿನ್ನೂ ಮೊಳಕೆಯೊಡೆದಿದ್ದರೂ ನೀನು ನಿನ್ನ ಇರುವುಕೆಯನ್ನು ನಾನಾ ರೀತಿಯಲ್ಲಿ ತೋರಿಸಿದ್ದೆ. ಆ ದಿನಗಳಲ್ಲಿ ನನ್ನ ಭಾವಲೋಕದ ಬಾಗಿಲಲ್ಲಿ ಸಪ್ತವರ್ಣದ ಕಾಮನಬಿಲ್ಲು. ಮುಸ್ಸಂಜೆ ಸುಮ್ಮನೇ ಮೆಟ್ಟಿಲ ಬಳಿ ಬಂದು ಕೂತರೆ ಛಕ್ಕನೆ ನೀ ಬಂದು “ಅಮ್ಮಾ” ಅಂದಂತೆ ಭಾಸ.. ಎದ್ದು ನೋಡಿದರೆ ನೀನಿಲ್ಲ ಆದರೂ ಪುಳಕ. ಅದುವರೆಗೂ ಸಾಮಾನ್ಯವೆನಿಸುತ್ತಿದ್ದ ಎಲ್ಲವೂ ನೀನಿದ್ದಾಗ ಬೆರಗು ಮೂಡಿಸುತ್ತಿತ್ತು. ಮಳೆಬಿಲ್ಲು, ನಕ್ಷತ್ರ, ನರ್ಸರಿ ಮಕ್ಕಳ ಹಾಡು, ಆಗಸದಲ್ಲಿ ಮೋಡ ಬರೆದ ಚಿತ್ರ, ಮಳೆ ಹನಿಯ ತುಂತುರು, ಮನೆಯೆದುರಿನ ಪಾರ್ಕಿಗೆ ವಾಕಿಂಗ್ ಬರುವ ಅಜ್ಜ ಅಜ್ಜಿ ಎಲ್ಲದರಲ್ಲೂ ಹೊಸತನ ದಕ್ಕಿದ್ದು ನಿನ್ನಿಂದ ಕಂದಾ. ಇಂಥದ್ದೊಂದು ಅದ್ಭುತ ಮಾಯಾಲೋಕದ ಸೃಷ್ಟಿಗೆ ಕಾರಣವಾದ ನಿನ್ನನ್ನೇ ನಾವು ಬೇಡವೆಂದೆವು. ಕ್ಷಮಿಸುವೆಯಾ ?
ತುಂಬಾ ಕನಸು ಕಂಡಿದ್ದೆ ನಾನು. ನಿನ್ನ ಪುಟಾಣಿ ಗುಲಾಬಿ ಪಾದಗಳಿಗೆ ಮುತ್ತಿಡುತ್ತಲೇ ಇರಬೇಕು, ಚಿಗುರು ಬೆರಳು ಹಿಡಿದು ತುಂಗೆಯ ತೀರದುದ್ದಕ್ಕೂ ಅಲೆದಾಡಬೇಕು, ನಾವಿಬ್ಬರೂ ಜತೆಯಾಗಿ ನೀರಿನಲ್ಲಿ ಕಾಲು ಇಳಿಬಿಟ್ಟು ಮೀನುಗಳ ಆಟ ನೊಡುತ್ತಾ ಮೈ ಮರೆಯಬೇಕು, ಮರಕೋತಿ ಆಟ ಆಡಬೇಕು, ಕನ್ನಡಿಯಷ್ಟು ನುಣುಪಾದ ನಿನ್ನ ಕೆನ್ನೆಯಲ್ಲಿ ನಗು ತುಂಬಿದಾಗ ನಾನದರ ಚಿತ್ರ ಬರೆಯಬೇಕು, ಪ್ರಕೃತಿಯ ಎಲ್ಲಾ ವಿಸ್ಮಯಗಳಿಗೆ ತೆರೆದುಕೊಳ್ಳುವಂತೆ ನೀನು ರೂಪುಗೊಳ್ಳಬೇಕು.. ಮುಂದೊಂದು ದಿನ ಜಗತ್ತೇ ಮೆಚ್ಚುವ ವಿಜ್ಞಾನಿ ನೀನಾಗಬೇಕು.. “ಹಿಂದೂಸ್ಥಾನವು ಎಂದೂ ಮರೆಯದ….” ಮತ್ತು ಇವೆಲ್ಲಕ್ಕೂ ಮೊದಲು ನಿಂಗೆ ನಿನ್ನಪ್ಪನಷ್ಟೇ ಒಳ್ಳೆಯ ಮನಸಿರಬೇಕು… ಪುಟ್ಟೂ, ನೀನು ಹೆಣ್ಣೇ ಆಗಿರುತ್ತೀ ಎಂಬ ದೊಡ್ಡ ನಂಬಿಕೆಯಿಂದ ನಿಂಗೆ “ಪ್ರಣತಿ” ಅಂತ ಹೆಸರಿಟ್ಟಿದ್ದೆ; ಒಂದು ವೇಳೆ ಅಲ್ಲದೇ ಹೋದರೆ “ಪ್ರಣೀತ್”.. ಹೀಗೇ ಕೋಟಿ ಕನಸುಗಳಿದ್ದವು. ಆದರೆ ವಿಧಿ ಅವನ್ನೆಲ್ಲ ಅಳಿಸಿ ಹಾಕಿತ್ತು. ಈಗ ಅನ್ನಿಸುತ್ತಿದೆ ಪರಿಸ್ಥಿತಿಯಲ್ಲ ಕಂದಾ, ಅದನ್ನೆದುರಿಸಲಾರದ ನಮ್ಮ ಹೇಡಿತನ ನಿನ್ನನ್ನು ಜಗತ್ತಿಗೆ ಬರಲಾರದಂತೆ ಮಾಡಿದ್ದು.
ಯಾವ ಭರವಸೆಯೂ ಇಲ್ಲದ ಆ ದಿನಗಳಲ್ಲಿ ನಮ್ಮನ್ನು ಜೀವಂತವಾಗಿರಿಸಿದ್ದು ಪ್ರೀತಿ..ಪ್ರೀತಿ ಮತ್ತು ಪ್ರೀತಿ. ಅದೊಂದು ನಮ್ಮ ದಾಂಪತ್ಯದಲ್ಲಿ ಹೊಳೆಯಾಗಿ ಹರಿಯುತ್ತಿತ್ತು. ಅಂಥದ್ದೇ ಯಾವುದೋ ಒಂದು ಘಳಿಗೆಯಲ್ಲಿ ಬಹುಶಃ ನೀ ಕುಡಿಯೊಡೆದಿದ್ದೆ. ನಾವು ಅಷ್ಟೇ ಪ್ರೀತಿಯಿಂದ ರಾಜಕುಮಾರಿಯಂತೆ ಬರಮಾಡಿಕೊಳ್ಳಬಹುದೆಂಬ ಆಸೆಯಿಂದ ನೀನೂ ಬಂದಿರಬೇಕು ಅಲ್ವಾ ? ಅಂಥಾ ನಿಂಗೆ ತುಂಬಾ ನೋವು ಮಾಡಿದೆ ನಾನು ಅಲ್ವಾ ? ಸಾರಿ ಕಂದಾ..
ಅವತ್ತು ನೀ ಬೇಡವೆಂದು ನಿರ್ಧಾರ ಮಾಡಿದ ದಿನವೂ ಕೂಡ ಎಂದಿನಂತಿರಲು ಪ್ರಯತ್ನ ಮಾಡಿದೆ. ಆಫೀಸಿಗೂ ಹೋಗಿ ಬಂದೆ. ಆದ್ರೆ ರಾತ್ರಿ ರಾಣಿ ತನ್ನ ಕತ್ತಲ ಚಾದರ ಹಾಸುತ್ತಿದ್ದಂತೆ ಯಾಕೋ ದುಖಃ ತಡೆಯಲಾಗಲಿಲ್ಲ. ನಾನೊಂದು ಕಡೆ, ಅವನೊಂದು ಕಡೆ ಕೂತು ಕಂಬನಿಯ ಕುಯಿಲು… ನಂತರದ ದಿನಗಳಲ್ಲಿ ಅರ್ಥವಾಯಿತು ಕಂದಾ, ಕಷ್ಟಗಳಿಗೆ ಹೆದರಿ ನಿನ್ನನ್ನು ಬೇಡವೆಂದಿದ್ದೇ ಬದುಕಿನ ಅತಿ ದೊಡ್ಡ ತಪ್ಪಾಯಿತು. ನಿನ್ನನ್ನು ಕಳಕೊಂಡ ಯಾತನೆಯಿಂದ ಹೊರಬರಲಾರದೇ ಹೋದೆ. ತಪ್ಪಿತಸ್ಥ ಭಾವ ನನ್ನ ದಿನವೂ ಕೊಲ್ಲುತ್ತಿತ್ತು. ಬದುಕಲ್ಲಿ ಮೊತ್ತ ಮೊದಲ ಬಾರಿಗೆ ಸೋಲಿನ ಅನುಭವವಾಯ್ತು. ಸುತ್ತಲಿನವರ ಮಾತು ಒತ್ತಟ್ಟಿಗಿರಲಿ, ನನ್ನೊಳಗಿನ ಪ್ರಶ್ನೆಗಳಿಗೇ ನನ್ನಲ್ಲಿ ಉತ್ತರವಿರಲಿಲ್ಲ. ಪೂರ್ತಿಯಾಗಿ ಸೋತಿದ್ದೆ ನಾನು. ನಂತರ ನನಗೆ ನಿನ್ನ ಹೊರತಾಗಿ ಬೇರೇನೂ ಬೇಡವೆನಿಸಿತ್ತು. ಕುಡಿಯಲು ಕಣ್ಣೀರು, ಉಣ್ಣಲು ಬೇಸರ, ಮಲಗಲು ಸಂಕಟದ ಹಾಸಿಗೆ, ಸೋಲಿನ ಹೊದಿಕೆ, ನಿರಾಸೆಯ ದಾರಿ…. ನನ್ನನ್ನೇ ನಾನು ಕ್ಷಮಿಸಲಾಗಿಲ್ಲ ಕಣೋ… ಬೆಳದಿಂಗಳಾಗಿ ಬರಬಹುದಾಗಿದ್ದ ಜೀವ ನೀನು; ಆದರೆ ನನಗೇ ಅದೃಷ್ಟವಿರಲಿಲ್ಲ. ನಿನ್ನಂಥ ಬೆಳಕಿನ ಕುಡಿಯನ್ನು ಮನೆಯೊಳಗಿರಿಸಿಕೊಳ್ಳಲಾರದೇ ಹೋದೆ. ಕತ್ತಲಲ್ಲಿ ಹೊಳೆದ ಬೆಳ್ಳಿ ಮಿಂಚನ್ನು ಗುರುತಿಸಲಾರದ ಮೂರ್ಖಳಾಗಿಬಿಟ್ಟೆ. ನಾ ಅವತ್ತು ಕಳಕೊಂಡಿದ್ದು ಕೇವಲ ನಿನ್ನನ್ನಲ್ಲ; ಬಾಳಿನುದ್ದಕ್ಕೂ ಜತೆಗಿರಬಹುದಾಗಿದ್ದ ಸಂಭ್ರಮವನ್ನು ಕೂಡ. ಅವತ್ತು ಬೇಡವಾಗಿದ್ದ ನೀನು ಇವತ್ತು ಮನೆಯ ಮಂದಾರವೆನಿಸುತ್ತಿದ್ದೀ. ಇದಲ್ಲವೇ ದುರಂತ ಅಥವಾ ಸ್ವಯಂಕೃತಾಪರಾಧ ?
ಕಂದಾ, ಈ ಮನೆಯಲ್ಲೀಗ ಕಷ್ಟಗಳಿಲ್ಲ. ನಾವಿಬ್ಬರಿದ್ದರೂ ಇದ್ದರೂ ಯಾರಿಲ್ಲ ಅನಿಸಹತ್ತಿದೆ. ನೀ ಬಿಟ್ಟು ಹೋದ ನೆನಪುಗಳು ಪದೇ ಪದೇ ಕೈ ಹಿಡಿದು ಜಗ್ಗುತ್ತಿವೆ. ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು; ಕನಸಿಲ್ಲದ ದಾರಿಯಲ್ಲಿ ನಡೆಯಲಾಗದು ಕಂದಾ, ಅರ್ಥವಾಗಿದೆ. ಒಡ್ಡಿಲ್ಲದ ಅಣೆಕಟ್ಟಿನಂತೆ ಯಾತನೆಯ ಧಾರೆ. ಅವ್ಯಕ್ತ ವೇದನೆಯೊಂದು ಹಿಂಡುತ್ತಿದೆ. ಎಲ್ಲಿದ್ದೀ ಹುಡುಗಾ ಅಂದರೆ “ಯಾಕೆ” ಎಂಬೊಂದು ಮೆಸೇಜು ಕಳುಹಿಸಿದ ನೋಡು ಆ ಕ್ಷಣ ನೀನು ನೆನಪಾದೆ. ಇಷ್ಟು ದಿನ ಸುಡುತ್ತಿದ್ದ ಎಲ್ಲ ಬೆಂಕಿಯನ್ನು ನಿನ್ನೆದುರು ಹೊರ ಚೆಲ್ಲಿರುವೆ. ಬಹುಶಃ ಈ ನೋವುಗಳೆಲ್ಲ ನಿನ್ನ ಕಂಬನಿಯ ಶಾಪ. ಬೇಡ ಕಂದಾ ಭರಿಸಲಾರೆ ಈ ಯಾತನೆ. ಬೇಸರದ ಬಿಸಿ ಬದುಕು ಸಾಕಾಗಿದೆ ನನಗೆ; ಕ್ಷಮಿಸಿದ್ದೇನೆ ಅಂತೊಮ್ಮೆ ಅಲ್ಲಿಂದಲೇ ಅಂದು ಬಿಡು. ಮನದಲ್ಲಿ ಮನೆಯಲ್ಲಿ ತಂಗಾಳಿ ಹರಡಲಿ. ಇನ್ನು ನನ್ನ ಕಾಡಬೇಡ ಪ್ಲೀಸ್…
“ದೀಪವು ನಿನ್ನದೇ ಗಾಳಿಯು ನಿನ್ನದೇ…
ಆರದಿರಲಿ ಬೆಳಕು… ಮುಳುಗದಿರಲಿ ಬದುಕು…”
(ಬರಹ ಕಾಲ್ಪನಿಕ, ಚಿತ್ರ ಮಾತ್ರ ನಿಜಾ ನಿಜ…)

24 ಟಿಪ್ಪಣಿಗಳು (+add yours?)

 1. ರಂಜಿತ್
  ಸೆಪ್ಟೆಂ 09, 2009 @ 11:15:34

  sakkattagide baraha.. thanks shama madam..:)

 2. dharithri
  ಸೆಪ್ಟೆಂ 09, 2009 @ 11:58:56

  ಅಕ್ಕಾ…
  ತುಂಬಾ ದಿನಗಳಾಗಿತ್ತು ನಿಮ್ಮನೆಗೆ ಬರದೆ…
  ಚೆನ್ನಾಗಿದೆ ನಿಮ್ಮ ನೆನಪಿನ ಮೆರವಣಿಗೆ

 3. malathi S
  ಸೆಪ್ಟೆಂ 10, 2009 @ 05:59:34

  very touching dear Shama.

  Could not read this with a dry eye.

  take care

  malathi S

 4. ಸುಪ್ತದೀಪ್ತಿ
  ಸೆಪ್ಟೆಂ 10, 2009 @ 06:11:47

  ಶಮಾ, ಪ್ರಜ್ಞಾಪೂರ್ವಕ “ಕಳೆದುಕೊಂಡದ್ದರ” ನೋವು, ನಂತರದ ತುಡಿತ, ಹಂಬಲ ಆಳವಾಗಿ ತಟ್ಟುತ್ತವೆ. ಸೂಕ್ತ ಚಿತ್ರ ಇನ್ನಷ್ಟು ಗಾಢತೆಯಿಡುತ್ತದೆ.

 5. arthapoorna
  ಸೆಪ್ಟೆಂ 10, 2009 @ 07:01:30

  nimma kaalpanika naayakiya naijja ,deena morey a kallu devarannu karagisadiddare
  aathanannu yaradaru devarendu karedaareya??

  suppose karedarey……??????????

  Nija devaru kalaadaanu!!!!!!

  touchy…but we dont want to be touched this way.

 6. manasu
  ಸೆಪ್ಟೆಂ 10, 2009 @ 08:05:56

  tumba emotional feeling ide tumba ista aytu..

 7. minchulli
  ಸೆಪ್ಟೆಂ 10, 2009 @ 08:31:10

  ಧರಿತ್ರಿ ನೀ ಬರದೆ ತುಂಬಾ ದಿನ ಆಗಿದ್ದು ಗೊತ್ತಾಗತ್ತೆ. ಈಗ ಬಂದಿದ್ದು ಖುಷಿ. ಥ್ಯಾಂಕ್ಸ್.

 8. minchulli
  ಸೆಪ್ಟೆಂ 10, 2009 @ 08:32:33

  ಮಾಲತಿ , ನಿಮ್ಮ ಅಭಿಮಾನಕ್ಕೆ , ಸಂವೇದನಾಶೀಲ ಮನಸಿಗೆ ಥ್ಯಾಂಕ್ಸ್.

 9. minchulli
  ಸೆಪ್ಟೆಂ 10, 2009 @ 08:36:20

  ನಿಜ ಜ್ಯೋತಿ, ಆಕಸ್ಮಿಕಕ್ಕೂ ಉದ್ದೇಶ ಪೂರ್ವಕ ಮಾಡಿದ ಕ್ರಿಯೆಗೂ ಇರೋ ವ್ಯತ್ಯಾಸ ನಮ್ಮ ಮನಕ್ಕೆ ಇಳಿಯುವುದು ತುಂಬಾ ಗಾಢ ಅನುಭವ ಆಲ್ವಾ ? ಮತ್ತು ಅದು ಕೊಡುವ ನೋವು ಕೂಡ…

 10. minchulli
  ಸೆಪ್ಟೆಂ 10, 2009 @ 08:36:49

  ಮನಸಿಗೆ ಥ್ಯಾಂಕ್ಸ್…

 11. minchulli
  ಸೆಪ್ಟೆಂ 10, 2009 @ 08:46:56

  ಅರ್ಥಪೂರ್ಣ ಅವರೇ , ಬರೆದು ಯಾರನ್ನೂ ನೋಯಿಸುವ ಉದ್ದೇಶ ಇರಲಿಲ್ಲವಾದರೂ ನಿಮಗೆ ನೋವಾಗಿದೆ ಅನ್ನೋದು ನಂಗೆ ಅರ್ಥವಾಯ್ತು . ಕ್ಷಮಿಸಿ . ನಿಮ್ಮ ಭಾವ ನನ್ನನ್ನು ತಟ್ಟಿದೆ . ಅಳುವ ಕಡಲಿನಲಿ ನಗೆಯ ಹಾಯಿ ದೋಣಿ ತರಲು ಖಂಡಿತಾ ಯತ್ನಿಸುವೆ .. ಈ ಬಾರಿ ಬೇಜಾರು ಬಿಟ್ಬಿಡಿ ಪ್ಲೀಸ್…

 12. minchulli
  ಸೆಪ್ಟೆಂ 10, 2009 @ 08:48:09

  ಥ್ಯಾಂಕ್ಸ್ ರಂಜಿತ್.. ನೀವೆಲ್ಲ ಹೀಗೆ ಬರುತ್ತಿದ್ದರೆ ಖುಷಿ

 13. ವಿಜಯರಾಜ್ ಕನ್ನಂತ
  ಸೆಪ್ಟೆಂ 10, 2009 @ 10:25:23

  baraha thumbaa chennagide… aadre nimma blog background colour kannige hodeyo haage ide.. odoke swalpa kashta agutte

 14. ಪೂರ್ಣಿಮಾ ಭಟ್ಟ
  ಸೆಪ್ಟೆಂ 10, 2009 @ 11:23:42

  ಶಮ,
  ಎಷ್ಟು ಒಳ್ಳೆಯ ಬ್ಲಾಗ್.. ಎಷ್ಟೆಷ್ಟು ಚಂದದ ಬರಹಗಳು.. ಯಾಕೆ ನಿಮ್ಮ ಬ್ಲಾಗ್ ಇಷ್ಟುದಿನ ನೋಡಲಿಲ್ಲವೋ –
  ಎಷ್ಟೆಲ್ಲ ತಪ್ಪಿಸಿಕೊಂಡುಬಿಟ್ಟೆ ಎಂದು ಪಶ್ಚಾತ್ತಾಪ.. 😦
  ಇನ್ನು ಮುಂದೆ ನಿಮ್ಮ ಖಾಯಂ ಓದುಗಳು ನಾನು.
  ನನ್ನ ಬ್ಲಾಗ್ನಲ್ಲಿ ನಿಮ್ಮ URL ಹಾಕಿಕೊಂಡಿದ್ದೇನೆ.. ಬೇಸರವಿಲ್ಲ ತಾನೆ..?

  ಪ್ರೀತಿಯಿಂದ,
  ಪೂರ್ಣಿಮಾ

 15. shivu.k
  ಸೆಪ್ಟೆಂ 10, 2009 @ 11:54:20

  ಶಮ,

  ಒಂದು ಸುಂದರ ಬರಹ. ಕಲ್ಪನೆಯದಾದರೂ ವಾಸ್ತವಕ್ಕೆ ಹತ್ತಿರವೆನಿಸುವ, ಅನುಭವದಿಂದ ಕೂಡಿದ ಭಾವನಾತ್ಮಕ ಲೇಖನ….ಓದಿ ಮನಸ್ಸು ಪುಳಕಗೊಂಡಿತು. ಧನ್ಯವಾದಗಳು.

 16. Poornima
  ಸೆಪ್ಟೆಂ 10, 2009 @ 21:27:53

  ನಮಸ್ಕಾರ ಶಮ,
  ಬೆಳಿಗ್ಗೆ ನಾನೊಂದು ಕಮೆಂಟ್ ಹಾಕಿದ ನೆನಪು… ಅದನ್ನು ಈ ಪೇಜಿನಲ್ಲಿ ನೋಡಿದಹಾಗಿತ್ತು ಕೂಡ. Any way – ಮತ್ತೊಮ್ಮೆ ಬರೆಯುಯೋಣ – ಅದಕ್ಕೇನ್ಂತೆ ಅಲ್ವೆ..? 🙂
  ಚಂದನೆಯೆ ಬ್ಲಾಗ್, ಅತಿ ಚಂದನೆಯ ಬರಹಗಳು..

  ಪ್ರೀತಿಯಿಂದ,
  ಪೂರ್ಣಿಮಾ

 17. minchulli
  ಸೆಪ್ಟೆಂ 11, 2009 @ 08:29:57

  ಥ್ಯಾಂಕ್ಸ್ ವಿಜಯ್.. ಸಲಹೆಗೆ ಕೂಡಾ ….

 18. minchulli
  ಸೆಪ್ಟೆಂ 11, 2009 @ 08:32:20

  ಥ್ಯಾಂಕ್ಸ್ ಪೂರ್ಣಿಮಾ ನಿಮ್ಮ ವಿಶ್ವಾಸಕ್ಕೆ … ಇಷ್ಟು ದಿನದ ಮಾತಿರಲಿ , ಈಗ ಬಂದಿರಲ್ಲ ಅದು ಖುಷಿ … ನಿಮ್ಮ ಬ್ಲಾಗ್ ಗೆ ಸೇರಿಸಿದ್ದು ಬೇಜಾರಲ್ಲ ಖುಷಿಯ ಸಂಗತಿ . ಬರುತ್ತಿರಿ

 19. minchulli
  ಸೆಪ್ಟೆಂ 11, 2009 @ 08:35:02

  ಪೂರ್ಣಿಮಾ, ಬಹುಶಃ ಅದು ನೆಟ್ ಸಮಸ್ಯೆ ಇದ್ದರೋ ಇರಬಹುದು. ಕಾಮೆಂಟ್ ಸಿಕ್ಕಿದೆ. ಖುಷಿ ಕೊಟ್ಟಿದೆ.

 20. minchulli
  ಸೆಪ್ಟೆಂ 11, 2009 @ 08:35:36

  ಶಿವೂ , ಧನ್ಯವಾದಗಳು ನಿಮ್ಮ ನಲ್ಮೆಗೆ

 21. tvsrinivas
  ಸೆಪ್ಟೆಂ 12, 2009 @ 03:58:14

  ಮನ ತಟ್ಟುವಂತಹ ಬರಹ 🙂

 22. minchulli
  ಸೆಪ್ಟೆಂ 12, 2009 @ 05:29:57

  thanks srinivas.. keep visiting

 23. Jayalaxmi Patil
  ಸೆಪ್ಟೆಂ 15, 2009 @ 10:30:32

  ಬರಹ ಗಾಢವಾಗಿ ತಟ್ಟುತ್ತೆ ಶಮಾ, ಏನ ಹುಡುಗಿ ಇಷ್ಟೊಂದು ಭಾವುಕತನ… ಇರಲಿಬಿಡು ಭಾವನೆಗಳಿಲ್ಲದ ಮನುಷ್ಯರು ಅವರೆಂಥ ಮನುಷ್ಯರು ಅಲ್ಲವೆ?

 24. minchulli
  ಸೆಪ್ಟೆಂ 15, 2009 @ 14:05:18

  ಅಕ್ಕಯ್ಯ, ಭಾವವಿಲ್ಲದ ಬದುಕು ಬಹು ನೀರಸ ಅಲ್ಲವಾ… ಭಾವದ ನಡುವೆಯೇ ಬದುಕು ನಂಗೆ…

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: