ಮನಸಿನೊಳಗಿನ ಕುಸುಕುಸು…..

ಒಂದು ಮನಸು ನೂರು ಕನಸು

ಮಗು ಹುಟ್ಟುವ ಮೊದಲು ಅಮ್ಮ ಹುಟ್ಟುತ್ತಾಳಂತೆ !!!!

ಮಗು

ಮನದ ಮಂದಾರವೇ,
ನಿನ್ನ ಬರುವಿಕೆಯಿಂದ ಸಂಭ್ರಮ, ಪುಳಕ, ಜಗತ್ತನ್ನೇ ಗೆದ್ದಂಥ ಹೆಮ್ಮೆ, ಖುಷಿ, ಜತೆಗೊಂದು ಹಿಡಿ ಆತಂಕ ಎಲ್ಲ ಕೊಡಮಾಡಿದ ನಿಂಜತೆ ತುಂಬಾ ಮಾತಾಡಬೇಕು ಅನಿಸಿತು ನೋಡು ಕಂದಾ… ಮನದಲ್ಲಿ ಮಲ್ಲಿಗೆ ಅರಳಿದೆ. ಮನೆ ತುಂಬ ಅದರ ಘಮ. ತಿಂಗಳುಗಳ ನಂತರ ಬರುವ ನಿನಗೆ ಇವತ್ತೇ ಕಾಲ್ಗೆಜ್ಜೆ ತಂದಿಟ್ಟೆ. ನೀನು ಝಲ್ಲೆನಿಸಿಕೊಂಡು ಅಂಬೆಗಾಲಿಕ್ಕುವ ಚಿತ್ರ ನನ್ನೆದುರು. ನೀನು ನಮ್ಮ ಬಹುದಿನಗಳ ನಿರೀಕ್ಷೆ ಮಗೂ. ಅದನ್ನು ಪೂರೈಸಲು ಇಷ್ಟು ದಿನಗಳು ಬೇಕಾಯಿತಾ ನಿನಗೆ…
ಪುಟ್ಟೂ ನಿಜ ಹೇಳಲಾ ? ನಿನ್ನನ್ನು ಹೇಗೆ ಬರಮಾಡಿಕೊಳ್ಳುವುದೋ ಗೊತ್ತಾಗ್ತಾ ಇಲ್ಲ. ಕಾರ್ಗತ್ತಲಲ್ಲಿ ಬೆಳ್ಳಿ ಮಿಂಚೊಂದು ಹೊಳೆದರೆ ಥಟ್ಟನೆ ಕಣ್ಣಿಗೆ ಏನೂ ಕಾಣಿಸುವುದಿಲ್ಲ ನೋಡು ಅಂಥಾ ಅನುಭವ. ಎಲ್ಲ ಅಯೋಮಯ. ಅದರ ನಡುವಲ್ಲೂ ಎಷ್ಟೊಂದು ಕನಸುಗಳು ಚಿಗುರಿವೆ ಗೊತ್ತಾ ? ನೀನು ಬಂದ ಕ್ಷಣದಿಂದ ನಮ್ಮ ಮನೆ ತುಂಬುವ ಸಡಗರ ಇಲ್ಲೇ ಠಿಕಾಣಿ ಹೂಡುತ್ತದೆ. ಆಮೇಲೆ ಬೇಸರವೆಂಬುದು ಇರೋದೇ ಇಲ್ಲ. ಬೇಸರದ ಬೇಸಿಗೆಗೆ ಬಾಯಾರಿ ಹೋದಾಗ ತುಂಬಿ ಬಂದ ಅಮೃತ ವಾಹಿನಿ ನೀನು. ಸ್ನೇಹ ಸೆಲೆ; ಪ್ರೇಮ ನೆಲೆ ನೀನು. ಮನೆ ತುಂಬ ಅಚ್ಚಾಗುವ ನಿನ್ನ ಪುಟ್ಟ ಪಾದಗಳ ಗುರುತು ಅಡಿಗಡಿಗೆ ಭರವಸೆಯ ಐಸಿರಿ; ಬದುಕಿಡೀ ಪಸರಿಸುವ ನಿನ್ನುಸಿರ ಸೌಗಂಧ ಹಬ್ಬಿದಂತೆ ಶ್ರೀ ಗಂಧದ ವಲ್ಲರಿ. ಅರ್ಜಂಟ್ ಅನ್ನೋ ನಾವು ಹಾರಾಡುವ ಜೆಟ್ ವೇಗದಲ್ಲಿ ಸಾಗುತ್ತಿದ್ದ ಧಾವಂತದ ದಿನಗಳಲ್ಲಿ ಮೆಲ್ಲನೆ ಅಡಿಯಿಟ್ಟ ನೀನು ಬದುಕಿನ ಮೆಗಾ ಧಾರಾವಾಹಿಯಲ್ಲಿ ಸವಿಯಾದೊಂದು ಇಮೋಷನಲ್ ಬ್ರೇಕ್ ! ಮರೀ, ನೀನು ಹೆಣ್ಣೇ ಆಗಿರುತ್ತೀ ಎಂಬ ದೊಡ್ಡ ನಂಬಿಕೆಯಿಂದ ನಿಂಗೆ “ಪ್ರಣತಿ” ಅಂತ ಹೆಸರಿಟ್ಟಿದೀನಿ; ಒಂದು ವೇಳೆ ಅಲ್ಲದೇ ಹೋದರೆ “ಪ್ರಣೀತ್”.. ಹೆಸರು ಚಂದ ಇದೆ ಅಲ್ವಾ ? ನಿಂಗಿಷ್ಟ ಆಗ್ಲಿಲ್ಲ ಅನ್ಸಿದ್ರೆ ಹೇಳು ನೂರಾರು ಹೆಸರುಗಳ ಪಟ್ಟಿನೇ ಇದೆ.

ಈಗಿನ್ನೂ ಕುಡಿಯೊಡೆದಿದ್ದರೂ ಅದೆಷ್ಟು ಪರಿಯಲ್ಲಿ ನಿನ್ನ ಇರುವಿಕೆಯನ್ನು ತೋರಿಸುತ್ತಿದ್ದೀ ಬಂಗಾರ… ಮಳೆಬಿಲ್ಲು, ನಕ್ಷತ್ರ, ನರ್ಸರಿ ಮಕ್ಕಳ ಹಾಡು, ಆಗಸದಲ್ಲಿ ಚಿತ್ತಾರ ಬರೆವ ಮೋಡ, ಮಳೆ ಹನಿಯ ತುಂತುರು, ಮನೆಯೆದುರಿನ ಪಾಕರ್ಿಗೆ ವಾಕಿಂಗ್ ಬರುವ ಅಜ್ಜ ಅಜ್ಜಿ, ಅಷ್ಟೆಲ್ಲ ಗೌಜು ಗದ್ದಲದ ನಡುವೆಯೂ ಸ್ಯಾಂಕಿ ಕೆರೆಯಲ್ಲಿ ತನ್ನ ಪಾಡಿಗೆ ತಾನು ಈಜಾಡುವ ಬಾತುಕೋಳಿಯ ತನ್ಮಯತೆ ಎಲ್ಲದರಲ್ಲೂ ಹೊಸತನ ದಕ್ಕಿದ್ದು ನಿನ್ನಿಂದ ಕಂದಾ. ಇಂಥದ್ದೊಂದು ಅದ್ಭುತ ಮಾಯಾಲೋಕದ ಸೃಷ್ಟಿಯ ಹಿಂದಿನ ಶಿಲ್ಪಿ ನೀನು. ಯಾವತ್ತೂ ಇಷ್ಟವಾಗದಿದ್ದ ಕಾಟನ್ ಕ್ಯಾಂಡಿ ಈಗ ಬೇಕು ಅನ್ನಿಸ್ತಾ ಇದೆ. ಗೊಂಬೆಗಳೆಂದರೆ ಮಾರು ದೂರ ಸರಿಯುತ್ತಿದ್ದೆ. ಈಗ ಬಂದರೆ ಇಡೀ ಮನೆಯೇ ಬೊಂಬೆಮನೆ ! ನನ್ನೊಳಗೇ ಇದ್ದು ನನ್ನನ್ನು ಕುಣಿಸುತ್ತಿರುವ ಮಾಯಾವಿ ಗೊಂಬೆಯೇ ಯಾವಾಗ ಬರುತ್ತೀ ಮಡಿಲಿಗೆ ?

ಇವತ್ತು ಸಿಕ್ಕಿದ ಡಾಕ್ಟ್ರು ಒಂದಷ್ಟು ಏನೇನೋ ಹೇಳಿದ್ರು. ಮೈ ಮನಗಳೆಲ್ಲ ಬದಲಾಗುವ ಬದುಕಿನೊಂದು ವಿಶೇಷ ಕಾಲಘಟ್ಟ ಇದು. ಪ್ರಾಜೆಸ್ಟಿರಾನ್ ಮತ್ತು ಈಸ್ಟ್ರೋಜೆನ್ ಎಂಬೆರಡು ಹಾಮರ್ೋನುಗಳಿದಾವೆ; ಅವುಗಳಲ್ಲಿ ವ್ಯತ್ಯಯಗಳಾಗುತ್ವೆ. ದೈಹಿಕ ಬದಲಾವಣೆಗಳಿಂದ ಹಿಂಡಿದಂತಾದ ಎಲ್ಲಾ ಮಸಲ್ಸ್ಗಳನ್ನ ಈ ಹಾಮರ್ೋನು ರಿಲ್ಯಾಕ್ಸ್ ಮಾಡುತ್ತೆ. ಈ ಪ್ರಕ್ರಿಯೆ ನಿರಂತರ ನಡೆಯುತ್ತಿರೋ ಕಾರಣ ವಾಂತಿ, ಹೊಟ್ಟೆ ತೊಳಸುವಿಕೆಗಳೆಲ್ಲಾ ಬರುತ್ತೆ. ಇನ್ನು ಮುಖದಲ್ಲಿ ಕಪ್ಪು ಉಂಗುರಗಳು ಬಂದರೂ ಬರಬಹುದು ನೋಡಿ; ಅವೆಲ್ಲವೂ ದೇಹದಲ್ಲಿನ ಬೇರೆ ಬೇರೆ ಹಾಮರ್ೋನುಗಳ ಕಿತಾಪತಿ. ಮಗುವಾದ ಮೇಲೆ ಅವೆಲ್ಲ ಸರಿಹೋಗತ್ತೆ. ಹೊಟ್ಟೆಯ ಸ್ನಾಯುಗಳ ಗಾತ್ರ ಹಿರಿದಾಗೋದರಿಂದ ಸ್ಟ್ರೆಚ್ ಮಾಕರ್್ ಅಂತೀವಲ್ಲ ಅದೂ ಬರುತ್ತೆ. ಸಾಮಾನ್ಯವಾಗಿ ದೇಹದ ‘ಗ್ರಾವಿಟಿ ಸೆಂಟರ್’ ಅಂತ ಕರೆಯಲ್ಪಡೋದು ಬೆನ್ನು ಮೂಳೆ. ಆದರೆ ಹೊಟ್ಟೆ ಎನ್ಲಾಜರ್್ ಆಗೋ ಕಾರಣ ಈ ಸೆಂಟರ್ ಆಫ್ ಗ್ರಾವಿಟಿನಲ್ಲಿ ಸಣ್ಣ ಬದಲಾವಣೆ ಆಗುತ್ತೆ. ಇದರಿಂದಾಗಿ ಬೆನ್ನು ನೋವು ಕೂಡ ಬರೋ ಸಾಧ್ಯತೆಗಳು ಇರ್ತಾವೆ. ಸ್ನಾಯುಗಳ ಗಾತ್ರ ಹಿಗ್ಗುವ ಕಾರಣ ಒಮ್ಮೊಮ್ಮೆ ರಕ್ತನಾಳಗಳಲ್ಲಿ ದೈನಂದಿನ ರಕ್ತ ಸಂಚಾರದ ರೀತಿಗೆ ಅಲ್ಪ ಮಟ್ಟದ ತೊಂದರೆಗಳು ಬಂದ್ರೆ ಕಾಲಲ್ಲಿ ನೀರು ಸೇರುವುದೂ ಇದೆ ಅಂತೆಲ್ಲ ಉದ್ದಕ್ಕೊಂದು ಪಟ್ಟಿನೇ ಕೊಟ್ರು. ಜತೆಗೇ ಇವೆಲ್ಲ ಗರ್ಭಧಾರಣೆಯ ಸಹಜವಾದ ಪ್ರಕ್ರಿಯೆಗಳು. ಇವೆಲ್ಲವೂ ಆಗೇ ಆಗುತ್ತೆ ಅಂತೇನಿಲ್ಲ; ಅವರವರ ದೇಹ ಪ್ರಕೃತಿಯ ಮೇಲೇ ಅವಲಂಬಿಸಿದೆ ಅನ್ನೋದೊಂದು ಮಾತು ಹೇಳಿದ್ರು ನೋಡು; ದೊಡ್ಡದೊಂದು ಸಮಾಧಾನ.

ಈಗ ನೀನು ಬರ್ತಿದ್ದೀ ಅನ್ನೋ ಒಂದೇ ಕಾರಣಕ್ಕೆ ಮನೇಲಿ ನಂಗೆ ರಾಯಲ್ ಟ್ರೀಟ್ಮೆಂಟ್. ಎಂದೂ ಇಲ್ಲದ ಉಪಚಾರ. ನಿಂತ್ರೆ ಕೂತ್ರೆ ನೋಡ್ಕೋತಾನೇ ಇರ್ತಾರೆ ಎಲ್ಲರೂ. ಕಬ್ಬಿಣದಂಶ, ಫೋಲಿಕ್ ಆಸಿಡ್ ಇರೋ ಸೊಪ್ಪು, ತರಕಾರಿ, ಬೆಣ್ಣೆ, ಹಣ್ಣುಗಳನ್ನೇ ಹೆಚ್ಚು ತಿನ್ನಬೇಕು, ತೀರ ಉಷ್ಣ ಪದಾರ್ಥಗಳ ಕಡೆ ಕಡೆಗಣ್ಣಿಂದಲೂ ನೋಡಕೂಡದು. ಎಲ್ಲೇ ಕೂತರೂ ನೇರ ಭಂಗಿ, ಭಾರ ಎತ್ತಬಾದರ್ು. ಸದಾ ಜಿಗಿಯುತ್ತಲೇ ಇರುತ್ತಿದ್ದ ನಂಗೀಗ ಆಟ, ಓಟ ಎರಡೂ ನಿಷಿದ್ಧ. ತಿನ್ನೋದು ಅಂದ್ರೆ ಬಾರೀ ಕಷ್ಟ ಪಡುತ್ತಿದ್ದ ನಾನು ಎರಡು ಗಂಟೆಗೊಮ್ಮೆ ಕ್ವಾಲಿಟಿ ಆಹಾರವನ್ನ ಕ್ವಾಂಟಿಟಿ ಲೆಕ್ಕ ಹಾಕಿ ತಿನ್ನಬೇಕೆಂಬ ಅಪ್ಪಣೆ. ಜೀವಮಾನದಲ್ಲಿ ಮೊತ್ತ ಮೊದಲ ಬಾರಿಗೆಂಬಂತೆ ಶಿಸ್ತು ಪಾಲಿಸ್ತಾ ಇದೀನಿ ಅಂದ್ರೆ ಅದು ನಿನ್ನ ಕಾರಣಕ್ಕೆ. ಅಂದ ಹಾಗೆ ಇನ್ನೊಂದ್ವಿಷ್ಯ ಹೇಳೋದು ಮರ್ತೆ ನೋಡು. ಐದನೇ ತಿಂಗಳಲ್ಲೊಮ್ಮೆ, ಅದಾಗಿ ಒಂದು ತಿಂಗಳು ಕಳೆದ ಮೇಲೊಮ್ಮೆ ಅದೆಂಥದೋ ಟಿ.ಟಿ ಇಂಜೆಕ್ಷನ್ ತೊಗೋಳೋದು ಕಡ್ಡಾಯ ಅಂತೆ. ಅದೇ ಭಯ ನಂಗೆ. ಇಂಜೆಕ್ಷನ್ ಅಂದ್ರೆ ಮೈಲಿ ದೂರ ಹೋಗೋಳು ನಾನು. ಆದ್ರೆ ನಿನಗಾಗಿ ಅಂತಂದ್ಮೇಲೆ ಎಲ್ಲಾದಕ್ಕೂ ಸೈ ಸೈ. ಇವೆಲ್ಲಾ ಮಾಡಿದ್ಕೆ ನೀನು ನಂಗೆ ದಿನಾ ನೂರು ಪಪ್ಪಿ ಕೊಡ್ಬೇಕು ಮತ್ತೆ… ದಿನದ ಮೊದಲ ಮುತ್ತು ನಂಗೇ ಸಲ್ಲಬೇಕು ಸರೀನಾ.. ಇಲ್ಲಾ ಅಂದ್ರೆ ಟೂ… ಟೂ… ಟೂ…

ನಿನ್ನೆ ಮನೆಗೆ ಬಂದ ಗೆಳತಿ ಸೌಮನಸ್ಯಂ ಗರ್ಭಧಾರಣಂ ಅಂತಂದ್ಲು. ಮರ್ಕಟದಂತೆ ಬದಲಾಗುವ ಹುಚ್ಚು ಹೊಳೆಯಂಥ ಮನಸನ್ನು ಯಾವಾಗ್ಲೂ ಖುಷಿಯಾಗಿ ಶಾಂತವಾಗಿಡೋದಿಕ್ಕೆ ಏನೇನು ಬೇಕೋ ಎಲ್ಲಾ ಮಾಡ್ತಿದೀನಿ ಬಂಗಾರ. ನೀನು ಭೂಮಿಗೆ ಬರೋ ವರೆಗೂ ಯಾವತ್ತೂ ನಿಂಗೆ ನೋವಾಗಬಾರದು. ಕೋಪ ತಾಪಗಳು ನಿನಗೆ ಅಭ್ಯಾಸವಾಗಬಾದರ್ು. ನಿನ್ನ ಬದುಕು ಭವಿಷ್ಯಗಳ ಬಗ್ಗೆ ಸಾವಿರ ಕನಸಿದೆ ನಂಗೆ. ನೀನು ನಮ್ಮೊಡನಿದ್ದೂ ನಮ್ಮಂತಾಗದೆ ಬೆಳೆಯಬೇಕು. IQ & EQಗಳು ಹದವಾಗಿ ಮಿಳಿತವಾದ ಧೀಶಕ್ತಿ ನೀನಾಗಬೇಕು. ಮನುಷ್ಯನ ವಿಕೃತಿಯನ್ನು ಮೀರಿ ಭೂರಮೆ ಪ್ರಕೃತಿಯಲ್ಲಿನ ವಿಸ್ಮಯಗಳಿಗೆ ತೆರೆದುಕೊಳ್ಳುವಂತೆ ನೀನು ರೂಪುಗೊಳ್ಳಬೇಕು… ಭೂ ಮಂಡಲದ ಹಾಹಾಕಾರವ ನೀಗುವ ಶಕ್ತಿಯು ನೀನಾಗಿ “ಹಿಂದೂಸ್ಥಾನವು ಎಂದೂ ಮರೆಯದ….” ಮತ್ತು ಮುಂದೊಂದು ದಿನ ಜಗತ್ತೇ ಮೆಚ್ಚುವ ವಿಜ್ಞಾನಿ ನೀನಾಗಬೇಕು… ಡಾಕ್ಟರು ಇಂಜಿನಿಯರು ಆಗಬೇಕೆಂಬ ಹಂಬಲವಿಲ್ಲ. ಮನೆಗೆ ಮಲ್ಲಿಗೆಯಾಗು, ದೀನ ದುರ್ಬಲರಿಗೆ ಬೆಲ್ಲ ಸಕ್ಕರೆಯಾಗು ಸಾಕು…. ನಾವೇರಲಾರದೆಲ್ಲ ಶಿಖರಗಳನ್ನು ನೀನೇರಬೇಕು. ಅದಕ್ಕಾಗೇ ಕ್ಷಣ ಬಿಡುವು ಸಿಕ್ಕರೂ ಅಂಥದ್ದೇ ಪುಸ್ತಕಗಳನ್ನ ಓದ್ತಿದೀನಿ. ಎಲ್ಲಾ ಹೊತ್ತಿನಲ್ಲೂ ಸುಮಧುರ ಸಂಗೀತ. ನೋಡೋದಿದ್ದರೆ ಕಾಮಿಡಿ ಫಿಲ್ಮ್ ಮಾತ್ರ. ಸುತ್ತೆಲ್ಲರೂ ಈ ಬದಲಾವಣೆಯನ್ನ ಪಿಳಿಪಿಳಿ ಕಣ್ ಬಿಟ್ಕೊಂಡು ಸುಮ್ಮನೇ ನೋಡ್ತಿದಾರೆ. ನನ್ನಂಥ Tomboy ಹೀಗಾಗಿದ್ದು ಅಚ್ಚರಿ ಅವರಿಗೆಲ್ಲ.

ಯಾವ ಭರವಸೆಯೂ ಇಲ್ಲದೇ ಬದುಕು ಬರೀ ಯಾತನೆಯ ಗೂಡಾಗಿದ್ದ ದಿನಗಳಲ್ಲಿ ಕೂಡ ನಮ್ಮನ್ನು ಜೀವಂತವಾಗಿರಿಸಿದ್ದು ಪ್ರೀತಿ..ಪ್ರೀತಿ ಮತ್ತು ಪ್ರೀತಿ. ಅದೊಂದು ನಮ್ಮ ದಾಂಪತ್ಯದಲ್ಲಿ ಹೊಳೆಯಾಗಿ ಹರಿಯುತ್ತಿತ್ತು. ಅಂಥದ್ದೇ ಯಾವುದೋ ಒಂದು ಅಮೃತ ಘಳಿಗೆಯಲ್ಲಿ ಕುಡಿಯೊಡೆದ ನೀನು ಬದುಕನ್ನೂ ಅಷ್ಟೇ ಪ್ರೀತಿಸಬೇಕು. ಎಂದಿಗೂ ಬತ್ತದ ಜೀವನ್ಮುಖಿ ಕಾರಂಜಿಯಾಗಬೇಕು ಕಂದಾ.. ನಿನ್ನ ಪ್ರತಿ ಹೆಜ್ಜೆಗೂ ಅಪ್ಪ ಅಮ್ಮನ ಒಲವಿನ ಸಾಥ್ ಇದೆ, ಇರುತ್ತದೆ. ಸೋಲನ್ನು ಸೋಲಿಸುವ ದಿಟ್ಟತನ ಹುಟ್ಟಬೇಕು ನಿನ್ನಲ್ಲಿ. ನಿಂಗೊತ್ತಾ ಮಗೂ ನಿನ್ನ ಹುಟ್ಟೇ ನಿನ್ನ ಮೊದಲ ಗೆಲುವು. ಜತೆಗಿದ್ದ ಸಾವಿರಾರು ಜೀವ ಕಣಗಳನ್ನ ಹಿಂದಿಕ್ಕಿ ನೀನೇ ಫಲಿಸಿದ್ದೀ ನೋಡು ಅದು ನಿನ್ನ ವಿಜಯದ ದಾರಿಯಲ್ಲಿನ ಪ್ರಥಮ ಹೆಜ್ಜೆ. ಉಳಿದ ಹೆಜ್ಜೆಗಳಿಗೆ ಬದುಕಿಡೀ ಸಮಯವಿದೆ ಬಿಡು.

ಇವೆಲ್ಲ ಸಂಭ್ರಮದ ನಡುವೆಯೂ ಭಯ ಕಾಡುತ್ತದೆ. ಏನೋ ಒಂದು ಆತಂಕ, ತಳಮಳ ಎಲ್ಲ ನನ್ನನ್ನು ಸುತ್ತುಗಟ್ಟಿದ್ದಿದೆ. ಹೆರಿಗೆಯೆಂದರೆ ಮರುಹುಟ್ಟು ಅಂತಾರೆ. ಜೀವ ಒತ್ತೆಯಿಡಬೇಕು ಅಂತಾರೆ. ಹಾಗೇನಾದ್ರೂ ಆದ್ರೆ ? ನಾನಿಲ್ಲದೇ ನೀನು ಅಪ್ಪ ಇಬ್ಬರೇ ಇರೋಕಾಗತ್ತಾ ? ಅಷ್ಟಕ್ಕೂ ಆ ಪರಿಯ ವೇದನೆ ಸಹಿಸುವ ಶಕ್ತಿ ಇದೆಯಾ ನಂಗೆ ? ನನ್ನ ಒಳ್ಳೆ ಮುದ್ದು ನೀನು ನಂಗೆ ಹೆಚ್ಚು ನೋವು ಕೊಡಲ್ಲ ಅಲ್ವಾ ? ನೀ ಬಂದ ಮೇಲೆ ನಿನ್ನನ್ನು ಮುಚ್ಚಟೆಯಿಂದ ಸಾಕುವ ಬಗೆ ಹೇಗೆ ? ಕೆಲಸ ಮನೆ ಎರಡನ್ನೂ ನಿಭಾಯಿಸುವ ಧಾವಂತದಲ್ಲಿ ನಿನಗೆ ಅಮ್ಮ ಪೂತರ್ಿಯಾಗಿ ಸಿಗುವಂತೆ ಮರು ವ್ಯವಸ್ಥೆ ಮಾಡಿಕೋ ಬೇಕು. ಅದು ನನ್ನಿಂದಾಗುತ್ತಾ ? ನಿನ್ನಂಥ ಬೆಳಕಿನ ಪುಂಜವನ್ನು ಹೇಗೆ ಕಾಪಾಡಿಕೊಳ್ಳಲಿ ? ನಿನಗೆ ಏನೇನು ಕಲಿಸಬೇಕು ? ಹೇಗೆ ಕಲಿಸಬೇಕು ? ನನಗೆ ಅಮರಕೋಶ ಓದಿಸೋಕೆ ಅಜ್ಜಿ ಇದ್ರು. ನಿನಗೆ ಯಾರು ಓದಿಸ್ತಾರೆ ? ಮಹಾಭಾರತ, ರಾಮಾಯಣಗಳು ನಂಗೇ ಪೂತರ್ಿ ಗೊತ್ತಿಲ್ಲ. ಇನ್ನು ನಿನಗೆ ಹೇಗೆ ಹೇಳಲಿ ? ಅವನ್ನೆಲ್ಲ ನಿನಗೆ ಪ್ರೀತಿಯಿಂದ ಹೇಳೋಕೆ ಯಾರನ್ನು ಕರೆತರಲಿ ? ರಾಮ ಕೃಷ್ಣರ ಜತೆಗೇ ಸುಭಾಸ, ಭಗತರೂ, ಚೆನ್ನಮ್ಮ ಹೊನ್ನಮ್ಮರೂ ನಿನ್ನೆದೆಗೆ ಇಳಿಯಬೇಕು. ಇವಕ್ಕೆಲ್ಲ ಸಮಯ ಹೊಂದಿಸುವ ಬಗೆಯೇನು ? ನನ್ನ ಕಂದನ ಜತೆಗಿರಲು ನನಗೊಂದಷ್ಟು ಘಂಟೆಗಳನ್ನು ಹೆಚ್ಚು ಕೊಡು ಅಂತ ಬದುಕಿಗೊಂದು ಮನವಿ ಬರೆದು ಹಾಕಲಾ ? ಹೇಳು ಮಗೂ… ಇದೆಲ್ಲ ಕೇಳಿಸಿಕೊಂಡು ಒಳಗೊಳಗೇ ನಗುತ್ತಿದೀಯಾ ನನ್ನ ಕಳ್ಳ ಪುಟ್ಟೂ ? ಬೇಗ ಬಾ ನೀನು… ಇಲ್ಲೊಂದು ತಂಗಾಳಿ ಹರಡಲಿ. ಇನ್ನು ನನ್ನ ಕಾಡಬೇಡ ಪ್ಲೀಸ್… ಕಾದಿದೆ ಮನೆ, ಮನಸು, ಬದುಕು ನಿನಗಾಗಿ…

ಈ ಬಾರಿಯ ಕನ್ನಡ ಪ್ರಭದ ಸಖಿ (ಡಿಸೆಂಬರ್ 1-15)ರಲ್ಲಿ ಪ್ರಕಟವಾದ ಬರಹದ ಮೂಲ ಪ್ರತಿ.

December 11, 2009 - Posted by | ಅಮ್ಮ, ಕನವರಿಕೆ | , ,

6 Comments »

  1. Shamakka, blog color contrast is irritating and is difficult for reading. will u pls change it?

    P.s. – this is not a comment to ur writeup. just suggesting here since i dnt have ur email id. so dont publish it if moderated.

    Comment by vikas | December 12, 2009

  2. ಶಮಾ ಅಕ್ಕ,
    ನಿಮ್ಮ ಈ ಲೇಖನ ನಿಜಕ್ಕು ಅದ್ಭುತವಾಗಿದೆ… ನನ್ಗೆ ತುಂಬಾ ಇಷ್ಟವಾಯಿತು… ಇನ್ನು ಪ್ರಪಂಚಕ್ಕೆ ಕಾಲಿಡದ ಮಗುವಿನೊಡನೆ ಈ ಪರಿಯ ಸಂಭಾಷಣೆ ನಿಜಕ್ಕೂ ಹಿತಕರವಾಗಿತ್ತು… ತುಂಬಾ ಚೆನ್ನಾಗಿದೆ.
    -ಇಂಚರ

    Comment by svatimuttu | December 12, 2009

  3. ಧನ್ಯವಾದಗಳು. ವಿಕಾಸ್ . ಬ್ಲಾಗಿನಲ್ಲಿ ಮಕ್ಕಳ ಚಿತ್ರ ಹಾಕಬಹುದಾದ ಅವಕಾಶ ಇದ್ದದ್ದು ಇದೊಂದೇ ಥೀಮ್. ಆದ್ದರಿಂದ ಹಾಕಿದೆ. ಇನ್ನೊಂದಷ್ಟು ಕಲಿತು ಬದಲಾವಣೆಗೆ ಖಂಡಿತ ಪ್ರಯತ್ನಿಸುವೆ.

    Comment by minchulli | December 22, 2009

  4. ಪ್ರಪಂಚಕ್ಕೆ ಕಾಲಿಡುವ ಮೊದಲೇ ಕಂದ ಅಮ್ಮನ ಪ್ರಪಂಚ ಆಳುತ್ತಿರುವುದು ಅಚ್ಚರಿ ಅಲ್ವಾ ಇಂಚರ ?

    Comment by minchulli | December 22, 2009

  5. Superb write up.

    Comment by Nisha | January 1, 2010

  6. thanks nisha.. keep coming

    Comment by minchulli | January 5, 2010


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s

Follow

Get every new post delivered to your Inbox.