ಹಕ್ಕೀ ನಿನ್ನ ಅಡ್ರಸ್ ಹೇಳು..

ಗುಬ್ಬಚ್ಚೀ...

ಗುಬ್ಬಚ್ಚೀ...

ಮೈ ಡಿಯರ್ ಗುಬ್ಬಚ್ಚೀ,
ವರ್ಷಗಳ ನಂತರ ಇವತ್ತು ನಿನ್ನನ್ನು ನೋಡಿದೆನಲ್ಲ ಆ ಸಂತೋಷಕ್ಕೆ ಈ ಪತ್ರ. ನಿನ್ನನ್ನು ನೋಡ್ತಿದ್ದಂತೆ ನಾನು ಛಕ್ಕಂತ ಚಿಕ್ಕೋಳಾಗ್ಬಿಟ್ಟೆ. ಬಾಲ್ಯದ ಖುಷ್ ಖುಷಿಯ ದಿನಗಳ ಚಿತ್ರ ಕಣ್ಣ ಮುಂದೆ. ಹೌದು ಗುಬ್ಬಚ್ಚೀ.. ನನ್ನ ಬಾಲ್ಯಕ್ಕೂ ನಿಂಗೂ ಬಿಡಿಸಲಾರದ ನಂಟು..

ನಿಂಗೊತ್ತಾ ಹಕ್ಕೀ.. ಅವತ್ತು ನಾವಿದ್ದುದು ಪುಟ್ಟ ಹಳ್ಳೀಲಿ. ಹೆಂಚು, ಆರ್.ಸಿ.ಸಿಗಳ ಹಂಗಿಲ್ಲದ ತೆಂಗು ಅಡಿಕೆಯ ಗರಿಗಳ ಛಾವಣಿ.. ಅದರ ಕೆಳಗೆ ನಮ್ಮ ವಾಸ; ಮೇಲ್ಗಡೆ ನಿನ್ನ ಆವಾಸ. ಈಗ ಟೆರೇಸು ಮನೆ ಕಟ್ಟಿಕೊಂಡು ನಿಂಗೆ ಮನೆಯಿಲ್ಲದಂತೆ ಮಾಡಿದೆವಾ ನಾವು ? ನನ್ನಂತೆಯೇ ಪುಟ್ಟದಾಗಿದ್ದ, ತಮ್ಮನ ತೊದಲು ಮಾತಿನಂತೆ ಚಿಂವ್ ಚಿಂವ್ ಎನ್ನುತ್ತಿದ್ದ ನಿನ್ನ ಕಂಡರೆ ನಂಗೆ ಅದೇನೋ ಅಕ್ಕರೆ. ಎಲ್ಲ ಅಮ್ಮಂದಿರು ಚಂದಮಾಮ ತೋರಿಸಿ ಉಣಿಸುತ್ತಿದ್ದರೆ ನನ್ನಮ್ಮ ನಿನ್ನ ತೋರಿಸಿ ಉಣಿಸುತ್ತಿದ್ದಳು. ಅವತ್ತಿಂದ ಶುರುವಾದ ಈ ಅಪ್ಯಾಯತೆ ಇನ್ನೂ ಹಾಗೇ ಇದೆ.

ಅದ್ಯಾಕೋ ಗೊತ್ತಿಲ್ಲ, “ಗುಬ್ಬಚ್ಚಿ” ಅಂದ್ರೆ ಸಾಕು ಸುಮ್ ಸುಮ್ನೇ ಪ್ರೀತಿ; ಈ ಒರಟನ ಮೇಲಿದೆಯಲ್ಲ ಹಾಗೆ.. ನಿನಗಿಂತ ಚೆಂದದ ಹಕ್ಕಿಗಳು ಅದೆಷ್ಟೋ ಇದ್ದಾವು. ಆದರೆ ನಿನ್ನ ಚಿಲಿಪಿಲಿ, ನಿನಗೇ ಯುನೀಕ್ ಆಗಿರೋ ಪುಟ್ಟ ಆಕಾರ, ನಿನ್ನ ಹಾರಾಟದ ಸೊಗಸು, ಒಂದೊಂದೇ ಕಡ್ಡಿ ಹೆಕ್ಕಿ ತಂದು ನೀ ಗೂಡು ಕಟ್ಟುವ ಪರಿಯ ಚೆಂದವೇ ಬೇರೆ. ನಿನಗಿಂತಲೂ ಪುಟ್ಟ ಕಂದಮ್ಮಗಳಿಗೆ ನೀ ತುತ್ತು ಕೊಡುತ್ತಿದ್ದರೆ ಅದು ಜಗತ್ತಿನ ಅದ್ಭುತ ದೃಶ್ಯ.

ಗುಬ್ಬಚ್ಚಿ ಡಿಯರ್, ಅಜ್ಜಿ ಮನೇಲಿದ್ದು ನಾನು ಅಂಗನವಾಡಿಗೆ ಹೋಗ್ತಿದ್ದೆ ನೋಡು, ಆವಾಗ ಅಡಿಗೆ ಮನೆಯ ಬಲಗಡೆ ಮೂಲೇಲಿ ನಿನ್ನ ಗೂಡಿತ್ತು ನೆನಪಿದೆಯಾ ? ನಾ ಶಾಲೆ ಬಿಟ್ಟ ಕೂಡಲೇ ಓಡುತ್ತ ಮನೆಗೆ ಬರಲು ಇದ್ದ ಸೆಳೆತವೇ ನೀನು ಕಣೋ.. ನಿನ್ನಾಟ ಚಿನ್ನಾಟ ನೋಡುತ್ತಾ ತಿಂತಾ ಇದ್ರೆ ತಟ್ಟೆ ಖಾಲಿ ಆಗಿದ್ದೇ ಗೊತ್ತಾಗ್ತಾ ಇರಲಿಲ್ಲ. ಈಗ ನೋಡು ಮಕ್ಕಳ ಊಟ ತಿಂಡಿಗೆ ಕಾರ್ಟೂನ್ ನೆಟ್ವರ್ಕ್, ವಿಡಿಯೋ ಗೇಮ್ ಬಂದ್ಬಿಟ್ಟಿದೆ. ನಿಂಗೆ ಬೇಜಾರಾಗಲ್ವೇನೋ ?

ಆವಾಗೆಲ್ಲ ಮನೆಗಳು ವಿಶಾಲ. ನಿಂಗೆ ಎಲ್ಲೆಂದರಲ್ಲಿ ಗೂಡು ಕಟ್ಟುವ ಸ್ವಾತಂತ್ರ್ಯ. ಈಗ ನಾವಿರುವ ಮನೆಗಳೇ ಬೆಂಕಿ ಪೆಟ್ಟಿಗೆ. ನಿಂಗೆಲ್ಲಿ ಜಾಗ ಕೊಡೋಣ .. ಅಜ್ಜಿ ಮನೆಯ ಹಜಾರದ ಗೋಡೆಯ ತುಂಬೆಲ್ಲ ಹಾಕಿದ್ದ ಮುತ್ತಜ್ಜ ಅಜ್ಜಿಯರ ಫೋಟೋ ಫ್ರೇಮಿನ ಹಿಂದೆ ನಿನ್ನ ಪರಿವಾರದ ತರಹೇವಾರಿ ಮನೆಗಳು. ನಮ್ಮದು ನಾಗರಿಕರ ಜಗತ್ತು. ಹಿರಿತಲೆಗಳ ಫೋಟೋ ಮನೆಯ ಅಂದ ಕೆಡಿಸುತ್ತವೆ. ಅವುಗಳ ಬದಲು ಯಾವ ಬದಿಯಿಂದ ನೋಡಿದರೂ ಅರ್ಥವೇ ಆಗದ ಫ್ರೇಮಿಲ್ಲದ ಲ್ಯಾಮಿನೇಟೆಡ್ ಪೈಂಟಿಂಗುಗಳು. ಇದಕ್ಕೆ ಇಂಟೀರಿಯರ್ ಡಿಸೈನು ಎಂಬ ಹೆಸರು. ನಿನಗೆ ಜಾಗ ಕೊಡದ ಸ್ವಾರ್ಥಿಗಳು ಅಲ್ವಾ ನಾವು ?

ನೀನು ನಮ್ಮ ಪಾಲಿಗೆ ಹಕ್ಕಿಯಲ್ಲ; ನಮ್ಮ ಮನೆ ಮಂದಿ ಎಂದರೆ ನೀನೂ ಸೇರಿದ್ದೆ. ನಾವು ಮಕ್ಕಳೆಲ್ಲ ಸೇರಿ ನಿನ್ನ ಕುಟುಂಬಕ್ಕೆ ಅಂತ್ಲೇ ಕಾಳು ಸಂಗ್ರಹಿಸುತ್ತಿದ್ದೆವು. ಅಜ್ಜಿಯ ಬೈಗುಳಕ್ಕೆ ಕವಡೆ ಕಿಮ್ಮತ್ತು ಕೊಡದೆ ನಿನಗೆ ಗೂಡು ಕಟ್ಟಲು ಅನುಕೂಲ ಆಗ್ಲಿ ಅಂತ ಒಂದಷ್ಟು ಹುಲ್ಲುಗರಿ ತಂದಿಡ್ತಿದ್ದೆವು. ನೀನು ಬರುತ್ತೀ ಅಂತ ಕಾಯ್ತಿದ್ರೆ ನಮಗೆ ಸುಸ್ತಾಗೋ ವರೆಗೂ ನೀನು ಬರ್ತಿರಲಿಲ್ಲ. ನಾವು ಹೋದ ಎರಡೇ ಕ್ಷಣಕ್ಕೆ ಮೆತ್ತಗೆ ಬಂದು ಮಾಯಾವಿಯಂತೆ ಎತ್ತಿ ಒಯ್ಯುತ್ತಿದ್ದೆ ನೀನು. ನಾವು ನಿಂಗೇನಾದ್ರೂ ತಂದ್ರೆ ಬೈಯುತ್ತಿದ್ದ ಅದೇ ಅಜ್ಜಿ ನಿಂಗೆ ಅಂತ್ಲೇ ಒಂದಷ್ಟು ಧಾನ್ಯಗಳನ್ನು ತೆಂಗಿನ ಚಿಪ್ಪಿಗೆ ಹಾಕಿ ಮಾಳಿಗೆ ಮೆಟ್ಟಿಲ ಮೂಲೇಲಿಡ್ತಾ ಇದ್ರು !!

ಗುಬ್ಬಚ್ಚಿ ಪುಟ್ಟೂ, ಈಗಿವೆಲ್ಲ ಬರೀ ನೆನಪುಗಳು ಕಣೋ.. ನಮ್ಮ ಧಾವಂತದ ಬದುಕಲ್ಲಿ, ಪಕ್ಕದವರಿಗಿಂತ ಮೇಲೇರುವ ಆತುರದಲ್ಲಿ ನಾವು ಬದುಕು ಸವೆಸುತ್ತಿದ್ದೇವೆ; ಸವಿಯಲಾಗುತ್ತಿಲ್ಲ. ಅವತ್ತಿನ ದಿನಗಳಲ್ಲಿ ಈ ಓಟವಿರಲಿಲ್ಲ; ಎಲ್ಲರಿಗೂ ಮೊದಲು ಗುರಿ ಮುಟ್ಟಬೇಕೆಂಬ ಸ್ಪರ್ಧೆ ಇರಲಿಲ್ಲ; ಆದರೆ ಬದುಕಲ್ಲಿ ಖುಷಿಯಿತ್ತು. ಮನೆಯ ಅಂಗಣಕ್ಕೆ ಬಂದ ಪಶು ಪಕ್ಷಿಗಳೆಲ್ಲ ನಮ್ಮವು ಅನಿಸುತ್ತಿತ್ತು; ಆದರೀಗ ಮನೆಯವರೇ ದೂರದವರಾಗುತ್ತಿದ್ದಾರೆ. ಇವನ್ನೆಲ್ಲ ನೋಡಿ ನಿಂಗೂ ರೋಸಿ ಹೋಯ್ತಾ ? ಅದಕ್ಕೇ ನೀನು ಕೂಡ ನೇಪಥ್ಯಕ್ಕೆ ಸರಿದು ಹೋದೆಯಾ ? ಹೋಗುವಾಗ ನಮ್ಮ ಖುಷಿ, ನಗು ಎಲ್ಲವನ್ನು ಜತೆಗೇ ಹೊತ್ತೊಯ್ದೆಯಾ ? ಮಗಳು ಐಶ್ವರ್ಯ ಇದಾಳಲ್ಲ…ಅವಳೂ ಥೇಟ್ ನಿನ್ನ ಹಾಗೇ.. ಮುದ್ದು ಸುರಿವ ಮುಖ.. ಹೊಳೆ ಹೊಳೆವ ಕಣ್ಣು.. ಐಶು ಮರಿ ಚಿಕ್ಕಮ್ಮಾ ಎನ್ನುತ್ತ ಎದುರು ನಿಂತರೆ ನೀನೇ ನೆನಪಾಗಿ ಕಾಡ್ತೀಯ… ನಾನೇ ಬಂದು ನಿನ್ನನ್ನು ನೋಡಿಯೇನು ಎಂದರೆ ಹೋಗುವಾಗ ಅಡ್ರಸ್ ಕೂಡ ಕೊಡಲಿಲ್ಲ ನೀನು.. ಈ ಬಾರಿ ಬಂದಾಗ ಮರೀದೇ ಕೊಟ್ಟು ಹೋಗು…

ಗುಬ್ಬಚ್ಚಿ ನೋಡ್ಬೇಕು ಅಂದ್ರೆ ಕಾಡಿಗೇ ಹೋಗಬೇಕು ಅಂತಾರೆ ಮಂದಿ. ನಾವು ಪುರುಸೊತ್ತಿಲ್ಲದ ಜನ; ಕಾಡಿಗೆ ಹೋಗಲು ಸಮಯವಿಲ್ಲ ನಮ್ ಬಳಿ. ಅಷ್ಟಕ್ಕೂ ಕಾಡೆಲ್ಲಿದೆ ಈಗ ? ಅದನ್ನೂ ನಾವು ಹೀಗೆ ತಿನ್ನುತ್ತಲೇ ಇದ್ರೆ ನಮ್ಮದೇ ವೇಗದಲ್ಲಿ ನೀನು ಅಲ್ಲಿಂದಲೂ ಮರೆಯಾಗ್ತೀಯೇನೋ ಅಲ್ವಾ ? ನೋಡು ಎಷ್ಟೊಂದು ಪ್ರಶ್ನೆಗಳು ನನ್ನವು.. ಇದಕ್ಕೆಲ್ಲ ಉತ್ತರಿಸೋಕೆ ಅಂತಲೇ ಮತ್ತೆ ಬರ್ತೀಯಾ ನನ್ನ ಪುಟ್ಟ ಹಕ್ಕೀ ? ಆ ನೆಪದಿಂದ ನಾ ಮತ್ತೆ ಬಾಲ್ಯಕ್ಕೆ ಜಿಗಿಯಬೇಕು; ನೆನಪುಗಳ ಸಂಭ್ರಮದಲ್ಲಿ ಮೀಯಬೇಕು. ನಾವು ಮನುಷ್ಯರಿಗಿಂತ ಒಳ್ಳೆಯ ಮನಸ್ಸು ನಿಂದು.. ನಂಗೆ ನಿರಾಸೆ ಮಾಡಲ್ಲ ಅಲ್ವಾ ? ಕಾಯುತ್ತಿರುತ್ತೇನೆ… ನೀ ಮೊನ್ನೆ ನನ್ನ ಭೇಟಿಯಾದ ಅದೇ ಜಾಗದಲ್ಲಿ.. ಅದೇ ಸಂಪಿಗೆ ಮರದ ಹಸುರೆಲೆ ಕೆಳಗೆ…

14 ಟಿಪ್ಪಣಿಗಳು (+add yours?)

 1. Jayalaxmi Patil
  ಜುಲೈ 25, 2009 @ 08:55:08

  ಶಮಾ, ಈ ಗುಬ್ಬಚ್ಚಿನ ತೋರಿಸಿ ನನ್ನಮ್ಮ ನನಗೆ ” ಎಲ್ಲಿ ಗುಬ್ಬಿ ಹೆಂಗ್ ಬಾಯಿ ತೆರಿತೈತಿ ತೋರ್ಸು ನೋಡೂನು? ಆ..ಆ…ಆ…ಹಾಂ ಹಂಗ! ” ಎನ್ನುತ್ತಾ ಬಾಯಲ್ಲಿ ಅನ್ನದ ತುತ್ತಿಡುತ್ತಿದ್ದು, ನಾನೂ ನನ್ನ ಮಕ್ಕಳಿಗೆ ಹಾಗೇ ಮಾಡಿ ಸಂಭ್ರಮ ಪಡುತ್ತಿದ್ದೆ. ಇನ್ನು ಮುಂದೆ ನಮ್ಮ ಮಕ್ಕಳು ಅವರ ಮಕ್ಕಳಿಗೆ ಚಿತ್ರದಲ್ಲಿ ಮಾತ್ರ ” ಇದು ಗುಬ್ಬಚ್ಚಿ ” ಎಂದು ತೋರಿಸಿ ಸುಮ್ಮನಾಗುತ್ತಾರೇನೊ ಅನಿಸುತ್ತದೆ. ಒಳ್ಳೆಯ ಬರಹ.

 2. minchulli
  ಜುಲೈ 25, 2009 @ 10:58:07

  ನಿಜ ಜಯಕ್ಕಾ.. ಆ ದಿನಗಳ ನೆನಪು ಎಷ್ಟು ಮಧುರ …. ಪ್ರಕೃತಿಯ ನೂರಾರು ವಿಸ್ಮಯಗಳ ನೋಡುವ ಅದೃಷ್ಟ ನಮ್ಮದಾಗಿತ್ತು.. ನಮ್ಮ ಮಕ್ಕಳಿಗೆ ಸಿಗದಂತಾದ ಈ ಸವಿಯನ್ನು ಅವ್ರ ಮಕ್ಕಳಿಗೆ ಹೇಗೆ ತಂದು ಕೊಡೋಣ ? ತುಂಬಾ ವ್ಯಥೆಯಾಗುತ್ತದೆ ಬಹಳಷ್ಟು ಬಾರಿ..

  ಅದ್ಯಾಕೋ ಅದೊಂದು ಹಕ್ಕಿ ಎಷ್ಟು ಚೆಂದಗೆ ನಮ್ಮ ಬದುಕಿನ ಭಾಗವೇ ಆಗಿ ಹೋಗಿದೆ ಅಲ್ವಾ ? ಈಗಲೂ ಇಂವ ನನ್ನನ್ನು ಗುಬ್ಬಚ್ಚೀ ಅಂತ ಎಂದಾದರೊಮ್ಮೆ ಕರೆದರೆ ಬಹಳ ಖುಷಿ ಆಗುತ್ತೆ..

  ಬಹುಶಃ ಬೇರೆ ಯಾವ ಹಕ್ಕಿಯೂ ಈ ಪುಟ್ಟ ಹಕ್ಕಿಯ ಜಾಗವನ್ನು ತುಂಬಲಾರರು ಅನ್ಸುತ್ತೆ..

 3. arthapoorna
  ಜುಲೈ 25, 2009 @ 11:52:51

  nivustu sundarawagi bareyaballire yendare ,nimma badukannu ennu sundarawagi erisaballiri yendartha….adara sarthakathe nimmadagali…yavathu.

 4. minchulli
  ಜುಲೈ 25, 2009 @ 11:57:42

  ನಿಮ್ಮ ವಿಶ್ವಾಸದಿಂದ ನನ್ನ ಶ್ವಾಸ …. ನಿಮ್ಮ ನೇಹಕ್ಕೆ ನನ್ನಿ…

 5. ಮಲ್ಲಿಕಾರ್ಜುನ.ಡಿ.ಜಿ.
  ಜುಲೈ 25, 2009 @ 17:10:30

  ಈ ಬರಹ ಓದಿ ನನಗನ್ನಿಸಿದ್ದು…
  ನಿಮ್ಮನ್ನು ನಿಮ್ಮವರು ಗುಬ್ಬಚ್ಚಿ ಅನ್ನುವುದು ಸರಿ ಸರಿ ಸರಿ…
  ತುಂಬಾ ಚಿನ್ನಾಗಿದೆ ಬರಹ ಗುಬ್ಬಿಯಂತೆ.

 6. mala
  ಜುಲೈ 26, 2009 @ 06:45:29

  gubbchchi odi gatakalakke saride. chennagittu.
  mala

 7. ಜಿ.ಎನ್. ಅಶೋಕ ವರ್ಧನ
  ಜುಲೈ 26, 2009 @ 15:42:02

  ನೆನಪುಗಳ ಬಲೆಯಿಂದ ಗುಬ್ಬಚ್ಚಿ ಬಿಚ್ಚಿಟ್ಟರೂ ನಿಜದಲ್ಲಿ ಹುಡುಕಾಟ ಸೋತಿದೆ ಎಂಬ ನಿಮ್ಮ ಭಾವಲಹರಿ ಪರಿಸರ ಕಾಳಜಿಯವರನ್ನೆಲ್ಲ ತಟ್ಟುವುದರಲ್ಲಿ ಸಂಶಯವಿಲ್ಲ. ನನ್ನ ಮಗ, ಅಭಯಸಿಂಹ ‘ಗುಬ್ಬಚ್ಚಿಗಳು’ ಹೆಸರಿನಲ್ಲೇ ಮಾಡಿದ ಕಥಾಚಿತ್ರದ ಮಕ್ಕಳೂ ನಿಮ್ಮೊಡನೆ ದನಿಗೂಡಿಸುತ್ತಾರೆ, ಹುಡುಕಾಟಕ್ಕೆ ಜತೆಗೊಡುತ್ತಾರೆ (ಆತ್ಮಕಥನಕ್ಕೆ ಕ್ಷಮೆ ಇರಲಿ). ಗತಿಸಿದ್ದರ ಗುಣಗಾನವೂ ದುಃಖ ‘ಶಮ’ನಕ್ಕೆ ಒಂದು ದಾರಿ; ಚೆನ್ನಾಗಿ ಮಾಡಿದ್ದೀರಿ.
  ಅಶೋಕವರ್ಧನ

 8. ವಿಜಯರಾಜ್ ಕನ್ನಂತ
  ಜುಲೈ 27, 2009 @ 04:51:14

  Nice article

 9. ನಾಸೋಮೇಶ್ವರ
  ಜುಲೈ 27, 2009 @ 04:52:17

  ಶಮಾರವರೆ…

  ಕುತೂಹಲದಿಂದ ನಿಮ್ಮ ಬ್ಲಾಗನ್ನು ಓದಿದೆ. ನಿಮ್ಮ ಪದ್ಯಗಳಿಗಿಂತ ಗದ್ಯ ಬರಹಗಳೇ ಹೆಚ್ಚು ಜೀವಂತಿಕೆಯಿಂದ ತುಂಬಿವೆ ಎಂದನಿಸಿತು. ಗುಬ್ಬಿಯ ಬಗ್ಗೆ ನೀವು ಬರೆದ ಬರಹವು ನನ್ನ ಬಾಲ್ಯದ ದಿನಗಳ ನೆನಪನ್ನು ಹಸಿರಾಗಿಸಿತು.

  ಇಂದು ನಮ್ಮ ನಡುವಿನಿಂದ ಗುಬ್ಬಿ ಮರೆಯಾಗಲು ಕಾರಣ ನಾವೆ! ಗುಬ್ಬಿ ಹಾಗೂ ಕಲ್ಲುಹೂವನ್ನು (ಲೈಕೆನ್ಸ್) ಮಾಲೀನ್ಯ ಸೂಚಕಗಳು
  (ಪಲ್ಯೂಶನ್ ಇಂಡಿಕೇಟರ್ಸ್) ಎಂದು ಕರೆಯುತ್ತಾರೆ. ಒಂದು ಪ್ರದೇಶದಲ್ಲಿ ವಾಯು ಮಾಲಿನ್ಯವು ನಿರ್ದಿಷ್ಟ ಹಂತವನ್ನು ಮೀರಿದಾಗ ಮೊದಲು
  ಕಲ್ಲುಹೂವು (ಬಂಡೆಗಳ ಮೇಲೆ, ಮರಗಳ ಮೇಲೆ ಬೆಳೆಯುವ ಬಿಳಿ-ನೀಲಿ-ಹಸಿರು ಮಿಶ್ರಿತ ಚಪ್ಪಟೆ ಸಸ್ಯಗಳು: ಪಲಾವ್ ಮಾಡುವಾಗ ಕೆಲವರು ಇದನ್ನು ಉಪಯೋಗಿಸುತ್ತಾರೆ) ಮಾಯವಾಗಿಬಿಡುತ್ತದೆ. ನಂತರ ಗುಬ್ಬಿಯ ಸರದಿ.

  ಬೆಂಗಳೂರಿನಲ್ಲಿ ಕಲ್ಲ ಹೂವು ಇಲ್ಲ…ಗುಬ್ಬಿಯೂ ಇಲ್ಲ.

  ವಾಸ್ತವದಲ್ಲಿ ಅವರಡಕ್ಕೆ ನಾವು ‘ಸ್ಮಾರಕ‘ ವನ್ನು ಕಟ್ಟಿಸಬೇಕಿದೆ.

  ನಿಮ್ಮ ಲೇಖನವನ್ನು ಮುಂದುವರೆಸಿ.

  -ನಾಸೋ

 10. minchulli
  ಜುಲೈ 28, 2009 @ 05:31:53

  ಥ್ಯಾಂಕ್ಸ್ ಮಲ್ಲಿಕ್.. ನನಗೂ ಆ ಹೆಸರು ಭಾಳ ಇಷ್ಟ.. ಅಂದ ಹಾಗೆ ನಿಮ್ಮ ಮಗ ನಿಮ್ಮನ್ನು ಹಾಗಂತಾನೆ ಅಂತ ಹೇಳಿದ ನೆನಪು… ಅವನೂ ನಾನೂ ಅಕ್ಕ ತಮ್ಮ…

 11. minchulli
  ಜುಲೈ 28, 2009 @ 05:37:18

  ಥ್ಯಾಂಕ್ಸ್ ಮಾಲಾ.. ಬರುತಿರಿ…

 12. minchulli
  ಜುಲೈ 28, 2009 @ 05:47:54

  ಥ್ಯಾಂಕ್ಸ್ ಅಶೋಕ್ ಅಂಕಲ್ …. ನಿಮ್ಮ ಕಾಮೆಂಟ್ ತುಂಬಾ ಹಿಡಿಸ್ತು.. ಪರಿಸರ ಜಾಗೃತಿ ಸಮಿತಿಯನ್ನು ಪ್ರತಿ ಊರಲ್ಲೂ ಮಾಡಿ ಪರಿಸರ ರಕ್ಷಣೆಗೆ ಮುಂದಾಗುತ್ತಿದೆವು ನಾವು. ನಾನು ಸಕ್ರಿಯವಾಗಿ ಪರಿಸರ ಸಂಬಂಧಿ ಕೆಲಸ ಮಾಡಲು ತೊಡಗಿದ್ದು ಆರನೇ ಕ್ಲಾಸಿನಿಂದ.. ನಾಗರಿಕ ಸೇವಾ ಟ್ರಸ್ಟ್ ನಲ್ಲಿ ಇದ್ದಾಗ ಪರಿಸರ ಜಾಗೃತಿ ಅಭಿಯಾನಗಳಲ್ಲಿ ಭಾಗವಹಿಸಿದ ನೆನಪು ಇನ್ನೂ ಹಸಿರು.. ಪರಿಸರ ಜಾಗೃತಿ ಸಮಿತಿಯ ಅಧ್ಯಕ್ಫ್ಷೆಯಾಗಿ ನಾನು ಕೆಲಸ ಮಾಡಿದಾಗ ವಯಸ್ಸು ಹದಿನೈದು.. ಈ ಮಕ್ಕಳನ್ನೆಲ್ಲ ಕರ್ಕೊಂಡು ಬರ್ಬ್ಯಾಡ್ರೀ ಅಂತ ಅವತ್ತಿನ ಡಿ.ಸಿ ಬೈದಿದ್ದಕ್ಕೆ ಅವರ ಮೇಲಿನ ಕೋಪ ಇನ್ನೂ ಹೋಗಿಲ್ಲ!!!

  ಮತ್ತೆ, ಆತ್ಮಕಥನಕ್ಕೆ ಕ್ಷಮೆ ಇರಲಿ ಎಂಬುದು ಅಗತ್ಯವಿಲ್ಲ… ನಿಮ್ಮನ್ನು ಬಲ್ಲೆ ನಾನು.. ಅಭಯಸಿಂಹ ನಿಮ್ಮ ಮಗ ಅಂತ ಗೊತ್ತಿರಲಿಲ್ಲ.. ಅವರ ಜತೆ ನಾನೂ ಇದ್ದೇನೆ…ನಮಗೆ ಕಂಡ ಗುಬ್ಬಚ್ಚಿ ನನ್ನ ಮಕ್ಕಳಿಗೂ ಕಾಣಸಿಗಲೆಂಬ ಆಸೆ ನಂದು… ನಿಮ್ಮಂಥವರು ನಮ್ಮೊಂದಿಗಿರಿ… ತಪ್ಪಿದಾಗ ತಿದ್ದಲು.. ಒಪ್ಪಿದಾಗ ಬೆನ್ನು ತಟ್ಟಲು… ನಾವು ಗುರಿ ಮುಟ್ಟುತ್ತೇವೆ..

 13. minchulli
  ಜುಲೈ 28, 2009 @ 05:48:34

  thanks vijay… keep visiting..

 14. minchulli
  ಜುಲೈ 28, 2009 @ 06:01:19

  ತುಂಬಾ ಥ್ಯಾಂಕ್ಸ್ ಸೋಮೇಶ್ವರ್ ಸರ್.. ನನಗೆ ನಿಮ್ಮಷ್ಟು ವೈಜ್ಞಾನಿಕ ವಿವರಗಳು ಗೊತ್ತಿರಲಿಲ್ಲ.. ಮಾಹಿತಿಗೆ ಖುಷಿ… ಗೊತ್ತಿಲ್ಲದಿದ್ದರೂ ಕೂಡ ಅದೊಂದು ಪುಟ್ಟ ಜೀವ ಮರೆಯಾದ ನೋವು ತುಂಬಾ ಇದೆ. ಕಲ್ಲು ಹೂವು ಕಡೆಯ ಬಾರಿ ನಾನು ನೋಡಿದ್ದು ನನ್ನ ಒಂಭತ್ತನೇ ವಯಸ್ಸಿನಲ್ಲಿ.. ಯಾವುದಕ್ಕೇ ಆಗಲಿ
  ಸ್ಮಾರಕ ಕಟ್ಟುವುದು ತೀವ್ರ ಯಾತನೆಯ ಪ್ರಕ್ರಿಯೆ ಅಲ್ವಾ ಸರ್.. ಹಾಗಾಗದಿರಲಿ ಎಂಬ ಆಸೆ…
  ನಿಮ್ಮ ಪ್ರೋತ್ಸಾಹಕ್ಕೆ ಋಣಿ.. ಇನ್ನು ಮುಂದೆ ಹೆಚ್ಚು ಜೀವಂತಿಕೆಯ ಬರಹಕ್ಕಾಗಿ ಶ್ರಮಿಸುವೆ.. ಬರುತ್ತಿರಿ ಸರ್..

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: