ಮಾವಿನ ಹಣ್ಣಿನ “ಸಾಸ್ವೆ”/”ಸೀಕರಣೆ”

Sihi sihi maavu

Sihi sihi maavu

ಮೊನ್ನೆ ನಾವಡರ ಪಾಕಚಂದ್ರಿಕೆಯಲ್ಲಿ ಬೆಳ್ಳುಳ್ಳಿ ಅನ್ನ ಸವಿಯುತ್ತಿದ್ದೆ. ಕೊನೆಗೆ ಟೀನಾ ಮಾವಿನ ಹಣ್ಣಿನ ನೆನಪು ಮಾಡಿದ್ರು. ಈ ಸಲ ಊರಿಗೆ ಹೋದಾಗ ಸಿಗುತ್ತೋ ಇಲ್ಲವೋ ಅಂದುಕೊಳ್ಳುತ್ತಿದ್ದೆ. ಮಾರನೇ ದಿನ ಊರಿಂದ ಬಂದ ಅಪ್ಪನ ಬ್ಯಾಗಿನ ತುಂಬ ಮಾವಿನ ಹಣ್ಣು. ಅದೂ ಊರಲ್ಲಿ ಮಾತ್ರ ಸಿಗುವ ಕಾಡು ಮಾವು.. ತುಳುನಾಡ ಭಾಷೆಯಲ್ಲಿ ಹೇಳಬೇಕೆಂದರೆ “ಕಾಟು ಕುಕ್ಕು”.

ಆವಾಗ ಮಾಡಿದ ಅಡುಗೆಯನ್ನೇ ಇಲ್ಲಿ ಉಣಬಡಿಸುತ್ತಿದ್ದೇನೆ. ಇದನ್ನು ದಕ್ಷಿಣ ಕನ್ನಡದ ಕಡೆ “ಸಾಸ್ವೆ” ಅಂತಲೂ ಉತ್ತರ ಕನ್ನಡದ ಕಡೆ “ಸೀಕರಣೆ” ಅಂತಲೂ ಕರೆಯುತ್ತಾರೆ.

ಪಾಕಚಂದ್ರಿಕೆಗೆ/ನಾವಡರಿಗೆ ನಮಿಸುತ್ತಾ ನನ್ನ ಅಡಿಗೆ ಮನೆಯ ಉದ್ಘಾಟನೆ ಮಾಡುತ್ತಿದ್ದೇನೆ. ನೀವೂ ಮೆಚ್ಚಿದರೆ ಮತ್ತು ಗುರು ನಾವಡರು ಗುಡ್ ಅಂದರೆ ಧನ್ಯೆ ಎಂದುಕೊಳ್ಳುತ್ತಾ……

ಬೇಕಾಗುವ ಸಾಮಗ್ರಿಗಳು :

1. ಚೆನ್ನಾಗಿ ಕಳಿತ ಮಾವಿನ ಹಣ್ಣು (ಇಂತಿಷ್ಟೇ ಎಂಬ ಲೆಕ್ಕ ಇಲ್ಲ; ನೀವು ಹೆಚ್ಚು ಮಾವು ಪ್ರಿಯರಾದರೆ ಹೆಚ್ಚು ಹಣ್ಣು ಹಾಕಿ. ಕನಿಷ್ಟ ಆರೇಳಾದರೂ ಇದ್ದರೆ ಒಳ್ಳೆಯದು.)

2. ಎರಡು ಅಥವಾ ಮೂರು ಮಧ್ಯಮ ಗಾತ್ರದ ಹಸಿಮೆಣಸಿನ ಕಾಯಿ. (ಹೆಚ್ಚು ಮೆಣಸು ಹಾಕಿದರೆ ರುಚಿಯಾಗಲ್ಲ)

3. ಎರಡು ಅಚ್ಚು ಬೆಲ್ಲ (ಮಾವಿನ ಹಣ್ಣು ಹೆಚ್ಚು ಹುಳಿಯಿದ್ದರೆ ಬೆಲ್ಲ ಸ್ವಲ್ಪ ಜಾಸ್ತಿ ಬೇಕಾಗುತ್ತದೆ.)

4. ಅರ್ಧ ಟೀ ಸ್ಪೂನ್ ಸಾಸಿವೆ

5. ಮೂರು ಅಥವಾ ನಾಲ್ಕು ಕಪ್ ಕಾಯಿ ತುರಿ (ಕೊಬ್ಬರಿ ಆಗುವುದಿಲ್ಲ; ಹಸಿ ತೆಂಗಿನಕಾಯಿಯನ್ನೇ ಬಳಸಬೇಕು.)

6. ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ :

ಮಾವಿನ ಹಣ್ಣನ್ನು ಚೆನ್ನಾಗಿ ತೊಳೆದುಕೊಂಡು ಸಿಪ್ಪೆಯನ್ನು ಬೇರೊಂದು ಪಾತ್ರೆಯಲ್ಲಿ ತೆಗೆದಿಟ್ಟುಕೊಳ್ಳಿ. ನಂತರ ಸಿಪ್ಪೆಗೆ ಅರ್ಧ ಲೋಟ ನೀರು ಹಾಕಿ ಚೆನ್ನಾಗಿ ಕಿವುಚಿ. ಅದರ ಒಳಪದರದಲ್ಲಿರುವ ಸಾರವೆಲ್ಲ ಬಿಟ್ಟುಕೊಳ್ಳುತ್ತದೆ. ಒಂದು ಬಾರಿ ಕಿವುಚಿದಾಗ ಬಿಟ್ಟುಕೊಳ್ಳದಿದ್ದರೆ ಇನ್ನೊಂದು ಬಾರಿ ನೀರು ಹಾಕಿಕೊಂಡು ಕಿವುಚಿಕೊಳ್ಳಿ. ನಂತರ ಆ ನೀರನ್ನು ಮಾವಿನ ಹಣ್ಣಿಗೆ ಮಿಶ್ರ ಮಾಡಿ. ಸಿಪ್ಪೆ ತೆಗೆದ ಮಾವಿನ ಹಣ್ಣುಗಳನ್ನು ಒಂದೆರಡು ಬಾರಿ ಮೃದುವಾಗಿ ಕಿವುಚಿ ಹಣ್ಣನ್ನು ಮೆತ್ತಗಾಗಿಸಿಕೊಳ್ಳಿ. (ಚಪಾತಿಗೆ ಹಿಟ್ಟು ನಾದುವ ರೀತಿಯಲ್ಲಿ) ನಂತರ ಬೆಲ್ಲ ತುರಿದು ಅಥವಾ ಪುಡಿ ಮಾಡಿ ಅದೇ ಹಣ್ಣಿಗೆ ಬೆರೆಸಿಕೊಳ್ಳಿ. ಈ ಮಿಶ್ರಣಕ್ಕೆ ಚಿಟಿಕೆ ಉಪ್ಪು ಬೆರೆಸಿ ಹತ್ತು ಹದಿನೈದು ನಿಮಿಷ ಹಾಗೇ ಇಡಿ. ಇದರಿಂದ ಹಣ್ಣು ಉಪ್ಪು ಬೆಲ್ಲ ಚೆನ್ನಾಗಿ ಬೆರೆತಿರುತ್ತದೆ.

ಹಸಿ (ನೀರಿರುವ) ತೆಂಗಿನ ಕಾಯಿಯನ್ನು ತುರಿದು ಮೂರು ಅಥವಾ ನಾಲ್ಕು ಕಪ್ ಕಾಯಿ ತುರಿಗೆ ಅರ್ಧ ಟೀ ಸ್ಪೂನ್ ಸಾಸಿವೆ, ಹಸಿಮೆಣಸು ಮತ್ತು ಚಿಟಿಕೆ ಉಪ್ಪು ಹಾಕಿಕೊಂಡು ನುಣ್ಣಗೆ ರುಬ್ಬಿ. ಕಾಯಿ ಹೆಚ್ಚು ನುಣ್ಣಗಾದಷ್ಟೂ ಹೆಚ್ಚು ರುಚಿ.

ಈಗ ಹಣ್ಣು ಮತ್ತು ಬೆಲ್ಲದ ಮಿಶ್ರಣವನ್ನು ಚೆನ್ನಾಗಿ ಸೌಟಿನಿಂದ ತಿರುಗಿಸಿ. ಬೆಲ್ಲ ಕರಗದೇ ತಳದಲ್ಲಿ ಉಳಿದಿದ್ದರೆ ಸೌಟಿನ ಸಹಾಯದಿಂದಲೇ ಪೂತರ್ಿಯಾಗಿ ಕರಗಿಸಿಕೊಳ್ಳಿ. ಅನಂತರ ರುಬ್ಬಿದ ಹಿಟ್ಟನ್ನು ಹಣ್ಣಿನ ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ಉಪ್ಪು ಹದವಾಗಿದೆಯಾ ನೋಡಿಕೊಳ್ಳಿ. ಬೇಕಿದ್ದರೆ ನಿಮ್ಮ ರುಚಿಗೆ ತಕ್ಕಂತೆ ಹಾಕಿಕೊಳ್ಳಿ. ಈಗ ರುಚಿಕಟ್ಟಾದ ಸಾಸ್ವೆ ಸಿದ್ಧ.

ಇದನ್ನು ಸಿಹಿ ಅಡಿಗೆ ಪ್ರಿಯರು ಸಾಂಬಾರಿನಂತೆ, ಉಳಿದವರು ಪಾಯಸದಂತೆ ಬಳಸಿದರೆ ಶೀತ ಪ್ರಿಯರು ತಂಗಳು ಪೆಟ್ಟಿಗೆಯಲ್ಲಿಟ್ಟು ಸ್ವಲ್ಪ ಹೊತ್ತಿನ ನಂತರ ತಿನ್ನಿ. ಇದನ್ನು ಬೆಳಗ್ಗೆಯೇ ಮಾಡಿದರೆ ನೀರು ದೋಸೆ (ವಿಧಾನ ನಾವಡರ ಅಡಿಗೆಮನೆ ಪಾಕಚಂದ್ರಿಕೆಯಲ್ಲಿದೆ) ಅಥವಾ ಚಪಾತಿಗೆ ಹಾಕಿಕೊಳ್ಳಲು ರಸಾಯನದಂತೆಯೂ ಬಳಸಬಹುದು.

ಗಮನಿಸಿ :

@ ಈ ಸಾಸ್ವೆಗೆ ಇದಮಿತ್ಥಂ ಅಂತ ಯಾವುದೂ ರೂಲ್ಸ್ ಇಲ್ಲ. ಅಳತೆಯೂ ಅಷ್ಟೆ ನಮ್ಮ ನಮ್ಮ ರುಚಿಗೆ ತಕ್ಕಂತೆ ಬದಲಾಗಬಹುದು. ಇಲ್ಲಿ ಮಾಡುವ ವಿಧಾನ ಮಾತ್ರ ಹೇಳಿದ್ದೇನೆ.

@ ಬೇರೆ ಯಾವುದೇ ಮಾವು ಬಳಸಿದಾಗಲೂ ಕಾಡು ಮಾವಿನಷ್ಟು ರುಚಿ ಆಗಿರಲಿಲ್ಲ ಎಂಬುದು ಸತ್ಯ.

@ ಮುಖ್ಯವಾದ ವಿಷಯ ಎಂದರೆ ಇದನ್ನು ಕುದಿಸುವ ಮತ್ತು ಒಗ್ಗರಣೆ ಹಾಕುವ ಕ್ರಮ ಇಲ್ಲ.

@ ಬೆಲ್ಲ ಮತ್ತು ಮಾವು ಎರಡೂ ಹಾಕಿರುವುದರಿಂದ ಬೇರೆ ಅಡಿಗೆಗಳಿಗೆ ಬಳಸಿದಂತೆ ಉಪ್ಪು ಬೇಕಾಗುವುದಿಲ್ಲ.

@ ಇಲ್ಲಿ ಹೇಳಿದಷ್ಟು ಪ್ರಮಾಣದಲ್ಲಿ ಮಾಡಿದರೆ ಮೂರು ಮಂದಿಗೆ ಸಾಕು; ನನ್ನಷ್ಟು ಮಾವು ಪ್ರಿಯರಾದರೆ ಇಬ್ಬರೇ ಮುಗಿಸಬಹುದು.

@ ಒಂದೊಮ್ಮೆ ಇದು ಉಳಿದರೆ (ತಂಗಳು ಪೆಟ್ಟಿಗೆಯಲ್ಲಿಟ್ಟರೂ ಕೂಡ) ಮಾರನೇ ದಿನಕ್ಕೆ ಅಷ್ಟು ಚೆನ್ನಲ್ಲ. ಆದರೆ ನಾಲ್ಕೈದು ಘಂಟೆ ಹೊತ್ತು ಇಡಬಹುದು; ರುಚಿ ಕೆಡುವುದಿಲ್ಲ.

ಒಮ್ಮೆ ಸಾಸ್ವೆ ಮಾಡಿ ನೋಡಿ. ಚೆನ್ನಾಗಿದೆ ಅನಿಸಿದರೆ ನಂಗೊಂಚೂರು ಕಳಿಸಿ. ಮಾಡಲಾಗಲಿಲ್ಲ ಅಂದ್ರೆ ತಂದ ಹಣ್ಣು ನನಗೆ ಕೊರಿಯರ್ ಮಾಡಿ. ನಾನೇ ಮಾಡಿಕೊಂಡು ತಿಂತೇನೆ. !!!!

31 ಟಿಪ್ಪಣಿಗಳು (+add yours?)

 1. keshav
  ಮೇ 10, 2009 @ 00:06:27

  ನಮ್ಮ ಕಡೆ ಇದಕ್ಕೆ “ಸೀಕರಣಿ” ಎನ್ನುತ್ತಾರ. ಇದರ ಶಬ್ದದ ಮೂಲ “ಸಿಹಿ ಕರಣೆ = ಸೀಕರಣೆ = ಸೀಕರಣಿ” (ಎ ಕಾರ ಇ ಕಾರವಾಗುವುದು ಉತ್ತರ ಕರ್ನಾಟಕದಲ್ಲಿ ಸಾಮಾನ್ಯ).

  ಇದನ್ನು ಪುರಿ/ಚಪಾತಿ/ ಹೋಳಿಗೆಯ ಜೊತೆ ತಿನ್ನುತ್ತೇವೆ.

  – ಕೇಶವ

 2. Tina
  ಮೇ 10, 2009 @ 11:09:51

  ಶಮ,
  ನಾನು ಉಂಡೆಬೆಲ್ಲ ಕೊಂಡುಕೊಳ್ಳುವುದು. ನೀವು ಹೇಳಿದ ಲೆಕ್ಕಕ್ಕೆ ಒಂದು ದೊಡ್ಡ ಉಂಡೆ ಬೆಲ್ಲ ಸಾಕಾ? ಅದು ಸುಮಾರು ಎರಡು ಹಿಡಿಯಷ್ಟು ದೊಡ್ಡ ಇರುತ್ತೆ.
  -ಟೀನಾ

 3. minchulli
  ಮೇ 10, 2009 @ 11:27:10

  dhanyavaadagalu keshav mahitigaagi

 4. minchulli
  ಮೇ 10, 2009 @ 11:32:37

  ಟೀನಾ, ಉಂಡೆ ಬೆಲ್ಲ ಆದ್ರೆ ಸುಮಾರು ಅರ್ಧ ಉಂಡೆಯೇ ಸಾಕಾಗತ್ತೆ. ಇನ್ನು ಪ್ರಚಂಡ ಹುಳಿ ಮಾವಾದ್ರೆ ಸ್ವಲ್ಪ ಜಾಸ್ತಿ ಬೇಕಷ್ಟೆ. ಇನ್ನು ಕೊನೆಯಲ್ಲಿ ರುಚಿ ನೋಡಿದ್ರೆ ನಮಗೇ ಗೊತ್ತಾಗತ್ತೆ ಸಿಹಿ ಸಾಕಾ ಅಂತ … ಮಾಡಿದ ಮೇಲೆ ಕರೀರಿ.. ಇಲ್ಲ ಅಂದ್ರೆ ಗೊತ್ತಲ್ಲ … ನೀವು ರೋಡಲ್ಲಿ ಹೋಗ್ತಾ ಇದ್ರೆ ನಾನು ಕೂಗಿ ಎಲ್ಲರೂ ತಿರುಗಿ ನೋಡಿ…..

 5. Ranjana
  ಮೇ 10, 2009 @ 14:15:02

  ನಮ್ಮ ಉರಾದ ಉತ್ತರ ಕನ್ನಡ ಜಿಲ್ಲೆಯ ಸಿರಸಿಯ ಕಡೆ ನೀವು ತಿಳಿಸಿದಂತೆ ಸಿದ್ದಪಡಿಸಿ ಅದಕ್ಕೊಂಡೆರಡು ಸೌಟು ಮೊಸರು ಸೇರಿಸಿ, ಒಂದು ಸಾಸಿವೆ, ಒನಮೆನಸಿನ(ಕೆಂಪು ಮೆಣಸು) ಒಗ್ಗರಣೆ ಕೊಡುತಾರೆ. ಅದಕ್ಕೆ ಸಾಸ್ವೆ ಅಥವಾ ಸಾಸಿವೆ ಅಂತ ಕರೀತಾರೆ. ಇದನ್ನು ಅನ್ನದ ಜೊತೆ ಉುಟ ಮಾಡ್ತೀವಿ. ಅಲ್ಲೇ ಚಿಕ್ಕ ವೈವಿಧ್ಯತೆ ಅಲ್ವಾ? ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ.
  ರಸಾಯನ ಅಂದ್ರೆ ತಿನ್ನುವ (ಸಿಹಿ ಮಾವಿನ ಹಣ್ಣನ್ನು ಚಿಕ್ಕದಾಗಿ ಹೆಚ್ಚಿ ಅಥವಾ ಕಿವುಚಿ ಅದಕ್ಕೆ ಸ್ವಲ್ಪ ಕಾಯಿತೂರಿ, ಎಲಕ್ಕಿ ರುಬ್ಬಿ ಹಾಕಿ, ಬೆಲ್ಲ, ಸ್ವಲ್ಪ ಹಾಲು ಸೇರಿಸುತ್ತೇವೆ. ಇದನ್ನು ದೋಸೆ, ಚಪಾತಿ, ಪುರಿ ಜೊಟೇನು ತಿನ್ಟೀವಿ ಅಥವಾ ಹಾಗೇನೂ ತಿನ್ಟೀವಿ. ಉೂರ ಕಡೆಯ ಸಾಸ್ವೆ ನೆನಪಿಸಿದ್ದಕ್ಕೆ ಧನ್ಯವಾದಗಳು.

  ನಾನು ಕೂಡ ಇತ್ತೀಚಿಗೆ ನನಗೆ ತಿಳಿದ ಅಡುಗೆಗಳ ಬಗ್ಗೆ ಒಂದು ಬ್ಲಾಗ್ ಬರೆಯುತ್ತಿದ್ದೇನೆ. ಸಮಯವಿದ್ದಾಗ ಒಮ್ಮೆ ಭೇಟಿ ಕೊಡಿ.
  ranjanah.blogspot.com
  ಸ್ನೇಹಿತೆ
  ರಂಜನಾ

 6. Rajesh Manjunath
  ಮೇ 11, 2009 @ 02:23:56

  ಶಮ ಮೇಡಂ,
  ಮೊನ್ನೆ ಊರಿಗೆ ಹೋದಾಗ ಅಜ್ಜಿ ಮಾಡಿದ್ರು… ಒಂದು ಬಟ್ಟಲು ಅನ್ನ ಹೆಚ್ಚಾಗೆ ಸೇರಿತ್ತು… ನಮ್ಮಂತ ಬ್ಯಾಚೆಲೋರ್ಸ್ ಎಲ್ಲಿ ಮಾಡ್ಕೊಂಡು ತಿನ್ನೋದು ಹೇಳಿ, ಹೋಗ್ಲಿ ಬಿಡಿ ನಮ್ಮ ಪಾಡು ನಮಗೆ 😦

 7. Avinash
  ಮೇ 11, 2009 @ 06:43:49

  ಶಮ,
  ನೀವು ಹೇಳಿದ ಹಾಗೇ ನಾನು ಕೂಡ ಸಾಸ್ವೆ ಮಾಡಿಟ್ಟಿದ್ದೇನೆ. ರುಚಿ ನೋಡಿದಾಗ ಚೆನ್ನಾಗಿಯೇ ಇತ್ತು. ಈಗ ಸ್ವಲ್ಪ ಬ್ಯುಸಿ. ಹಾಗಾಗಿ ಇನ್ನೊಂದು ನಾಲ್ಕು ದಿನ ಬಿಟ್ಟು ಅದನ್ನು ಆರ್ಡಿನರಿ ಪೋಸ್ಟಿನಲ್ಲಿ ಕಳಿಸುತ್ತೇನೆ. ಅದು ತಲುಪಿದ ತಕ್ಷಣ ರುಚಿ ನೋಡಿ, ಸರಿಯಾಗಿದೆಯಾ, ಉಪ್ಪು ಹೆಚ್ಚು ಕಡಿಮೆಯಾಗಿದೆಯಾ, ಬೆಲ್ಲ ಬೇಕಾ ಅಂತೆಲ್ಲ ನೋಡಿ ರಿಪೇರಿ ಮಾಡಿ ವಾಪಸ್ ಕಳಿಸಿ. 🙂

 8. ನಾವಡ
  ಮೇ 11, 2009 @ 07:15:27

  ಶಮ,
  ಏನೇ, ನನಗೆ ಕಾಂಪಿಟೇಷನ್…ಹ್ಹ..ಹ್ಹ… ಏನೋ ಒಂಚೂರು ಅಡುಗೆ ಹೇಳ್ಕೊಂಡು ಬದುಕು ನಡೆಸ್ತಿದ್ದೆ…ಇಲ್ಲೂ ಪೈಪೋಟಿ ಬಂದ್ರೆ…ಅಡುಗೆ ವಿಷಯದಲ್ಲಿ ನಳರಿಗೆ ಮೀಸಲಾತಿ ಇರ್ಬೇಕಪ್ಪ…
  ಅಂದ ಹಾಗೆ ಚೆನ್ನಾಗಿದೆ ಬರೆದಿದ್ದು. ನಾನೂ ಇವತ್ತು ಬಂದು ಇದನ್ನೇ ಬರೆಯೋಣ ಅಂತಿದ್ದೆ. ಅಷ್ಟರಲ್ಲಿ ನೀನೇ ಬರೆದಿದ್ದೆ. ಹೆಚ್ಚಾದ ಸಾಸಿವೆ ಅಥವಾ ಸೀಕರಣೆ ಉಳಿದರೆ ತಂಗಳ ಪೆಟ್ಟಿಗೆಯಲ್ಲಿಟ್ಟರೂ ಹುಳಿ ಬರುತ್ತೆ. ಕಾರಣ, ಕೈ ಹಾಕಿ ಕಿವುಚುವುದರಿಂದ ಬೇಗ ಹುಳಿ ಬರುತ್ತದೆ. ಅದಕ್ಕೆ ಎಷ್ಟು ಬೇಕೋ ಅಷ್ಟನ್ನೇ ಮಾಡಿಕೊಂಡ್ರೆ ಒಳ್ಳೆಯದು ಎನ್ನೋದು ನನ್ನ ಸಲಹೆ.
  ನಾವಡ

 9. Jayalaxmi Patil
  ಮೇ 12, 2009 @ 06:59:24

  ಶಮ, ನಮ್ಮಲ್ಲಿ ’ಸೀಕರಣೆ’ ಅಥವಾ ಕೇಶವ ಅವ್ರು ಹೇಳೊ ಹಾಗೆ ಆಡು ಭಾಷೆಯಲ್ಲಿ ’ಸೀಕರಣಿ’ ಎಲ್ಲರ ಮನೆಯಲ್ಲೂ ಬೇಸಿಗೆಯಲ್ಲಿ ಮಾಡೇ ಮಾಡ್ತಾರೆ. ಆದ್ರೆ ಕಾಯಿ ತುರಿ ಮತ್ತು ಹಸಿ ಮೆಣಸಿನಕಾಯಿಯನ್ನು ರುಬ್ಬಿ ಹಾಕೋದು ನಮ್ಮಲ್ಲಿ ಇಲ್ಲ. ಹೊಸ ರುಚಿ.. ಹೇಗೂ ಮನೇಲಿ ಹಣ್ಣಿದೆ, ಇವತ್ತೇ ಮಾಡಿ ನೋಡ್ತೀನಿ. ಆದ್ರೆ ಕಾಡು ಮಾವು ಹೇಗಿರುತ್ತೊ ಗೊತ್ತಿಲ್ಲ,ಸಧ್ಯಕ್ಕೆ ಮನೇಲಿರುವ ಆಲ್ಫೆನ್ಸೊ ಹಣ್ಣೇ ನನ್ನ ಪಾಕಪ್ರಯೋಗಕ್ಕೆ ಬಲಿ.. 🙂
  ನಿಮ್ಮ ಮಂಗಳತ್ತೆ.

 10. Tina
  ಮೇ 12, 2009 @ 08:17:27

  ಶಮ, ಖಂಡಿತ ಕರಿತಿನಿ. ನೀವು ಕೂಗಿದ್ರು ಪರವಾಯಿಲ್ಲ, ನನ್ನ ಹಾಗೇನೆ ನೀವೂನೂ!! ನನ್ನ ಸುಮಾರು ಸ್ನೇಹಿತರು ನನ್ನ ಕೂಗಿನಿಂದ ಬೆಚ್ಚಿಬಿದ್ದಿದಾರೆ.

 11. manasu
  ಮೇ 13, 2009 @ 12:25:40

  ಸೀಕರಣೆ ಸಕ್ಕತ್ ಆಗಿದೆ ಹ ಹ ಅಹಾ!!!!! ಮೊನ್ನೆ ತಾನೆ ನಾವು ಮಾಡಿದ್ದೆವು ಇಂದು ನೋಡಿದರೆ ಇಲ್ಲು ಇದೆ ಬಾಯಲ್ಲಿ ನೀರು ಬರಿಸೋಕ ಇದೆಲ್ಲಾ ಚೆ…. ನಿಮ್ಗೇನು ಈಗ ಮಾವಿನ ಹಣ್ಣು ಬೇಜಾನ್ ಸಿಗುತ್ತೆ ಅಲ್ಲದೆ ರಸಭರಿತವಾಗಿರುತ್ತೆ. ಇಲ್ಲಿ ಸಿಕ್ಕರೊ ಅಲ್ಲಿನಷ್ಟು ರುಚಿ ಇರುವುದಿಲ್ಲ..
  ಧನ್ಯವಾದಗಳು….

 12. minchulli
  ಮೇ 13, 2009 @ 12:40:24

  ನೀವು ಮದ್ರಾಸಿಗಳು ಅಲ್ಲಿಂದ ಕಳಿಸಿ ಅದು ಹುಳಿ ಬಂದು… ಚೀ.. ಚೀ… ಬೇಡಪ್ಪಾ… ನಮ್ಮ ಕನ್ನಡ ನಾಡಲ್ಲೇ ಮಾಡ್ಕೊಂಡು ತಿಂತೇವೆ..

 13. minchulli
  ಮೇ 13, 2009 @ 12:42:52

  ನೀವು ಚೂರು ಅಡಿಗೆ ಹೇಳೋದು ಒಪ್ಪುವೆ.. ಆದ್ರೆ ಅದ್ರಲ್ಲಿ ಬದುಕು ನಡೆಸುತ್ತಿದ್ದೇನೆ ಅಂದ್ರೆ ಹಸಿ ಹಸಿ (ಮೆಣಸಿನಕಾಯಿ) ಸುಳ್ಳು… ಮೀಸಲಾತಿ ಕಷ್ಟ..ಮುಂದಿನ ಮೀಟಿಂಗ್ ಸಂದರ್ಭದಲ್ಲಿ ಪರಿಶೀಲಿಸೋಣ. ನಿಮ್ಮ ಸಲಹೆಗೆ ಖುಷಿ.. ಗುರುವಿಗೆ ಮೊದಲ ವಂದೇ..

 14. minchulli
  ಮೇ 13, 2009 @ 12:47:37

  ಥ್ಯಾಂಕ್ಸ್ ಟೀನಾ.. ಈ ಟಾಮ್ ಬಾಯ್ ಜನಕ್ಕೆ ಹಾಗೆ ಕೂಗದೆ ಇರಲು ಆಗೋದಿಲ್ಲ.. ಅದೇ ಖುಷಿ ಕೂಡ ನಂಗೆ.. ಹೈ ಸ್ಕೂಲಿನ ದಿನಗಳಲ್ಲಿ ಕರೆಂಟು ಹೋದ ದಿನ ಅಸೆಂಬ್ಲಿ ನಡೆಸೋ ಚಾನ್ಸು ನಂಗೆ ಸಿಕ್ತಾ ಇತ್ತು.. ನನ್ನ ಗಂಟಲಿನ ಕೆಪಾಸಿಟಿಯ ಕಾರಣಕ್ಕೆ ಮೈಕನ್ನು ನಾನು ಸಮರ್ಥವಾಗಿ ರಿಪ್ಲೇಸ್ ಮಾಡ್ತಾ ಇದ್ದೆ..

 15. minchulli
  ಮೇ 13, 2009 @ 13:02:02

  ಹೌದು.. ನಿಮಗೆ ಹಾಗನ್ಸತ್ತೆ.. ನಮಗೆ ಊರಲ್ಲಿರೋ ಮಾವು ಬೆಂಗಳೂರಲ್ಲಿ ಇಲ್ಲ ಅನಿಸುತ್ತೆ.. ಇಲ್ಲಿ ಬಂದಾಗ ಬನ್ನಿ ಬುಕ್ ಜತೆ ಅದ್ನೂ ಕೊಡುವೆ…

 16. minchulli
  ಮೇ 13, 2009 @ 13:04:25

  ಹೌದು ರಂಜನಾ ಅಂತ ಪ್ರಾದೇಶಿಕ ವ್ಯತ್ಯಾಸಗಳೇ ಆಲ್ವಾ ನಮ್ಮ ದೇಶದ ಹೆಮ್ಮೆ… ನಿಮ್ಮ ಬ್ಲಾಗು ನೋಡಿದೆ.. ನೀವು ಇಂಗ್ಲಿಷ ಅಡಿಗೆಯ ಜನ.. ನಂಗೆ ಇಂಗ್ಲಿಷ ಅಂದ್ರೆ ಭಯ… ಏನ್ಮಾಡ್ಲಿ

 17. minchulli
  ಮೇ 13, 2009 @ 13:06:27

  ರಾಜೇಶ್ ನಿಮ್ಮಂಥವರಿಗೆ ಅಂತಲೇ ಕಾಮತ್ ಮಾಮ್ ಹೋಟೆಲಲ್ಲಿ ಸೀಕರಣೆ ಸಿಗುತ್ತೆ.. ಮೊನ್ನೆ ಒಂದು ದಿನ ಬ್ಯೂಗಲ್ ರಾಕ್ ನಲ್ಲಿ ತಿಂದು ಬಂದಿದ್ದೇನೆ.. ನೀವೊಮ್ಮೆ ಹೋಗಿ ನೋಡಿ..

 18. minchulli
  ಮೇ 13, 2009 @ 13:13:10

  ಮತ್ತೆ ಮಂಗಳತ್ತೆ, ನೀವು ಏನೇ ಮಾಡಿದ್ರೂ ಯಾವ ಮಾವಲ್ಲಿ ಮಾಡಿದ್ರೂ ಚೆನ್ನಾಗಿದೆ ಅಂತಲೇ ಹೇಳೋದು (ಮಂಗಳತ್ತೆಗೆ ಎದುರು ಮಾತಾಡಿ ಉಳಿಯೋದು ಸಾಧ್ಯವೇ )… ಚಿಂತೆ ಬೇಡ..

  (ಹೀಗೆ ತಮಾಷೆ ಮಾಡಿದರೆ ನಿಮಗೆ ಬೇಜಾರಿಲ್ಲ ಅಂದುಕೊಳ್ಳಲಾ ? ಸೀರಿಯಸ್ ಆಗಿರಲು ನಂಗೆ ಬರಲ್ಲ.. )

 19. malathi S
  ಮೇ 13, 2009 @ 14:33:22

  dear ಶಮ!!
  ಚಿತ್ರ ನೋಡಿ, ಓದಿ ಬಾಯಲ್ಲಿ ನೀರೂರಿತು. mmmmmmm yummy.
  🙂
  ಮಾಲತಿ ಎಸ್.

 20. minchulli
  ಮೇ 14, 2009 @ 05:49:47

  ನೀರೂರಲಿ ಎಂದೇ ಚಿತ್ರ ಹಾಕಿದೆ… ಮತ್ತೆ ನೀವು ಈ ಕಡೆ ಬರಲಿಲ್ಲ…

 21. malathi S
  ಮೇ 14, 2009 @ 06:04:56

  ಪ್ರಿಯ ಶಮ
  ಸಾಮಾನ್ಯವಾಗಿ ವಾರಕ್ಕೊಂದು ಸರ್ತಿ ಹಾಜರಿ ಹಾಕಿ ಹೋಗ್ತೇನೆ.
  ಇವತ್ತು recipe ಪುನಃ ಓದಲು ಬಂದೆ.

  🙂
  ಎಮ್.ಎಸ್.

 22. dharithri
  ಮೇ 14, 2009 @ 06:46:04

  ನಾನೂ try ಮಾಡ್ತೀನಿ ಅಕ್ಕ..ಒಂದು ವೇಳೆ ಹೆಚ್ಚು-ಕಮ್ಮಿ ಆದ್ರೆ ಟೈರೆಕ್ಟ್ ನಿಮ್ಮ ಮನೆಗೆ.
  -ಧರಿತ್ರಿ

 23. minchulli
  ಮೇ 14, 2009 @ 12:55:47

  thats ok malathi…. thanks…

 24. minchulli
  ಮೇ 14, 2009 @ 12:56:45

  ಖಂಡಿತಾ ಬಾರೇ ಹುಡುಗಿ.. most welcome…

 25. raviraj
  ಮೇ 14, 2009 @ 14:16:18

  alla tayi nangantu madoke barolla, ninu madi tinnisodadree bartini….henge ?

 26. shivu.k
  ಮೇ 15, 2009 @ 04:19:36

  ಶಮ ಮೇಡಮ್,

  ನಿಮ್ಮ ಮಾವಿನ ಹಣ್ಣಿನ ಸೀಕರಣೇ ಲೇಖನ ಮಾಡುವ ವಿಧಾನವನ್ನು ತಿಳಿದಾಗ ನನಗಂತೂ ಬಾಯಲ್ಲಿ ನೀರೂರಿತ್ತು. ನಮ್ಮ ಮನೆಯಲ್ಲಿ ಮಾಡಿಸುವೆ…ಆಗ ನಿಮಗೆ ಹೇಳಲ್ಲ…ಏಕೆಂದರೆ ನಮಗೇ ಸಾಕಾಗೊಲ್ಲ. ಮತ್ತೆ ನಿಮ್ಮ ಬ್ಲಾಗಿಗೆ ಬರಲು ಹೇಗೆ ತಪ್ಪಿಸಿಕೊಳ್ಳುತ್ತಿದ್ದೆನೋ ಗೊತ್ತಾಗಲಿಲ್ಲ…ಲಿಂಕಿಸಿಕೊಂಡಲಿಲ್ಲವಾದ್ದರಿಂದ ಹೀಗಾಗಿರಬಹುದು..ಈಗ ಲಿಂಕಿಸಿಕೊಂಡಿದ್ದೇನೆ….ಬಿಡುವು ಮಾಡಿಕೊಂಡು ಎಲ್ಲಾ ಲೇಖನವನ್ನು ಓದುತ್ತೇನೆ….

  ಧನ್ಯವಾದಗಳು..

 27. minchulli
  ಮೇ 16, 2009 @ 07:26:56

  ಇಲ್ಲ ರವಿ.. ಅವರವರೆ ಮಾಡಿಕೊಂಡು ತಿಂದ್ರೆ ಹೆಚ್ಚು ರುಚಿ…

 28. ಮನಸ್ವಿ
  ಮೇ 16, 2009 @ 09:15:57

  ತುಂಬಾ ಚನ್ನಾಗಿ ಮಾವಿನ ಹಣ್ಣಿನ ಸಾಸ್ವೆ ಮಾಡುವ ವಿಧಾನ ತಿಳಿಸಿದ್ದಕ್ಕೆ ಧನ್ಯವಾದಗಳು…
  ನಮ್ಮೂರಿನಲ್ಲಿ ಹುಳಿ ಮಾವಿನ ಹಣ್ಣು ಬಿಡಲು ಶುರುವಾಗಿದೆ.. ಒಂದು ಪೋಸ್ಟ್ ಕವರಿಗೆ ಮೂರ್ನಾಲ್ಕು ಹಣ್ಣು ಹಾಕಿ ಕಳುಹಿಸಲಾ?
  ಯಾವ ವಿಳಾಸಕ್ಕೆ ಕಳುಹಿಸುತ್ತೀರಿ ಎಂದಿರಾ??
  ಸಾಸ್ವೆ ಮಾಡುವ ವಿಧಾನ ತಿಳಿಸಿದವರು
  ಮಿಂಚುಳ್ಳಿ ವರ್ಡ್ ಪ್ರೆಸ್ ( ಪೇಪರ್ ಪ್ರೆಸ್ ಅಲ್ಲಾ!)

  ಕವರಿನ ಮೇಲೆ ಎಚ್ಚರಿಕೆ ಒಳಗೆ ಹುಳಿ ಮಾವಿನ ಹಣ್ಣಿದೆ.. ಅಂಚೆ ಅಣ್ಣ ಸೀಲು ಗುದ್ದುವ ಮುನ್ನ ಯೋಚಿಸು ಎಂದು ಬರೆಯೋದನ್ನು ಮರೆಯೋದಿಲ್ಲ!…

 29. minchulli
  ಮೇ 18, 2009 @ 13:13:12

  ಮನಸ್ವಿ, ನಿಮ್ಮ ಪ್ರೀತಿಗೆ ನೂರು ನಮನ.. ಖಂಡಿತ ಕಳಿಸಿ.. ಆದ್ರೆ ಪೋಸ್ಟ್ ಕವರ್ ಬೇಡ. ಬಾಕ್ಸ್ ಇರಲಿ. ವಿಳಾಸ ಮೇಲ್ ಮಾಡ್ತೀನಿ.. ಆದ್ರೆ ಅಂಚೆ ಅಣ್ಣನಿಗೆ ಗೊತ್ತಾಗೋ ಥರಾ ಮಾತ್ರ ಮಾಡಬೇಡಿ. ಅವರೇ ತೆಗೆದು ತಿಂದರೆ ಕಷ್ಟ..

 30. ಸುಪ್ತದೀಪ್ತಿ
  ಮೇ 18, 2009 @ 15:45:32

  ನಮಸ್ಕಾರ ಶಮ,
  “ಕಾಟು ಕುಕ್ಕು ಸಾಸೆಮಿ”- ಆಹಾ!! ಬಾಯಲ್ಲಿ ನೀರೂರಿತು. ಮನಸ್ಸು ಊರಿಗೆ ಓಡಿತು. ನಮ್ಮಮ್ಮನ ಮನೆ ಮುಂದಿನ ಕಾಟು ಮಾವಿನ ಮರದಲ್ಲಿ ಸಾಕಷ್ಟು ಕಾಯಿ ಬಿಟ್ಟಿರುವ ಚಿತ್ರ ತಂದಿದ್ದಾನೆ ಮಗ- ರಜೆಯಲ್ಲಿ ಇಲ್ಲಿಗೆ ಬರುವಾಗ. ನೋಡಿಯೇ ಬಾಯೆಲ್ಲ ಹುಳಿಹುಳಿ; ಮನಸಲ್ಲಿ ಹಳಹಳಿ.

  ನಮ್ಮಲ್ಲಿ ಈ ಥರ ಸಾಸ್ವೆ ಮಾಡುವಾಗ ಅದಕ್ಕೆ ಹಸಿಮೆಣಸಿನ ಬದಲು ಒಣ (ಬ್ಯಾಡಗಿ) ಮೆಣಸು ಬಳಸ್ತೇವೆ. ಹಾಗೂ “ಸೀಕರಣೆ” ಮಾಡುವಾಗ ಹಣ್ಣು-ಬೆಲ್ಲ-ಚಿಟಿಕೆ ಉಪ್ಪು ಮಾತ್ರ, ಬೇರೇನೂ ಹಾಕುವುದಿಲ್ಲ. ದ.ಕ.ದ ಸಾಸ್ವೆಯನ್ನೇ ಉ.ಕ.ದಲ್ಲಿ ಸೀಕರಣೆ ಅಂತಾರೆ ಅಂತ ಗೊತ್ತಿರಲಿಲ್ಲ.
  ಧನ್ಯವಾದಗಳು.

 31. minchulli
  ಮೇ 19, 2009 @ 05:44:31

  ಜ್ಯೋತಿ, ನೀವು ಹೇಳಿದ್ದು ನಿಜ . ಬಾಯಲ್ಲಿ ನೀರೂರುವುದು ಹೌದು.. ನಂಗೆ ಈ ಬಾರಿ ಊರಿಂದ ಬರುವಾಗ ಅಪ್ಪ ಒಂದಷ್ಟು ತಂದು ಪುಣ್ಯ ಕಾರ್ಯ ಮಾಡಿದ್ರು.. ನೆಕ್ಕರೆ ಕೂಡ ಇತ್ತು.. ನೀವು ಇವತ್ತೇ ಬಂದ್ರೆ ಕಡೆಯದು ಒಂದೇ ಒಂದಿದೆ ನೋಡಿ..
  ಮತ್ತೆ ಈ ಅಡುಗೆಯನ್ನು ನೀವು ಬೇರೆ ಥರ ಮಾಡ್ತೀರಿ ಅಂದಿರಿ.. ನನಗೊಂಚೂರು ಹೇಳಿ
  ಇಂಥ ಪ್ರಾದೇಶಿಕ ವ್ಯತ್ಯಾಸಗಳೇ ತಾನೇ ನಮ್ಮ ದೇಶದ ಸೌಂದರ್ಯ..

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: